ಕೊಡಗು : ಕೊಡಗು ಜಿಲ್ಲೆ ಪದೆ ಪದೆ ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಪ್ರದೇಶ. 2018ರಲ್ಲಿ ಪ್ರಕೃತಿ ವಿಕೋಪ ಸಂಭವಿಸಿ ಸಾಕಷ್ಟು ಅವಾಂತರ ಸೃಷ್ಟಿಯಾಗಿತ್ತು. ಪ್ರತಿ ವರ್ಷವೂ ಇಂತಹದ್ದೆ ಭೀತಿ ಇದೀಗ ಮತ್ತೆ ಮಳೆ ಹೆಚ್ಚಾಗುತ್ತಿದ್ದು, ಮಳೆ ಅಬ್ಬರ ಮುಂದುವರಿದಿದ್ದು, ಹಲವು ಅವಾಂತರಗಳು ನಡೆಯುತ್ತಿವೆ.
ಭಾರೀ ಮಳೆಗೆ ಕಾವೇರಿ ಹೊಳೆ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ಪಾತ್ರದ ಜನರಲ್ಲಿ ಆತಂಕ ಮೂಡಿಸಿದೆ. ಮಡಿಕೇರಿ ತಾಲ್ಲೂಕಿನ ಚೆರಿಯಪರಂಬು ಪೈಸಾರಿಗೆ ಪ್ರವಾಹದ ನೀರು ನುಗ್ಗುತ್ತಿದ್ದು, ಅಲ್ಲಿರುವ 109 ಕುಟುಂಬಗಳಲ್ಲಿ ಆತಂಕ ಮೂಡಿದೆ. ಗ್ರಾಮದ ಸುತ್ತ ಪ್ರವಾಹದ ನೀರು ಸುತ್ತವರಿಯುತ್ತಿದ್ದು, ಕ್ಷಣ ಕ್ಷಣಕ್ಕೂ ಪ್ರವಾಹದ ನೀರಿನ ಪ್ರಮಾಣ ಹೆಚ್ಚುತ್ತಲೇ ಇದೆ. ಈಗಾಗಲೇ ನಾಪೋಕ್ಲಿನಿಂದ ಚೆರಿಯಪರಂಬು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮೇಲೆ 5 ಅಡಿಯಷ್ಟು ಎತ್ತರಕ್ಕೆ ನೀರು ಹರಿಯುತ್ತಿದ್ದು ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿದೆ. ಕಳೆದ ನಾಲ್ಕು ವರ್ಷಗಳಿಂದಲೂ ಪ್ರವಾಹ ಎದುರಾಗುತ್ತಿದ್ದರೂ ಸರ್ಕಾರ ಯಾವುದೇ ಪರಿಹಾರ ಅಥವಾ ಶಾಶ್ವತ ಪರಿಹಾರ ಕಲ್ಪಿಸಲು ಮುಂದಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಉತ್ತರ ಕರ್ನಾಟಕ,ಕರಾವಳಿ ಭಾಗಗಳಲ್ಲಿ ಮಳೆ ಅಬ್ಬರ : ಜನಜೀವನ ಅಸ್ತವ್ಯಸ್ತ
ಮತ್ತೊಂದೆಡೆ ಭಾರೀ ಮಳೆಗೆ ಸೋಮವಾರಪೇಟೆ ತಾಲ್ಲೂಕಿನ ಹಟ್ಟಿಹೊಳೆ ಗ್ರಾಮದಲ್ಲಿ ಮಡಿಕೇರಿ ಸೋಮವಾರಪೇಟೆಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಭಾರೀ ಬಿರುಕು ಮೂಡಿದೆ. ಬರೋಬ್ಬರಿ 500 ಮೀಟರ್ ದೂರದವರೆಗೆ ಹೆದ್ದಾರಿ ಬಿರುಕು ಬಿಟ್ಟಿರುವುದರಿಂದ ಕುಸಿಯುವ ಆತಂಕ ಎದುರಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ವಿಜಯ್ ಕುಮಾರ್ ಅವರನ್ನು ಕರೆದು ತಕ್ಷಣವೇ ಕ್ರಮವಹಿಸಿ ಕೂಡಲೇ ತಡೆಗೋಡೆ ನಿರ್ಮಿಸುವಂತೆ ಸೂಚಿಸಿದ್ದಾರೆ. ಮತ್ತೊಂದೆಡೆ ಸೋಮವಾರಪೇಟೆ ತಾಲ್ಲೂಕಿನ ಹಂಪಾಪುರ ಗ್ರಾಮದ ಜಯಮ್ಮ ಎಂಬುವರ ಮನೆ ಕುಸಿದು ಬಿದ್ದಿದೆ. ಜಯಮ್ಮ ಅವರು ಪಕ್ಕದ ಮನೆಯಲ್ಲಿ ಇದ್ದಾಗ ಮನೆ ಕುಸಿದು ಬಿದ್ದಿರುವುದರಿಂದ ಆಗಬಹುದಾಗಿದ್ದ ಅನಾವುತ ತಪ್ಪಿದಂತೆ ಆಗಿದೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಶನಿವಾರ ಸ್ವಲ್ಪ ಮಳೆ ಪ್ರಮಾಣ ತಗ್ಗಿದ್ದರೂ ಅನಾಹುತಗಳು ಮಾತ್ರ ನಿಂತಿಲ್ಲ. ಒಂದು ವೇಳೆ ಮಳೆ ಜಾಸ್ತಿಯಾದರೆ ಇನ್ನಷ್ಟು ಅನಾಹುತಗಳು ಸಂಭವಿಸಲಿವೆ.
ಜೂನ್ ತಿಂಗಳಲ್ಲಿ ತಲಕಾವೇರಿ, ಭಾಗಮಂಡಲದಲ್ಲಿ ಮಳೆ ಹೆಚ್ಚಾಗಿ ಬಿದ್ದಿತ್ತು. ತ್ರಿವೇಣಿ ಸಂಗಮದಲ್ಲಿ ನೀರು ಹೆಚ್ಚಾಗಿ ರಸ್ತೆಯ ಮಟ್ಟಕ್ಕೆ ಹರಿದಿತ್ತು. ನಾಪೋಕ್ಲು- ಬಲಮುರಿನಲ್ಲಿ ಅಪಾಯದ ಮಟ್ಟ ಮೀರಿ ಹರಿದು, ಮಳೆಯ ಆರ್ಭಟಕ್ಕೆ ಅಲ್ಲಲ್ಲಿ ಅವಾಂತರ ಸೃಷ್ಟಿಯಾಗಿದೆ. ದೊಡ್ಡ ದೊಡ್ಡ ಮರಗಳು ನೆಲಕ್ಕುರುಳಿ, ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಕೊಡಗು ಜಿಲ್ಲೆಯಲ್ಲಿ ಪ್ರತಿಬಾರಿ ಮಳೆ ಬಂದಾಗ ಇಂತಹ ಭೀತಿಯನ್ನು ಅಲ್ಲಿಯ ಜನ ಎದುರಿಸುತ್ತಿದ್ದಾರೆ. ಸರಕಾರ ಅವರಿಗೆ ಶಾಶ್ವತ ಪರಿಹಾರ ನೀಡದೆ ಬದುಕಿನಲ್ಲಿ ಚಲ್ಲಾಟವಾಡುತ್ತಿದೆ. ಸರಕಾರ ಇಂತಹ ಆಟಗಳನ್ನು ನಿಲ್ಲಿಸಿ ಶಾಶ್ವತ ಪರಿಹಾರದ ಜೊತೆ ಜನರ ಜೀವ ಉಳಿಸಬೇಕು ಎಂದು ಜನಪರ ಸಂಘಟನೆಗಳು ಎಚ್ಚರಿಸಿವೆ.
ವರದಿ : ಆರ್ವಿ ಹಾಸನ