ಬಳ್ಳಾರಿ: ಕೂಡ್ಲಿಗಿ ತಾಲೂಕಿನ ಪ್ರತ್ಯೇಕ ಮೂರು ಕಡೆಗಳಲ್ಲಿ ಸಿಡಿಲು ಬಡಿದು ನಾಲ್ವರು ಮೃತಪಟ್ಟಿರುವ ಘಟನೆ ಇಂದು ಮಧ್ಯಾಹ್ನ 3 ರಿಂದ 4 ಗಂಟೆಯ ಸಮಯದಲ್ಲಿ ನಡೆದಿದೆ. ನೆಲಬೊಮ್ಮನಹಳ್ಳಿಯಲ್ಲಿ ಸಿಡಿಲಿಗೆ ಇಬ್ಬರು ಬಲಿಯಾಗಿದ್ದಾರೆ.
ತಾಲೂಕಿನ ನೆಲಬೊಮ್ಮನಹಳ್ಳಿಯ ಹೊಲದಲ್ಲಿ ಕುರಿ ಮೇಯಿಸಲು ಹೋಗಿದ್ದ ಚಿನ್ನಾಪ್ರಪ್ಪ(40) ಮತ್ತು ಈರಣ್ಣ(50) ಎಂಬುವವರು ಮಳೆ ಬರುತ್ತಿದ್ದ ಹಿನ್ನೆಲೆ ಮರದಡಿಗೆ ಹೋಗಿದ್ದಾಗ ಏಕಕಾಲದಲ್ಲಿ ಸಿಡಿಲು ಬಡಿದಿದೆ.
ಇದನ್ನು ಓದಿ: ಆಕ್ಸಿಜನ್‌ಗಾಗಿ ನಿಲ್ಲದ ಹಾಹಾಕಾರ – ಕರ್ನಾಟಕದಲ್ಲಿ ಆಕ್ಸಿಜನ್ ಉತ್ದಾದನೆ ಹೇಗಿದೆ?
ಅಲ್ಲದೆ, ಎಂ.ಬಿ.ಅಯ್ಯನಹಳ್ಳಿಯಲ್ಲಿ ತಮ್ಮ ಮನೆಯ ಮೇಲೆ ಗವಾಕ್ಷಿ ಮುಚ್ಚಲು ಹೋಗಿದ್ದ ಬಳಗೇರ ಪತ್ರೆಪ್ಪ(37) ಅವರಿಗೆ ಸಿಡಿಲು ಅಪ್ಪಳಿಸಿದೆ. ಅದರಂತೆ ಹರವದಿ ಗ್ರಾಮದ ರಾಜಶೇಖರ(33) ಎನ್ನುವವರು ಸೂಲದಹಳ್ಳಿಯಿಂದ ಬೈಕ್ ನಲ್ಲಿ ತಮ್ಮ ಗ್ರಾಮಕ್ಕೆ ಬರುವಾಗ ಸಿಡಿಲು ಬಡಿದಿದೆ ಎನ್ನಲಾಗಿದೆ.
ಹರವದಿ ರಾಜಶೇಖರ್ ಜೊತೆಗೆ ಇದ್ದ ಮತ್ತೊಬ್ಬ ವ್ಯಕ್ತಿಗೆ ಗಾಯವಾಗಿದ್ದು ಹೆಸರು ತಿಳಿದು ಬಂದಿಲ್ಲ.
ನೆಲಬೊಮ್ಮನಹಳ್ಳಿಯಲ್ಲಿ ಸಿಡಿಲಿಗೆ ಇಬ್ಬರು ಬಲಿಯಾದ ಸ್ಥಳಕ್ಕೆ ಕೂಡ್ಲಿಗಿ ತಹಸೀಲ್ದಾರ್ ಮಹಾಬಲೇಶ್ವರ ಭೇಟಿ ನೀಡಿದ್ದಾರೆ. ಘಟನಾ ಸ್ಥಳಗಳಿಗೆ ಕೂಡ್ಲಿಗಿ ತಹಸೀಲ್ದಾರ್ ಎಸ್.ಮಹಾಬಲೇಶ್ವರ ಹಾಗೂ ಕಂದಾಯ ಅಧಿಕಾರಿಗಳು ಮತ್ತು ಕಾನಹೊಸಹಳ್ಳಿ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ನಾಗರತ್ನಮ್ಮ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವರದಿ: ಪಂಪನಗೌಡ.ಬಿ.ಬಳ್ಳಾರಿ