ಚೆನ್ನೈ: ತಮಿಳುನಾಡು ನೂತನ ಮುಖ್ಯಮಂತ್ರಿಯಾಗಿ ಎಂ.ಕೆ.ಸ್ಟಾಲಿನ್ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು.
ಬೆಳಗ್ಗೆ ಚೆನ್ನೈಯಲ್ಲಿರುವ ರಾಜಭವನದಲ್ಲಿ ನಡೆದ ಸರಳ ಕಾರ್ಯಕ್ರಮವು ಸ್ಟಾಲಿನ್ ಅವರಿಗೆ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರು ಪ್ರಮಾಣ ವಚನ ಬೋಧಿಸಿದರು.
பதவி ஏற்பு நிகழ்ச்சி – நேரலை https://t.co/wbJ4fJURt6
— M.K.Stalin (@mkstalin) May 7, 2021
33 ಸಂಪುಟ ಸಚಿವರು ಪ್ರಮಾಣ ವಚನ: ಎಂ ಕೆ ಸ್ಟಾಲಿನ್ ಅವರೊಂದಿಗೆ 33 ಮಂದಿ ಶಾಸಕರಿಗೆ ಸಂಪುಟಕ್ಕೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಬೆಳಗ್ಗೆ 9 ಗಂಟೆಗೆ ಆರಂಭವಾದ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಕೋವಿಡ್ ನಿಯಮಾವಳಿ ಪ್ರಕಾರ ಅತ್ಯಂತ ಸರಳವಾಗಿ ಸಮಾರಂಭವನ್ನು ಆಯೋಜಿಸಲಾಗಿತ್ತು. ಕೇವಲ 250 ಮಂದಿ ಅತಿಥಿಗಳು ಭಾಗವಹಿಸಿದ್ದರು.
ಮಾಜಿ ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ, ಕಾಂಗ್ರೆಸ್ ನ ಹಿರಿಯ ನಾಯಕ ಪಿ ಚಿದಂಬರಂ, ಎಂಡಿಎಂಕೆ ಸ್ಥಾಪಕ ವೈಕೊ ಮತ್ತು ಸರ್ಕಾರದ ಅಧಿಕಾರಿಗಳು ಸೇರಿದಂತೆ ಸ್ಟಾಲಿನ್ ಪುತ್ರ ಉದಯನಿಧಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಸ್ಟಾಲಿನ್ ತಮ್ಮ ಸಂಪುಟಕ್ಕೆ ಅನುಭವಿಗಳು ಮತ್ತು ಹೊಸಬರನ್ನೂ ಆಯ್ಕೆ ಮಾಡಿಕೊಂಡಿದ್ದಾರೆ. ಡಿಎಂಕೆ ಪ್ರಧಾನ ಕಾರ್ಯದರ್ಶಿ ದೊರೆ ಮುರುಗನ್ ಅವರಿಗೆ ಜಲಸಂಪನ್ಮೂಲ, ಕೆ.ಎನ್.ನೆಹರೂ ಅವರಿಗೆ ನಗರಾಡಳಿತ, ಐ. ಪೆರಿಯಾಸ್ವಾಮಿ ಅವರಿಗೆ ಸಹಕಾರ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.
ಹೊಸಬರಿಗೂ ಪ್ರಮುಖ ಖಾತೆಗಳನ್ನು ನೀಡಲಾಗಿದೆ. ಮಾಜಿ ಬ್ಯಾಂಕರ್ ಪಿಟಿಆರ್‌ಪಿ ತ್ಯಾಗರಾಜನ್ ಅವರಿಗೆ ಹಣಕಾಸು, ಚೆನ್ನೈನ ಮಾಜಿ ಮೇಯರ್ ಮಾ ಸುಬ್ರಮಣಿಯನ್ ಅವರಿಗೆ ಆರೋಗ್ಯ, ಅನ್ಬಿಲ್ ಮಹೇಶ್ ಅವರಿಗೆ ಶಾಲಾ ಶಿಕ್ಷಣ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.
ಹವಾಮಾನ ವೈಪರೀತ್ಯ, ರೈತರ ಕಲ್ಯಾಣ, ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ಅನಿವಾಸಿ ತಮಿಳರ ಕಲ್ಯಾಣ ಖಾತೆಗಳನ್ನು ಹೊಸದಾಗಿ ರಚಿಸಲಾಗಿದೆ. ಸ್ಟಾಲಿನ್ ಸಂಪುಟದಲ್ಲಿ ಇಬ್ಬರು ಮಹಿಳಾ ಸಚಿವರು ಸೇರ್ಪಡೆಯಾಗಿದ್ದಾರೆ.
ಡಿಎಂಕೆ ಪಕ್ಷದ ನಾಯಕ ಎಂ ಕೆ ಸ್ಟಾಲಿನ್ ಅವರು ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ 234 ಸದಸ್ಯ ಬದಲ ತಮಿಳುನಾಡು ವಿಧಾನಸಭೆಯಲ್ಲಿ ಡಿಎಂಕೆ ಮೈತ್ರಿಕೂಟವು 159 ಸ್ಥಾನಗಳನ್ನು ಗಳಿಸಿ ಅಧಿಕಾರವನ್ನು ಹಿಡಿದಿದೆ.
ಸ್ಟಾಲಿನ್ ಅವರಿಗೆ 68 ವರ್ಷವಾಗಿದ್ದು ಇದೇ ಮೊದಲ ಬಾರಿಗೆ ತಮಿಳುನಾಡು ವಿಧಾನಸಭೆಗೆ ಅತ್ಯಂತ ಹಿರಿಯ ವಯಸ್ಸಿನ ನಾಯಕ ಮುಖ್ಯಮಂತ್ರಿಯಾಗಿದ್ದಾರೆ. ಡಿಎಂಕೆ ಪಕ್ಷದ ಸ್ಥಾಪಕ ಹಾಗೂ ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿಯವರ ಪುತ್ರ ಎಂ.ಕೆ.ಸ್ಟಾಲಿನ್ 2018, ಆಗಸ್ಟ್ 28ರಿಂದ ಪಕ್ಷದ ನಾಯಕತ್ವವನ್ನು ವಹಿಸಿಕೊಂಡಿದ್ದರು. ಎಂ ಕರುಣಾನಿಧಿಯವರ ನಿಧನ ಬಳಿಕ ಡಿಎಂಕೆ ಅಧ್ಯಕ್ಷ ಹುದ್ದೆಯನ್ನು ಪೂರ್ಣ ಪ್ರಮಾಣದಲ್ಲಿ ಸ್ಟಾಲಿನ್ ಅವರು ವಹಿಸಿಕೊಂಡರು.
ಎಂ. ಕೆ.ಸ್ಟಾಲಿನ್ ಅವರು ಈ ಹಿಂದೆ ಉಪ ಮುಖ್ಯಮಂತ್ರಿ, ಗ್ರಾಮೀಣಾಭಿವೃದ್ಧಿ ಮತ್ತು ಸ್ಥಳೀಯ ಆಡಳಿತ ಸಚಿವ ಖಾತೆ ಸಚಿವರು ಹಾಗೂ ಚೆನ್ನೈ ಮಹಾನಗರ ಪಾಲಿಕೆಯ ಮೇಯರ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಮೊದಲು ಸ್ಟಾಲಿನ್ ಅವರು ತಂದೆ ಎಂ. ಕರುಣಾನಿಧಿ ಅವರು ಸಮಾಧಿ ಬಳಿಗೆ ಹೋಗಿ ನಮನ ಸಲ್ಲಿಸಿ ನಂತರ ರಾಜಭವನಕ್ಕೆ ಆಗಮಿಸಿದರು.