ಮೊರಾರ್ಜಿ ವಸತಿ ಕಾಲೇಜಿನ ವಿದ್ಯಾರ್ಥಿಗಳಿಗೆ ಕೊರೊನಾ…!!

ಕೊಡಗು : ಜ, 27 : ಪದವಿ ಪೂರ್ವ ಕಾಲೇಜು ಆರಂಭವಾಗಿ ತಿಂಗಳು ಕಳೆಯುವಷ್ಟರಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಕೊವೀಡ್ ಪಾಸಿಟಿವ್ ಅಟ್ಯಾಕ್ ಆಗಿದೆ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಗರಗಂದೂರು ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನ 24 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ ಎಂದು ವರದಿಯಾಗಿದೆ.

ಕಳೆದ ವಾರವಷ್ಟೇ ವಿದ್ಯಾರ್ಥಿ ಒಬ್ಬನಿಗೆ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಬಳಿಕ ಪೋಷಕರನ್ನು ಕರೆದು ವಿದ್ಯಾರ್ಥಿಯನ್ನು ಮನೆಗೆ ಕಳುಹಿಸಿಕೊಡಲಾಗಿತ್ತು. ತೀವ್ರ ಜ್ವರ ಇದ್ದಿದ್ದರಿಂದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಸೋಮವಾರ ವಿದ್ಯಾರ್ಥಿಗೆ ಕೊವಿಡ್ ಇರುವುದು ದೃಢಪಟ್ಟಿದೆ. ಹೀಗಾಗಿ ತಕ್ಷಣವೇ ಎಚ್ಚೆತ್ತುಕೊಂಡ ಕಾಲೇಜು ಪ್ರಾಂಶುಪಾಲ ಲೋಕೇಶ್ ಆರೋಗ್ಯ ಇಲಾಖೆಯಿಂದ ಸಿಬ್ಬಂದಿ ಕರೆಸಿ ಕಾಲೇಜಿನಲ್ಲೇ ಎಲ್ಲಾ ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಮಾಡಿಸಿದ್ದಾರೆ. ಈ ವೇಳೆ 24 ವಿದ್ಯಾರ್ಥಿಗಳಿಗೆ ಕೊರೊನಾ ಇರುವುದು ದೃಢಪಟ್ಟಿದೆ.

ಆರೋಗ್ಯ ಸರಿಯಿಲ್ಲವೆಂದು ಮನೆಗೆ ಕಳುಹಿಸಿದ್ದ ವಿದ್ಯಾರ್ಥಿ ಸೇರಿದಂತೆ ಒಟ್ಟು 25 ವಿದ್ಯಾರ್ಥಿಗಳಿಗೆ ಮೊದಲು ಕೊವಿಡ್ ಪಾಸಿಟಿವ್ ಬಂದಿದೆ. ಜನವರಿ 11 ರಂದು ಕಾಲೇಜು ಆರಂಭವಾಗಿತ್ತು. ಈ ವೇಳೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕೊವಿಡ್ ನೆಗೆಟಿವ್ ವರದಿ ಪಡೆದೇ ಕಾಲೇಜಿಗೆ ತರಗತಿಗೆ ಅವಕಾಶ ನೀಡಲಾಗಿತ್ತು. ಆದರೆ ಮೊದಲು ಪಾಸಿಟಿವ್ ಬಂದ ವಿದ್ಯಾರ್ಥಿ ಆರೋಗ್ಯ ಸರಿಯಿಲ್ಲದೆ ಒಮ್ಮೆ ಮನೆಗೆ ಹೋಗಿ ಬಂದಿದ್ದ. ಹೀಗಾಗಿ ಆ ವಿದ್ಯಾರ್ಥಿಗೆ ಎಲ್ಲೋ ಕೊರೊನಾ ಅಟ್ಯಾಕ್ ಆಗಿದೆ ಎನ್ನೋದು ಗೊತ್ತಾಗಿದೆ. ಕಾಲೇಜಿನ ದ್ವಿತೀಯ ಪಿಯುಸಿ ತರಗತಿಯಲ್ಲಿ ಒಟ್ಟು 76 ವಿದ್ಯಾರ್ಥಿಗಳಿದ್ದು 49 ವಿದ್ಯಾರ್ಥಿಗಳು ಆರೋಗ್ಯವಾಗಿದ್ದಾರೆ.

ಉಳಿದ ಇಬ್ಬರು ಹೆಣ್ಣು ಮಕ್ಕಳಿಗೆ ಶೀತದ ಲಕ್ಷಣವಿದ್ದು ಆ ವಿದ್ಯಾರ್ಥಿನಿಯರನ್ನು ವಸತಿನಿಲಯದಲ್ಲೇ ಪ್ರತ್ಯೇಕವಾಗಿ ಇರಿಸಲಾಗಿದೆ. ಕಾಲೇಜಿನ ಎಲ್ಲಾ ಸಿಬ್ಬಂದಿಗೂ ಕೋವಿಡ್ ಟೆಸ್ಟ್ ಮಾಡಲಾಗಿದ್ದು ಎಲ್ಲರಿಗೂ ನೆಗೆಟಿವ್ ರಿಪೋರ್ಟ್ ಬಂದಿದೆ. ಆದರೆ ಎಲ್ಲರೂ ಪಾಸಿಟಿವ್ ವಿದ್ಯಾರ್ಥಿಗಳ ಪ್ರಾಥಮಿಕ ಸಂಪರ್ಕದಲ್ಲಿರುವುದರಿಂದ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ಪಾಸಿಟಿವ್ ಬಂದಿರುವ ಎಲ್ಲಾ ವಿದ್ಯಾರ್ಥಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಕೊಡಗು ಡಿಎಚ್ಓ ಮೋಹನ್ ಕುಮಾರ್ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *