ಬೆಂಗಳೂರು : ಶಿವಮೊಗ್ಗದಲ್ಲಿ ಹರ್ಷ ಹತ್ಯೆ ಪ್ರಕರಣ ಬಿಜೆಪಿಗೆ ನಾಯಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹತ್ಯೆಯಾದ ಹರ್ಷ ತಾಯಿಗೆ ಎಂಎಲ್‌ಎ ಟಿಕೆಟ್ ಕೊಡುವಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭವಾಗಿದೆ. ಇತ್ತ ಕಾಂಗ್ರೆಸ್ ಕೂಡಾ ಇದಕ್ಕೆ ತೀಕ್ಷಣವಾಗಿ ಪ್ರತಿಕ್ರಿಯಿಸಿದ್ದು, ಹರ್ಷ ಕುಟುಂಬಕ್ಕೆ ಬಿಜೆಪಿ ಟಿಕೆಟ್ ಕೊಟ್ಟರೆ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಿಲ್ಲ ಎಂದು ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಹೇಳಿರುವುದು ಬಿಜೆಪಿಗೆ ಮುಜುಗರ ತಂದಿದೆ.
ದೇಶಕ್ಕಾಗಿ ಹರ್ಷ ಪ್ರಾಣ ತ್ಯಾಗ ಮಾಡಿದ್ದಾನೆ, ಹಾಗಾಗಿ ಸಚಿವ ಕೆಎಸ್ ಈಶ್ವರಪ್ಪ, ಮಾಜಿ ಸಿಎಂ ಯಡಿಯೂರಪ್ಪ ಕುಟುಂಬಕ್ಕೆ ಈ ಬಾರಿ ಟಿಕೆಟ್ ಬೇಡ , ಹರ್ಷ ತಾಯಿಗೆ ಟಿಕೆಟ್ ಕೊಡಿ ಎಂಬ ಕೂಗು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿದೆ. ಬಜರಂಗದಳದ ಕಾರ್ಯಕರ್ತರು ಹಿಂದೂಗಳಿಗಾಗಿ ಹತ್ಯೆಯಾಗಿದ್ದಾರೆ , ಹಿಂದೂಗಳಿಗಾಗಿ ಹತ್ಯೆಯಾದ ಹರ್ಷ ಕುಟುಂಬಕ್ಕೆ ಎಲ್‌ಎ ಟಿಕೆಟ್ ಕೊಡಿ. ಹಿಂದೂ ಹೆಸರಿನಲ್ಲಿ ಅಧಿಕಾರ ಅನುಭವಿಸಿರುವ ಕುಟುಂಬಗಳಿಗೆ ಟಿಕೆಟ್ ಬೇಡ. ಹಿಂದೂಗಳಿಗಾಗಿ ಜೀವಕೊಟ್ಟ ಹರ್ಷ ಕುಟುಂಬಕ್ಕೆ ಟಿಕೆಟ್ ಕೊಡಿ ಎಂದು ಅಭಿಯಾನ ನಡೆಸುತ್ತಿದ್ದಾರೆ.
‘ಹರ್ಷ ದೇಶಕ್ಕಾಗಿ ಪ್ರಾಣವನ್ನೇ ಕೊಟ್ಟಿದ್ದಾನೆ. ಅವರ ಕುಟುಂಬದವರಿಗೆ ಸಾಂತ್ವನ, ಭಾಷಣ, ಆರ್ಥಿಕ ನೆರವು ನೀಡಿದರಷ್ಟೇ ಸಾಲದು. ಅವರ ತಾಯಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಬೇಕು. ದೇಶಭಕ್ತನ ಮನೆಯಿಂದ ಒಬ್ಬರು ಎಂಎಲ್‌ಎ ಹುಟ್ಟಿಬರಲಿ. ಇಂತಹ ಸ್ಥಾನಗಳು ಈಶ್ವರಪ್ಪ, ಯಡಿಯೂರಪ್ಪ ಅವರ ಕುಟುಂಬದವರಿಗಷ್ಟೇ ಮೀಸಲಾಗಬಾರದು. ನಮ್ಮ ಬೇಡಿಕೆ ಈಡೇರಿಸಿದರೆ ಬಿಜೆಪಿಗೊಂದು ಸಲಾಂ’ ಎಂದು ಪೋಸ್ಟರ್‌ಗಳನ್ನು ಶೇರ್ ಮಾಡಲಾಗುತ್ತಿದೆ.
ಇದನ್ನೂ ಓದಿ : ಭಾರತವನ್ನು ಹಿಜಾಬ್‌ಮಯ ಮಾಡಲು ಬಂದರೆ ‘ಇಂಚಿಂಚಾಗಿ ಕಡಿಯುತ್ತೇವೆ’ : ಎಬಿವಿಪಿ ನಾಯಕಿಯಿಂದ ವಿವಾದಾತ್ಮಕ ಹೇಳಿಕೆ
ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಜರಂಗದಳದ ಕಾರ್ಯಕರ್ತ ಹರ್ಷನ ಕುಟಂಬಕ್ಕೆ ಮುಂದಿನ ವಿಧಾನ ಸಭೆಗೆ ಬಿಜೆಪಿಯಿಂದ ಟಿಕೆಟ್ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಗ್ರಹ ಕೇಳಿ ಬಂದಿರುವ ಬೆನ್ನಲ್ಲೇ ಇದೀಗ ವಿಧಾನಪರಿಷತ್ ವಿರೋಧ ಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಅವರು ಖಾಸಗಿ ಮಾಧ್ಯಮ ಒಂದಕ್ಕೆ ಸಂದರ್ಶನ ನೀಡಿರುವ ಹೇಳಿಕೆಯೊಂದು ಭಾರೀ ಚರ್ಚೆಗೆ ಗ್ರಾಸವಾಗಿದೆ.
‘ಹರ್ಷನ ಹತ್ಯೆ ಘಟನೆ ಬಳಿಕ ಅವರ ಸಹೋದರಿ ಅಷ್ಟೊಂದು ಚೆನ್ನಾಗಿ ಮಾನವೀಯತೆಯ ದೃಷ್ಟಿಯಿಂದ ಮಾತನಾಡಿದ್ದಾರೆ. ಇನ್ನೊಂದು ಕಡೆ ಹರ್ಷನ ಕುರಿತು ಮಾತನಾಡುವ ಸಚಿವ ಈಶ್ವರಪ್ಪ ಅವರು ಶಿವಮೊಗ್ಗ ವಿಧಾನಸಭೆ ಕ್ಷೇತ್ರದ ಟಿಕೆಟ್ ಅನ್ನು ಹಿಂದುತ್ವಕ್ಕೆ ಪ್ರಾಣ ಬಿಟ್ಟಿರುವ ಹರ್ಷನ ಕುಟುಂಬಕ್ಕೆ ಬಿಟ್ಟು ಕೊಡಲಿ ನಾವು ಅವರ ವಿರುದ್ಧ ಅಭ್ಯರ್ಥಿಯನ್ನು ಹಾಕುವುದಿಲ್ಲ. ಇದು ಸಚಿವ ಈಶ್ವರಪ್ಪಗೆ ನನ್ನ ಸವಾಲು’ ಎಂದು ಹೇಳಿದ್ದಾರೆ.
ಈ ರೀತಿಯ ಪೋಸ್ಟರ್‌ಗಳು ಹರಿದಾಡುತ್ತಿರುವುದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿರುವುದು ಬಿಜೆಪಿ ನಾಯಕರಿಗೆ ಇರಿಸುಮುರಿಸು ತರುತ್ತಿದೆ. ಬಿಜೆಪಿ ಇದನ್ನು ಸವಾಲಾಗಿ ಸ್ವಿಕರಿಸುತ್ತಾ ಕಾದು ನೋಡಬೇಕಿದೆ.