ನಾಗ್ಪುರ: ಕೇಂದ್ರದ ಬಿಜೆಪಿ ಸರ್ಕಾರ ತರಲು ಹೊರಟಿದ್ದ ಮೂರು ಕೃಷಿ ಕಾಯ್ದೆಗಳು ದೇಶಕ್ಕೆ ಕರಾಳ ಮಾರಕ ಕಾಯ್ದೆಗಳಾಗಿವೆ ಎಂದು ಸತತ ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆದ ರೈತ ಆಂದೋಲನಕ್ಕೆ ಮಣಿದ ಕೇಂದ್ರ ಸರ್ಕಾರ ಇತ್ತೀಚಿಗೆ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಿದ್ದವು.
ರದ್ದಾಗಿರುವ ಮೂರು ಕೃಷಿ ಕಾಯ್ದೆಗಳನ್ನು ಅಲ್ಪ ಬದಲಾವಣೆಗಳನ್ನು ಮಾಡಿ ನಾವು ಮತ್ತೆ ತರುವುದಾಗಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಘೋಷಣೆ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ʻರೈತರ ಅನುಕೂಲಕ್ಕಾಗಿ ನಾವು ಒಂದು ಹೆಜ್ಜೆ ಹಿಂದೆ ಇರಿಸಿದ್ದೇವೆ. ಭವಿಷ್ಯದಲ್ಲಿ ಮತ್ತೆ ಮುಂದಕ್ಕೆ ತೆರಳಲಿದ್ದೇವೆʼ ಎಂದು ಹೇಳಿದ್ದಾರೆ.
ಇದನ್ನು ಓದಿ: ಪ್ರಧಾನಿಗಳಿಂದ ಮೂರೂ ಕೃಷಿ ಕಾಯ್ದೆಗಳ ರದ್ದಿನ ಪ್ರಕಟಣೆ – ವ್ಯಾಪಕ ಪರಿಣಾಮಗಳ ವಿಜಯ
“ಆದರೆ ಸರ್ಕಾರ ನಿರಾಶೆಗೊಂಡಿಲ್ಲ… ನಾವು ಒಂದು ಹೆಜ್ಜೆ ಹಿಂದೆ ಸರಿದಿದ್ದೇವೆ ಮತ್ತು ನಾವು ಮತ್ತೆ ಮುಂದುವರಿಯುತ್ತೇವೆ ಏಕೆಂದರೆ ರೈತರು ಭಾರತದ ಬೆನ್ನೆಲುಬು” ಎಂದು ಸಚಿವರು ಹೇಳಿಕೆ ನೀಡಿದ್ದಾರೆ.
ಕೃಷಿ ಕಾನೂನುಗಳಲ್ಲಿ ಅಲ್ಪ ಬದಲಾವಣೆಗಳನ್ನು ಮಾಡಲಾಗುವುದು ಮತ್ತು ಅವುಗಳನ್ನು ಜಾರಿಗೆ ತರಲಿದ್ದೇವೆ ಎಂದು ಘೋಷಿಸಿದ್ದಾರೆ. ಕೇಂದ್ರ ಕೃಷಿ ಸಚಿವ ತೋಮರ್ ನೀಡಿರುವ ಹೇಳಿಕೆ ಕಳವಳ ಉಂಟು ಮಾಡಿದೆ.
ದೆಹಲಿ ಗಡಿಯಲ್ಲಿ ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ವರ್ಷದಿಂದ ಚಳುವಳಿ ನಡೆಸುತ್ತಿದ್ದ ಲಕ್ಷಾಂತರ ರೈತರು ವಾರದ ಹಿಂದಷ್ಟೇ ತಮ್ಮ ಪ್ರತಿಭಟನಾ ಶಿಬಿರಗಳನ್ನು ತೆರವುಗೊಳಿಸಿದ್ದರು.
ಪಂಜಾಬ್ ಹಾಗೂ ಉತ್ತರ ಪ್ರದೇಶ ವಿಧಾನಸಭೆಗಳಿಗೆ ಚುನಾವಣೆಗಳು ಕೆಲವೇ ತಿಂಗಳುಗಳು ಇರುವುದರಿಂದ ಆತಂಕಕ್ಕೆ ಒಳಗಾದ ಪ್ರಧಾನಿ ನರೇಂದ್ರ ಮೋದಿ ಪಂಜಾಬ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೃಷಿ ಕಾನೂನುಗಳನ್ನು ರದ್ದುಪಡಿಸುವುದಾಗಿ ಘೋಷಣೆ ಮಾಡಿದ್ದರು.
ನಂತರ ನಡೆದ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೃಷಿ ಕಾನೂನುಗಳು ರದ್ದತಿ ಬಗ್ಗೆ ಅಧಿಕೃತ ಘೋಷಣೆ ಮಾಡಲಾಯಿತು.