2024ರ ಚುನಾವಣೆಯಲ್ಲಿ ಮೋದಿ ಬಹುಮತ ಪಡೆಯುವುದಿಲ್ಲ – ತೆಲಂಗಾಣ ಸಿಎಂ ಕೆಸಿಆರ್

ಹೈದರಾಬಾದ್: 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಬಹುಮತ ಪಡೆಯುವುದಿಲ್ಲ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್(ಕೆಸಿಆರ್) ಗುರುವಾರ ಭವಿಷ್ಯ ನುಡಿದಿದ್ದಾರೆ. ಚುನಾವಣಾ ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಬಿಜೆಪಿ ಮತ್ತು ಕಾಂಗ್ರೆಸ್ ಎರಡನ್ನೂ ಟೀಕಿಸಿದ್ದು, “ಮುಂದಿನ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳು ಕೇಂದ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ” ಎಂದು ಪುನರುಚ್ಚರಿಸಿದ್ದಾರೆ.

“ಬಿಜೆಪಿಗೆ ಒಂದು ಮತವನ್ನೂ ಹಾಕಬೇಡಿ. ಇದು ವ್ಯರ್ಥ. ಕಾಂಗ್ರೆಸ್‌ಗೆ ವೋಟು ಹಾಕಿದರೆ ಅದು ಇನ್ನೂ ವ್ಯರ್ಥ,” ಎಂದು ಕೆಸಿಆರ್‌ ಬಿಜೆಪಿ ಮತ್ತು ಕಾಂಗ್ರೆಸ್‌ ಒಂದೇ ನಾಣ್ಯದ ಎರಡು ಮುಖ ಎಂದು ಬಣ್ಣಿಸಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಮುಖ ಪಾತ್ರ ವಹಿಸಲಿವೆ ಎಂದ ಅವರು, ಮುಂದಿನ ವರ್ಷ ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ನ್ಯೂಸ್‌ಕ್ಲಿಕ್ ಪ್ರಕರಣ: ನೆವಿಲ್ಲೆ ರಾಯ್ ಸಿಂಘಮ್‌ಗೆ ಹೊಸ ಸಮನ್ಸ್ ಜಾರಿ ಮಾಡಿದ ಇಡಿ

ಆದಿಲಾಬಾದ್‌ನಲ್ಲಿ ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕೆಸಿಆರ್, ಸುಮಾರು 10 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ತೆಲಂಗಾಣಕ್ಕೆ ಒಂದೇ ಒಂದು ವೈದ್ಯಕೀಯ ಕಾಲೇಜು ನೀಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಬಿಜೆಪಿ ಸರ್ಕಾರವು ದೇಶಾದ್ಯಂತ 157 ಹೊಸ ವೈದ್ಯಕೀಯ ಕಾಲೇಜುಗಳನ್ನು ಮಂಜೂರು ಮಾಡಿದೆ. ನಾನು ಪ್ರಧಾನಿಗೆ 100 ಪತ್ರಗಳನ್ನು ಬರೆದಿದ್ದೇನೆ, ಆದರೆ ತೆಲಂಗಾಣದಲ್ಲಿ ಒಂದೇ ಒಂದು ವೈದ್ಯಕೀಯ ಕಾಲೇಜು ಮಂಜೂರಾಗಿಲ್ಲ. ನಾವು ಭಾರತದ ಭಾಗವಲ್ಲವೇ? ನಾವು ರಾಜ್ಯವಲ್ಲವೇ” ಎಂದು ಅವರು ಪ್ರಶ್ನಿಸಿದ್ದಾರೆ.

ಮೋದಿ ಸರಕಾರ ತೆಲಂಗಾಣಕ್ಕೆ ದ್ರೋಹ ಬಗೆದಿದೆ ಎಂದು ಆರೋಪಿಸಿದ ಕೆಸಿಆರ್, “ಎಲ್ಲಾ ಜಿಲ್ಲೆಗಳಲ್ಲಿ ನವೋದಯ ಶಾಲೆಗಳು ಇರಬೇಕು ಎಂದು ಸಂಸತ್ತಿನಲ್ಲಿ ಕಾಯಿದೆಯನ್ನು ಅಂಗೀಕರಿಸಿದ್ದರೂ, ಕೇಂದ್ರ ಸರ್ಕಾರವು ತೆಲಂಗಾಣಕ್ಕೆ ಅಂತಹ ಶಾಲೆಗಳನ್ನು ಮಂಜೂರು ಮಾಡಿಲ್ಲ. ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಬಿಆರ್‌ಎಸ್‌ಗೆ ಮತ ನೀಡಬೇಕು ಜೊತೆಗೆ, ತೆಲಂಗಾಣವು ಕೇಂದ್ರದಲ್ಲಿ ತನ್ನ ಶಕ್ತಿಯನ್ನು ಪ್ರದರ್ಶಿಸಲು ಪಕ್ಷವು ಎಲ್ಲಾ ಸಂಸದೀಯ ಸ್ಥಾನಗಳನ್ನು ಗೆಲ್ಲುವಂತೆ ನೋಡಿಕೊಳ್ಳಬೇಕು” ಎಂದು ಅವರು ಜನರಿಗೆ ಮನವಿ ಮಾಡಿದ್ದಾರೆ.

2024 ರ ಚುನಾವಣೆಯ ನಂತರ ಬಿಆರ್‌ಎಸ್ ಪ್ರಮುಖ ಪಾತ್ರ ವಹಿಸುತ್ತದೆ ಎಂಬ ಕೆಸಿಆರ್ ಅವರ ಭವಿಷ್ಯವಾಣಿಯ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಪಿ. ಚಿದಂಬರಂ, “ನಾನು ಅವರಿಗೆ ಶುಭ ಹಾರೈಸುತ್ತೇನೆ. 17 ಸ್ಥಾನಗಳಲ್ಲಿ ಅವರು ಎಷ್ಟು ಸ್ಥಾನಗಳನ್ನು ಗೆಲ್ಲಬಹುದು? ಅವರು ಪ್ರಮುಖ ಪಾತ್ರ ವಹಿಸಬಹುದಾದರೆ, ನಾನು ಅವರಿಗೆ ಶುಭ ಹಾರೈಸುತ್ತೇನೆ” ಎಂದು ವ್ಯಂಗ್ಯವಾಡಿದ್ದಾರೆ.

ವಿಡಿಯೊ ನೋಡಿ: ಮಾನವೀಯತೆ ಜಾಗಕ್ಕೆ ಮತೀಯತೆ ಬಂದಿದೆ – ಬರಗೂರು ರಾಮಚಂದ್ರಪ್ಪ Janashakthi Media

Donate Janashakthi Media

Leave a Reply

Your email address will not be published. Required fields are marked *