ಚಾಮರಾಜನಗರ ಲೋಕಸಭಾ (ಎಸ್.ಸಿ ಮೀಸಲು) ಕ್ಷೇತ್ರ:ಲೋಕಸಭಾ ಅಖಾಡ-2024

– ಸಂದ್ಯ ಸೊರಬ

ಗಡಿನಾಡು ಚಾಮರಾಜನಗರದಲ್ಲಿ ಲೋಕಸಭಾ ಚುನಾವಣೆಯ ಕಾವು ಜೋರಾಗಿದೆ, ಈ ಹಿಂದೆ ಜನತಾಪರಿವಾರ ಹಾಗು ಕಾಂಗ್ರೆಸ್ ನ ಭದ್ರಕೋಟೆ ಎನಿಸಿಕೊಂಡಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನು ಕಳೆದ ಬಾರಿ ಬಿಜೆಪಿ ಭೇದಿಸಿ ಚಾಮರಾಜನಗರದಲ್ಲಿ ಮೊದಲಬಾರಿಗೆ ಕಮಲ ಅರಳುವಂತೆ ಮಾಡಿತ್ತು. ಇದೀಗ ಮತ್ತೆ ಕಾಂಗ್ರೆಸ್ ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನು ಕೈ ತೆಕ್ಕೆಗೆ ತೆಗೆದುಕೊಳ್ಳುಲು ಕಸರತ್ತು ನಡೆಸುತ್ತಿದ್ದು, ಕ್ಷೇತ್ರದಲ್ಲಿ ಚುನಾವಣಾ ರಾಜಕೀಯ ಚಿತ್ರಣ ಬಲು ರೋಚಕವಾಗಿದೆ‌..

ಗಡಿ ಜಿಲ್ಲೆ ಚಾಮರಾಜನಗರ ಒಂದು ಕಾಲದಲ್ಲಿ ಕಾಂಗ್ರೆಸ್ ಹಾಗು ಜನತಾಪರಿವಾರದ ಭದ್ರ ಕೋಟೆಯಾಗಿತ್ತು, ಆ ಕೋಟೆಯನ್ನು ಕಳೆದ ಲೋಕ ಚುನಾವಣೆಯಲ್ಲಿ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಭೇದಿಸಿ ಚಾಮರಾಜನಗರದಲ್ಲಿ ಕಮಲ ಪಕ್ಷಕ್ಕೆ ಮೊದಲ ಜಯ ತಂದಿದ್ದರು, ಇದೀಗ ಮತ್ತೆ ಕಾಂಗ್ರೆಸ್ ತನ್ನ ಭದ್ರಕೋಟೆಗೆ ಲಗ್ಗೆ ಇಡಲು ಪ್ರಯತ್ನಿಸುತ್ತಿದ್ದರೆ, ಈ ಬಾರಿ ಜೆಡಿಎಸ್-ಬಿಜೆಪಿ ಒಂದಾಗಿರುವುದರಿಂದ ಉಭಯ ಪಕ್ಷಗಳಲ್ಲಿ ರಾಜಕೀಯ ಕಸರತ್ತು ಜೋರಾಗಿದೆ. ಹಾಲಿ ಸಂಸದ ವಿ.ಶ್ರೀನಿವಾಸಪ್ರಸಾದ್ ಈಗಾಗಲೇ ರಾಜಕೀಯ ನಿವೃತ್ತಿ ಘೋಷಿಸಿದ್ದು. ಇತ್ತ ಕಾಂಗ್ರೆಸ್ ಗೆ ಧ್ರುವ ತಾರೆಯಾಗಿದ್ದ ಮಾಜಿ ಸಂಸದ ಆರ್. ಧ್ರುವನಾರಾಯಣ್ ಮೃತಪಟ್ಟಿದ್ದಾರೆ. ಹೀಗಾಗಿ ಘಟಾನು ಘಟಿಗಳಾಗಿದ್ದ ಹಾಲಿ ಮಾಜಿ ಸಂಸದ ಇಬ್ಬರು ಇಲ್ಲದ ಕಾರಣ ಈ ಬಾರಿ ಬಿಜೆಪಿಯಿಂದ ಸಜ್ಜನ, ಸರಳ ವ್ಯಕ್ತಿ ಎನಿಸಿಕೊಂಡಿರುವ ಮಾಜಿ ಶಾಸಕ ಎಸ್.ಬಾಲರಾಜ್ ಹಾಗು ಕಾಂಗ್ರೆಸ್ ನಿಂದ ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ ಮಹಾದೇವಪ್ಪ ಪುತ್ರ ಸುನಿಲ್ ಬೋಸ್ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.‌‌.

ಇನ್ನು ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸಿಎಂ ಸಿದ್ದರಾಮಯ್ಯ ಅವರ ತವರು ಕ್ಷೇತ್ರ ವರುಣ ವಿಧಾನಸಭಾ ಕ್ಷೇತ್ರ ಸಹ ಸೇರಲಿದ್ದು, ಸಿಎಂ ತಮ್ಮ ತವರು ನೆಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಶತಾಯ ಗತಾಯ ಗೆಲ್ಲಿಸಲೇಬೇಕು ಎಂದು ಜಿದ್ದಿಗೆ ಬಿದ್ದಿರುವ ಸಿದ್ದರಾಮಯ್ಯ ರಣತಂತ್ರ ರೂಪಿಸುತ್ತಿದ್ದು, ಬಿಜೆಪಿ, ಜೆಡಿಎಸ್ ಹಾಗು ಬಿಎಸ್ ಪಿ ಮುಖಂಡರುಗಳನ್ನು ಕೈ ಪಾಳಯಕ್ಕೆ ಸೆಳೆಯುತ್ತಿದ್ದಾರೆ, ಈ ನಡುವೆ ಹೇಗಾದರೂ ಸರಿ ತಮ್ಮ ಮಗನನ್ನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಹೈಕಮಾಂಡ್ ಬಳಿ ಚಾಲೆಂಜ್ ಹಾಕಿ ತಮ್ಮ ಮಗನಿಗೆ ಕೈ ಟಿಕೆಟ್ ಪಡೆದುಕೊಂಡಿರುವ ಡಾ.ಹೆಚ್.ಸಿ ಮಹದೇವಪ್ಪ ಅವರು ಪ್ರತಿನಿಧಿಸುವ ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಕೂಡ ಚಾಮರಾಜನಗರ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಸಿಎಂ ಹಾಗು ಸಚಿವ ಮಹಾದೇವಪ್ಪ ಅವರಿಗೆ ಈ ಕ್ಷೇತ್ರ ಪ್ರತಿಷ್ಠೆಯ ಕಣವಾಗಿದೆ. ಅಷ್ಟು ಮಾತ್ರವಲ್ಲದೇ ತಮ್ಮ ಕುರ್ಚಿ ಭದ್ರ ಪಡಿಸಿಕೊಳ್ಳಬೇಕಾದರೆ, ಕೈ ಅಭ್ಯರ್ಥಿ ಸುನಿಲ್ ಬೋಸ್ ಗೆಲ್ಲಲೇಬೇಕಾದ ಅನಿವಾರ್ಯತೆ ಹೆಚ್ಚಾಗಿದೆ.

ಇನ್ನು ಎರಡು ಪಕ್ಷದ ಬಲಾಬಲ ನೋಡಿದ್ರೆ, ಸಿಎಂ ಸಿದ್ದರಾಮಯ್ಯ ಅವರ ವರ್ಚಸ್ಸು, ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ 7 ಜನ ಕಾಂಗ್ರೆಸ್ ಶಾಸಕರಿರುವುದು, ಜೊತೆಗೆ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಆಡಳಿತದಲ್ಲಿ ಇರುವುದು, ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು, ಕ್ಷೇತ್ರದಲ್ಲಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದ ಮತಗಳ ಜತೆಗೆ ಮಹಿಳೆಯರ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಪ್ಲಸ್ ಆಗಲಿದೆ ಎಂದು ವಿಶ್ಲೇಷಿಸಲಾಗಿದೆ‌. ಇನ್ನೂ ಬಿಜೆಪಿಗೆ ಜೆಡಿಎಸ್ ಮೈತ್ರಿಯಿಂದಾಗಿ ಲಿಂಗಾಯ್ತ ಹಾಗು ಒಕ್ಕಲಿಗ ಮತಗಳ ಕ್ರೋಡಿಕರಣವಾಗಲಿದ್ದು, ಪ್ರಧಾನಿ ಮೋದಿಯವರ ವರ್ಚಸ್ಸು ( ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಎಂಬ ಜನರ ಮನಸ್ಥಿತಿ). ಚಾಮರಾಜನಗರ ಎಸ್ಸಿ ಮೀಸಲು ಕ್ಷೇತ್ರವಾಗಿದ್ದರಿಂದ ಒಂದು ಕಾಲದ ಲಿಂಗಾಯತರ ನಾಯಕ ರಾಜಶೇಖರಮೂರ್ತಿ ಅವರ ಅಪ್ಪಟ ಶಿಷ್ಯ, ಬಿಎಸ್ ವೈ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸರಳ, ಸಜ್ಜನ, ಜನ ಸಾಮಾನ್ಯರ ಜೊತೆ ಬೆರೆಯುವ ಎಸ್. ಅಖಾಡಕ್ಕೆ ಇಳಿದಿರುವುದು ಲಿಂಗಾಯ್ತ ಮತಗಳಿಕೆ ಹೆಚ್ಚುವ ಸಾಧ್ಯತೆ ಇದೆ. ಅಲ್ಲದೆ ಹೆಚ್.ಡಿ.ದೇವೇಗೌರ ಆಶೀರ್ವಾದ, ಕುಮಾರಸ್ವಾಮಿ ಅವರ ಬೆಂಬಲ ಪಡೆದಿರುವ ಬಾಲರಾಜ್ ಪರ ಒಕ್ಕಲಿಗರ ಮತಗಳ ಕ್ರೋಡೀಕರಣದ ಜೊತೆಗೆ ಶ್ರೀರಾಮ ಮಂದಿರದ ಎಫೆಕ್ಟ್ ನಿಂದಾಗಿ ವಾಲ್ಮೀಕಿ ಸಮುದಾಯದ ಮತಗಳು ಹಾಗೂ ದಲಿತ ಮತಗಳು ಬಿಜೆಪಿಗೆ ಬೇಳುವ ಸಾಧ್ಯತೆ ಹೆಚ್ಚಾಗಿದೆ.

ಇದನ್ನು ಓದಿ : ಮೊದಲ ಹಂತದ ಮತದಾನಕ್ಕೆ ಇಂದು ತೆರೆ

ಚಾಮರಾಜನಗರ, ಕೊಳ್ಳೆಗಾಲ , ಹನೂರು , ಗುಂಡ್ಲುಪೇಟೆ ಸೇರಿದಂತೆ ಒಟ್ಟು ನಾಲ್ಕು ವಿಧಾನಸಭೆ ಕ್ಷೇತ್ರಗಳು ಹಾಗು ಮೈಸೂರು ಜಿಲ್ಲೆಯ ತಿ.ನರಸೀಪುರ, ವರುಣ, ನಂಜನಗೂಡು, ಹೆಚ್. ಡಿ. ಕೋಟೆ ಸೇರಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳು ಚಾಮರಾಜನಗರ ಲೋಕ ವ್ಯಾಪ್ತಿಗೆ ಬರಲಿವೆ. ಕ್ಷೇತ್ರದ ಮತದಾರರ ಹಾಗೂ ಜಾತಿವಾರು ಲೆಕ್ಕಾಚಾರ ನೋಡುವುದಾದರೆ, ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 17,57,616 ಮತದಾರರಿದ್ದಾರೆ. ಅದರಲ್ಲಿ 8,69,389 ಪುರುಷ ಮತದಾರರು, 8,43,117 ಮಹಿಳಾ ಮತದಾರರು ಹಾಗೂ 114 ಇತರೆ ಮತದಾರರು ಇದ್ದಾರೆ. ಅದರಲ್ಲಿ ಜಾತಿವಾರು ನೋಡುವುದಾದರೆ,

ಪರಿಶಿಷ್ಟ ಜಾತಿಯ ಸುಮಾರು 4.5 ಲಕ್ಷ,

ಲಿಂಗಾಯಿತರು ಸುಮಾರು 3.6 ಲಕ್ಷ,

ಎಸ್.ಟಿ ಸುಮಾರು 2.5 ಲಕ್ಷ,
ಉಪ್ಪಾರರು ಸುಮಾರು 1.5 ಲಕ್ಷ,

ಕುರುಬರು ಸುಮಾರು 1.3 ಲಕ್ಷ’

ಒಕ್ಕಲಿಗರು ಸುಮಾರು 1.7 ಲಕ್ಷ,

ಮುಸ್ಲಿಂರು 90 ಸಾವಿರ,

ಸೇರಿದಂತೆ ಇತರೆ ಒಬಿಸಿ ಸಮುದಾಯಗಳ ಸುಮಾರು 2 ಲಕ್ಷ ಮತದಾರರು ಈ ಕ್ಷೇತ್ರದಲ್ಲಿದ್ದಾರೆ. ಇಲ್ಲಿ ಜಾತಿ ಆಧಾರದ ಮೇಲೆಯ ಈ ಚುನಾವಣೆ ನಡೆಯುವ ಸಾಧ್ಯತೆಗಳು ನಿಚ್ಚಳವಾಗಿದೆ. ಸರ್ವೇ ಸಾಮಾನ್ಯ ಎಂಬಂತೆ ಮೇಲ್ವರ್ಗದ ಮತಗಳು ಬಿಜೆಪಿ ತೆಕ್ಕೆಗೆ ಜಾರಿದರೆ, ಅಹಿಂದ ಮತಗಳು ಕಾಂಗ್ರೆಸ್ ಪಾಲಾಗುವ ಸಾಧ್ಯತೆಗಳಿವೆ. ಎಸ್.ಸಿ ಮೀಸಲು ಕ್ಷೇತ್ರ ಆಗಿರೋದ್ರಿಂದ ಪರಿಶಿಷ್ಟ ಜಾತಿ ಹಾಗು ಎಸ್‌.ಟಿ ಸಮುದಾಯದ ಮತಗಳು ಇಬ್ಬಾಗವಾಗುವ ಸಾಧ್ಯತೆ ಹೆಚ್ಚಾಗಿದೆ, ಈ ಭಾಗದಲ್ಲಿ ಸ್ಥಳೀಯ ಅಂಶಗಳ ಜೊತೆ ಸಿದ್ದರಾಮಯ್ಯ ಹಾಗು ನರೇಂದ್ರ ಮೋದಿ ಅವರ ಪ್ರಭಾವವನ್ನು ಅಲ್ಲಗೆಳೆಯುವಂತಿಲ್ಲ.

ಚಾಮರಾಜನಗರ ಎಸ್.ಸಿ ಮೀಸಲು ಕ್ಷೇತ್ರದಲ್ಲಿ ಗಮನಿಸ ಬೇಕಾದ ವಿಶೇಷತೆ ಏನಂದ್ರೆ, ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಜಯಗಳಿಸಿದ್ದು ಕೇವಲ ಅಲ್ಪ ಮತಗಳ ಅಂತರದಿಂದ, ಇಲ್ಲಿ ಕಾಂಗ್ರೆಸ್ ನ ಆರ್. ಧ್ರುವನಾರಾಯಣ್ ಸೋಲಿಗೆ ಪ್ರಮುಖ ಕಾರಣ ಹುಡುಕುತ್ತಾ ಹೋದ್ರೆ ಕಣ್ಣೆದುರು ಬರೋದೆ ಬಹುಜನ ಸಮಾಜವಾದಿ ಪಕ್ಷ, ಕಳೆದ ಬಾರಿ ಬಿಎಸ್.ಪಿ ಅಭ್ಯರ್ಥಿ ಶಿವಕುಮಾರ್ ಸುಮಾರು 87 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರು, ಈ ಮತಗಳು ಸಹಜವಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಬರುವ ಮತಗಳೇ ಎಂಬುದರಲ್ಲಿ ಅನುಮಾನವಿಲ್ಲ, ಆದರೆ ಕಳೆದ ಬಾರಿ ಬಿಎಸ್.ಪಿ ಗೆ ಬೆನ್ನೆಲುಬಾಗಿದ್ದ ಮಾಜಿ ಸಚಿವ ಎನ್.ಮಹೇಶ್ ಹಾಗು ಕಳೆದ ಬಾರಿ ಅಭ್ಯರ್ಥಿಯಾಗಿದ್ದ ಶಿವಕುಮಾರ್ ಕೂಡ ಬಿಜೆಪಿಯಲ್ಲಿದ್ದಾರೆ, ಹೀಗಾಗಿ ಬಿಎಸ್.ಪಿಯ ಹೆಚ್ಚಿನ ಸಂಖ್ಯೆಯ ಮತಗಳು ಬಿಜೆಪಿ ಹಾಗು ಕಾಂಗ್ರೆಸ್ ಗೆ ಹಂಚಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ.

2014 ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಆರ್‌. ಧ್ರುವನಾರಾಯಣ್ ಅವರಿಗೆ ಪ್ರಭಲ ಪೈಪೋಟಿ ನೀಡಿದ್ದ ಎ.ಆರ್ ಕೃಷ್ಣಮೂರ್ತಿ ಕಾಂಗ್ರೆಸ್ ಸೇರ್ಪಡೆಗೊಂಡು ಕೊಳ್ಳೇಗಾಲ ಎಸ್.ಸಿ ಮೀಸಲು ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾಗಿದ್ದಾರೆ. ಹೀಗಾಗಿ ಈ ಬಾರಿ ಬಿಎಸ್.ಪಿ ಅಭ್ಯರ್ಥಿಯಾಗಿ ರಾಜ್ಯ ಉಸ್ತುವಾರಿ ಕೃಷ್ಣಮೂರ್ತಿ ಕಣಕ್ಕಿಳಿದಿದ್ದು, ಅವರು ಯಾರ ಮತ ಬ್ಯಾಂಕ್ ಗೆ ಲಗ್ಗೆ ಹಾಕುತ್ತಾರೆ ಎಂಬುದು ಕೂಡ ರಾಷ್ಟ್ರೀಯ ಪಕ್ಷಗಳ ಗೆಲುವನ್ನು ನಿರ್ಧರಿಸುವ ಸಾಧ್ಯತೆ ಹೆಚ್ಚಾಗಿದೆ.
ಒಟ್ಟಾರೆ ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನು ಈ ಬಾರಿ ಮತ್ತೆ ಕಾಂಗ್ರೆಸ್ ತನ್ನ ವಶಕ್ಕೆ ತೆಗೆದುಕೊಳ್ಳುವ ಮೂಲಕ ಚಾಮರಾಜನಗರ ಅಂದ್ರೆ ಅದು ಕಾಂಗ್ರೆಸ್ ನ ಭದ್ರಕೋಟೆ ಎಂದು ಸಾಬೀತು ಮಾಡುತ್ತಾ. ಅಥವಾ ಮತ್ತೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಸಿಎಂ ತವರು ನೆಲೆಯಲ್ಲಿ ಕಮಾಲ್ ಮಾಡುವ ಮೂಲಕ ಕಮಲ ಅರಳಿಸಿ ಕ್ಷೇತ್ರದಲ್ಲಿ ಬಿಜೆಪಿ ತನ್ನ ಗೆಲುವಿನ ನಗಾಲೋಟವನ್ನು ಮುಂದುವರಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ..

2014 ರ ಚುನಾವಣಾ ಫಲಿತಾಂಶ:

ಆರ್‌. ಧ್ರುವನಾರಾಯಣ್ ( ಕಾಂಗ್ರೆಸ್): 5,67,782

ಎ.ಆರ್.ಕೃಷ್ಣಮೂರ್ತಿ (ಬಿಜೆಪಿ): 4,26,600

ಕೋಟೆ ಎಂ ಶಿವಣ್ಣ (ಜೆಡಿಎಸ್): 58,760

1,41,182 ಮತಗಳ ಅಂತರದಿಂದ ಕಾಂಗ್ರೆಸ್ ‌ನ ಆರ್ ಧ್ರುವನಾರಾಯಣ ಗೆಲವು

2019 ರ ಚುನಾವಣಾ ಫಲಿತಾಂಶ:

ವಿ.ಶ್ರೀನಿವಾಸಪ್ರಸಾದ್ (ಬಿಜೆಪಿ) 5,68,537

ಆರ್. ಧ್ರುವನಾರಾಯಣ್ ( ಕಾಂಗ್ರೆಸ್) 5,66,720

ಶಿವಕುಮಾರ್ ( ಬಿಎಸ್ಪಿ) 87,631

1817 ಮತಗಳ ಅಂತರದಿಂದ ಬಿಜೆಪಿಯ ವಿ.ಶ್ರೀನಿವಾಸಪ್ರಸಾದ್ ಗೆಲವು

ಇದನ್ನೂ ನೋಡಿ : ಚಾಮರಾಜನಗರ ಲೋಕಸಭಾ ಕ್ಷೇತ್ರ: ಬಿಜೆಪಿ ಎರಡನೇ ಬಾರಿ ಗೆಲ್ಲುತ್ತಾ ? ಮರಳಿ ಅಧಿಕಾರ ಸ್ಥಾಪಿಸುತ್ತಾ ಕಾಂಗ್ರೆಸ್?!

Donate Janashakthi Media

Leave a Reply

Your email address will not be published. Required fields are marked *