ಮೋದಿ ಪದವಿ ವಿವಾದ: ಕೇಜ್ರಿವಾಲ್‌ಗೆ ₹ 25,000 ದಂಡ

ಹಮದಾಬಾದ್‌: ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸ್ನಾತಕೋತ್ತರ ಪದವಿ ಮಾಹಿತಿ ನೀಡುವಂತೆ ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಗುಜರಾತ್‌ ವಿಶ್ವವಿದ್ಯಾಲಯಕ್ಕೆ ನೀಡಿದ್ದ ಸೂಚನೆಯನ್ನು ಗುಜರಾತ್‌ ಹೈಕೋರ್ಟ್‌ ರದ್ದುಪಡಿಸಿದೆ.

ಸಿಐಸಿ ನೀಡಿದ್ದ ನಿರ್ದೇಶನವನ್ನು ಪ್ರಶ್ನಿಸಿ ಗುಜರಾತ್‌ ವಿವಿಯು 2016ರಲ್ಲಿ ಹೈಕೋರ್ಟ್‌ ಮೆಟ್ಟಿಲೇರಿತ್ತು. ಮಾಹಿತಿ ಆಯುಕ್ತ ಎಂ.ಶ್ರೀಧರ್‌ ಆಚಾರ್ಯುಲು ಅವರು, ಮೋದಿ ಅವರ ಪದವಿ ಮತ್ತು ಸ್ನಾತಕೋತ್ತರ ಪದವಿಗೆ ಸಂಬಂಧಿಸಿದ ಮಾಹಿತಿಯನ್ನು ಪ್ರಧಾನಿ ಕಚೇರಿಯು ಗುಜರಾತ್‌ ವಿವಿ ಹಾಗೂ ದೆಹಲಿ ವಿವಿಗೆ ಒದಗಿಸಿಕೊಡಬೇಕು. ಇದರಿಂದ ದಾಖಲೆಗಳನ್ನು ಹುಡುಕಲು ನೆರವಾಗುತ್ತದೆ ಎಂದು ಹೇಳಿದ್ದರು. ಇದರ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದ ಗುಜರಾತ್‌ ವಿವಿ, ಇಂತಹ ಆದೇಶ ನೀಡಲು ಸಿಐಸಿಗೆ ಅಧಿಕಾರವಿಲ್ಲ ಎಂದು ವಾದಿಸಿತ್ತು.

ಸಿಐಸಿ ನಿರ್ದೇಶನವನ್ನು ರದ್ದುಪಡಿಸಿರುವ ನ್ಯಾಯಮೂರ್ತಿ ಬಿರೇನ್‌ ವೈಷ್ಣವ್‌, ಸಿಎಂ ಕೇಜ್ರಿವಾಲ್‌ ಅವರಿಗೆ ₹ 25,000 ದಂಡವನ್ನೂ ವಿಧಿಸಿದ್ದಾರೆ.

ಕೇಜ್ರಿವಾಲ್‌ ಅವರು ಈ ಪ್ರಕರಣದ ಪ್ರತಿವಾದಿಯಾಗಿದ್ದಾರೆ. ಅವರ ಪರ ವಕೀಲರು ಆದೇಶವನ್ನು ಪ್ರಶ್ನಿಸಿದ ಬಳಿಕ, ಆದೇಶಕ್ಕೆ ತಡೆ ನೀಡಲೂ ಕೋರ್ಟ್‌ ನಿರಾಕರಿಸಿದೆ. ದೆಹಲಿ ಮುಖ್ಯಮಂತ್ರಿ ಆರ್‌ಟಿಐ ಮೂಲಕ ಔಪಚಾರಿಕವಾಗಿ ಯಾವುದೇ ಅರ್ಜಿ ಹಾಕಿಲ್ಲ. ತಮ್ಮ ಚುನಾವಣಾ ಫೋಟೊ ಗುರುತಿನ ಮಾಹಿತಿ ಹಂಚಿಕೊಂಡಿದ್ದ ಅವರು, ಸಿಐಸಿಯು ಮೋದಿಯವರ ಪದವಿ ಮಾಹಿತಿಯನ್ನು ತಡೆಹಿಡಿಯುತ್ತಿದೆ ಎಂದು ಆರೋಪಿಸಿದ್ದರು. ಅದಾದ ನಂತರ ವಿವಾದವಾಗಿತ್ತು.

ಇದನ್ನೂ ಓದಿ ಪ್ರಧಾನಿ ಮೋದಿಗೆ ನೊಬೆಲ್‌ ಗರಿ ಎಂಬುದು ಸುಳ್ಳು ಸುದ್ದಿ!

ಕೇಜ್ರಿವಾಲ್‌ ಅವರ ಹೇಳಿಕೆಯನ್ನು ಪರಿಗಣಿಸಿದ್ದ ಸಿಐಸಿ, ದಾಖಲೆ ಹುಡುಕಲು ಅನುಕೂಲವಾಗುವಂತೆ ದೆಹಲಿ ಹಾಗೂ ಗುಜರಾತ್‌ ವಿಶ್ವ ವಿದ್ಯಾಲಯಗಳಿಗೆ ‘ನರೇಂದ್ರ ದಾಮೋದರದಾಸ್‌ ಮೋದಿ’ ಅವರ ಪದವಿಯ ನಿರ್ದಿಷ್ಟ ಸಂಖ್ಯೆ ಮತ್ತು ವರ್ಷದ ಮಾಹಿತಿಯನ್ನು ಪ್ರಧಾನಿ ಕಚೇರಿಯು ನೀಡಬೇಕು ಎಂದು ಸೂಚಿಸಿತ್ತು.

Donate Janashakthi Media

Leave a Reply

Your email address will not be published. Required fields are marked *