ಮೂರು ಹಂತಗಳ ಸಾರ್ವಜನಿಕ ಆರೋಗ್ಯ ಸೇವೆಯ ಸಮತೋಮುಖ ಅಭಿವೃದ್ಧಿ ಅವಶ್ಯ : ಡಾ.ಕೆ.ಸುಶೀಲಾ

 

ಯಾವುದೇ ಸಮಾಜದ ಜನರ ಆರೋಗ್ಯದ ಮಟ್ಟ ಉತ್ತಮವಾಗಿರಲು ಹಾಗೂ ಬಂದ ಸಾಂಕ್ರಾಮಿಕ ರೋಗವನ್ನು   ಸಮರ್ಪಕವಾಗಿ  ತಡೆಗಟ್ಟಲು  ಪ್ರಥಮ, ದ್ವಿತೀಯ ಹಾಗೂ ತೃತಿಯ ಹಂತಗಳ ಆರೋಗ್ಯ ಆರೋಗ್ಯ ಸೇವೆಗಳಿಂದ ಕೂಡಿದ ಸರಕಾರಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಉತ್ತಮವಾಗಿರುವುದು ಅವಶ್ಯಕ. ಎಲ್ಲಾ ಮೂರು ಹಂತಗಳ ಸಾರ್ವಜನಿಕ ಆರೋಗ್ಯ ಸೇವೆಯ ಸಮತೋಮುಖ ಅಭಿವೃದ್ಧಿಗೆ ತೊಡಗಿದರೆ ಮಾತ್ರ ಯಾವುದೇ ಮಹಾ ಸಾಂಕ್ರಾಮಿಕ ಅಥವಾ ಮಹಾ ಆರೋಗ್ಯ ಸಮಸ್ಯೆಯನ್ನೂ ಫಲಪ್ರದವಾಗಿ ನಿಭಾಯಿಸಬಲ್ಲದು.

*ಡಾ.ಕೆ.ಸುಶೀಲಾ*

  1. ಕರ್ನಾಟಕದ ಕೊರೊನಾ ಸಂದರ್ಭದ ಆರೋಗ್ಯ ಬಿಕಟ್ಟಿನ ನಿರ್ವಹಣೆ ಸಮರ್ಪಕವಾಗಿತ್ತೇ? ಇಲ್ಲದಿದ್ದರೆ ಏನು ಮಾಡಬೇಕಿತ್ತು?

ಈ `ಜೆಟ್ ಯುಗದಲ್ಲಿ’ ಈ ಸೋಂಕು ರಾಜ್ಯಕ್ಕೆ ಬರದಂತೆ ತಡೆಯುವುದು ಅಸಾಧ್ಯ. ಆದರೆ ಚೀನಾದ ವುಹಾನ್‌ನಂತೆ ಯಾವುದೇ ಸೂಚನೆ ನೀಡದೆ ರಾಜ್ಯದಲ್ಲಿ ಧಿಢೀರನೆ ಪ್ರತ್ಯಕ್ಷವಾದ ಕಾಯಿಲೆ ಇದಾಗಿರಲಿಲ್ಲ. ದೇಶದಲ್ಲಿ ಕೊವಿಡ್ ಕಾಣಿಸಿಕೊಂಡ ಪ್ರಥಮ ರಾಜ್ಯವೂ ನಮ್ಮದ್ದಲ್ಲ. ಪ್ರಥಮ ಬಾರಿಗೆ ಈ ಸೋಂಕು ನಮ್ಮ ರಾಜ್ಯದಲ್ಲಿ ಕಾಣಿಸಿಕೊಂಡಾಗ, ವುಹಾನ್‌ನಲ್ಲಿ ಈ ಕಾಯಿಲೆಯ ಮೊದಲ ಪ್ರಕರಣ ಕಾಣಿಸಿಕೊಂಡು ನಾಲ್ಕು ತಿಂಗಳು ಕಳೆದಿತ್ತು. ಈ ಖಾಯಿಲೆ ವುಹಾನ್, ಇಟಲಿಗಳಲ್ಲಿ ನಡೆಸಿದ ಹಾವಳಿ ಹಾಗೂ ಈ ವೈರಾಣುಗಳ ಮತ್ತು ರೋಗದ ಬಗೆಗೆ ಬಹಳಷ್ಟು ಮಾಹಿತಿಯೂ ಅದಾಗಲೇ ಲಭ್ಯವಿತ್ತು. ಪಕ್ಕದ ರಾಜ್ಯ ಕೇರಳ ಕೊವಿಡ್-19 ರ ಹತೋಟಿಗಾಗಿ ಆ ಸೋಂಕು ರಾಜ್ಯಕ್ಕೆ ಕಾಲಿಡುವ ಮೊದಲೇ ಸಜ್ಜಾಗಿ ನಿಂತಿತ್ತು. ಆದರೆ ನಮ್ಮ ರಾಜ್ಯದಲ್ಲಿ ಸೋಂಕು ಕಾಣಿಸಿಕೊಂಡ ಮೇಲೆ ಅದನ್ನು ಎದುರಿಸಲು ಬೇಕಾದ ಯಾವುದೇ ಯೋಜನೆ ರಚಿಸುವ ಗಡಿಬಿಡಿ ತೋರಿಸಲಿಲ್ಲ. ಬಹುಶಃ ಮಾರ್ಚ್ 25 ರಿಂದ ಇಡೀ ದೇಶದಂತೆ ನಮ್ಮ ರಾಜ್ಯದಲ್ಲೂ ಘೋಷಿಸಿದ ಧೀರ್ಘಾವಧಿಯ ಲಾಕ್‌ಡೌನ್ ನಿಂದ ಜನರನ್ನು ಗೃಹಬಂಧನದಲ್ಲಿಟ್ಟು ಎಲ್ಲಾ ಚಟುವಟಿಕೆಗಳನ್ನು ಸ್ಥಬ್ದಗೊಳಿಸುವುದರಿಂದ ಕೊವಿಡ್-19 ಖಾಯಿಲೆಯನ್ನು ನಿರ್ಮೂಲನೆ ಮಾಡಬಹುದೆಂಬ ನಂಬಿಕೆ ಬಲವಾಗಿದ್ದಿರಬಹುದು. ಆದರೆ ಇಂತಹ ಕಾರ್ಯದಿಂದ ಪ್ರಪಂಚವ್ಯಾಪಿ ಸೋಂಕು ನಿರ್ಮೂಲನಗೊಳಿಸಬಹುದಾದರೆ ಕಾರಾಗೃಹದ ಕೈದಿಗಳಲ್ಲಿ ಈ ಸೋಂಕು ಕಾಣಿಸಿಕೊಳ್ಳಬಾರದಿತ್ತು. ಜನರ ದೈಹಿಕ, ಮಾನಸಿಕ, ಆರ್ಥಿಕ ಸಾಮಾಜಿಕ ಸ್ಥಿತಿಗತಿಗಳ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರದಂತೆ ಸೂಕ್ತ ಕ್ರಮ ಕೈಗೊಂಡು ಮಾಡುವ ಲಾಕ್‌ಡೌನ್, ಸೋಂಕನ್ನು ಮುಂದಿನ ಹಂತಕ್ಕೆ ಏರದಂತೆ ತಡೆಯುವುದರೊಂದಿಗೆ, ಅದನ್ನು ಹತೋಟಿಗೆ ತರುವ ಯೋಜನೆಯ ರೂಪರೇಷೆ ರಚಿಸಿ, ಅದನ್ನು ಸಂಪೂರ್ಣವಾಗಿ ಅನುಷ್ಟಾನಗೊಳಿಸುವಲ್ಲಿ ಉಪಯೋಗಕ್ಕೆ ಬರುತ್ತಿತ್ತು. ಆದರೆ ಇಂತಹ ಕಾರ್ಯಗಳೇನೂ ತರಾತುರಿಯಲ್ಲಿ ಸರ್ಕಾರದಿಂದ ನಡೆಯಲಿಲ್ಲ.

ಕೊವಿಡ್ ನಿಯಂತ್ರಣದ ಕಾರ್ಯದ ಯೋಜನೆ ರೂಪಿಸಲು ಸೂಕ್ತ ಸಲಹೆ ಸಮಿತಿ ರಚಿಸಲಾಯಿತು. ಆದರೆ ಈ ಯೋಜನೆ ರೂಪಿಸಲು ಬೇಕಾದ ವಿಷಯಗಳಲ್ಲಿ ಅಪಾರ ಅನುಭವವಿರುವ ತಜ್ಞ ಸದಸ್ಯರ ಕೊರತೆ ಎದ್ದು ಕಾಣುತ್ತಿತ್ತು.

ಕೋವಿಡ್ ಹತೋಟಿಯ ಹೊಣೆಗಾರಿಕೆ ವಹಿಸಿದ ಮಂತ್ರಿಗಳನ್ನು ಆಗಾಗ ಬದಲಾಯಿಸಲಾಯಿತು. ಹಾಗೂ ಇವರಲ್ಲಿ ಯಾವುದೇ ಹೊಂದಾಣಿಕೆ ಇರಲಿಲ್ಲ. ಇವರು ನೀಡುತ್ತಿದ್ದ ಹೇಳಿಕೆಗಳು ಹಲವು ಬಾರಿ ವಿರೋಧಾಭಾಸಗಳಿಂದ ಕೂಡಿರುತ್ತಿದ್ದವು.

ಕೋವಿಡ್-19 ಲಾಕ್ಡೌನ್ ಕಾಲದಲ್ಲಿ ಗುಪ್ತವಾಗಿ ತನ್ನ ಸಂತಾನ ವೃದ್ಧಿಸಿಕೊಳ್ಳುತ್ತಿತ್ತು. ಹಲವು ತಜ್ಞರು ಪರಿಸ್ಥಿತಿ ಮುಂದೆ ಕೈ ಮೀರದಂತೆ ಸಮರೋಪಾದಿಯಲ್ಲಿ ಸೋಂಕು ತಡೆಗಟ್ಟುವ ಕ್ರಮ ಕೈಗೊಳ್ಳಬೇಕೆಂಬ ಸಲಹೆ ನೀಡಿದರೂ ಸೋಂಕಿನ ಗಂಭೀರತೆ ಅರಿವಿರದ ಸರಕಾರ ಹಾಗೂ ಜನತೆ ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಈ ನಿರ್ಲಕ್ಷದಿಂದಾಗಿ ಸೋಂಕು ಒಮ್ಮೆಗೆ ಏರಲು ಪ್ರಾರಂಭಿಸಿತು. ಆಗ ಅದನ್ನು ಎದುರಿಸಲು ಬೇಕಾದ ತಯಾರಿ ಸರ್ಕಾರದಲ್ಲಿ ಇರಲಿಲ್ಲ. ರೋಗ ಪತ್ತೆ ಹಚ್ಚಲು ಬೇಕಾದ `ಜ್ವರದ ಕ್ಲಿನಿಕ್’,  ಪ್ರಯೋಗಾಲಯಗಳು, ಕ್ವಾರಂಟೈನ್ ಮತ್ತು ಕೊವಿಡ್ ಸೆಂಟರ್‌ಗಳು, ರೋಗಿಗಳ ದಾಖಲಾತಿಗೆ ಸುಸಜ್ಜಿತ ಆಸ್ಪತ್ರೆಗಳ ಹಾಗೂ ಈ ಎಲ್ಲಾ ಕ್ಷೇತ್ರದಲ್ಲೂ ಕಾರ್ಯನಿರ್ವಹಿಸುವ ಕಾರ್ಯಕರ್ತರ, ವೈದ್ಯರ, ವೈದ್ಯಕೀಯ ಸಿಬ್ಬಂದಿಗಳ, ರೋಗಿಗಳ ಚಿಕಿತ್ಸೆಗೆ ಬೇಕಾದ ಔಷಧಿಗಳ, ಆಮ್ಲಜನಕದ, ವೆಂಟಿಲೇಟರ್‌ಗಳ ಇತ್ಯಾದಿ ಹತ್ತು ಹಲವು ವಿಷಯಗಳ ಕೊರತೆ ತೀವ್ರವಾಗಿ ಕಾಡಲು ಪ್ರಾರಂಭಿಸಿತ್ತು. ಸೋಂಕು ತಡೆಗಟ್ಟುವ, ಸೋಂಕಿಗೆ ಚಿಕಿತ್ಸೆ ನೀಡುವ ಸಿಬ್ಬಂದಿಗಳಿಗೆ ತಮ್ಮನ್ನು ಸೋಂಕಿನಿAದ ರಕ್ಷಿಸಿಕೊಳ್ಳಲು ಬೇಕಾದ ಪರಿಕರಗಳ ಪೂರೈಕೆ ಆಗುತ್ತಿಲ್ಲವೆನ್ನುವ ಕೂಗು ಕೇಳಲಾರಂಭಿಸಿತ್ತು. ಮುಂದೆ ಪೂರೈಕೆಯಾದ ಈ ಪರಿಕರಗಳು ಕಳಪೆ ಮಟ್ಟದಾಗಿವೆ ಎನ್ನುವ ದೂರು ಕೇಳಿ ಬರುತ್ತಿತ್ತು. ಹೀಗಾಗಿ ಅಧಿಕ ಪ್ರಮಾಣದಲ್ಲಿ ಸಿಬ್ಬಂದಿ ಸೋಂಕಿಗೊಳಗಾದರು. ಇದು ಪರಿಸ್ಥಿತಿಯನ್ನು ಇನ್ನು ಬಿಗಡಾಯಿಸಿತು. ಸಿಬ್ಬಂದಿಗೆ ಸಂಬಳ ಸರಿಯಾದ ಸಮಯಕ್ಕೆ ಪಾವತಿಯಾಗುತ್ತಿಲ್ಲವೆಂದು ಕೂಗೆಬ್ಬಿತ್ತು. ಮೊದಲೇ ಸಿಬ್ಬಂದಿಗಳ ಕೊರತೆ ಕಾಡುತ್ತಿತ್ತು. ಅದರಲ್ಲೂ ಬಹಳಷ್ಟೂ ಪ್ರಮಾಣದ ಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗಳು ಕೆಲಸ ತೊರೆದರು. ರೋಗಿಗಳನ್ನು ಒಯ್ಯುವ ಆ್ಯಂಬುಲೆನ್ಸ್ ಗಳ ಸಂಖ್ಯೆ ಹಾಗೂ ಕಾರ್ಯ ಅಸಮರ್ಪಕವಾಗಿ ಗಂಭೀರ ಸ್ಥಿತಿಯಲ್ಲಿದ್ದ ರೋಗಿಗಳು ನರಳಾಡುವಂತಾಯಿತು. ಕೋವಿಡ್‌ನಿಂದ ಮರಣಿಸಿದ ವ್ಯಕ್ತಿಗಳ ಶವಸಂಸ್ಕಾರ ದೊಡ್ಡ ತಲೆನೋವಾಗಿ ಪರಿಣಮಿಸಿತು.

ಇವುಗಳ ನಡುವೆ, ಮೊದಲೇ ಆರ್ಥಿಕವಾಗಿ ಜರ್ಜರಿತವಾಗಿದ್ದ ಸರ್ಕಾರದಿಂದ ಈ ಸೋಂಕು ತಡೆಗಟ್ಟುವ ಕಾರ್ಯದಲ್ಲಿ ಸಾವಿರಾರು ಕೋಟಿ ಅವ್ಯವಹಾರ ನಡೆಯಿತೆಂದು ಪ್ರತಿಪಕ್ಷಗಳು ಆಪಾದನೆ ಮಾಡಿ ಸರಿಯಾದ ಲೆಕ್ಕ ನೀಡುವಂತೆ ಕೇಳಿದವು. ಸರ್ಕಾರ ಇದಕ್ಕೆ ಸ್ಪಂದಿಸಲಿಲ್ಲ.

ಕೊವಿಡ್-19 ತಡೆಗಟ್ಟುವ ನಿರ್ವಹಣೆಯಲ್ಲಿ ಖಾಸಗಿ ವೈದ್ಯಕೀಯ ಸೇವೆಗಳ ಪಾತ್ರ ಏನಿತ್ತು?

ಪ್ರಾರಂಭದಲ್ಲಿ ಕೆಲವೇ ಕೆಲವು ತೃತೀಯ ಹಂತದ ಆಸ್ಪತ್ರೆಗಳು ತಮ್ಮ ಒಟ್ಟು ಹಾಸಿಗೆಯಲ್ಲಿ ಕೆಲವನ್ನು ಈ ಸೋಂಕಿನ ರೋಗಿಗಳಿಗೆ ಮೀಸಲಿಟ್ಟವು. ಹೆಚ್ಚಿನ ಆಸ್ಪತ್ರೆಗಳು ಈ ರೋಗಿಗಳನ್ನು ದಾಖಲಿಸಿಕೊಂಡರೆ ತಮ್ಮ ಇತರ ರೋಗಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಈ ಕಾಯಿಲೆ ಹರಡುವ ಭಯದಿಂದ ಚಿಕಿತ್ಸೆ ನೀಡಲು ಹಿಂದೇಟು ಹಾಕಿದವು. ಆದರೆ ಗಂಭೀರ ಸ್ಥಿತಿಯ ರೋಗಿಗಳ ಸಂಖ್ಯೆ ಏರಿದಂತೆ, ಸರ್ಕಾರದ ಒತ್ತಾಯಕ್ಕೆ ಮಣಿದು ಈ ರೋಗಿಗಳಿಗೆ ನೀಡಲಾರಂಭಿಸಿದವು. ಆದರೆ ಸರ್ಕಾರ ಇಲ್ಲಿನ ಚಿಕಿತ್ಸೆಗೆ ದರ ನಿಗದಿಪಡಿಸಿದರೂ ಹೆಚ್ಚಿನ ಎಲ್ಲಾ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ದುಬಾರಿ ಹಣ ವಸೂಲು ಮಾಡುವ ದೂರು ಕೇಳಿ ಬರಲು ಪ್ರಾರಂಭವಾಯಿತು. ಹಾಗೂ ಈ ದರ ಜನಸಾಮಾನ್ಯರರ ಶಕ್ತಿಗೆ ಮೀರಿತ್ತು. ದೃಶ್ಯಮಾಧ್ಯಮದಲ್ಲಿ ಚರ್ಚೆಗೊಳಗಾದಾಗ ಅದರಲ್ಲಿ ಪಾಲ್ಗೊಂಡಿದ್ದ ಖಾಸಗಿ ಆಸ್ಪತ್ರೆಯ ಆಡಳಿತಾಧಿಕಾರಿಗಳು “ನಮ್ಮದು ವ್ಯಾಪಾರ ನಾವಿಲ್ಲಿ ಸೇವೆ ಮಾಡುತ್ತಿಲ್ಲ. ವ್ಯಾಪಾರ ಮಾಡುವುದೇ ಲಾಭಗಳಿಸಲು” ಎಂದು ರಾಜಾರೋಷವಾಗಿ ಉತ್ತರಿಸಿದರು.

ಕರ್ನಾಟಕದ ಆರೋಗ್ಯ ವ್ಯವಸ್ಥೆ ಈಗ ಏನಿದೆ? ಕೊರೊನಾದಿಂದ ಪಾಠ ಕಲಿತು ಮುಂದೆ ಹೇಗಿರಬೇಕು?

ಯಾವುದೇ ಸಮಾಜದ ಜನರ ಆರೋಗ್ಯದ ಮಟ್ಟ ಉತ್ತಮವಾಗಿರಲು ಹಾಗೂ ಬಂದ ಸಾಂಕ್ರಾಮಿಕ ರೋಗವನ್ನು   ಸಮರ್ಪಕವಾಗಿ  ತಡೆಗಟ್ಟಲು  ಪ್ರಥಮ, ದ್ವಿತೀಯ ಹಾಗೂ ತೃತಿಯ ಹಂತಗಳ ಆರೋಗ್ಯ ಸೇವೆಗಳಿಂದ ಕೂಡಿದ ಸರಕಾರಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಉತ್ತಮವಾಗಿರುವುದು ಅವಶ್ಯಕ.

ಆದರೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಹಿಂದಿಗಿAತಲೂ ಹೆಚ್ಚು ಸರಕಾರದ ಅಸಡ್ಡೆಗೆ ಗುರಿಯಾದಂತೆ, ಜನಸಂಖ್ಯೆ ಹೆಚ್ಚಾದಂತೆ, ಹೊಸ ಹೊಸ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದಂತೆ, ಆರೋಗ್ಯ ಸೇವೆಗಾಗಿ ಬೇಡಿಕೆ ಹೆಚ್ಚುತ್ತಿತ್ತು. ಆದರೆ ಆರ್ಥಿಕ ಮುಗ್ಗಟ್ಟಿನ ನೆಪವೊಡ್ಡಿ ಎಲ್ಲಾ  ಸರ್ಕಾರಗಳು ಆರೋಗ್ಯ ಸೇವೆಗಾಗಿ ಮಾಡುವ ವೆಚ್ಚ ಕಡಿತಗೊಳಿಸಿದವು. ಹಾಗೂ ಈ ಸೇವೆ ನೀಡುವ  ತನ್ನ  ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಾರಂಭಿಸಿತು. ಆರೋಗ್ಯ ರಕ್ಷಣೆಯನ್ನು ಸೇವೆಯ ಬದಲು ವ್ಯಾಪಾರ ಎಂದು ಕರೆದ ಸರ್ಕಾರಗಳು ಇದಕ್ಕೆ ಆರೋಗ್ಯ ಉದ್ಯಮ (ಹೆಲ್ತ್ ಇಂಡಸ್ಟ್ರಿ) ಎಂದು ನಾಮಕರಣ ಮಾಡಿದವು..

ಈ ವ್ಯಾಪಾರದಲ್ಲಿ ಖಾಸಗಿಯವರ ಭಾಗಿತ್ವವನ್ನು ಪ್ರೋತ್ಸಾಹಿಸಿದವು. ಅದರಲ್ಲೂ ತೃತೀಯ ಹಂತದ ದೊಡ್ಡ ದೊಡ್ಡ ಆಸ್ಪತ್ರೆ ಕಟ್ಟಲು ಶ್ರೀಮಂತ ಸಂಸ್ಥೆಗಳಿಗೆ ಧಾರಾಳವಾಗಿ ಎಲ್ಲಾ ರೀತಿಯ ಸಹಾಯ ಮಾಡಲಾಯಿತು. ಯಾವಾಗ ಸರ್ಕಾರಗಳೇ ಪ್ರಜೆಗಳಿಗೆ ನೀಡುವ ಆರೋಗ್ಯ ನೀಡುವ ಆರೋಗ್ಯ ಸೇವೆ ಖರ್ಚಿನ ಹೊರೆ ಎಂದು ಅದರಿಂದ ಕೈತೊಳೆದುಕೊಂಡ ಆಗ  ಖಾಸಗಿಯವರು ಈ ಹೊಣೆ ಹೊರಬೇಕು ಎನ್ನುವುದನ್ನು ಬಯಸುವುದು ಯೋಚಿಸುವುದು ಅಸಾಧ್ಯ. ಮಾತ್ರವಲ್ಲದೆ ಇದನ್ನು ವ್ಯಾಪಾರ ಎಂದು ಸರಕಾರವೇ ಹೇಳಿರುವಾಗ, ವ್ಯಾಪಾರ ಮಾಡುವುದೇ ಲಾಭಕ್ಕಾಗಿರುವಾಗ, ಖಾಸಗಿಯವರು ಲಾಭಗಳಿಸುವುದನ್ನು ಎಲ್ಲರೂ ಒಪ್ಪಿಕೊಳ್ಳುವುದು ಸಹಜವಾಗಿತ್ತು. ರೋಗ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ವೈದ್ಯಕೀಯ ಸೇವೆಯ ವ್ಯಾಪಾರಿಕರಣ ಸುಲಭ ಹಾಗೂ ಇದರಲ್ಲಿ ಹಣ ಮಾಡುವ ಸಾಮರ್ಥ್ಯ ಅಧಿಕ. ಹೀಗಾಗಿ ಇಂದು ಈ ಸೇವೆಯಲ್ಲಿ ಶೇಕಡ 80 ಪಾಲು ಖಾಸಗಿಯವರ ಹತೋಟಿಯಲ್ಲಿದೆ. ಆದರೆ ರೋಗ ತಡೆಗಟ್ಟುವ ಆರೋಗ್ಯ ಸೇವೆಯು ಲಾಭದಾಯಕವಲ್ಲ. ಇದರ ವ್ಯಾಪಾರಿಕರಣ ಕಷ್ಟ. ಹಾಗಾಗಿ ಈ ಸೇವೆ ಅಸಡ್ಡೆ ಗುರಿಯಾಯಿತು.

ಇತ್ತ ಸರಕಾರಗಳು ಸಾಮಾಜಿಕ ಆರೋಗ್ಯ ಸೇವೆಯಲ್ಲಿ ತಾವು ಮಾಡುವ ವೆಚ್ಚವನ್ನು ದಿನದಿಂದ ದಿನಕ್ಕೆ ಕಡಿತಗೊಳಿಸಲಾರಂಭಿಸಿದವು. ಈ ಸಂಸ್ಥೆಗಳಲ್ಲಿ ವೈದ್ಯರು ಸೇರಿ ಸಿಬ್ಬಂದಿಗಳ ತೀವ್ರ ಕೊರತೆ, ಔಷಧ ಮತ್ತಿತರ ವೈದ್ಯಕೀಯ ಸಲಕರಣೆಗಳ, ಸೂಕ್ತ ಕಟ್ಟಡಗಳ ಕೊರತೆ ದಿನದಿಂದ ದಿನಕ್ಕೆ ಏರುತ್ತಿತ್ತು. ವೆಚ್ಚ ಕಡಿತಗೊಳಿಸಲು ವೈದ್ಯರು ಸೇರಿ ಇತರ ಸಿಬ್ಬಂದಿಗಳನ್ನು ವೃತ್ತಿ ಭದ್ರತೆ ಹಾಗೂ ಯಾವುದೇ ಸೇವಾ ಸೌಲಭ್ಯಗಳಿಲ್ಲದ, ಕನಿಷ್ಠ ಸಂಬಳ ನೀಡುವ ‘ಗುತ್ತಿಗೆ’ಯ ಆಧಾರದ ಮೇಲೆ ನೇಮಿಸಿಕೊಳ್ಳಲಾಯಿತು. ಹಲವು ಸಂಸ್ಥೆಗಳಲ್ಲಿ ವೈದ್ಯರನ್ನು ಬಿಟ್ಟು ಉಳಿದ ಸಿಬ್ಬಂದಿಗಳ ನೇಮಕಾತಿಯ ಹೊಣೆಗಾರಿಕೆ ಖಾಸಗಿ ಗುತ್ತಿಗೆದಾರರಿಗೆ ನೀಡಲಾಯಿತು. ಹಿರಿಯ, ಕಿರಿಯ ಆರೋಗ್ಯ ಕಾರ್ಯಕರ್ತೆಯರ ಹಾಗೂ ಕಾರ್ಯಕರ್ತರ ಸಂಖ್ಯೆ ಕಡಿತಗೊಳಿಸಲಾಯಿತು. ಖಾಲಿ ಬಿದ್ದ ಇವರ ಸ್ಥಾನಗಳನ್ನು ಖಾಲಿ ಬಿಡಲಾಯಿತು. ಹೀಗೆ ಸರಕಾರಿ ಆರೋಗ್ಯ ಸಂಸ್ಥೆ ಅದರಲ್ಲೂ ರೋಗ ತಡೆಗಟ್ಟುವ ಪ್ರಾರ್ಥಮಿಕ ಹಂತದ ಸಂಸ್ಥೆಗಳಲ್ಲಿ, ಪ್ರಮುಖವಾಗಿ ಹಳ್ಳಿಗಾಡಿನ ಪ್ರದೇಶದಲ್ಲಿ ಸಿಬ್ಬಂದಿಗಳ ತೀವ್ರ ಕೊರತೆ ಕಾಡುತ್ತಿತ್ತು. ರೋಗ ತಡೆಗಟ್ಟುವ ಹಾಗೂ ಚಿಕ್ಕ ಪುಟ್ಟ ವೈದ್ಯಕೀಯ ಸೇವೆ ನೀಡಲು ಹೆಚ್ಚಿನ ವೈದ್ಯಕೀಯ ತರಬೇತಿ ಪಡೆಯದ, ಕನಿಷ್ಠ ಸಂಬಳ ಪಡೆಯುವ ಅಂಗನವಾಡಿ ಹಾಗೂ ಕಾರ್ಯಕರ್ತೆಯರನ್ನು ಬಳಸಿಕೊಳ್ಳಲಾಯಿತು.

ಕೊವಿಡ್ ದಾಳಿಗಿಂತ ಮೊದಲೇ ಸಿಬ್ಬಂದಿಗಳ ಕೊರತೆಯಿಂದ ನಲಗುತ್ತಿತ್ತು ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ಇರುವ ಸಿಬ್ಬಂದಿಗಳೂ ಕೊವಿಡ್ ತಡೆಗಟ್ಟುವ ಕಾರ್ಯದಲ್ಲಿ ತೊಡಗಿದಾಗ ಸರ್ಕಾರದ ಹತ್ತು ಹಲವು ರಾಷ್ಟ್ರೀಯ ಯೋಜನೆಗಳ ಅನುಷ್ಟಾನಕ್ಕೆ ಹಿನ್ನಡೆಯಾಯಿತು. ಜನಸಾಮಾನ್ಯರ ಇತರ ಖಾಯಿಲೆಗಳಿಗೆ ಸರ್ಕಾರದ ಹಾಗೂ ಖಾಸಗಿ ವೈದ್ಯಕೀಯ ಸೇವೆ ಸಿಗುವುದು ಕಷ್ಟವಾಯಿತು. ಹೀಗಾಗಿ ಹಲವು ರೋಗಿಗಳು ಉಲ್ಬಣಿಸಿದ ಕಾಯಿಲೆಯಿಂದ ನರಳುವಂತಾಯಿತು. ಇತರ ರೋಗಗಳಿಂದ ಉಂಟಾದ ತುರ್ತು ಪರಿಸ್ಥಿತಿಯಿಂದ ಮರಣದ ಪ್ರಮಾಣ ಹೆಚ್ಚಿತು.

ಕೊವಿಡ್ ಕಾಲದ ಕಠಿಣ ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿ ಜನರು ಬಂಧಿಗಳಾದಾಗ, ಆ ಸಮಯದಲ್ಲಿ ಹೆಚ್ಚಿದ ಮಕ್ಕಳ ಹಾಗೂ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ದೈಹಿಕ ಹಿಂಸೆಗಳಿAದ, ಹೆಚ್ಚಿದ ನಿರುದ್ಯೋಗ ಹಾಗೂ ಭವಿಷ್ಯದ ಜೀವನದ ಚಿಂತೆಯಿಂದ ಜನರ ಮಾನಸಿಕ ಕಾಯಿಲೆಗಳು ಹೆಚ್ಚಳಗೊಂಡವು. ಸರ್ಕಾರ ಜನರ ಆರೋಗ್ಯ ರಕ್ಷಣೆಯ ಬಗ್ಗೆ ಅಸಡ್ಡೆ ತೋರಿಸದೆ, ಎಲ್ಲಾ ಮೂರು ಹಂತಗಳ ಸಾರ್ವಜನಿಕ ಆರೋಗ್ಯ ಸೇವೆಯ ಸಮತೋಮುಖ ಅಭಿವೃದ್ಧಿಗೆ ತೊಡಗಿದರೆ ಮಾತ್ರ ಯಾವುದೇ ಮಹಾ ಆರೋಗ್ಯ ಸಮಸ್ಯೆಯನ್ನೂ ಫಲಪ್ರದವಾಗಿ ನಿಭಾಯಿಸಬಲ್ಲದು.

 

 

Donate Janashakthi Media

One thought on “ಮೂರು ಹಂತಗಳ ಸಾರ್ವಜನಿಕ ಆರೋಗ್ಯ ಸೇವೆಯ ಸಮತೋಮುಖ ಅಭಿವೃದ್ಧಿ ಅವಶ್ಯ : ಡಾ.ಕೆ.ಸುಶೀಲಾ

Leave a Reply

Your email address will not be published. Required fields are marked *