16 ಕೆರೆಗಳ ನಿರ್ಮಾತೃ-ಆಧುನೀಕ ಭಗೀರಥ ಕಲ್ಮನೆ ಕಾಮೇಗೌಡ ನಿಧನ

ಮಂಡ್ಯ: ಮಳವಳ್ಳಿ ತಾಲೂಕಿನ ಕುಂದೂರು ಬೆಟ್ಟದಲ್ಲಿ ಅಂತರ್ಜಲ ಹೆಚ್ಚಳಕ್ಕೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಉಪಯೋಗವಾಗಲಿ ಶ್ರಮಿಸಿದ ಆಧುನಿಕ ಭಗೀರಥ ಎಂದೇ ಖ್ಯಾತಿ ಗಳಿಸಿದ್ದ ದಾಸದೊಡ್ಡಿಯ ಕಲ್ಮನೆ ಕಾಮೇಗೌಡ (84) ಇಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಕಳೆದ ರಾತ್ರಿ ಕಾಮೇಗೌಡ ಅವರಿಗೆ ತೀವ್ರವಾದ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಇದಾದ ನಂತರ ವಾಂತಿಯನ್ನು ಮಾಡಿಕೊಂಡಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಾಮೇಗೌಡರು ದಾಸನದೊಡ್ಡಿ ಕೆರೆಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಕುರಿಗಾಹಿಯಾಗಿದ್ದ ಕಾಮೇಗೌಡರು 15 ವರ್ಷಗಳ ಹಿಂದೆ ಕುಂದೂರು ಬೆಟ್ಟಕ್ಕೆ ಕುರಿ ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ವಿಪರೀತ ದಾಹವಾಗಿ ನೀರಿಗಾಗಿ ಪರದಾಡಿದ್ದರು. ಬಳಿಕ ಸ್ವಲ್ಪ ದೂರದ ಮನೆಗೆ ಹೋಗಿ ನೀರು ಕೇಳಿ ಪಡೆದಿದ್ದರು. ಆಗ ನಾನು ದಾಹ ತೀರಿಸಿಕೊಂಡೆ ಆದರೆ ಪ್ರಾಣಿಗಳ ಪರಿಸ್ಥಿತಿ ಏನು ಎನ್ನುವ ಚಿಂತೆ ಅವರಿಗೆ ಕಾಡಿತ್ತು. ಹೀಗಾಗಿ ಗುಡ್ಡದಲ್ಲಿ ಕೆರೆ ನಿರ್ಮಾಣಕ್ಕೆ ಮುಂದಾದರು.

ಇದರೊಂದಿಗೆ, 16 ಕೆರೆಗಳನ್ನು ನಿರ್ಮಿಸುವ ಮೂಲಕ ದೇಶದ ಗಮನ ಸೆಳೆದ ಕಲ್ಮನೆ ಕಾಮೇಗೌಡರಿಗೆ ಇಬ್ಬರು ಮಕ್ಕಳು ಇದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಪುರಸ್ಕಾರಗಳು ಕಾಮೇಗೌಡರನ್ನು ಗೌರವಿಸಿತ್ತು.

ಕಾಮೇಗೌಡರು ಗುಡ್ಡದಲ್ಲಿ ಕೆರೆ ತೋಡುತ್ತಿದ್ದನ್ನು ಕಂಡು ಆರಂಭದಲ್ಲಿ ಅನೇಕರು ಗೇಲಿ ಮಾಡಿದ್ದರು. ಇವನಿಗೆ ಹುಚ್ಚು ಹಿಡಿದಿದೆ, ಅದಕ್ಕೆ ಇಲ್ಲಿ ಕೆರೆ ತೋಡುತ್ತಿದ್ದಾನೆ ಎಂದು ಮಾತನಾಡಿದ್ದರು. ಆದರೆ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದ ಕಾಮೇಗೌಡರು, ತಮ್ಮ ಕೆಲಸವನ್ನು ಮುಂದುವರಿಸಿದ್ದರು. ಕಾಮೇಗೌಡ ಅವರು ಸ್ವತಃ ತಮ್ಮ ಕೈಯಲ್ಲಿ 16 ಕೆರೆಗಳನ್ನು ನಿರ್ಮಾಣ ಮಾಡಿದ್ದರು. ಜೊತೆಗೆ ಸಾವಿರಾರು ಗಿಡಗಳನ್ನು ನೆಟ್ಟು ಬೆಟ್ಟದಲ್ಲಿ ಹಸಿರು ಕ್ರಾಂತಿ ಮಾಡುವ ಮೂಲಕ ಪರಿಸರ ಕಾಳಜಿಯನ್ನು ಮೆರೆದರು.

ವೆಂಕಟಗೌಡ ಮತ್ತು ರಾಜಮ್ಮ ದಂಪತಿಯ ಪುತ್ರನಾಗಿ ಜನಿಸಿದ ಕಾಮೇಗೌಡರು ಶಾಲೆಯನ್ನು ಕಂಡವರಲ್ಲ. ತಾವಾಯ್ತು, ತಮ್ಮ ಪಾಡಾಯ್ತು ಎಂದು ಕೆಲಸ ಮಾಡಿಕೊಂಡಿದ್ದ ಅವರು ಕುರಿಗಳ ಮೇಲಿನ ಪ್ರೀತಿಯೇ ಪರಿಸರ ಕಾಳಜಿಯನ್ನೂ ಬೆಳೆಸಿತು. ಈ ಮೂಲಕ ಅನೇಕರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಕಾಮೇಗೌಡರ ನಿಧನಕ್ಕೆ ರಾಜಕೀಯ ಗಣ್ಯರ ಸಂತಾಪ

ಈ ಬಗ್ಗೆ ಟ್ವೀಟ್‌ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ” ಜಲ ಸಂರಕ್ಷಣೆ ಕಾರ್ಯದಲ್ಲಿ ತೊಡಗಿಕೊಂಡು ಸುಮಾರು15 ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿ ಆಧುನಿಕ ಭಗೀರಥ ಎಂದೇ ಖ್ಯಾತಿ ಗಳಿಸಿದ್ದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸನದೊಡ್ಡಿಯ ಜಲಋಷಿ ಕಾಮೇಗೌಡರು ಇನ್ನಿಲ್ಲ ಎಂಬ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು. ಅವರ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಸಹ ಕಾಮೇಗೌಡರ ಕಾರ್ಯವನ್ನು ಶ್ಲಾಘಿಸಿದ್ದರು” ಎಂದರು.

ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಅವರು, “ಮಂಡ್ಯದ ಮಳವಳ್ಳಿಯ ಪ್ರಗತಿಪರ ರೈತರಾದ ಕಾಮೇಗೌಡರು ಇನ್ನಿಲ್ಲವೆಂಬ ಸುದ್ದಿ ತೀವ್ರ ದುಃಖ ತಂದಿದೆ. ತಮ್ಮ ಸ್ವಂತ ಪ್ರಯತ್ನ, ಪರಿಶ್ರಮದಿಂದ ಅನೇಕ ಕೊಳಗಳನ್ನು ನಿರ್ಮಿಸಿದ್ದ ಕಾಮೇಗೌಡರ ಭಗೀರಥ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದ ಮೂಲಕ ಇಡೀ ದೇಶಕ್ಕೆ ಪರಿಚಯಿಸಿ ಶ್ಲಾಘಿಸಿದ್ದರು” ಎಂದರು.

ಇನ್ನು 84ರ ಇಳಿವಯಸ್ಸಿನಲ್ಲೂ ಕಾಮೇಗೌಡ ಅವರಿಗಿದ್ದ ಪರಿಸರ ಕಾಳಜಿ ನಮಗೆ ಸದಾ ಮಾದರಿಯಾಗಿದ್ದು, ಜಲಸಂರಕ್ಷಣೆಗೆ ಪ್ರೇರಣೆ ನೀಡಲಿ ಎಂದು ಆಶಿಸುವೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥಿಸತ್ತಾ ಅವರ ಕುಟುಂಬ ಸದಸ್ಯರಿಗೆ ನನ್ನ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ ಎಂದು ಸಚಿವ ಡಾ. ಕೆ ಸುಧಾಕರ್‌ ಸಂತಾಪ ಸೂಚಿಸಿದ್ದಾರೆ.

ಉನ್ನತ ಶಿಕ್ಷಣ ಸಚಿವ ಅಶ್ವತ್ಥ್‌ ನಾರಾಯಣ್‌ ಅವರು, ಮಂಡ್ಯದ ಪ್ರಕೃತಿ ಸಂರಕ್ಷಕ ಕಲ್ಮನೆ ಕಾಮೇಗೌಡ ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ದುಃಖವಾಯಿತು. ಹಲವು ಕೆರೆಗಳನ್ನು ನಿರ್ಮಿಸಿ, ಪಶು-ಪಕ್ಷಿಗಳಿಗೆ ಆಸರೆಯಾಗುವ ಜೊತೆ ನೂರಾರು ಸಸಿ ನೆಟ್ಟು ಬೆಳೆಸಿದ್ದ ಕಾಮೇಗೌಡರಿಗೆ ಪ್ರಕೃತಿ ಸಂರಕ್ಷಣೆ ಬಗೆಗಿದ್ದ ಕಾಳಜಿ ಸಮಾಜಕ್ಕೆ ಮಾದರಿ ಎಂದು ಕಾಮೇಗೌಡರ ಸಮಾಜಮುಖಿ ಕಾರ್ಯಗಳನ್ನು ನೆನೆದಿದ್ದಾರೆ.

ರಾಜ್ಯ ಜೆಡಿಎಸ್‌ ತಮ್ಮ ಟ್ವೀಟ್‌ ಖಾತೆಯಲ್ಲಿ ಮಂಡ್ಯದ ಕಾಮೇಗೌಡರ ನಿಧನಕ್ಕೆ ಸಂತಾಪ ಸೂಚಿಸಿದೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪ್ರಕೃತಿ ಸಂರಕ್ಷಕ ಕಲ್ಮನೆ ಕಾಮೇಗೌಡ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ.

ಕಾಮೇಗೌಡ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದು, “ಪರಿಸರ ಜೀವಿ, ಕೆರೆಗಳ ನಿರ್ಮಾಣದ ಮೂಲಕ ನೀರಿನ ಮಹತ್ವ ಸಾರಿದ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಲ್ಮನೆ ಕಾಮೇಗೌಡ ಇನ್ನಿಲ್ಲ ಎನ್ನುವ ಸುದ್ದಿ ಕೇಳಿ ಬಹಳ ನೋವಾಯಿತು. ಕುರಿ ಸಾಕಣೆ ಕಾಯಕದಲ್ಲಿ ತೊಡಗಿದ್ದ ಅವರು ತಮ್ಮ ದುಡಿಮೆ ಹಣದಲ್ಲಿಯೇ 14ಕ್ಕೂ ಹೆಚ್ಚು ಕೆರೆ-ಕಟ್ಟೆ ನಿರ್ಮಾಣ ಮಾಡಿ ಸಕ್ಕರೆ ನಾಡಿನ ಆಧುನಿಕ ಭಗೀರಥರಾಗಿದ್ದರು. ಪ್ರಧಾನಿ ಶ್ರೀ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದರು. ನಾನು ಮುಖ್ಯಮಂತ್ರಿ ಆಗಿದ್ದಾಗ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು” ಎಂದರು.

Donate Janashakthi Media

Leave a Reply

Your email address will not be published. Required fields are marked *