ಬೆಂಗಳೂರು : ರಾಜ್ಯದಲ್ಲಿ ಹಿಜಬ್ ಸಂಘರ್ಷದ ನಡುವೆ ಇದೀಗ ರಾಜಧಾನಿಯಲ್ಲಿ ಟರ್ಬನ್ ಚರ್ಚೆ ಭಾರೀ ಸದ್ದು ಮಾಡುತ್ತಿದೆ. ಹೈಕೋರ್ಟ್ ಆದೇಶದಂತೆ ವಿದ್ಯಾರ್ಥಿಗಳ ಹಿಜಬ್ ತೆಗೆಸಿದಂತೆ ಟರ್ಬನ್ ತೆಗೆಸಿ ಎಂದು ನಗರದ ಮೌಂಟ್ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿಗಳು ಪ್ರಿನ್ಸಿಪಾಲ್‍ಗೆ ಮನವಿ ಮಾಡಿದ್ದಾರೆ.
2000ಕ್ಕೂ ಹೆಚ್ಚು ವಿದ್ಯಾರ್ಥಿ ಇರುವ ಈ ಕಾಲೇಜಿನಲ್ಲಿ ಸಿಖ್ ಸಮುದಾಯದ ಒಬ್ಬರು ವಿದ್ಯಾರ್ಥಿನಿ, ಅದು ಸ್ಟೂಡೆಂಟ್ ಯೂನಿಯನ್ ಅಧ್ಯಕ್ಷೆಯಾಗಿರುವ ಯುವತಿ ಮಾತ್ರ ಟರ್ಬನ್ ಧರಿಸಿ ಕಾಲೇಜಿಗೆ ಬರುತ್ತಿದ್ದರು. ಹೀಗಾಗಿ ವಿದ್ಯಾರ್ಥಿಗಳು ಹಿಜಬ್ ತೆಗೆಸಿದಂತೆ ಟರ್ಬನ್ ತೆಗೆಸುವಂತೆ ಕಾಲೇಜ್ ಪ್ರಿನ್ಸಿಪಾಲ್‍ಗೆ ದೂರು ನೀಡಿದ್ದಾರೆ.
ನಂತರ ಪ್ರಿನಿಪಾಲ್ ಮತ್ತು ಆಡಳಿತ ಮಂಡಳಿ ಟರ್ಬನ್ ತೆಗೆಯುವಂತೆ ವಿದ್ಯಾರ್ಥಿನಿಗೆ ತಿಳಿಸಿದ್ದಾರೆ. ಟರ್ಬನ್ ತೆಗೆದರೆ ಮಾತ್ರ ಕಾಲೇಜಿಗೆ ಪ್ರವೇಶ ಎಂದು ಎಚ್ಚರಿಸಿದ್ದಾರೆ. ಬಳಿಕ ವಿದ್ಯಾರ್ಥಿನಿ ಟರ್ಬನ್ ತೆಗೆಯಲ್ಲ ಇದು ಸಿಖ್ ಸಮುದಾಯದ ಸಂಕೇತ ಎಂದು ಹೇಳಿದ್ದಾರೆ. ಕೊನೆಗೆ ಪೋಷಕರಿಗೆ ನಿಮ್ಮ ಮಗಳಿಗೆ ಟರ್ಬನ್ ತೆಗೆದು ಕಾಲೇಜಿಗೆ ಬರುವಂತೆ ಹೇಳಿ ಎಂದು ಮೇಲ್ ಮಾಡಿದ್ದಾರೆ. ಜೊತೆಗೆ ಕಾಲೇಜಿನ ಆಡಳಿತ ಮಂಡಳಿ ಕೂಡ ಟರ್ಬನ್ ತೆಗೆಸಿ ಎಂದು ಕರೆಮಾಡಿ ಹೇಳಿದ್ದಾರೆ. ಇದಕ್ಕೆ ವಿದ್ಯಾರ್ಥಿ ಪೋಷಕರು ಹೈಕೋರ್ಟ್‍ನಲ್ಲಿ ಟರ್ಬನ್ ಬಗ್ಗೆ ಉಲ್ಲೇಖ ಆಗಿಲ್ಲ. ಸಿಖ್ ಸಮುದಾಯದ ಸಂಕೇತವನ್ನು ನಾವು ತೆಗೆಯಲ್ಲ ಎಂದು ಹೇಳಿದ್ದಾರೆ.
ಸಂವಿಧಾನದ ಆರ್ಟಿಕಲ್ 25, ಸಿಖ್ ಸಮುದಾಯದ ಪುರುಷ ಮತ್ತು ಮಹಿಳೆಯರಿಗೆ ಟರ್ಬನ್ ಧರಿಸುವ ಹಕ್ಕು ನೀಡಿದೆ. ಆದ್ದರಿಂದ ಇದು ಸಂವಿಧಾನದ ಉಲ್ಲಂಘನೆಯಗುತ್ತದೆ. ಹೈಕೋರ್ಟ್ ಆದೇಶವನ್ನು ತಪ್ಪಾಗಿ ಅರ್ಥೈಸಲಾಗಿದೆ. ಹಾಗಾಗಿ ಟರ್ಬನ್ ತೆಗೆಯುವಂತೆ ಒತ್ತಡ ಹೇರಬಾರದು ಎಂದು ಯುವತಿಯ ಪೋಷಕರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.