ಗಾಂಧೀನಗರ : ಗುಜರಾತ್‌ನ ಮೋರ್ಬಿಯಲ್ಲಿ ಕಾರ್ಖಾನೆ ಗೋಡೆ ಕುಸಿದು 12 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇಂದು ಮಧ್ಯಾಹ್ನ ಗುಜರಾತ್‌ನ ಮೊರ್ಬಿಯಲ್ಲಿ ಕಾರ್ಖಾನೆಯ ಗೋಡೆ ಕುಸಿದ ಪರಿಣಾಮ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಜರಾತ್ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಕಾರ್ಪೊರೇಶನ್ (ಜಿಐಡಿಸಿ) ವ್ಯಾಪ್ತಿಯಲ್ಲಿರುವ ಹಲ್ವಾಡ್ ಕೈಗಾರಿಕಾ ಪ್ರದೇಶದ ಸಾಗರ್ ಸಾಲ್ಟ್ ಫ್ಯಾಕ್ಟರಿಯಲ್ಲಿ ಈ ದುರಂತ ನಡೆದಿರವುದು ಕಂಡು ಬಂದಿದೆ. ಈ ದುರಂತದ ಬಗ್ಗೆ ತಿಳಿದ ಕೂಡಲೇ ಸ್ಥಳೀಯ ಆಡಳಿತ ಸಿಬ್ಬಂದಿ ಸ್ಥಳಕ್ಕಾಗಮಿಸಿ ಅವಶೇಷಗಳಡಿ ಸಿಲುಕಿರುವ ಇತರರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದ್ದಾರೆ.
ಉಪ್ಪು ಕಾರ್ಖಾನೆಯಲ್ಲಿ ಗೋಡೆ ಕುಸಿದು 12 ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಕಾರ್ಮಿಕ ಮತ್ತು ಉದ್ಯೋಗ ಸಚಿವ ಹಾಗೂ ಸ್ಥಳೀಯ ಶಾಸಕ ಬ್ರಿಜೇಶ್ ಮೆರ್ಜಾ ಖಚಿತಪಡಿಸಿದ್ದಾರೆ. “ಇತರರನ್ನು ರಕ್ಷಿಸಲು ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಜೊತೆಗೆ ಸರ್ಕಾರವು ಮೃತರ ಕುಟುಂಬಗಳೊಂದಿಗೆ ನಿಂತಿದೆ” ಎಂದು ಅವರು ತಿಳಿಸಿದ್ದಾರೆ.
ಈ ದುರಂತದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿಯವರು”ಗೋಡೆ ಕುಸಿತದಿಂದ ಮೋರ್ಬಿಯಲ್ಲಿ ಸಂಭವಿಸಿದ ದುರಂತವು ಹೃದಯ ವಿದ್ರಾವಕವಾಗಿದೆ. ಈ ದುಃಖದ ಸಮಯದಲ್ಲಿ, ದುಃಖತಪ್ತ ಕುಟುಂಬಗಳಿಗೆ ದು:ಖ ಭರಿಸುವ ಶಕ್ತಿ ಸಿಗಲಿ. ಗಾಯಾಳುಗಳು ಶೀಘ್ರದಲ್ಲೇ ಚೇತರಿಸಿಕೊಳ್ಳಲಿ” ಸ್ಥಳೀಯ ಅಧಿಕಾರಿಗಳು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ನೀಡುತ್ತಿದ್ದಾರೆ” ಎಂದು ಹೇಳಿದ್ದಾರೆ.