ಲಖನೌ: ಉತ್ತರ ಪ್ರದೇಶದಲ್ಲಿ ಭಾರತೀಯ ಚುನಾವಣೆ ಆಯೋಗ ನಡೆಸಿದ್ದ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಪೂರ್ಣಗೊಂಡು, ಅಂತಿಮ ಪಟ್ಟಿ ಪ್ರಕಟವಾಗಿದ್ದು, ಸುಮಾರು 2 ಕೋಟಿಗೂ ಹೆಚ್ಚು ಹೆಸರುಗಳನ್ನು ಡಿಲಿಟ್ ಮಾಡಲಾಗಿದೆ ಎಂದು ಏಪ್ರಿಲ್ 10ರಂದು ಬಿಡುಗಡೆಯಾದ ಅಂತಿಮ ಪಟ್ಟಿಯ ಪ್ರಕಾರ ತಿಳಿದುಬಂದಿದೆ. ಉತ್ತರ
ಉತ್ತರ ಪ್ರದೇಶದಲ್ಲಿ ಈಗ 7,30,71,061 ಪುರುಷರು (54.54%), 6,09,09,525 ಮಹಿಳೆಯರು (45.46%) ಮತ್ತು 4,206 ಟ್ರಾನ್ಸ್ಜೆಂಡರ್ ಮತದಾರರಿದ್ದಾರೆ. 18-19 ವರ್ಷ ವಯಸ್ಸಿನವರಲ್ಲಿ ಮೊದಲ ಬಾರಿಗೆ ಮತದಾರರ ಸಂಖ್ಯೆ 17,63,360 ಆಗಿದ್ದು, ಲಿಂಗ ಅನುಪಾತ 834:1,000 ಆಗಿದೆ. ಒಟ್ಟು ರಾಜ್ಯದಲ್ಲಿ 13.39 ಕೋಟಿ ಮತದಾರರಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಮುಖ್ಯ ಚುನಾವಣಾ ಅಧಿಕಾರಿ ನವದೀಪ್ ರಿನ್ವಾ, 2025 ಅಕ್ಟೋಬರ್ 27ರಂದು ರಾಜ್ಯದಲ್ಲಿ ಮೊದಲ ಹಂತದ ಎಸ್‌ಐಆರ್ ಪ್ರಕ್ರಿಯೆ ಪ್ರಾರಂಭವಾದಾಗ 15.44 ಕೋಟಿ ಮತದಾರರಿದ್ದರು. ಆದರೆ 2026 ಜನವರಿ 6ರಂದು ಮೊದಲ ಹಂತದ ಪರಿಷ್ಕರಣೆ ಮುಗಿದ ಬಳಿಕ12.55 ಕೋಟಿ ಇಳಿದಿದ್ದು, ಒಟ್ಟು 2.05 ಕೋಟಿ ಮತದಾರರು ಕಡಿಮೆಯಾಗಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದಲಿತ ಮಹಿಳೆ ಅವಮಾನ ಆರೋಪ; ಎಂಎಸ್‌ಐಎಲ್ ಅಧಿಕಾರಿಗಳ ವಿರುದ್ಧ ದೂರು
ಪ್ರಯಾಗ್‌ರಾಜ್‌ನಲ್ಲಿ 3,29,421, ಲಕ್ನೋ (2,85,961), ಬರೇಲಿ (2,57,920), ಗಾಜಿಯಾಬಾದ್ (2,43,666) ಹಾಗೂ ಜೌನ್‌ಪುರ (2,37,590) ಹೊಸ ಮತದಾರರು ಸೇರ್ಪಡೆಯಾಗಿ ಮತದಾರರ ಸಂಖ್ಯೆಯ ಹೆಚ್ಚಳವಾಗಿದೆ. ಅದೇ ರೀತಿ ವಿಧಾನಸಭಾ ಕ್ಷೇತ್ರಗಳ ಮಟ್ಟದಲ್ಲಿ ಸಾಹಿಬಾಬಾದ್ 82,898, ನಂತರ ಜೌನ್‌ಪುರ (56,118), ಲಖನೌ ಪಶ್ಚಿಮ (54,822), ಲೋನಿ (53,679) ಮತ್ತು ಫಿರೋಜಾಬಾದ್ (47,757)ಗಳಲ್ಲಿ ಹೊಸ ಮತದಾರರು ಅತಿ ಹೆಚ್ಚು ಸೇರ್ಪಡೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಜ. 06ರಿಂದ ಏ. 10ರವರೆಗಿನ ಪ್ರಕ್ರಿಯೆಯಲ್ಲಿ ಒಟ್ಟು 8,15,996 ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ, ಅದರಲ್ಲಿ 3,50,026 ಮತದಾರರ ಹೆಸರುಗಳನ್ನು ಮೊದಲ ಹಂತದ ಮತದಾನ ಮುಗಿದ ನಂತರ ಚುನಾವಣಾ ಆಯೋಗ ಕಳುಹಿಸಿದ ನೋಟಿಸ್‌ಗಳಿಗೆ ಪ್ರತಿಕ್ರಿಯಿಸದ ಕಾರಣ ಅಳಿಸಲಾಗಿದೆ ಎಂದು ರಿನ್ವಾ ಹೇಳಿದ್ದಾರೆ.
ಒಟ್ಟು 3.26 ಕೋಟಿ ಮತದಾರರಿಗೆ ನೋಟಿಸ್ ನೀಡಲಾಗಿದ್ದು, ಅದರಲ್ಲಿ 3.28 ಲಕ್ಷ ಹೆಸರುಗಳನ್ನು ಸ್ಥಳಾಂತರಗೊಂಡ ಕಾರಣ, 79,076 ಹೆಸರುಗಳನ್ನು ಬಹು ಸ್ಥಳಗಳಲ್ಲಿ ನಮೂದುಗಳಿಂದಾಗಿ, ಹಾಗೂ 55,865 ಹೆಸರುಗಳನ್ನು ಸಾವಿನ ಕಾರಣದಿಂದಾಗಿ ಅಳಿಸಲಾಗಿದೆ. 2,069 ಹೆಸರುಗಳನ್ನು ಅಪ್ರಾಪ್ತ ವಯಸ್ಕರು ಅಥವಾ ಭಾರತೀಯ ನಾಗರಿಕರಲ್ಲದ ಕಾರಣ ತೆಗೆದುಹಾಕಲಾಗಿದೆ ಎಂದಿದ್ದಾರೆ.
ಇದನ್ನೂ ನೋಡಿ: ಎಸ್ ಐಆರ್: ವಿಶೇಷ ಸಮಗ್ರ ಹೊರತಳ್ಳುವಿಕೆ: ಮುಗಿಯದ ವ್ಯಥೆ? Janashakthi Media
