ಮಡಿಕೇರಿ: ಸಿದ್ದರಾಮಯ್ಯ ಕಾರಿಗೆ ಕೊಡಗಿನ ಗುಡ್ಡೆಹೊಸೂರಿಲ್ಲಿ ಮೊಟ್ಟೆ ಎಸೆದ ಆರೋಪಿಯಾಗಿರುವ ಸಂಪತ್ ನನ್ನು ಕುಶಾಲನಗರ ಗ್ರಾಮಾಂತರ ಪೊಲೀಸರು ಕುಶಾಲನಗರ ಜೆಎಂಎಫ್‌ಸಿ ನ್ಯಾಯಾಲಯ ಆವರಣದಲ್ಲಿ ಬಂಧಿಸಿದ್ದಾರೆ.
ಸಂಪತ್ ಬಂಧನದ ಬಳಿಕ ಆತ ಕಾಂಗ್ರೆಸ್ ಕಾರ್ಯಕರ್ತ ಎಂದು ಬಿಜೆಪಿ ಹರಿಬಿಡುತ್ತಿದೆ. ಇದೇ ಸಂದರ್ಭದಲ್ಲಿ ಆತ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)ದೊಂದಿಗೂ ಗುರುತಿಸಿಕೊಂಡಿದ್ದು, ಬಿಜೆಪಿಯವರೊಂದಿಗೆ ಇರುವ ಛಾಯಾಚಿತ್ರಗಳು ಸಹ ಹರಿದಾಡುತ್ತಿವೆ.
ಮೊಟ್ಟೆ ಹೊಡೆದ ಆರೋಪಿ ಸಂಪತ್ ಬಂಧನಕ್ಕೂ ಮುನ್ನ ಸಿದ್ದರಾಮಯ್ಯ ಹಿಂದೂಗಳೂ ದನದ ಮಾಂಸ ತಿಂತಾರೆ ಅಂದಿದ್ದು ತಪ್ಪಲ್ಲವೇ. ಹಿಂದೂ ವಿರೋಧಿ ಹೇಳಿಕೆಯಿಂದ ನೋವಾಗಿದೆ. ಹಾಗಾಗಿ ಮೊಟ್ಟೆ ಹೊಡೆದಿದ್ದೆ ಎಂದು ಹೇಳಿದ್ದಾನೆಂದು ವರದಿಯಾಗಿದೆ.
ವಿ ಡಿ ಸಾವರ್ಕರ್ ಭಾವಚಿತ್ರ ಯಾಕೆ ಹಾಕಬೇಕು ಎಂದು ಪ್ರಶ್ನಿಸಿದ್ದ ಸಿದ್ದರಾಮಯ್ಯ ಅವರ ವಿರುದ್ಧ ಕಿಡಿಕಾರಿದ ಬಿಜೆಪಿ ಕಾರ್ಯಕರ್ತರು, ಆಗಸ್ಟ 18ರಂದು ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ತರಳುತ್ತಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದು ಕಪ್ಪು ಬಾವುಟ ಪ್ರದರ್ಶನ ಮಾಡಿದ್ದರು.
ಈ ಪ್ರಕರಣ ಸಂಬಂಧ 9 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು. ನಂತರ ಆರೋಪಿಗಳು ಜಾಮೀನು ಪಡೆದು ಹೊರಬಂದಿದ್ದಾರೆ. ಆರೋಪಿ ಸಂಪತ್ ಬಿಜೆಪಿ ಕಾರ್ಯಕರ್ತನಲ್ಲ ಬದಲಾಗಿ ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿಕೆ ನೀಡಿದ್ದ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ಆರೋಪಿ ಕೆಲ ಚಿತ್ರಗಳನ್ನು ಬಿಡುಗಡೆ ಮಾಡಿದ್ದರು. ಆದರೆ, ರಾಮನವಮಿ ಕಾರ್ಯಕ್ರಮದಲ್ಲಿ ಆರೋಪಿ ನನ್ನ ಜೊತೆಗೆ ತೆಗೆದ ಫೋಟೋ ಇಟ್ಟು ಕಾಂಗ್ರೆಸ್ ಆರೋಪ ಮಾಡುತ್ತಿದೆ ಎಂದು ಆರೋಪಿಸಿದರು.
ಇದೀಗ ಆರೋಪಿಯ ಮತ್ತಷ್ಟು ಛಾಯಾಚಿತ್ರಗಳು ವೈರಲ್ ಆಗಿದ್ದು, ಸಂಪತ್ ಎಂಬ ಆರೋಪಿ ಶಾಸಕರು ರಸ್ತೆ ಉದ್ಘಾಟಿಸುತ್ತಿರುವ ಕಾರ್ಯಕ್ರಮವೊಂದರಲ್ಲಿ ಆರೋಪಿ ಅಪ್ಪಚ್ಚು ರಂಜನ್ ಜೊತೆಗಿದ್ದಾನೆ. ಮತ್ತೊಂದು ಫೋಟೋದಲ್ಲಿ ಆರ್.ಎಸ್.ಎಸ್ ಶಾಖೆಯಲ್ಲಿ ಶಾಸಕರ ಜೊತೆಗೆ ಇರುವ ಫೋಟೋ ಸಹ ವೈರಲ್ ಆಗಿದೆ. ಇದಲ್ಲದೆ ಸಂಘಪರಿವಾರ ಕಾರ್ಯಕರ್ತರ ಜೊತೆಗಿನ ಹಲವು ಫೋಟೋಗಳು ವೈರಲ್ ಆಗಿದೆ. ಆದುದರಿಂದ ಅಪ್ಪಚ್ಚು ರಂಜನ್ ಹೇಳಿಕೆ ಸುಳ್ಳು ಎನ್ನಲಾಗುತ್ತಿದೆ.
ಮೊಟ್ಟೆ ಹೊಡೆದಿದ್ದರಿಂದ ಕೆಂಡಾಮಂಡಲರಾಗಿದ್ದ ಸಿದ್ದರಾಮಯ್ಯನವರು ಕೊಡಗಿನಿಂದ ಚಿಕ್ಕಮಗಳೂರಿಗೆ ತೆರಳುವ ಮುನ್ನ ಪೊಲೀಸರು ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಕಿಡಿಕಾರಿದ್ದರು. ನಮಗೂ ಮೊಟ್ಟೆಎಸೆಯಲು ಬರಲ್ವಾ? ನಾವು ಹೋರಾಟ ಶುರು ಮಾಡಿದರೆ ಮುಖ್ಯಮಂತ್ರಿ ಎಲ್ಲೂ ಓಡಾಡೋಕೆ ಆಗಲ್ಲ ಎಂದು ಬಿಜೆಪಿ ಮುಖಂಡರಿಗೆ ಖಡಕ್ ಎಚ್ಚರಿಕೆ ನೀಡಿದ್ದರು.