ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭಾರತದ ಮತದಾನದ ಪಾವಿತ್ರ್ಯವನ್ನು ‘ನಾಶಪಡಿಸಿದ್ದಾರೆ’ ಎಂದು ಆರೋಪಿಸಿರುವ ಅವರು, ಜ್ಞಾನೇಶ್ ಕುಮಾರ್ ಕೂಡಲೇ ಸಿಇಸಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಮೋದಿ
ದೆಹಲಿಯ ಇಂದಿರಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಚುನಾವಣಾ ಆಯೋಗದ ಕೆಲಸವೇ ಮತವನ್ನು ರಕ್ಷಿಸುವುದಾಗಿದ್ದು, ಆದರೆ ಜ್ಞಾನೇಶ್ ಕುಮಾರ್ ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು. ಮೋದಿ ಮತ್ತು ಅಮಿತ್ ಶಾ ಅವರು ಚುನಾವಣಾ ಅಕ್ರಮದ ಆರೋಪಿತ ಸಂಚಿನ ‘ಮೇಲ್ಭಾಗದಲ್ಲಿದ್ದಾರೆ’ ಎಂದು ಅವರು ದೂರಿದರು.
ಜ್ಞಾನೇಶ್ ಕುಮಾರ್ ಅವರು ‘ಅಪ್ರೂವರ್’ ಆಗಿ ಸತ್ಯವನ್ನು ಬಹಿರಂಗಪಡಿಸಬೇಕು. ಹಾಗೆ ಮಾಡುವುದು ದೇಶಭಕ್ತಿಯ ಕಾರ್ಯವಾಗಲಿದೆ ಎಂದು ರಾಹುಲ್ ಗಾಂಧಿ ಹೇಳಿದರು. ಮೋದಿ ಮತ್ತು ಶಾ ವಿರುದ್ಧವೂ ತನಿಖೆ ನಡೆಯಲಿದೆ ಎಂದು ಅವರು ಹೇಳಿಕೊಂಡರು.
ಚುನಾವಣೆಗಳಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಬಗ್ಗೆ ತಮಗೆ ‘100 ಪ್ರತಿಶತ ಖಚಿತತೆ’ ಇದೆ ಎಂದು ರಾಹುಲ್ ಗಾಂಧಿ ಹೇಳಿದ್ದು, ಚುನಾವಣಾ ಪ್ರಕ್ರಿಯೆಯಲ್ಲಿ ಆಡಳಿತ ವಿರೋಧಿ ಅಲೆಯೇ ಕಾಣಿಸದಿರುವುದನ್ನೂ ಪ್ರಶ್ನಿಸಿದರು. ಸಾಮಾನ್ಯವಾಗಿ ಅಧಿಕಾರದಲ್ಲಿರುವ ಸರ್ಕಾರಗಳ ವಿರುದ್ಧ ಕಾಣಿಸಿಕೊಳ್ಳುವ ‘ಆ್ಯಂಟಿ-ಇನ್ಕಂಬೆನ್ಸಿ’ ಭಾರತದಲ್ಲಿ ಸಂಪೂರ್ಣವಾಗಿ ಮಾಯವಾಗಿದೆ ಎಂದು ಅವರು ವಾದಿಸಿದರು.
ಇದನ್ನೂ ಓದಿ : ಗ್ಯಾನೇಶ್ ಕುಮಾರ್ ರಾಜೀನಾಮೆಗೆ CJP 48 ಗಂಟೆಗಳ ಗಡುವು; SIR ಸ್ಥಗಿತಕ್ಕೆ ಆಗ್ರಹ
ಇದಕ್ಕೂ ಮುನ್ನ, ಚುನಾವಣಾ ಆಯೋಗದ ಇಬ್ಬರು ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು 10 ತಿಂಗಳ ಅವಧಿಯಲ್ಲಿ ಮತದಾರರ ಪಟ್ಟಿ ಹಾಗೂ ವಿಶೇಷ ತೀವ್ರ ಪರಿಷ್ಕರಣೆ (SIR)ಗೆ ಸಂಬಂಧಿಸಿದ ನಿರ್ಧಾರಗಳು ಮತ್ತು ಆದೇಶಗಳ ಕುರಿತು ಕನಿಷ್ಠ 14 ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬ ವರದಿಯನ್ನು ಮಾಧ್ಯಮಗಳು ಪ್ರಕಟಿಸಿದ್ದವು. ಫಾರ್ಮ್ 6ರ ಬದಲಾವಣೆ, ಮತದಾರರ ಪಟ್ಟಿಯ ಡೇಟಾಬೇಸ್ಗೆ ಪ್ರವೇಶ ಹಾಗೂ SIRಗೆ ಸಂಬಂಧಿಸಿದ ಮೇಲ್ಮನವಿಗಳ ನಿರ್ವಹಣೆ ಸೇರಿದಂತೆ ಹಲವು ವಿಷಯಗಳಲ್ಲಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ವರದಿ ತಿಳಿಸಿದೆ.
ಮತವೇ ಪ್ರಜಾಪ್ರಭುತ್ವದ ಅಡಿಪಾಯ. ಮತದಾನದ ವ್ಯವಸ್ಥೆ ದುರ್ಬಲವಾದರೆ ಸಂವಿಧಾನ, ಕಾನೂನು ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳ ಅರ್ಥವೇ ಉಳಿಯುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಮೋದಿ, ಶಾ ಹಾಗೂ ಜ್ಞಾನೇಶ್ ಕುಮಾರ್ ಅವರನ್ನು ‘ದೇಶದ್ರೋಹಿಗಳು’ ಎಂದು ಕರೆದ ರಾಹುಲ್ ಗಾಂಧಿ, ಅವರು ದೇಶದ ಮತವನ್ನು ‘ನಾಶಪಡಿಸಿದ್ದಾರೆ’ ಎಂದು ಆರೋಪಿಸಿದರು. ಆದರೆ ಚುನಾವಣಾ ಅಕ್ರಮದ ಆರೋಪಗಳನ್ನು ಚುನಾವಣಾ ಆಯೋಗ ತಳ್ಳಿಹಾಕಿದ್ದು, ತನ್ನ ಚುನಾವಣಾ ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡಿದೆ.
ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಪಕ್ಷಗಳ ಆಕ್ರೋಶವೂ ಮುಂದುವರಿದಿದ್ದು, ಹಲವು ಪ್ರತಿಪಕ್ಷಗಳು ಅವರ ರಾಜೀನಾಮೆಗೆ ಆಗ್ರಹಿಸಿವೆ. ಈ ವಿವಾದ ಹಾಗೂ SIR ಪ್ರಕ್ರಿಯೆ ಕುರಿತು ಮುಂದಿನ ಕಾರ್ಯತಂತ್ರ ಚರ್ಚಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸೆಪ್ಟೆಂಬರ್ 29ರಂದು ಸಭೆ ಸೇರಲಿದೆ ಎಂದು ಮೂಲ ವರದಿ ತಿಳಿಸಿದೆ.
ಇದನ್ನೂ ನೋಡಿ : ಸೌಜನ್ಯ ಪ್ರಕರಣಕ್ಕೆ ಮರುಜೀವ! | ಮತ್ತೆ ಚಿಗುರಿದ ನ್ಯಾಯದ ನಿರೀಕ್ಷೆ Janashakthi Media
