ಹೌರಾ: ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ನವೆಂಬರ್ 4ರಂದು ಮತದಾರಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆಯುತ್ತಿರುವ ಹಿನ್ನೆಲೆಯಲ್ಲಿ ತನ್ನ ಗುರುತಿನ ದಾಖಲೆಯಲ್ಲಿರುವ ತಪ್ಪುಗಳ ಬಗ್ಗೆ ಆತಂಕಗೊಂಡ 30 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಉಲುಬೇರಿಯಾ ಪಟ್ಟಣದ ಖಲಿಸಾನಿ ನಿವಾಸಿ ಜಹೀರ್ ಮಾಲ್ ಅವರು ತನ್ನ ನಿವಾಸದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಅಧಿಕೃತ ದಾಖಲೆಪತ್ರವೊಂದರಲ್ಲಿ ಕಾಗುಣಿತದ ತಪ್ಪು ಇರುವುದನ್ನು ಕಂಡುಕೊಂಡ ಬಳಿಕ ಜಹೀರ್ ತೀವ್ರ ಖಿನ್ನತೆಗೆ ಒಳಗಾಗಿದ್ದರು ಎಂದು ಆತನ ಕುಟುಂಬಿಕರು ಮಾಹಿತಿ ನೀಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಕೆಎಸ್ಆರ್ ರೈಲ್ವೆ ನಿಲ್ದಾಣದಲ್ಲಿ ಎಂಯುಟಿಎಸ್ ಸಹಾಯಕ್ ಪರಿಚಯ
ಇತ್ತೀಚಿನ ವಾರಗಳಲ್ಲಿ ಅವರು ದೋಷವನ್ನು ಸರಿಪಡಿಸಲು ಹಲವಾರು ಸ್ಥಳೀಯ ಕಚೇರಿಗಳಿಗೆ ಭೇಟಿ ನೀಡಿದ್ದರು ಆದರೆ ಸರಿ ಪಡಿಸುವಲ್ಲಿ ವಿಫಲರಾಗಿದ್ದರು. ಎಸ್ಐಆರ್ ಪ್ರಕ್ರಿಯೆಯ ಸಮಯದಲ್ಲಿ ತನ್ನ ಪೌರತ್ವ ಅಥವಾ ಮತದಾರರ ಅರ್ಹತೆಯನ್ನು ಪರಿಶೀಲಿಸುವಲ್ಲಿ ಈ ತಪ್ಪು ತೊಡಕುಗಳಿಗೆ ಕಾರಣವಾಗಬಹುದು ಎಂದು ಜಹೀರ್ ಭಯಪಟ್ಟಿದ್ದರು ಎಂದು ಅಧಿಕಾರಿ ಹೇಳಿದರು.
ಎಸ್‌ಐಆರ್ ಪ್ರಕ್ರಿಯೆ ಸಂದರ್ಭ ತಮ್ಮ ಹೆಸರುಗಳನ್ನು ಮತದಾರ ಪಟ್ಟಿಯಿಂದ ತೆಗೆದು ಹಾಕಲಾಗುವುದೆಂಬ ಭೀತಿಯಿಂದ ಪಶ್ಚಿಮಬಂಗಾಳದಲ್ಲಿ ಕಳೆದ ಒಂದು ವಾರದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಪಶ್ಚಿಮಬಂಗಾಳದ ಕೂಚ್‌ಬೆಹಾರ್‌ನಲ್ಲಿ ಕಳೆದ ವಾರ 70 ವರ್ಷ ವಯಸ್ಸಿನ ರೈತ ಖೈರುಲ್ ಶೇಖ್ ಎಂಬವರು, ತನ್ನ ಅಧಿಕೃತ ದಾಖಲೆಗಳಲ್ಲಿರುವ ಕಾಗುಣಿತದ ತಪ್ಪಿನ ಕಾರಣ ಮತದಾರ ಪಟ್ಟಿಯಿಂದ ತನ್ನ ಹೆಸರನ್ನು ತೆಗೆದುಹಾಕಲಾಗುವುದೆಂಬ ಆತಂಕದಿಂದ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಮತದಾರರ ಪಟ್ಟಿಯನ್ನು ನವೀಕರಿಸುವ ಮತ್ತು ಪರಿಶೀಲಿಸುವ ಗುರಿಯನ್ನು ಹೊಂದಿರುವ ನಡೆಯುತ್ತಿರುವ ಎಸ್ಐಆರ್ ಅನ್ನು ನವೆಂಬರ್ 4 ರಿಂದ ಡಿಸೆಂಬರ್ 4 ರವರೆಗೆ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಲಾಗುತ್ತಿದೆ. ಮತದಾರರ ಪಟ್ಟಿಗಳಲ್ಲಿ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಇದು ಪ್ರಮಾಣಿತ ಚುನಾವಣಾ ಪೂರ್ವ ವಿಧಾನವಾಗಿದೆ ಎಂದು ಚುನಾವಣಾ ಆಯೋಗವು ಸಮರ್ಥಿಸಿಕೊಂಡಿದೆ.
ಇದನ್ನೂ ನೋಡಿ: ಕರ್ನಾಟಕ ರಾಜ್ಯೋತ್ಸವ | ಹಿಂದಿ ಹೇರಿಕೆ ವಿರುದ್ಧ ಸಿಡಿದೆದ್ದ ಸಿಎಂ; ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ
