ಅರಕಲಗೂಡು: ರೌಡಿ ಪಟ್ಟಿಯಿಂದ ಹೆಸರು ಕೈ ಬಿಡಲು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಅಧಿಕಾರಿಯೊಬ್ಬರು ಹಣಕ್ಕೆ ಬೇಡಿಕೆ ಇಟ್ಟಿದ್ದು, ಈ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದೇನೆ ಎಂದು ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.
ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹನೀಫ್ ಎಂಬುವರ ಹೆಸರು ಪೊಲೀಸ್ ಠಾಣೆಯ ರೌಡಿ ಲಿಸ್ಟ್ನಲ್ಲಿದೆ. ಕಳೆದ 10 ವರ್ಷದಿಂದ ತಾನು ಕೇರಳದಲ್ಲಿ ನೆಲೆಸಿದ್ದು ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸಿಲ್ಲ. ಆದರೂ ಪೊಲೀಸರು ಕರೆದಾಗಲೆಲ್ಲಾ ಕೇರಳದಿಂದ ಇಲ್ಲಿಗೆ ಬರಬೇಕು. ಇದು ಕಷ್ಟವಾಗಿದ್ದು, ರೌಡಿ ಪಟ್ಟಿಯಿಂದ ನನ್ನ ಹೆಸರು ಕೈಬಿಡಿಸಿ ಎಂದು ತಮ್ಮಲ್ಲಿ ಮನವಿ ಮಾಡಿದ್ದರು.
ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ನಾನು ಎಸ್ಪಿ ಅವರಿಗೆ ದೂರವಾಣಿ ಮೂಲಕ ಕೋರಿದ್ದೆ. ಅದರಂತೆ ಅವರು ಸ್ಥಳೀಯ ಪೊಲೀಸರಿಗೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದ್ದರು. ಅಲ್ಲದೆ ಇಲಾಖೆ ಸೂಚನೆಯಂತೆ ಹನೀಫ್, ರೌಡಿ ಪಟ್ಟಿಯಂದ ಹೆಸರು ಕೈ ಬಿಡುವಂತೆ ಕೋರಿ ಮನವಿ ಸಲ್ಲಿಸಿ ಅಗತ್ಯ ದಾಖಲೆ ಸಹ ಒದಗಿಸಿದ್ದರು. ಠಾಣೆ ಅವರ ಸೂಚನೆ ಪ್ರಕಾರ ಇಬ್ಬರು ಜಾಮೀನುದಾರರಿಂದ ಮುಚ್ಚಳಿಕೆ ಪತ್ರ ಕೂಡ ನೀಡಲಾಗಿದೆ.
ಆದರೆ ಸ್ಥಳೀಯ ಸಿಪಿಐ ಕಚೇರಿಯಲ್ಲಿ 50 ಸಾವಿರ ರೂ. ಹಾಗೂ ಪೊಲೀಸ್ ಠಾಣೆಯಲ್ಲಿ 25 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟು, ಹಣ ನೀಡಿದರೆ ಮಾತ್ರ ಹೆಸರು ಕೈ ಬಿಡಲು ಶಿಫಾರಸ್ಸು ಮಾಡುವುದಾಗಿ ಅಧಿಕಾರಿಯೊಬ್ಬರು ಹೇಳಿದರು ಎಂದು ಹನೀಫ್ ತಮಗೆ ತಿಳಿಸಿದರು ಎಂದು ಶಾಸಕರು ದೂರಿದರು.
ಕಾನೂನು ಸುವ್ಯವಸ್ಥೆ ಕಾಪಾಡಬೇಕಾದವರೇ ಲಂಚದ ಬೇಡಿಕೆ ಇಟ್ಟಿರೋದು ನೋವಿನ ಸಂಗತಿ. ಖಾಕಿ ವೇಷ ಹಾಕಿಕೊಂಡು ಕೆಲವರು ದಂಧೆಗೆ ಇಳಿದಿರುವುದು ದುರಾಸೆಯ ಪರಮಾವಧಿ. ಸಮವಸ್ತ್ರ ತೊಟ್ಟು ಹೀಗೆ ಮಾಡುವವರು ದರೋಡೆಕೋರರಿಗಿಂತಲೂ ದೊಡ್ಡ ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದರು.
ಇದು ಅತ್ಯಂತ ಗಂಭೀರವಾದ ವಿಷಯವಾಗಿದ್ದು, ಜನಪ್ರತಿನಿಧಿಯಾಗಿ ನಾನು ಮೇಲಧಿಕಾರಿ ಗಮನಕ್ಕೆ ತಂದ ಪ್ರಕರಣವೇ ಹೀಗಾದರೆ ಬೇರೆ ಪ್ರಕರಣಗಳ ಪರಿಸ್ಥಿತಿಯನ್ನು ಊಹಿಸಲೂ ಸಾಧ್ಯವಿಲ್ಲ. ಹಣ ನೀಡಿದರೆ ರೌಡಿಶೀಟರ್ ಪಟ್ಟಿಯಿಂದ ಕೈ ಬಿಡುವುದು, ಹಣ ನೀಡದಿದ್ದರೆ ಪಟ್ಟಿಗೆ ಸೇರಿಸುವುದು ಒಳ್ಳೆ ಬೆಳವಣಿಗೆ ಅಲ್ಲ ಎಂದರು. ಈ ನೆಲದ ಕಾನೂನನ್ನು ರಕ್ಷಿಸಬೇಕಾದವರೇ ಈ ರೀತಿ ಮಾಡಿದರೆ ಜನಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದರು. ಹಾಗಂತ ಪೊಲೀಸ್ ಇಲಾಖೆ ದುರ್ಬಲಗೊಳಿಸಲು ನನ್ನ ಬೆಂಬಲ ಇಲ್ಲ. ಇಲಾಖೆ ಶಕ್ತಿಯುತವಾಗಿರಬೇಕು. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದವರು ಇಲಾಖೆ ಘನತೆಗೆ ಕಪ್ಪು ಮಸಿ ಬಳಿದಿದ್ದಾರೆ.
ಈ ಕುರಿತು ತನಿಕೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಎಸ್ಪಿ ಯವರಿಗೆ ಪತ್ರ ಬರೆದಿದ್ದೇನೆ ಎಂದು ಪತ್ರದ ಪ್ರತಿ ಪ್ರದರ್ಶಿಸಿದರು. ಕೂಡಲೇ ಸಂಬಂಧಪಟ್ಟ ಅಧಿಕಾರಿ ಮೇಲೆ ಕಾನೂನು ಕ್ರಮ ಜರುಗಿಸದಿದ್ದರೆ ಗೃಹ ಸಚಿವರು ಮತ್ತು ಹಿರಿಯ ಅಧಿಕಾರಿಗಳಿಗೆ ದೂರು ನೀಡಿ ಸರ್ಕಾರದ ಗಮನ ಸೆಳೆಯುವುದಾಗಿ ಎಚ್ಚರಿಕೆ ನೀಡಿದರು.