ಮೂರು ಲಕ್ಷಕ್ಕೂ ಹೆಚ್ಚಿನ ಕಾರ್ಮಿಕರಿಗೆ ಆರ್ಥಿಕ ನೆರವು ವರ್ಗಾವಣೆಯಾಗಿಲ್ಲ

ಬೆಂಗಳೂರು: ರಾಜ್ಯ ಸರಕಾರ ಘೋಷಣೆ ಮಾಡಿದ ವಿಶೇಷ ಆರ್ಥಿಕ ನೆರವು ಯೋಜನೆಯಲ್ಲಿ ರಾಜ್ಯದಲ್ಲಿರುವ  ಸುಮಾರು 2,40,000 ಕಟ್ಟಡ ಕಾರ್ಮಿಕರು ಹಾಗೂ 86,000 ಅಸಂಘಟಿತ ಕಾರ್ಮಿಕರಿಗೆ ಇನ್ನೂ ಹಣ ವರ್ಗಾವಣೆಯಾಗಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ್‌ ಹೆಬ್ಬಾರ ಅವರು ತಿಳಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಕಾರ್ಮಿಕ ಸಚಿವರು ʻʻಕೋವಿಡ್‌ ಎರಡನೇ ಅಲೆಯಲ್ಲಿ ತಡೆಯುವ ನಿಟ್ಟಿನಲ್ಲಿ ಘೋಷಿಸಲಾದ ಲಾಕ್‌ಡೌನ್‌ ಪರಿಣಾಮವಾಗಿ ಸಂಕಷ್ಟಕ್ಕೆ ಒಳಗಾಗಿರುವ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ರಾಜ್ಯ ಸರಕಾರ ನೆರವು ಘೋಷಣೆ ಮಾಡಿತ್ತು. ಅದರಂತೆ, ರಾಜ್ಯದಲ್ಲಿ ಇರುವರೆಗೆ 17,80,000 ಕಟ್ಟಡ ಕಾರ್ಮಿಕರು ಮಂಡಳಿಯಲ್ಲಿ ನೋಂದಾಯಿತರಾಗಿದ್ದು, ಇದುವರೆಗೇ ಸುಮಾರು 15,40,000 ಕಾರ್ಮಿಕರಿಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ರೂ. 3,000/- ಹಣ ವರ್ಗಾವಣೆ ಮಾಡಲಾಗಿದೆʼ ಎಂದು ತಿಳಿಸಿದ್ದಾರೆ.

ಇದನ್ನು ಓದಿ: ಸಿಎಂ ಖುರ್ಚಿಯ ಮೇಲೆ ಎಲ್ಲರ ಕಣ್ಣು?!

ಹಣ ವರ್ಗಾವಣೆಯಾಗದೆ ಬಾಕಿ ಉಳಿದಿರುವ ಕಾರ್ಮಿಕರಲ್ಲಿ ಕೆಲವರ ಬ್ಯಾಂಕ್‌ ಖಾತೆಗಳನ್ನು ನಿಷ್ಕ್ರಿಯವಾಗಿರುತ್ತದೆ ಅಥವಾ ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌ ಆಗಿರುವುದಿಲ್ಲ. ಕೂಡಲೇ ಸರಿಪಡಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.

ಅದೇ ರೀತಿಯಲ್ಲಿ 11 ವಿವಿಧ ಅಸಂಘಟಿತ ಕಾರ್ಮಿಕರಿಗೆ ಘೋಷಿಸಲಾದ ರೂ.2,000/- ನಗದು ವರ್ಗಾವಣೆಯಲ್ಲಿ ನೋಂದಾಯಿತರಾದ 3,30,000 ಕಾರ್ಮಿಕರಲ್ಲಿ 2,44,000 ಕಾರ್ಮಿಕರಿಗೆ ಸಹಾಯಧನ ವರ್ಗಾವಣೆಯಾಗಿರುತ್ತದೆ ಎಂದು ಸಚಿವ ಶಿವರಾಮ ಹೆಬ್ಬಾರ ಅವರು ತಿಳಿಸಿದ್ದಾರೆ.

ಅಲ್ಲದೆ, ಹೊಸದಾಗಿ ಇದುವರೆಗೆ (ಜೂನ್‌ 20, 2021) ಸುಮಾರು 7,00,000  ಕಾರ್ಮಿಕರು ಮಂಡಳಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಇನ್ನೂ ನೋಂದಣಿಯಾಗದಿರುವ ಕಾರ್ಮಿಕರು ನೋಂದಣಿ ಮಾಡಿಕೊಂಡು ಕಾರ್ಮಿಕರಿಗಾಗಿ ಇರುವ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಲು ತಿಳಿಸಿದ್ದಾರೆ.

ಕಳಪೆ ಆಹಾರ ಪೂರೈಕೆ ಸಂಸ್ಥೆಗೆ ನೋಟೀಸ್‌

ಕಟ್ಟಡ ಕಾರ್ಮಿಕರು ಹಾಗೂ ವಲಸೆ ಕಾರ್ಮಿಕರಿಗೆ ಮಂಡಳಿಯಿಂದ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ವಿತರಣೆಗೆ ಕ್ರಮವಹಿಸಲಾಗಿತ್ತು. ಇದಕ್ಕಾಗಿ ನೋಡಲ್‌ ಅಧಿಕಾರಿಗಳನ್ನು ನಿಯೋಜಿಸಿ ಕ್ರಮವಹಿಸಲಾಗಿತ್ತು. ಆದರೂ ಇತ್ತೀಚಿಗೆ ಬೊಮ್ಮನಹಳ್ಳಿಯಲ್ಲಿ ವಿತರಣೆಯಾದ ಆಹಾರ ಕಿಟ್‌ಗಳು ಕಳಪೆ ಗುಣಮಟ್ಟದ್ದಾಗಿದ್ದು ಎಂದು ವರದಿಯಾಗಿತ್ತು.

ಇದನ್ನು ಓದಿ: ಕಾರ್ಮಿಕರಿಗೆ ಆಹಾರ ಕಿಟ್ ಹಂಚಿಕೆಯಲ್ಲಿ ಭ್ರಷ್ಟಾಚಾರ: ತನಿಖೆಗೆ ಸಿಐಟಿಯು ಆಗ್ರಹ

ಈ ಬಗ್ಗೆ ಆಹಾರ ಕಿಟ್‌ ವಿತರಣೆಯ ಸರಬರಾಜುದಾರರಾದ ಮೆ: ವೈಟ್‌ ಪೆಟಲ್ಸ್‌ ಸಂಸ್ಥೆ ಈಗಾಗಲೇ ದಿನಾಂಕ 24.06.2021 ನೋಟೀಸ್‌ ಜಾರಿ ಮಾಡಲಾಗಿದೆ ಮತ್ತು ಇಲಾಖೆ ಅಧಿಕಾರಿಗಳಿಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಸರಕು ಸಾಗಣೆಯಲ್ಲಿ ಹಾಗೂ ಇನ್ನಿತರೆ ಕಾರಣಗಳಿಂದ ಗುಣಮಟ್ಟವಿಲ್ಲದ ಆಹಾರ ಪದರ್ಥಗಳು ಕಂಡುಬಂದಲ್ಲಿ ಕಾರ್ಮಿಕ ಸಹಾಯವಾಣಿ ಅಥವಾ ಸಂಬಂಧಪಟ್ಟ ಕಾರ್ಮಿಕ ಅಧಿಕಾರಿ/ಸಿಬ್ಬಂದಿಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Donate Janashakthi Media

3 thoughts on “ಮೂರು ಲಕ್ಷಕ್ಕೂ ಹೆಚ್ಚಿನ ಕಾರ್ಮಿಕರಿಗೆ ಆರ್ಥಿಕ ನೆರವು ವರ್ಗಾವಣೆಯಾಗಿಲ್ಲ

Leave a Reply

Your email address will not be published. Required fields are marked *