ನವದೆಹಲಿ, ಫೆ.09 : ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆದರಿಕೆ ಕರೆ ಬಂದಿದೆ. ಮಧ್ಯಪ್ರದೇಶದಿಂದ ಕರೆ ಮಾಡಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆದರಿಕೆ ಹಾಕಲಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಪ್ರಧಾನಿ ಮೋದಿ ವಿರುದ್ಧ ಮಾತನಾಡಿದರೆ ನಿಮ್ಮನ್ನು ಬಿಡಲ್ಲ. ಪ್ರಧಾನಿ ಮೋದಿಯವರ ವಿರುದ್ಧ ಯಾಕೆ ಮಾತಾಡುತ್ತೀರಾ? ಎಂದು ಕರೆ ಮಾಡಿ ಹೆದರಿಸಿದ್ದಾರೆ ಎಂದು ಹೇಳಲಾಗಿದೆ.
ಫೋನ್ ಕಾಲ್ನಲ್ಲಿ ನಾವು ನಿಮ್ಮನ್ನು ಸರಿಯಾದ ರೀತಿಯಲ್ಲಿ ನೋಡಿಕೊಳ್ಳುತ್ತೇವೆ ಎಂದು ಬೆದರಿಸಿದ ಅಪರಿಚಿತ ಬಳಿಕ ಖರ್ಗೆಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಸದ್ಯ ಈ ಕುರಿತು ದೆಹಲಿಯ ತುಘಲಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ನಾಸಿರ್ ಹುಸೇನ್ ಪ್ರಧಾನಿ ಮೋದಿ ಭಾಷಣದ ಬಳಿಕ ಸುದ್ದಿಗೋಷ್ಠಿ ನಡೆಸಿದ್ದೆವು. ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿದ್ದೆವು. ಈ ಸುದ್ದಿಗೋಷ್ಠಿಯ ಬಳಿಕ ಮಧ್ಯಪ್ರದೇಶದಿಂದ ಕರೆ ಬಂದಿದೆ. ಖರ್ಗೆಯವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಒಡ್ಡಿದ್ದಾರೆ. ಖರ್ಗೆ ಜೀವಕ್ಕೆ ಹಾನಿ ಮಾಡುವ ಬೆದರಿಕೆ ಹಾಕಲಾಗಿದೆ ಎಂದು ಹೇಳಿದರು.
ಹಿಂದೆಯೂ ಮಲ್ಲಿಕಾರ್ಜುನ ಖರ್ಗೆಗೆ ಬೆದರಿಕೆ ಕರೆ ಬಂದಿತ್ತು. ಆಗಲೂ FIR ದಾಖಲಾಗಿತ್ತು. ಆದರೆ ಯಾವುದೇ ಕ್ರಮ ಆಗಿಲ್ಲ. ಒಟ್ಟು 3 ಬಾರಿ ಖರ್ಗೆಯವರಿಗೆ ಬೆದರಿಕೆ ಕರೆ ಬಂದಿದೆ. ಆದರೆ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಮಾತಿಲ್ಲ. ಈಗಲೂ ಸಹ ದೂರು ನೀಡುತ್ತಿದ್ದೇವೆ ಎಂದು ನಾಸೀರ್ ಹುಸೇನ್ ತಿಳಿಸಿದ್ದಾರೆ.