ಪಟ್ನಾ (ಪಿಟಿಐ): ‘ಮೋದಿ’ ಉಪ ನಾಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಪ್ರಕರಣ ಸಂಬಂಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಬಿಹಾರದ ಪಟ್ನಾ ಕೋರ್ಟ್ ಇದೇ 25ರಂದು ಖುದ್ದು ಹಾಜರಾಗಲು ಬುಧವಾರ ನೋಟಿಸ್ ನೀಡಿದೆ.
ಬಿಜೆಪಿಯ ರಾಜ್ಯಸಭೆ ಸದಸ್ಯ ಮತ್ತು ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರು ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಜನಪ್ರತಿನಿಧಿಗಳ ನ್ಯಾಯಾಲಯದ ಸ್ಪೆಷಲ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಆದಿ ದೇವ್ ಅವರು ಏಪ್ರಿಲ್ 12ರಂದು ರಾಹುಲ್ ಗಾಂಧಿ ಅವರ ಖುದ್ದು ಹಾಜರಾತಿಗೆ ಕಳೆದ ಮಾರ್ಚ್ 18ರಂದು ಆದೇಶ ಹೊರಡಿಸಿದ್ದರು. ಆದರೆ, ಬುಧವಾರದ ವಿಚಾರಣೆಯಲ್ಲಿ ರಾಹುಲ್ ಗಾಂಧಿ ಅವರ ವಕೀಲರು, ಇಡೀ ತಂಡ ಸೂರತ್ ಕೋರ್ಟ್ ಆದೇಶದ ಪ್ರಕರಣದಲ್ಲಿ ನಿರತರಾಗಿದ್ದಾರೆ. ಇದರಿಂದ ಖುದ್ದು ಹಾಜರಾತಿಗೆ ಸಮಯಾವಕಾಶ ನೀಡುವಂತೆ ಮನವಿ ಮಾಡಿದರು.
ಇದನ್ನೂ ಓದಿ : ಮೋದಿ ಹೆಸರನ್ನು ಟೀಕಿಸಿದ ರಾಹುಲ್ ಗಾಂಧಿಗೆ 2 ವರ್ಷ ಜೈಲು; ತೀರ್ಪು ನೀಡಿದ ಕೋರ್ಟಿನಿಂದಲೇ ಜಾಮೀನು
ವಕೀಲರ ಕೋರಿಕೆ ಮಾನ್ಯ ಮಾಡಿದ ನ್ಯಾಯಾಧೀಶರು, ಏ.25ರಂದು ನಡೆಯಲಿರುವ ಪ್ರಕರಣದ ಮುಂದಿನ ವಿಚಾರಣೆಗೆ ರಾಹುಲ್ ಗಾಂಧಿ ಖುದ್ದು ಹಾಜರಿರಬೇಕು ಎಂದು ಅವರ ವಕೀಲರಿಗೆ ಸೂಚಿಸಿದರು. ದೂರುದಾರರ ಹೇಳಿಕೆಗಳನ್ನು ದಾಖಲಿಸಲಾಗಿದೆ. ನ್ಯಾಯಾಲಯಕ್ಕೆ ಸಲ್ಲಿಸಿರುವ ಎಲ್ಲ ಪುರಾವೆಗಳು ಮತ್ತು ರಾಹುಲ್ ಗಾಂಧಿಯವರ ಹೇಳಿಕೆಯನ್ನು ಮಾತ್ರ ದಾಖಲಿಸಬೇಕಾಗಿದೆ ಎಂದು ಪ್ರಾಸಿಕ್ಯೂಷನ್ ವಕೀಲರಾದ ಪ್ರಿಯಾ ಗುಪ್ತಾ ಸುದ್ದಿಗಾರರಿಗೆ ತಿಳಿಸಿದರು.
‘ಮೋದಿ’ ಉಪನಾಮ ಕುರಿತ ಹೇಳಿಕೆಗೆ ಸೂರತ್ ಕೋರ್ಟ್ ರಾಹುಲ್ ಗಾಂಧಿ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದು, ಅವರು ಲೋಕಸಭಾ ಸದಸ್ಯತ್ವದಿಂದಲೂ ಅನರ್ಹರಾಗಿದ್ದಾರೆ.