“ಮೋದಿ ಸರಕಾರ ಜವಾಬು ಕೊಡಬೇಕು- ಕೋರ್ಟುಗಳು ಹೊಣೆ ನಿಗದಿ ಮಾಡಬೇಕು”-ಯೆಚುರಿ
ಭಾರತದ ಪ್ರಮುಖ ಬೇಹುಗಾರಿಕೆ ಸಂಸ್ಥೆ ಐ.ಬಿ. .(ಇಂಟಲಿಜೆನ್ಸ್ ಬ್ಯುರೊ) ಇಸ್ರೇಲ್ ಮೂಲದ ಎನ್‍ಎಸ್‍ಒ ಗ್ರೂಪ್ ಕಂಪನಿಯಿಂದ ಆ ಕಂಪನಿಯ ಬೇಹುಗಾರಿಕಾ ತಂತ್ರಾಂಶ ಪೆಗಾಸಸ್‌ಗೆ ಬೇರೆಡೆಗಳಲ್ಲಿ ಬಳಸಿರುವ ಕಂಪ್ಯೂಟರ್ ಯಂತ್ರಾಂಶ(ಹಾರ್ಡ್‌ವೇರ್)ಗಳನ್ನು ಹೋಲುವ ಯಂತ್ರಾಂಶವನ್ನು ಖರೀದಿಸಿದೆ ಎಂದು ಆಮದು ದಸ್ತಾವೇಜುಗಳಲ್ಲಿ ಕಂಡು ಬಂದಿದೆ ಎಂದು ತನಿಖಾ ಪತ್ರಕರ್ತರ ಜಾಗತಿಕ ಜಾಲವಾದ ಒ.ಸಿ.ಸಿ.ಆರ್.ಪಿ.(ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿಗಾರಿಕೆ ಪರಿಯೋಜನೆಯ ಸಂಘಟನೆ)ಯ ಇಬ್ಬರು ಲೇಖಕರು, ಶರದ್ ವ್ಯಾಸ್ ಮತ್ತು ಯುರೆ ಬರ್ಗರ್ ಅಕ್ಟೋಬರ್ 20ರಂದು ಪ್ರಕಟವಾಗಿರುವ ಲೇಖನದಲ್ಲಿ ಹೇಳಿದ್ದಾರೆ.
ಇಸ್ರೇಲ್‌ನೊಂದಿಗಿನ ಪ್ರಮುಖ ಶಸ್ತ್ರಾಸ್ತ್ರ ಒಪ್ಪಂದದ ಭಾಗವಾಗಿ ಭಾರತ ಸರ್ಕಾರವು 2017 ರಲ್ಲಿ ಪೆಗಾಸಸ್ ಬೇಹುಗಾರಿಕೆ ತಂತ್ರಾಂಶವನ್ನು ಖರೀದಿಸಿದೆ ಎಂದು ಈ ವರ್ಷದ ಆರಂಭದಲ್ಲಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದ ಹೇಳಿಕೆಯನ್ನು ಈ ಸಂಗತಿ ಬಲಪಡಿಸುತ್ತದೆ ಎಂಬುದಾಗಿ ಅವರು ಹೇಳುತ್ತಾರೆ.
ಈ ಮೊದಲೇ ವರದಿಯಾಗಿರುವಂತೆ ಅನೇಕ ಸಂದರ್ಭಗಳಲ್ಲಿ ಪತ್ರಕರ್ತರು, ಕಾರ್ಯಕರ್ತರು, ವಿರೋಧ ಪಕ್ಷದ ರಾಜಕಾರಣಿಗಳು ಮತ್ತು ಭಿನ್ನಮತೀಯರ ಮೇಲೆ ಕಣ್ಣಿಡಲು ಅವರ ಮೊಬೈಲ್ ಫೋನುಗಳನ್ನು ರಹಸ್ಯವಾಗಿ ಹೊಕ್ಕುವಂತೆ ಮಾಡಲು ಪೆಗಾಸಸ್ ಅನ್ನು ವಿವಿಧ ದೇಶಗಳಲ್ಲಿ ನಿಯೋಜಿಸಲಾಗಿದೆ, ಭಾರತದಲ್ಲೂ ಇದು ನಡೆದಿದೆ ಎಂದು ಆಗ ಹೇಳಲಾಗಿತ್ತು.
ಎನ್‍ಎಸ್‍ಒ ಗ್ರೂಪ್ ಈ ತಂತ್ರಾಂಶವನ್ನು ಸರಕಾರಗಳಿಗೆ ಮಾತ್ರ ಮಾರಲಾಗಿದೆ ಎಂದು ಹೇಳಿರುವುದರಿಂದ ಭಾರತ ಸರಕಾರ ಇದನ್ನು ಖರೀದಿಸಿದೆಯೇ, ಯಾವ ಸಂಸ್ಥೆ ಇದನ್ನು ಖರೀದಿಸಿದೆ ಎಂಬ ಪ್ರಶ್ನೆ ಎದ್ದು ಬಂತು. ಆದರೆ ಭಾರತ ಸರ್ಕಾರವು ಪೆಗಾಸಸ್ ಸಾಫ್ಟ್‌ವೇರ್ ಅನ್ನು ಖರೀದಿಸಿದೆಯೇ ಎಂಬುದನ್ನು ಖಚಿತಪಡಿಸಿಯೂ ಇಲ್ಲ, ಅಥವಾ ನಿರಾಕರಿಸಿಯೂ ಇಲ್ಲ. . ಕಳೆದ ವರ್ಷ ಜುಲೈನಲ್ಲಿ, ದೇಶದ ಮಾಹಿತಿ ತಂತ್ರಜ್ಞಾನ ಸಚಿವರು ಇದನ್ನು ಅನಗತ್ಯ ಕೋಲಾಹಲ ಎಬ್ಬಿಸುವ ಮತ್ತು “ಭಾರತೀಯ ಪ್ರಜಾಪ್ರಭುತ್ವ ಮತ್ತು ಅದರ ಸುಸ್ಥಾಪಿತ ಸಂಸ್ಥೆಗಳ ಹೆಸರು ಕೆಡಿಸುವ ಪ್ರಯತ್ನ” ಎಂದು ತಳ್ಳಿ ಹಾಕಿದ್ದರು.
ಅಕ್ಟೋಬರ್‌ನಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯವು ಈ ಕುರಿತು ವಿಚಾರಣೆಯನ್ನು ನಡೆಸಲು ನೇಮಿಸಿದ್ದ ಸಮಿತಿಯು ಕೋರ್ಟಿಗೆಸಲ್ಲಿಸಿದ ವರದಿಯಲ್ಲಿ, ತಾನು ಪರೀಕ್ಷಿಸಿದ ಕೆಲವು ಫೋನ್‌ಗಳು ಬೇಹುಗಾರಿಕೆ ನಡೆಸಬಹುದಾದ ತಂತ್ರಾಂಶಗಳನ್ನು ಹೊಂದಿರುವುದು ಕಂಡುಬಂದಿದೆ, ಆದರೆ ಅಲ್ಲಿ ಪೆಗಾಸಸ್ ನ್ನೇ ನಿಯೋಜಿಸಲಾಗಿದೆ ಎಂಬುದಕ್ಕೆ ನಿರ್ಣಾಯಕ ಪುರಾವೆಗಳು ಸಿಕ್ಕಿಲ್ಲ ಎಂದು ಹೇಳಿತು. ಜತೆಗೇ ಭಾರತ ಸರಕಾರ ಈ ತನಿಖೆಯಲ್ಲಿ ಸಹಕರಿಸಲಿಲ್ಲ ಎಂದೂ ಹೇಳಿತು ಎಂದು ಮುಖ್ಯ ನ್ಯಾಯಾಧೀಶರು ಆಗ ಹೇಳಿದ್ದರು. ಆದರೆ ಆ ವರದಿಯನ್ನು ಇನ್ನೂ ಬಹಿರಂಗ ಪಡಿಸಿಲ್ಲ.
ಈ ಹಿನ್ನೆಲೆಯಲ್ಲಿ ಒ.ಸಿ.ಸಿ.ಆರ್.ಪಿ. ಪರಿಶೀಲಿಸಿದ ಆಮದು ದತ್ತಾಂಶಗಳಿಂದ ತಿಳಿದು ಬಂದಿರುವ ಸಂಗತಿ ಬಹಳ ಮಹತ್ವದ್ದಾಗಿದೆ. ಇದರ ಪ್ರಕಾರ ಎಪ್ರಿಲ್ 2017 ರಲ್ಲಿ ನವದೆಹಲಿಯಲ್ಲಿರುವ ಐ.ಬಿ. (ಇಂಟಲಿಜೆನ್ಸ್ ಬ್ಯುರೊ) ಕಚೇರಿ ಇಸ್ರೇಲಿನ ಎನ್‍ಎಸ್‍ಒ ದಿಂದ ಒಂದು ಸರಕು ರವಾನೆಯನ್ನು ಸ್ವೀಕರಿಸಿತು. ಇದರಲ್ಲಿ ಡೆಲ್ ಕಂಪ್ಯೂಟರ್ ಸರ್ವರ್‌ಗಳು, ಸಿಸ್ಕೊ ನೆಟ್‌ವರ್ಕ್ ಉಪಕರಣಗಳು ಮತ್ತು “ತಡೆರಹಿತ ವಿದ್ಯುತ್ ಸರಬರಾಜು” ಬ್ಯಾಟರಿಗಳು ಇದ್ದವು, ಇವು ಬೇರೆಡೆಗಳಲ್ಲಿ ಪೆಗಸಸ್ ಬಳಕೆಗೆ ರೂಪಿಸಿದ ಯಂತ್ರಾಂಶಗಳಿಗೆ ಸರಿಯಾಗಿ ಹೋಲುವ ತಾಂತ್ರಿಕ ವಿವರಗಳನ್ನು ಹೊಂದಿದ್ದವು. ವಿಮಾನದ ಮೂಲಕ ತಲುಪಿಸಲಾದ ಇದರ ಮೇಲೆ “ರಕ್ಷಣೆ ಮತ್ತು ಮಿಲಿಟರಿ ಬಳಕೆಗಾಗಿ” ಎಂದು ಗುರುತು ಮಾಡಲಾಗಿತ್ತು . ಇದರ ಬಿಲ್ ಮೊತ್ತ 315,000 ಡಾಲರ್ ಎಂದೂ ತಿಳಿದು ಬಂದಿದೆ. ಆರಂಭದಲ್ಲಿ ಹೇಳಿದ ನ್ಯೂಯಾರ್ಕ್ ಟೈಮ್ಸ್ ವರದಿ ಪೆಗಾಸಸ್ ಮತ್ತು ಕ್ಷಿಪಣಿ ವ್ಯವಸ್ಥೆಯು ಇಸ್ರೇಲ್ ಮತ್ತು ಭಾರತದ ನಡುವಿನ 2017 ರ ಶಸ್ತ್ರಾಸ್ತ್ರ ಒಪ್ಪಂದದ “ಪ್ರಮುಖ ಆಕರ್ಷಣೆ’ಗಳು ಎಂದಿತ್ತು ಎಂದು ಈ ಇಬ್ಬರು ಲೇಖಕರು ಹೇಳುತ್ತಾರೆ.
ಇದರಲ್ಲಿ ಆಮದು ಮಾಡಿದ ಯಂತ್ರಾಂಶವನ್ನು ಪೆಗಾಸಸ್‌ಗೆ ಬಳಸಲಾಗಿದೆಯೇ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಅದರ ವಿವರಗಳು 2019 ರಲ್ಲಿ ಎನ್‌ಎಸ್‌ಒ ಗ್ರೂಪ್ ವಿರುದ್ಧ ಫೇಸ್‌ಬುಕ್ ಮತ್ತು ವಾಟ್ಸಾಪ್‌ನ ಮೂಲ ಕಂಪನಿಯಾದ ಮೆಟಾ ಹೂಡಿರುವ ಮೊಕದ್ದಮೆಯಲ್ಲಿ ಅಮೆರಿಕಾದ ನ್ಯಾಯಾಲಯಕ್ಕೆ ಸಲ್ಲಿಸಿದ ಪೆಗಾಸಸ್ ತಂತ್ರಾಂಶದ ಬ್ರೋಷರ್‌ನಲ್ಲಿ ಕೊಟ್ಟಿರುವ ತಾಂತ್ರಿಕ ವಿವರಗಳನ್ನು ಹೋಲುತ್ತವೆ ಎಂದು ಈ ಲೇಖಕರು ಹೇಳುತ್ತಾರೆ.
ಇಸ್ರೇಲಿನ ಎನ್‌ಎಸ್‌ಒ ಗ್ರೂಪ್ ಆಗಲೀ, ಮತ್ತು ಭಾರತದ ಐ.ಬಿ. ಆಗಲೀ ಒ.ಸಿ.ಸಿ.ಆರ್.ಪಿ ಈ ಕುರಿತು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲಿಲ್ಲ ಎಂದೂ ಅವರು ಹೇಳುತ್ತಾರೆ.
ಭಾರತದ ಗುಪ್ತಚರ ವ್ಯವಸ್ಥೆಯಲ್ಲಿರುವ ಇಬ್ಬರು -ಒಬ್ಬರು ಹಿರಿಯ ಅಧಿಕಾರಿ ಮತ್ತೊಬ್ಬರು ಗುತ್ತಿಗೆದಾರರು – 2017 ರಲ್ಲಿ ಪೆಗಾಸಸ್ ಅನ್ನು ಸರ್ಕಾರವು ಖರೀದಿಸಿದೆ ಎಂದು ತಮ್ಮ ಹೆಸರು ಪ್ರಕಟಿಸಬಾರದು ಎಂಬ ಷರತ್ತಿನ ಮೇಲೆ ತಿಳಿಸಿದ್ದಾರೆ ಎಂದೂ ಈ ಲೇಖಕರು ತಮ್ಮ ಲೇಖನದಲ್ಲಿ ಹೇಳಿದ್ದಾರೆ.
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಜುಲೈನಲ್ಲಿ ಇಸ್ರೇಲ್‌ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಐತಿಹಾಸಿಕ ಭೇಟಿಯ ಮೊದಲು ಫೆಬ್ರವರಿ ಅಂತ್ಯದಲ್ಲಿ ಇಸ್ರೇಲ್‌ಗೆ ಭೇಟಿ ನೀಡಿದ್ದರು ಎಂದು ಈ ಮೊದಲು ವರದಿಯಾಗಿತ್ತು ಎಂದೂ ಅವರು ನೆನಪಿಸಿದ್ದಾರೆ.
ಪೆಗಸಸ್ ತಂತ್ರಾಂಶವನ್ನು ಪ್ರತಿಪಕ್ಷಗಳ ಮುಖಂಡರು, ಚುನಾವಣಾ ಆಯುಕ್ತರುಗಳು, ನ್ಯಾಯಾಂಗದ ಸದಸ್ಯರು, ವಕೀಲರು ಮತ್ತು ಪತ್ರಕರ್ತರ ಫೋನುಗಳ ಒಳನುಸುಳಲು ಮತ್ತು ಕಣ್ಗಾವಲು ಇಡಲು ಬಳಸಲಾಗಿದೆ. ಈಗಲಾದರೂ ಮೋದಿ ಸರಕಾರ ಈ ಬೇಹುಗಾರಿಕಾ ತಂತ್ರಾಂಶದ ಬಳಕೆಯ ಬಗ್ಗೆ ಮಾಹಿತಿಯನ್ನು ಕೊಡಬೇಕು, ಸತ್ಯವನ್ನು ಬಹಳ ದಿನ ಮುಚ್ಚಿಡಲಾಗದು ಎಂದು ಈ ಲೇಖನದ ಬಗ್ಗೆ ಪ್ರತಿಕ್ರಿಯಿಸುತ್ತ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಹೇಳಿದ್ದಾರೆ.
ಮೋದಿ ಸರಕಾರ ಸಂವಿಧಾನಿಕ ಸಂಸ್ಥೆಗಳ ಮೂಲಕ ನಡೆಸಿರುವ ಕೃತ್ಯಗಳಿಗೆ ಅದರಿಂದ ಜವಾಬು ಕೇಳಬೇಕಾಗಿದೆ, ನ್ಯಾಯಾಲಯಗಳು ಇದನ್ನು ಗಮನಕ್ಕೆ ತಗೊಂಡು ಹೊಣೆಯನ್ನು ನಿಗದಿಪಡಿಸಬೇಕಾಗಿದೆ ಎಂದು ಮುಂದುವರೆದು ಯೆಚುರಿ ಹೇಳಿದ್ದಾರೆ.