ದೇಶದ ಐಕ್ಯತೆಗೆ ತೀವ್ರ ದಕ್ಕೆ  ತರಲಿರುವ ಮೋದಿಯವರ ದ್ವೇಷಪೂರಿತ ಭಾಷಣ

-ಸಿ,ಸಿದ್ದಯ್ಯ 

ಇಂದು ಅವರಾಗಿದ್ದರೆ ನಾಳೆ ನಾವೇ” ಎಂದ ಅಖಾಲಿ ದಳ

ರಾಜಸ್ಥಾನದ ಬನ್ಸ್ವಾರಾದಲ್ಲಿ ಮೋದಿಯವರ ದ್ವೇಷಪೂರಿತ ಭಾಷಣ ಬಿಜೆಪಿಯ ಸೋಲುವ ಭಯವಿದೆ ಎಂಬುದನ್ನು ತೋರಿಸುತ್ತದೆ. ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ದೇಶದ ಸಂಪತ್ತನ್ನು “ಒಳನುಸುಳುಕೋರರು” ಮತ್ತು “ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ” ಹಂಚುತ್ತದೆ ಎಂದು ಮುಸ್ಲಿಂ ಸಮುದಾಯವನ್ನು ಉಲ್ಲೇಖಿಸಿ ಮೋದಿ ಹೇಳಿದ್ದರು.“ಅವರು [ಕಾಂಗ್ರೆಸ್] ಅಧಿಕಾರದಲ್ಲಿದ್ದಾಗ, ಮುಸ್ಲಿಮರಿಗೆ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕಿದೆ ಎಂದು ಹೇಳಿದರು. ಅವರು ನಿಮ್ಮ ಎಲ್ಲಾ ಸಂಪತ್ತನ್ನು ಒಟ್ಟುಗೂಡಿಸುತ್ತಾರೆ ಮತ್ತು ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಹಂಚುತ್ತಾರೆ. ಅವರು ಅದನ್ನು ನುಸುಳುಕೋರರಿಗೆ ಹಂಚುತ್ತಾರೆ, ”ಎಂದು ಮೋದಿ ಅವರು “ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ನುಸುಳುಕೋರರಿಗೆ ನೀಡಬೇಕೆಂದು ನೀವು ಭಾವಿಸುತ್ತೀರಾ? ನೀವು ಇದನ್ನು ಒಪ್ಪಿಕೊಳ್ಳುತ್ತೀರಾ? ” ಎಂದು ಸಭಿಕರನ್ನು ಪ್ರಶ್ನಿಸಿದರು.

ಕಾಂಗ್ರೆಸ್ ಗೆ ಮತ ಹಾಕಿದರೆ ಹಿಂದೂಗಳ ಆಸ್ತಿಯನ್ನು ಮುಸಲ್ಮಾನರಿಗೆ ಹಂಚುತ್ತಾರೆ, ಹಿಂದೂ ಹೆಂಗಸರ ಕೊರಳಿನಿಂದ ತಾಳಿಯನ್ನು ತೆಗೆಯುತ್ತಾರೆ ಎಂಬ ಮಾತುಗಳನ್ನು ನೋಡಿದರೆ ಬಿಜೆಪಿಯ ಸೋಲುವ ಭಯವಿದೆ ಎಂಬುದು ಸ್ವಷ್ಟವಾಗುತ್ತದೆ. ಕಳೆದ 10 ವರ್ಷಗಳಲ್ಲಿ ಮಾಡಬೇಕಾದ ಉತ್ತಮ ಕೆಲಸಗಳು ಇಲ್ಲದ ಕಾರಣ ಜನರನ್ನು ಮರುಳು ಮಾಡಿ ಮತ ಗಳಿಸಬಹುದು ಎಂದು ಬಳಸಿದ ಮೂರ್ಖ ಪದದ ನಿರರ್ಥಕ ಅಸ್ತ್ರ ಇದು. ಏಪ್ರಿಲ್ 19ರಂದು 102 ಕ್ಷೇತ್ರಗಳಿಗೆ ನಡೆದ ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ ಬಿಜೆಪಿಗೆ ಹೀನಾಯವಾಗಿ ಹಿನ್ನಡೆಯಾಗಲಿದೆ ಎಂದು ಸಮೀಕ್ಷೆಗಳು ಹೇಳಿದಾಗ ಮೋದಿ ಹಾಗೂ ಬಿಜೆಪಿಗೆ ನಿರಾಸೆಯಾಗಿದೆ. ಅದಕ್ಕಾಗಿಯೇ ಅವರು ತಮ್ಮ ಹಾದಿ ಬದಲಾಯಿಸಿದರು ಮತ್ತು ತಮ್ಮ ನಿಜವಾದ ಬಣ್ಣ ಬಯಲುಗೊಳಿಸಿದರು. ಗೆಲ್ಲುವ ಗುರಿಯೊಂದಿಗೆ ಹಿಂದೂಗಳಲ್ಲಿ ಭಯ ಮತ್ತು ದ್ವೇಷ ಹುಟ್ಟಿಸುವ ಪ್ರಯತ್ನದ ಭಾಗವಾಗಿ ಕೋಮುದ್ವೇಷ ಬಿತ್ತುವ ಭಾಷಣ ಇದಾಗಿದೆ. ಪ್ರಧಾನಿ ಸ್ಥಾನದಲ್ಲಿ ಕುಳಿತ ವ್ಯಕ್ತಿ  ಎಲ್ಲ ಜನರನ್ನು ಪ್ರತಿನಿಧಿಸಿ ದೇಶದ ಏಕತೆಯನ್ನು ಕಾಪಾಡಬೇಕು. ಬದಲಾಗಿ ಜನರಲ್ಲಿ ಧಾರ್ಮಿಕ ದ್ವೇಷವನ್ನು ಹುಟ್ಟುಹಾಕಿ ದೇಶವನ್ನು ಛಿದ್ರಗೊಳಿಸಲು ಯತ್ನಿಸುತ್ತಿರುವುದು ಅನಾಚಾರದ ಕಾರ್ಯವಾಗಿದೆ.

ಮೋದಿಯವರ ವೈಫಲ್ಯಗಳಿಂದ ದಾರಿ ತಪ್ಪಿಸುವ ಪ್ರಯತ್ನ

ಮೋದಿಯವರ ಸುಳ್ಳು ಭರವಸೆಗಳನ್ನು ಅರಿತ ವಿವಿಧ ವರ್ಗಗಳ ಜನರು ಆಕ್ರೋಶಗೊಂಡು ರಸ್ತೆಗಿಳಿದಿದ್ದರು. ಈ ಅವಧಿಯಲ್ಲಿ ದೆಹಲಿ ರೈತ ಹೋರಾಟ, ಕಾರ್ಮಿಕರ ಚಳುವಳಿಗಳು, ದಲಿತರು ಮತ್ತು ಆದಿವಾಸಿಗಳ ಮೇಲಿನ ದಾಳಿಗಳ ವಿರುದ್ಧ ತೀವ್ರ ಪ್ರತಿರೋಧ ಚಳುವಳಿಗಳು ನಡೆದವು. ಮಣಿಪುರದಲ್ಲಿ ಕೋಮುದ್ವೇಷ ಹೆಚ್ಚಿ, ರಕ್ತಪಾತ ಸೃಷ್ಟಿಸಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಘಟನೆಗಳ ವಿರುದ್ದ ದೇಶದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಜ್ರಿವಾಲ್ ಬಂಧನದಿಂದ ಬಿಜೆಪಿಯ ಪಕ್ಷಪಾತ ರಾಜಕೀಯ ಬಯಲಾಗಿದೆ. ನಿರುದ್ಯೋಗ ಮತ್ತು ಬೆಲೆ ಏರಿಕೆಯನ್ನು ತಡೆಯುವಲ್ಲಿ ಮೋದಿ ಸರಕಾರ ಸಂಪೂರ್ಣ ವಿಫಲವಾಗಿದೆ. ಈ ವೈಫಲ್ಯಗಳು ಜನರಿಗೆ ಅರ್ಥವಾಗುತ್ತಿದ್ದಂತೆ, ಅಭಿವೃದ್ಧಿ, ಭಯೋತ್ಪಾದನೆಯನ್ನು ಬದಿಗಿರಿಸಿ ಮುಖವಾಡವನ್ನು ಕಳಚಿ ಜನರ ಮೇಲೆ ಮತಾಂಧತೆಯನ್ನು ನಿರ್ಲಜ್ಜವಾಗಿ ಪ್ರಯೋಗಿಸಲಾಗುತ್ತದೆ. ಬಹುಸಂಖ್ಯಾತ ಧಾರ್ಮಿಕ ಹಿಂದೂಗಳ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ ಎಂಬ ಭಯವನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿದೆ. ರಾಮಜನ್ಮಭೂಮಿ ನಿರ್ಮಾಣವನ್ನು ದೊಡ್ಡ ಸಾಧನೆ ಎಂಬಂತೆ ನೋಡಲಾಗುತ್ತದೆ. ಅರಬ್ಬೀ ಸಾಗರದಲ್ಲಿ ಮುಳುಗಿ ದ್ವಾರಕೆಯನ್ನು  ಕಂಡರು ಎಂದು ಹೇಳುವುದು, ವಾರಣಾಸಿಯಲ್ಲಿ ವಿವಾದವನ್ನು ಹುಟ್ಟುಹಾಕುವುದು, ಸಿಎಎ ನಿಯಮಾವಳಿಗಳನ್ನು ರಚಿಸುವುದು ಮತ್ತು ಪೌರತ್ವ ಕಾಯ್ದೆಯ ತಿದ್ದುಪಡಿಯನ್ನು ಮುಂದಕ್ಕೆ ತರುವುದು, ಏಕರೂಪದ ನಾಗರಿಕ ಸಂಹಿತೆಯನ್ನು ತರುವುದು, ಹಿಂದಿ ಹೆಸರಿನ ಅಪರಾಧ ಕಾನೂನುಗಳನ್ನು ಬದಲಾಯಿಸುವುದು ಇತ್ಯಾದಿ. ಮುಸ್ಲಿಂ ಅಲ್ಪಸಂಖ್ಯಾತರನ್ನು ಒಳನುಗ್ಗುವವರು ಮತ್ತು ಹೆಚ್ಚು ಮಕ್ಕಳನ್ನು ಹೆರುವವರು ಎಂದು ಬಿಂಬಿಸುವುದು ಹಿಂದೂಗಳಲ್ಲಿ ಕೋಮು ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಕೂಡಿದೆ.

ಹಿಂದಿನ ಬ್ರಿಟಿಷ್ ಏಜೆಂಟರು ಇಂದಿನ ಮತಾಂಧರು

1946-47ರಲ್ಲಿ ಅವರು ದೇಶವನ್ನು ತೊರೆದ ಬ್ರಿಟಿಷ್ ಸಾಮ್ರಾಜ್ಯಶಾಹಿಗಳು ಹರಡಿದ ವಿಷವನ್ನು ಆರ್‌ಎಸ್‌ಎಸ್ ಮತ್ತು ಬಿಜೆಪಿ ಮತಾಂಧರು ಈಗಲೂ ರಕ್ಷಿಸುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರ ಪಾದದ ಬಳಿ ನಿಂತು ಅವರ ಏಜೆಂಟರಂತೆ ವರ್ತಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹಂತಕರ ವಂಶಸ್ಥರಿಂದ ರಾಷ್ಟ್ರ ಇನ್ನೇನು ನಿರೀಕ್ಷಿಸಲು ಸಾಧ್ಯ. ಎರಡು ಧರ್ಮಗಳ  ನಡುವಿನ ಸಂಘರ್ಷದಿಂದ ದೇಶ ಎರಡು ಹೋಳಾಗಿದ್ದರೆ, ಅದೇ ಬಿಜೆಪಿ ಧರ್ಮ ದ್ವೇಷ ಹೆಚ್ಚಿಸಿ ಮತ್ತೊಮ್ಮೆ ದೇಶವನ್ನು ಒಡೆದು ಸಾಮ್ರಾಜ್ಯಶಾಹಿ ಅಮೆರಿಕಕ್ಕೆ ಒತ್ತೆಯಾಳಾಗಿಸುವ ದುಷ್ಟ ಯೋಜನೆಯೊಂದಿಗೆ ಈ ರೀತಿ ವರ್ತಿಸುತ್ತಿದೆ. ಬಿಜೆಪಿಯ ಕೈಯಲ್ಲಿ ದೇಶದ ಏಕತೆ ಮತ್ತು ಸಮಗ್ರತೆಗೆ ಅಪಾಯ ಎದುರಾಗಿರುವುದು ನಮ್ಮ ಕಣ್ಣಮುಂದೆ ಗೋಚರಿಸುತ್ತಿದೆ.

 “ಇಂದು ಅವರಾಗಿದ್ದರೆ ನಾಳೆ ನಾವೇ”

“ಇಂದು ಅವರಾಗಿದ್ದರೆ ನಾಳೆ ನಾವೇ”; ರಾಜಸ್ಥಾನದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮುಸ್ಲಿಮರ ಬಗ್ಗೆ ಮೋದಿ ಆಡಿದ ಮಾತುಗಳಿಗೆ ಪ್ರತಿಕ್ರಿಯೆಯಾಗಿ ಪಂಜಾಬಿಗಳು ಮತ್ತು ವಿಶೇಷವಾಗಿ ಸಿಖ್ ಸಮುದಾಯದ ಹಿತಾಸಕ್ತಿಗಳನ್ನು ಪ್ರತಿನಿಧಿಸುವುದಾಗಿ ಹೇಳಿಕೊಳ್ಳುವ ಶಿರೋಮಣಿ ಅಕಾಲಿ ದಳವು ನೀಡಿದ ಎಚ್ಚರಿಕೆಯ ಹೇಳಿಕೆ ಇದು.

ಮೋದಿಯವರ ಭಾಷಣದ ತುಣುಕನ್ನು ಎಕ್ಸ್ ನಲ್ಲಿ ಹಂಚಿಕೊಂಡಿರುವ ಅಕಾಲಿದಳದ ರಾಷ್ಟ್ರೀಯ ವಕ್ತಾರ ಪರಂಬನ್ಸ್ ಸಿಂಗ್ ರೊಮಾನಾ ಅವರು: “ನಮ್ಮೆಲ್ಲರ ತಪ್ಪೇನೆಂದರೆ, ನಮ್ಮ ವಿರುದ್ಧ ಅನ್ಯಾಯವಾದಾಗ ಮಾತ್ರ ನಾವು ಅದರ ಬಗ್ಗೆ ಯೋಚಿಸುತ್ತೇವೆ. ಇದು ನಾಚಿಕೆಗೇಡಿನ ಮತ್ತು ತುಂಬಾ ವಿಷಾದದ ಸಂಗತಿ. ಇಂದು ಅವರಾಗಿದ್ದರೆ ನಾಳೆ ನಾವೇ ಆಗುತ್ತೇವೆ.” ಎಂದಿದ್ದಾರೆ.

2020 ರಲ್ಲಿ ರೈತರ ಚಳವಳಿಯು ಬಿಜೆಪಿ ಜೊತೆಗಿನ ಅವರ ಔಪಚಾರಿಕ ಮೈತ್ರಿಯನ್ನು ಮುರಿಸುಕೊಳ್ಳುವ ಮೊದಲು ಹಲವಾರು ವರ್ಷಗಳ ಕಾಲ ಕೇಂದ್ರ ಸರ್ಕಾರದಲ್ಲಿ ಅಧಿಕಾರವನ್ನು ಹಂಚಿಕೊಂಡ ಅಕಾಲಿದಳ ಇಂದು ಮೋದಿ ವಿರುದ್ಧದ ಪ್ರಬಲ ದಾಳಿ ಇದಾಗಿದೆ.

ಮತ್ತೊಬ್ಬ ಹಿರಿಯ ಅಕಾಲಿ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ಅವರು ಮೋದಿ ವಿರುದ್ಧ ಗುಡುಗಿದ್ದಾರೆ. “ಶ್ರೀ ಗುರುನಾನಕ್ ದೇವ್ ಜಿ ಅವರು ‘ಸರ್ಬತ್ ದ ಭಲಾ’ ಎಂದು ಹೇಳುವ ಮೂಲಕ, ಎಲ್ಲ ಮನುಷ್ಯರನ್ನು ಸಮಾನವಾಗಿ ಕಾಣಲು ಮತ್ತು ಎಲ್ಲರಿಗೂ ಒಳ್ಳೆಯದನ್ನು ಹುಡುಕಲು ನಮಗೆ ಕಲಿಸಿದ್ದಾರೆ. ಡಾ.ಬಿ.ಆರ್. ಅಂಬೇಡ್ಕರ್  ಅವರು ಎಲ್ಲಾ ನಾಗರಿಕರನ್ನು ಸಮಾನವಾಗಿ ಪರಿಗಣಿಸುವ ನಮ್ಮ ಸಂವಿಧಾನವನ್ನು ದೇಶಕ್ಕಾಗಿ ಕೊಟ್ಟಿದ್ದಾರೆ. ಅವರು ಸದಾ ಅಲ್ಪಸಂಖ್ಯಾತರು, ಪಂಜಾಬ್ ಮತ್ತು ಪಂಜಾಬಿಯತ್ ಪರವಾಗಿ ನಿಂತಿದ್ದಾರೆ. ಪಿಎಂ ನರೇಂದ್ರ ಮೋದಿ ಜೀ ಇದೇನಾ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್?’ ಎಂದು ಮಜಿಥಿಯಾ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ]

ಇದನ್ನು ಓದಿ : ಚುನಾವಣಾ ಆಯೋಗದಿಂದ ವಿದ್ಯುನ್ಮಾನ ಮತಯಂತ್ರಗಳ(ಇವಿಎಂ) ಕುರಿತು ಸ್ಪಷ್ಟೀಕರಣ ಕೇಳಿದ ಸುಪ್ರೀಂ ಕೋರ್ಟ್

ಇದು ರಾಷ್ಟ್ರವನ್ನು ದುರ್ಬಲಗೊಳಿಸುತ್ತದೆ

ಧಾರ್ಮಿಕ ಸೌಹಾರ್ದತೆ ಮತ್ತು ರಾಷ್ಟ್ರೀಯ ಏಕತೆ ಕಾಪಾಡುವ ಮೂಲಕ ಮಾತ್ರ ಬಲಿಷ್ಠ ಭಾರತ ನಿರ್ಮಾಣ ಸಾಧ್ಯ. ದೇಶವನ್ನು ದುರ್ಬಲಗೊಳಿಸುವ ಮೋದಿಯವರ ಹೇಳಿಕೆಯನ್ನು ಪ್ರತಿಯೊಬ್ಬ ಭಾರತೀಯನೂ ಖಂಡಿಸಬೇಕು. ಇದು ಮುಸ್ಲಿಮರ ಸಮಸ್ಯೆ ಅಲ್ಲ. ಹಿಂದೂಗಳ ಉನ್ನತಿಗೂ ಅಲ್ಲ. ಹಿಂದೂ-ಮುಸ್ಲಿಂ ಸಂಘರ್ಷ ಹೆಚ್ಚಿಸಿ ರಾಜಕೀಯ ಲಾಭ ಪಡೆಯುವ ಬಿಜೆಪಿಯ ದುಷ್ಟ ಯೋಜನೆ ಇದಾಗಿದೆ. ಅದರ ಹೆಸರು ಹಿಂದುತ್ವ. ಬಿಜೆಪಿಯ ಹಿಂದುತ್ವದ ಸಿದ್ಧಾಂತಕ್ಕೂ ಹಿಂದೂಗಳಿಗೂ ಯಾವುದೇ ಸಂಬಂಧವಿಲ್ಲ. ಹಿಂದುತ್ವ ಮತ್ತು ಹಿಂದೂ ಧರ್ಮ ಎರಡೂ ಬೇರೆ ಬೇರೆ ಎಂದು ಆರ್‌ಎಸ್‌ಎಸ್ ನಾಯಕರೇ ಹೇಳಿದ್ದಾರೆ. ಹಿಂದುತ್ವ ಎಂಬ ಪದವನ್ನು ಪರಿಚಯಿಸಿದ ಸಾವರ್ಕರ್ ಕೂಡ ಅದನ್ನೇ ಹೇಳಿದ್ದಾರೆ. ಹಿಂದುತ್ವ ಎಂಬುದು ಬಿಜೆಪಿಗೆ ಅಧಿಕಾರ ಹಿಡಿಯುವ ರಾಜಕೀಯ ಯೋಜನೆಯಾಗಿದೆ. ಈ ದುಷ್ಟ ತಂತ್ರಕ್ಕೆ ಸಿಲುಕುವ ಯಾವುದೇ ಹಿಂದೂ ಇದು ರಾಷ್ಟ್ರವನ್ನು ದುರ್ಬಲಗೊಳಿಸುತ್ತದೆ ಎಂಬುದನ್ನು ಅರಿತುಕೊಳ್ಳಬೇಕು.

ಜೆಡಿಎಸ್ ಬಣ್ಣ ಬಯಲು

ಪ್ರಧಾನಿಯವರು ಮತ ಗಳಿಕೆಗಾಗಿ ಇಂತಹ ಅತಿರೇಕದ ಜನಾಂಗೀಯ ವಿರೋಧಿ ಹೇಳಿಕೆಗಳನ್ನು ನೀಡಿದರೂ ನಮ್ಮ ರಾಜ್ಯದ ಪ್ರಮುಖ ಪ್ರಾದೇಶಿಕ ಪಕ್ಷ ಜೆಡಿಎಸ್  ಅದನ್ನು ಖಂಡಿಸಿ ಪ್ರತಿಕ್ರಿಯಿಸಲಿಲ್ಲ. ಬದಲಾಗಿ, ಜೆಡಿಎಸ್ ನ ಸ್ಥಳೀಯ ನಾಯಕರೊಬ್ಬರು ‘ಅದು ಮುಸ್ಲೀಮರಿಗೆ ಹೇಳಿದ್ದಲ್ಲ’ ಎಂಬಂತೆ ಮೋದಿಯವರ ದ್ವೇಷದ ಮಾತುಗಳನ್ನು ಸಮರ್ಥಿಸಿಕೊಂಡಿದ್ದಾರೆ. ದೇವೇಗೌಡರ ಕುಟುಂಬದ ರಾಜಕೀಯ ಹಿತಾಶಕ್ತಿಗಾಗಿ ರಾಜ್ಯದ ಹಿತಾಸಕ್ತಿಯನ್ನು ಪಣಕ್ಕಿಡುತ್ತಿದ್ದಾರೆ. ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ಮಾಡಲಾಗುತ್ತಿದೆ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಮೌನವಾಗಿರುವುದು ಜಾತ್ಯತೀತತೆಗೆ ನೀರೆರೆದುಕೊಂಡಂತೆ. ಜೆಡಿಎಸ್ ನ ಜಾತ್ಯತೀತರು ಮತ್ತು ದೇಶಭಕ್ತರು ಮೋದಿಯವರ ಹೇಳಿಕೆಗಳನ್ನು ತಿರಸ್ಕರಿಸಬೇಕು. ನಮ್ಮ ರಾಜ್ಯದಲ್ಲಿ ಮೋದಿ ಮತ್ತು ಬಿಜೆಪಿಯನ್ನು ಹಾಡಿ ಹೊಗಳುತ್ತಿರುವ ಪಕ್ಷಗಳನ್ನು ಸೋಲಿಸಲು ಅವರೆಲ್ಲಾ ಮುಂದಾಗಬೇಕು. ಸಂಘಪರಿವಾರ ಈಗಾಗಲೇ ಕರ್ನಾಟಕದ ಕೆಲವು ಭಾಗಗಳನ್ನು ಹಿಂದುತ್ವದ ಪ್ರಯೋಗ ಶಾಲೆಯನ್ನಾಗಿ ಮಾಡಿದ್ದಾರೆ. ಇದು ಮತ್ತಷ್ಟು ಪ್ರದೇಶಗಳಿಗೆ ವಿಸ್ತರಿಸುವ ಅಪಾಯಗಳಿವೆ. ಒಂದೊಮ್ಮೆ ದೇಶ ಹೊತ್ತಿ ಉರಿಯುತ್ತಿದ್ದರೆ ಕರ್ನಾಟಕವೂ ಅದರಿಂದ ಹೊರತಾಗಿರಲು ಸಾಧ್ಯವಿಲ್ಲ.

ಚುನಾವಣಾ ಆಯೋಗ ಸತ್ತಿದೆಯೇ?

ಮೋದಿ ಅವರ ಹೇಳಿಕೆಗಳು ಚುನಾವಣಾ ನೀತಿ ಸಂಹಿತೆಗೆ (ಎಂಸಿಸಿ) ವಿರುದ್ಧವಾಗಿದ್ದರೂ ಚುನಾವಣಾ ಆಯೋಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂಬುದೇ ಹೆಚ್ಚು ಆತಂಕಕಾರಿ ವಿಷಯ. ಪ್ರತಿ ಸಣ್ಣ ಪ್ರತಿಕ್ರಿಯೆಗೂ  ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಚುನಾವಣಾ ಆಯೋಗ, ದೇಶದ ಮೇಲೆ ತೀವ್ರ ಪರಿಣಾಮ ಬೀರುವ ಅಪಾಯಕಾರಿ ಪ್ರಧಾನಿ ಭಾಷಣದ ಬಗ್ಗೆ ಪ್ರತಿಕ್ರಿಯಿಸದೆ ಮೌನ ವಹಿಸಿರುವುದು ಅತಿರೇಕದ ಸಂಗತಿ. ಇದು ಚುನಾವಣಾ ಆಯೋಗದ ವಿಶ್ವಾಸಾರ್ಹತೆಗೆ ಧಕ್ಕೆ ತಂದಿದೆ. ಸಿಪಿಐ(ಎಂ)ನ ದೆಹಲಿ ಶಾಖೆ, ಬೃಂದಾಕಾರತ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರೂ ನೋಂದಣಿ ಮಾಡದಿರುವುದು ಕಾನೂನುಬಾಹಿರವಾಗಿದೆ. ಎಲ್ಲಾ ಸಾಂವಿಧಾನಿಕ ವ್ಯವಸ್ಥೆಗಳು ಮೋದಿಯ ಮುಂದೆ ಮಂಡಿಯೂರಿ ನಿಂತಿರುವುದು ಅಪಾಯ ಸಮೀಪಿಸುತ್ತಿದೆ ಎಂಬುದರ ಸೂಚನೆಯಾಗಿದೆ.

ಗಾಳಿಗೆ ತೂರಿಹೋದ ಅಭಿವೃದ್ಧಿ ಕಾರ್ಯಸೂಚಿ; ಭ್ರಷ್ಟಾಚಾರದಲ್ಲಿ ಬಿಜೆಪಿ

2014ರಲ್ಲಿ ಮೊಟ್ಟಮೊದಲ ಬಾರಿಗೆ ರಾಷ್ಟ್ರರಾಜಕಾರಣಕ್ಕೆ ಕಾಲಿಟ್ಟು ಪ್ರಧಾನಿ ಪಟ್ಟ ಅಲಂಕರಿಸಿದ ಮೋದಿ ‘ಅಭಿವೃದ್ಧಿ’ ಎಂಬ ಮಂತ್ರದಂಡ ಹಿಡಿದು ಯುವಜನರನ್ನು ಸೆಳೆದಿದ್ದರು. ಎರಡು ಕೋಟಿ ಉದ್ಯೋಗ ಸೃಷ್ಟಿಯಾಗುತ್ತದೆ, ವಿದೇಶದಿಂದ ಕಪ್ಪು ಹಣ ತಂದು ಹಂಚಲಾಗುತ್ತದೆ, ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತದೆ, ಬೆಲೆ ಇಳಿಕೆಯಾಗುತ್ತದೆ ಎಂದು ನಿರೀಕ್ಷಿಸಿದ್ದ ಜನತೆಗೆ ಮೊದಲ ಐದು ವರ್ಷಗಳಲ್ಲಿ ತೀವ್ರ ನಿರಾಸೆಯಾಗಿತ್ತು. ಆ ವೈಫಲ್ಯದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು 2019ರಲ್ಲಿ ನಡೆದ ಪುಲ್ವಾಮಾ ಘಟನೆಯನ್ನು ಬಳಸಿಕೊಂಡು ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ಹೆಸರಿನಲ್ಲಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲಾಗಿದೆ ಎಂಬ ಭ್ರಮೆಯನ್ನು ಹುಟ್ಟುಹಾಕಿ ಜನರ ಭಾವನೆಗಳನ್ನು ಮತಗಳಾಗಿ ಪರಿವರ್ತಿಸಿದರು. ಆದರೆ ಭಯೋತ್ಪಾದನೆ ನಿರ್ಮೂಲನೆಯಾಗಲಿಲ್ಲ, ಆ ಭಯೋತ್ಪಾದನೆ ನಿರ್ಮೂಲನೆ ನೆಪದಲ್ಲಿ ಕಾಶ್ಮೀರದ 370 ನೇ ವಿಧಿಯನ್ನು ರದ್ದುಗೊಳಿಸಲಾಯಿತು. ಅದರ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಹದಗೆಟ್ಟಿತು. ಹಿಂದೂ ಮುಸ್ಲೀಮರೆಂದ ಬೇದವಿಲ್ಲದೆ, ಬಡ ರೈತರ ಜಮೀನುಗಳನ್ನು (ಕಾಶ್ಮೀರಿ ಪಂಡಿತರ ಜಮೀನೂ ಸೇರಿದಂತೆ)  ಅದಾನಿ ಮತ್ತು ಅಂಬಾನಿಗೆ ನೀಡಲಾಗುತ್ತಿದೆ. ಸಣ್ಣ ಉದ್ಯಮಿಗಳು ಮತ್ತು ಯುವಕರು ಜೀವನೋಪಾಯಕ್ಕಾಗಿ ಅವಲಂಬಿಸಿರುವ ಪ್ರವಾಸೋದ್ಯಮವನ್ನು ದೊಡ್ಡ ಕಂಪನಿಗಳಿಗೆ ವಹಿಸಲಾಗಿದೆ. ಇದರಿಂದ ಕಾಶ್ಮೀರಿಗಳಲ್ಲಿ ಅಭದ್ರತೆ ಹೆಚ್ಚುತ್ತಿದ್ದು, ಭಯೋತ್ಪಾದನೆಯತ್ತ ಮುಖ ಮಾಡುತ್ತಿದ್ದಾರೆ.

ಅಂದು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ ಬಿಜೆಪಿ ನಾಯಕ ಸತ್ಯಪಾಲ್ ಮಲಿಕ್, ಸೈನಿಕರನ್ನು ವಿಮಾನದಲ್ಲಿ ಕಳುಹಿಸಬೇಕು ಮತ್ತು ರಸ್ತೆ ಮೂಲಕ ಕಳುಹಿಸಬಾರದು ಎಂದು ಹೇಳಿದರು, ಆದರೆ ಮೋದಿ ಸರ್ಕಾರ 40 ವೀರ ಯೋಧರ ಸಾವಿಗೆ ಕಾರಣವಾಯಿತು. ಈ ಸಂಗತಿಯನ್ನು ಇದೇ ರಾಜ್ಯಪಾಲರು ದೇಶದ ಜನತೆಯ ಗಮನಕ್ಕೆ ತಂದ ನಂತರ ಕೋಪಗೊಂಡ ಬಿಜೆಪಿ, ರಾಜ್ಯಪಾಲರ ವಿರುದ್ದ ಇಡಿ ಅಸ್ತ್ರ ಪ್ರಯೋಗಿಸಿ ಬೆದರಿಕೆ ಹಾಕಿದೆ. 2019-24 ರ ನಡುವೆ ದೇಶವು ಯಾವುದೇ ಅಭಿವೃದ್ಧಿಯನ್ನು ಕಂಡಿಲ್ಲ ಮತ್ತು ಕಳೆದ 45 ವರ್ಷಗಳಲ್ಲಿ ಹಿಂದೆಂದಿಗಿಂತಲೂ ನಿರುದ್ಯೋಗ ಮೇಲುಗೈ ಸಾಧಿಸಿದೆ. ಬೆಲೆಗಳು ಗಗನಕ್ಕೇರುತ್ತಿವೆ. ಚುನಾವಣಾ ಬಾಂಡ್‌ಗಳ ಹೆಸರಿನಲ್ಲಿ ಬಿಜೆಪಿ ನಡೆಸಿರುವ ಸಾವಿರಾರು ಕೋಟಿ ಹಗರಣ ಮೋದಿಯವರ ನಿಜ ರೂಪವನ್ನು ಬಯಲು ಮಾಡಿದೆ.

ಮುಂದಿನ ದಿನಗಳಲ್ಲಿ ನಿರಂಕುಶಾಧಿಕಾರದ ಅಪಾಯ

ವಿರೋಧ ಪಕ್ಷಗಳ ಮೇಲೆ, ಅವರನ್ನು ಪ್ರಶ್ನಿಸಿದವರ ಮೇಲೆ ಮತ್ತು ಸತ್ಯಗಳನ್ನು ಬರೆಯುವ ಪತ್ರಕರ್ತರ ಮೇಲೆ ಇಡಿ, ಐಟಿ, ಸಿಬಿಐ, ಎನ್‌ಐಎ ಮತ್ತು ಯುಎಪಿಎ(ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ) ಕಾನೂನುಗಳನ್ನು ಬಳಸಲಾಗುತ್ತಿದೆ. ಚುನಾವಣೆಯನ್ನು ಥ್ರೆಡ್ ಮಾಡಲು ಚುನಾವಣಾ ಆಯೋಗವನ್ನು ನೇಮಿಸುವ ಹಕ್ಕನ್ನು ಅದು ಕಾಯ್ದಿರಿಸಿದೆ. ಪ್ರಜಾಪ್ರಭುತ್ವದ ಕತ್ತು ಹಿಸುಕಿ ದೇಶದ ಮೇಲೆ ನಿರಂಕುಶಾಧಿಕಾರವನ್ನು ಹೇರತೊಡಗಿದ್ದಾರೆ. ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮೋದಿ ವಿಫಲವಾಗಿರುವುದರಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ತಂತ್ರದ ಭಾಗವಾಗಿ ರಾಜಸ್ಥಾನದಲ್ಲಿ ಮಾತನಾಡುತ್ತಾ ಮೋದಿ ತಮ್ಮ ಸ್ವಾರ್ಥ ರಾಜಕೀಯ ಅಜೆಂಡಾವನ್ನು ಜನರ ಮೇಲೆ ಹೇರುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಈ ದುಷ್ಟ ಯೋಜನೆಯನ್ನು ಸೋಲಿಸಿ ದೇಶದ ಭವಿಷ್ಯ, ಸಂವಿಧಾನ ಮತ್ತು ಜನರ ಏಕತೆಯನ್ನು ರಕ್ಷಿಸುವ ಜವಾಬ್ದಾರಿ ಮತದಾರರ ಮೇಲಿದೆ.

ಇದನ್ನು ನೋಡಿ : ರೈತ ಸಮುದಾಯವನ್ನು ಹಿಂಡಿ ಹಿಪ್ಪೆ ಮಾಡಿದ ಬಿಜೆಪಿಗೆ ರೈತರು ಓಟು ಹಾಕುವುದಿಲ್ಲ Janashakthi Media

Donate Janashakthi Media

Leave a Reply

Your email address will not be published. Required fields are marked *