ಎಲ್ಲ ಅಧಿಕೃತ ಬಡತನ ರೇಖೆಗಳು ಬಡತನ ಇಳಿಯುತ್ತಿದೆ ಎಂಬ ಹುಸಿ ಫಲಿತಾಂಶವನ್ನೇ ಏಕೆ ನೀಡುತ್ತವೆ ಮತ್ತು ಬದುಕುಳಿಯುವ ಮಟ್ಟಕ್ಕಿಂತ ಏಕೆ ಕೆಳಗಿವೆ? ಏಕೆಂದರೆ ಹಲವು ದಶಕಗಳಿಂದಲೂ ಅಧಿಕೃತ ಬಡತನ ರೇಖೆಗಳನ್ನು ಲೆಕ್ಕಹಾಕುವಾಗ ಪೌಷ್ಟಿಕಾಂಶದ ಮಾನದಂಡವನ್ನು ಯಾವ ವಿವರಣೆಯನ್ನೂ ಕೊಡದೆ ಕೈಬಿಡಲಾಗಿದೆ. ಪ್ರತಿ ದೇಶದಲ್ಲೂ ಬಡತನದ ಮೊಟ್ಟಮೊದಲ ಬಡತನದ ಅಂದಾಜು ಮಾತ್ರವೇ ಬಡಜನರು ನಿರ್ದಿಷ್ಟ ಪೌಷ್ಟಿಕಾಂಶ ಮಾನದಂಡದ ಮಟ್ಟವನ್ನು ತಲುಪಲು ಅನುವು ಮಾಡಿಕೊಡುವ ‘ಬಡತನ ರೇಖೆ’ಯನ್ನು ಆಧರಿಸಿತ್ತು. ತದನಂತರ ಮಾಡಿದ ಪ್ರತಿ ಅಂದಾಜನ್ನೂ ಕೇವಲ ಬೆಲೆ ಸೂಚ್ಯಂಕದ ಆಧಾರದ ಮೇಲೆ ತಪ್ಪಾಗಿ ಮಾಡಲಾಗಿದೆ. ಇದೀಗ ಅಸಂಬದ್ಧತೆಯ ಪರಾಕಾಷ್ಠೆಯನ್ನು ತಲುಪಿದೆ. ಬಡವರ ಸಂಖ್ಯೆಯನ್ನು ಸ್ಥಿರ ಪೌಷ್ಠಿಕಾಂಶ ಮಾನದಂಡದ ಬದಲಿಗೆ ಇಳಿಕೆಯಾದ ಪೌಷ್ಠಿಕಾಂಶದೊಂದಿಗೆ ಲೆಕ್ಕಾಚಾರ ಮಾಡಿರುವುದರಿಂದ ಬಡತನ ಇಳಿಕೆಯ ಹೇಳಿಕೆಯು ಹುಸಿಯಾಗಿದೆ ಎಂಬುದು ಸ್ಪಷ್ಟವಾಗುತ್ತದೆ.. ಆದರೆ ಇಂತಹ ಸಲಹೆಯನ್ನು ಕೊಡುವ, ತರ್ಕಬದ್ಧವಲ್ಲದ ಮತ್ತು ಅಪ್ರಾಮಾಣಿಕ ನಿಲುವನ್ನು ತ್ಯಜಿಸುವಂತೆ ವಿಶ್ವ ಬ್ಯಾಂಕ್‌ಅನ್ನು ಶಿಸ್ತಿಗೊಳಪಡಿಸುವ ಅಂತರರಾಷ್ಟ್ರೀಯ ಸಂಸ್ಥೆ ಯಾವುದೂ ಇದ್ದಂತಿಲ್ಲ.
ಪ್ರೊ. ಉತ್ಸಾ ಪಟ್ನಾಯಕ್
ಅನು:ಕೆ.ಎಂ. ನಾಗರಾಜ್
ವಿಶ್ವದಲ್ಲಿ, ಅದರಲ್ಲೂ ವಿಶೇಷವಾಗಿ ಏಷ್ಯಾದಲ್ಲಿ, ಕಡು ಬಡತನ ತೀವ್ರವಾಗಿ ಇಳಿಯುತ್ತಿದೆ ಎಂಬ ವಿಶ್ವಬ್ಯಾಂಕ್‌ನ 2025ರ ಹೇಳಿಕೆಯ ಕುರಿತು ಹಲವಾರು ಅಕೆಡೆಮಿಕ್ ಲೇಖನಗಳು ಮತ್ತು ಪತ್ರಿಕಾ ಲೇಖನಗಳು ಇತ್ತೀಚೆಗೆ ಬಂದಿವೆ. ಈ ಹೇಳಿಕೆ ಒಂದು ವೇಳೆ ನಿಜವಾಗಿದ್ದರೆ ಅದು ನಿಜಕ್ಕೂ ಒಂದು ಅದ್ಭುತವೇ ಸರಿ. ಆದರೆ ಅದು ನಿಜವಲ್ಲ. ಇದು ಹುಸಿ ದಾವೆ. ಬ್ಯಾಂಕ್ ಮತ್ತು ಸರ್ಕಾರಗಳು ಹಲವು ದಶಕಗಳಿಂದಲೂ ಎಲ್ಲ ಟೀಕೆಗಳನ್ನು ಬದಿಗೊತ್ತಿ ಪಾಲಿಸುತ್ತಿರುವ ಸಂಖ್ಯಾಶಾಸ್ತ್ರೀಯ ಕೈಚಳಕದಿಂದ ಇದು ಉದ್ಭವಿಸುತ್ತದೆ. ಸುಮಾರು ಅರ್ಧ ಶತಮಾನದಷ್ಟು ಕಾಲದಿಂದಲೂ ಅವರು ಬಡತನ ರೇಖೆಯನ್ನು ವ್ಯಾಖ್ಯಾನಿಸುವ ವೆಚ್ಚವನ್ನು ಸತತವಾಗಿ ಕೀಳಂದಾಜು ಮಾಡಿದ್ದಾರೆ. ಈ ಸಂಬಂಧವಾಗಿ ಅವರು ಮಾಡಿರುವ ಅಂದಾಜು ವೆಚ್ಚಗಳು ಮನುಷ್ಯರು ಬದುಕುಳಿಯುವುದು ಸಾಧ್ಯವಿಲ್ಲದಷ್ಟು ಕೆಳ ಮಟ್ಟದಲ್ಲಿವೆ. ದೈನಿಕ 62ರೂ.ಗಳ ಬಡತನ ರೇಖೆಯ ವೆಚ್ಚವನ್ನು ಆಧರಿಸಿ, ಭಾರತದ ಜನಸಂಖ್ಯೆಯ ಶೇ. 5.25ರಷ್ಟು ಜನರು ಕಡು ಬಡತನದಲ್ಲಿದ್ದಾರೆ ಎಂದು ಬ್ಯಾಂಕ್ ಘೋಷಿಸಿದೆ. ನೀತಿ ಆಯೋಗವು 2022-23 ವರ್ಷದಲ್ಲಿ ಗ್ರಾಮೀಣ ಭಾರತದಲ್ಲಿ ದೈನಿಕ 57 ರೂ.ಗಳ ವೆಚ್ಚವನ್ನು ಮತ್ತು ನಗರ ಭಾರತದಲ್ಲಿ 69 ರೂ.ಗಳ ವೆಚ್ಚವನ್ನು ಬಡತನ ರೇಖೆ ಎಂದು ಲೆಕ್ಕಾಚಾರ ಮಾಡುವ ಮೂಲಕ ಬಡತನದ ಒಟ್ಟಾರೆ ಅನುಪಾತ ಶೇ.5 ಎಂಬ ಲೆಕ್ಕಾಚಾರಕ್ಕೆ ತಲುಪಿತ್ತು.
ಇದನ್ನೂ ಓದಿ : ಹೊಸ ವರ್ಷ ತರಲಿ ಹರ್ಷ
ಈ ಹಣದಲ್ಲಿ ಅತಿ ಕಡಿಮೆ ಬೆಲೆಯ 2.9 ಅಥವ 3.5 ಲೀಟರ್ ಕುಡಿಯುವ ನೀರಿನ ಬಾಟಲಿಯನ್ನು ಖರೀದಿಸಬಹುದಷ್ಟೆ. ಆದರೆ, ಈ ಹಣ ದೈನಂದಿನ ತಲಾ ಆಹಾರ ಮತ್ತು ಇತರ (ವೈದ್ಯಕೀಯ, ಉಪಯುಕ್ತ ವಸ್ತುಗಳು, ತಯಾರಿಕಾ ವಸ್ತುಗಳು, ಬಾಡಿಗೆ, ಸಾರಿಗೆ) ಎಲ್ಲ ವೆಚ್ಚಗಳನ್ನು ಪೂರೈಸುತ್ತದೆ ಎಂದು ಭಾವಿಸಲಾಗಿದೆ. ನಿರಾಶ್ರಿತ ಭಿಕ್ಷುಕರನ್ನು ಹೊರತುಪಡಿಸಿ ಉಳಿದವರು ತಮ್ಮ ಖರ್ಚುಗಳು ಈ ಮಟ್ಟವನ್ನು ತಲುಪುವ ಮೊದಲೇ ಸತ್ತು ಹೋಗಿರುತ್ತಾರೆ. ಈ ಲೆಕ್ಕಾಚಾರದ ಪ್ರಕಾರ, ಮುಂದಿನ ವರ್ಷದ ವೇಳೆಗೆ ಭಾರತವು ತೀವ್ರ ಬಡತನದ ಶೂನ್ಯ ಮಟ್ಟವನ್ನು ಸಾಧಿಸಿದೆ ಎಂಬ ಹೇಳಿಕೆಯನ್ನು ನಾವು ನಿರೀಕ್ಷಿಸಬಹುದು. ಆಗ ಬಡತನ ರೇಖೆಯ ಮಟ್ಟದಲ್ಲಿ ಬದುಕುಳಿದವರು ಯಾರೂ ಇರುವುದಿಲ್ಲ. ಕನಿಷ್ಠ ಮಟ್ಟದ ಪೌಷ್ಠಿಕಾಂಶವನ್ನು ತಲುಪಬಲ್ಲ ನಿಜ ಬಡತನ ರೇಖೆಯು ಅಧಿಕೃತ ಬಡತನ ರೇಖೆಗಿಂತ ಕನಿಷ್ಠ ಮೂರು ಪಟ್ಟು ಹೆಚ್ಚಬೇಕಾಗುತ್ತದೆ ಮತ್ತು ಈ ಮಟ್ಟದಲ್ಲಿ ಲೆಕ್ಕ ಹಾಕಿದರೆ, ಕನಿಷ್ಠ ಶೇ. 65ರಷ್ಟು ಜನಸಂಖ್ಯೆಯು ಅಧಿಕೃತ ಬಡತನ ರೇಖೆಯ ಕೆಳಗಿರುತ್ತದೆ.
ವಿಶ್ವ ಬ್ಯಾಂಕ್ ಸಲಹೆಯ ಬಡತನ ರೇಖೆಗಳು
ವಿಶ್ವ ಬ್ಯಾಂಕ್ ಬಡತನ ಅಂದಾಜು ಕಾರ್ಯವಿಧಾನದ ಕುರಿತು ಅಭಿವೃದ್ಧಿಶೀಲ ರಾಷ್ಟ್ರಗಳ ಅರ್ಥಶಾಸ್ತ್ರಜ್ಞರಿಗೆ ತರಬೇತಿ ನೀಡುವ ಸಲುವಾಗಿ ತನ್ನ ‘ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮ’ದ ಅಡಿಯಲ್ಲಿ ಸಲಹೆಗಾರರನ್ನು ಕಳುಹಿಸುತ್ತಿದೆ. ಚೀನಾದ 1997ರ ಬಡತನ ರೇಖೆಯನ್ನು ವಿಶ್ವ ಬ್ಯಾಂಕಿನ ಸಲಹೆಯ ಮೇರೆಗೆ, ಅದರ 1978ರ ಬಡತನ ರೇಖೆ ವಾರ್ಷಿಕ 100 ಯುವಾನ್ ಎಂದಿಟ್ಟುಕೊಂಡು ಅದನ್ನು 1997ಕ್ಕೆ ಸಮಕಾಲಿಕಗೊಳಿಸಿ ಅದಕ್ಕೆ ಆಹಾರೇತರ ಖರ್ಚುಗಳನ್ನು ಸೇರಿಸುವ ಮೂಲಕ ನಿಗದಿಪಡಿಸಲಾಯಿತು. ಚೀನಾದ 2019ರ ‘ಶೂನ್ಯ ಬಡತನ’ದ ದಾವೆಯು ದೈನಿಕ 8.8 ಯುವಾನ್‌ನ ಅಧಿಕೃತ ಬಡತನ ರೇಖೆಯನ್ನು ಬಳಸಿತ್ತು. ಈ ಹಣದಲ್ಲಿ ಕುಡಿಯುವ 2.1 ಲೀಟರ್ ಬಾಟಲಿ ನೀರನ್ನು ಬಿಟ್ಟರೆ ಬೇರೆ ಏನನ್ನೂ ಖರೀದಿಸುವುದು ಸಾಧ್ಯವಿಲ್ಲ. ಈ ಮಟ್ಟದ ಖರ್ಚಿಲ್ಲಿ ಯಾರೂ ಬದುಕುಳಿಯುವುದು ಸಾಧ್ಯವಿಲ್ಲ ಎಂಬುದನ್ನು ಗಮನಕ್ಕೆ ತೆಗೆದುಕೊಳ್ಳದ ರೀತಿಯಲ್ಲಿ ಈ ಶೂನ್ಯ ಸಂಖ್ಯೆಯ ವ್ಯಕ್ತಿಗಳನ್ನು ಗಮನಿಸಲಾಗಿದೆ ಎಂಬ ರೀತಿಯಲ್ಲಿ ಅದನ್ನು ‘ಶೂನ್ಯ ಕಡು ಬಡತನ’ದ ಸಾಧನೆ ಎಂದು ವಿಕೃತವಾಗಿ ವ್ಯಾಖ್ಯಾನಿಸಲಾಗಿದೆ. ತದನಂತರ, ತಕ್ಷಣವೇ 2020ರ ಬಡತನ ರೇಖೆಯನ್ನು ದೈನಿಕ 11 ಯುವಾನ್‌ಗೆ ಹೆಚ್ಚಿಸಲಾಯಿತು. ಚೀನಾದ ಬಲ್ಲ ವಿಶ್ಲೇಷಕರು ಹೇಳುವಂತೆ, ಬದುಕುಳಿಯಲು ಕನಿಷ್ಠವಾಗಿ ತಿಂಗಳಿಗೆ ಸುಮಾರು 1000 ಯುವಾನ್ ಬೇಕು ಎಂದು ಲೆಕ್ಕ ಹಾಕಲಾಗಿದ್ದು, ಜನಸಂಖ್ಯೆಯ ಕನಿಷ್ಠ ಐದನೇ ಒಂದು ಭಾಗದಷ್ಟು ಜ£ರ ಬಳಿ ಇಷ್ಟು ಹಣ ಇಲ್ಲ. ಇದು ಅಧಿಕೃತ ಬಡತನ ರೇಖೆಯ ಮೊತ್ತಕ್ಕಿಂತ ಮೂರು ಪಟ್ಟು ಅಧಿಕ ಮೊತ್ತವಾಗುತ್ತದೆ. ಹಾಗಾಗಿ, ಭಾರತದಲ್ಲಿ ಶೇ. 5ರ ಮಟ್ಟದ ಕಡು ಬಡತನ ಸಾಧನೆ ನಿಜವಾದದ್ದಲ್ಲ ಮತ್ತು ಚೀನಾದಲ್ಲಿ ಶೂನ್ಯ ಬಡತನ ಎಂಬುದು ನಿಜವಾದದ್ದಲ್ಲ.
ಆದರೆ, ಇತ್ತೀಚಿನ ವರ್ಷಗಳಲ್ಲಿ ಚೀನಾ ದೇಶವು ಸೌಲಭ್ಯಗಳಿಂದ ಅತಿ ಹೆಚ್ಚು ವಂಚಿತ ಕುಟುಂಬಗಳನ್ನು ಸ್ಥಳೀಯ ಸಮುದಾಯಗಳ ಸಹಾಯದಿಂದ, ಗುರುತಿಸಲು ತರಬೇತಿ ಹೊಂದಿದ ಸಾವಿರಾರು ವ್ಯಕ್ತಿಗಳನ್ನು, ಗ್ರಾಮೀಣ ಪ್ರದೇಶಗಳಿಗೆ ಕಳುಹಿಸುವ ಬೃಹತ್ ಯೋಜನೆಯನ್ನು ಪ್ರಾರಂಭಿಸಿದೆ ಮತ್ತು ಬಡತನವನ್ನು ನಿಜಕ್ಕೂ ತಗ್ಗಿಸಲು ಮತ್ತು ಅಂತಿಮವಾಗಿ ನಿರ್ಮೂಲನೆ ಮಾಡಲು ಇಂಥಹ ಕುಟುಂಬಗಳಿಗೆ ಧಾರಾಳವಾಗಿ ಹಣ ವರ್ಗಾವಣೆ ಮಾಡುತ್ತಿದೆ. ಭಾರತದಲ್ಲಿ ಕೇರಳವು ಇದೇ ರೀತಿಯ ಒಂದು ನೀತಿಯನ್ನು ಒಂದು ಸಣ್ಣ ಪ್ರಮಾಣದಲ್ಲಿ ಅನುಸರಿಸಿದೆ ಮತ್ತು ಕೇರಳದ ಬಲಶಾಲಿ ಸಾಮುದಾಯಿಕ ಜಾಲಗಳು ಹಾಗೂ ಸ್ವಯಂಸೇವಕರ ಪಡೆಯೊಂದಿಗೆ ನಿರ್ಗತಿಕ ಕುಟುಂಬಗಳನ್ನು ಗುರುತಿಸಿ ಅವರಿಗೆ ಪುನರ್ವಸತಿ ಕಲ್ಪಿಸುವಲ್ಲಿ ಯಶಸ್ಸನ್ನು ಕಂಡಿದೆ.
ವಿಶ್ವ ಬ್ಯಾಂಕ್, ಸ್ಥಳೀಯ ಕರೆನ್ಸಿಯಲ್ಲಿ ರಚಿಸಲಾದ ಬಡ ದೇಶಗಳ ಬಡತನ ರೇಖೆಗಳನ್ನು ಯುಎಸ್ ಡಾಲರ್‌ಗೆ ಬದಲಾಯಿಸಿಕೊಂಡ ಮೊತ್ತವನ್ನು ಕೊಂಚ ಮೇಲ್ಮಟ್ಟದಲ್ಲಿ ಹೊಂದಿಸಿದ ನಂತರ ಕೊಳ್ಳುವ ಶಕ್ತಿಯನ್ನು ಡಾಲರ್ ಕರೆನ್ಸಿಯ ಮೌಲ್ಯದಲ್ಲಿ ಪ್ರಕಟಗೊಳಿಸುತ್ತದೆ. ಈಗ, ಜಾಗತಿಕ ಸರಾಸರಿ ಬಡತನ ರೇಖೆಯನ್ನು ದೈನಿಕ 3 ಡಾಲರ್ ಎಂದು ವಿಶ್ವ ಬ್ಯಾಂಕ್ ಪರಿಗಣಿಸುತ್ತದೆ. ಈ ರೇಖೆಯನ್ನು ಭಾರತದಂಥಹ ಒಂದು ದೇಶಕ್ಕೆ ಬಿಡಿಯಾಗಿ ಅನ್ವಯಿಸುವಾಗ, ಡಾಲರ್ ಕರೆನ್ಸಿಯ ಮೌಲ್ಯವನ್ನು ಕೊಂಚ ಕೆಳಮಟ್ಟದಲ್ಲಿ ಹೊಂದಿಸುತ್ತದೆ. ಅಂದರೆ, ರೂಪಾಯಿ-ಡಾಲರ್ ವಿನಿಮಯ ದರವನ್ನು ಸುಮಾರು 0.28 ರಷ್ಟು ಕಡಿಮೆ ಮಾಡುತ್ತದೆ. ಇದು ಭಾರತದ ಅಧಿಕೃತ ಬಡತನ ರೇಖೆಗೆ ಬಹಳ ಸಮೀಪದಲ್ಲಿರುತ್ತದೆ.
ಹುಸಿ ಫಲಿತಾಂಶ ಏಕೆ?
ಕೃತಕವಾಗಿ ರಚಿಸಲಾದ ಈ ಎಲ್ಲ ಅಧಿಕೃತ ಬಡತನ ರೇಖೆಗಳು ಬಡತನ ಇಳಿಯುತ್ತಿದೆ ಎಂಬ ಹುಸಿ ಫಲಿತಾಂಶವನ್ನೇ ಏಕೆ ನೀಡುತ್ತವೆ ಮತ್ತು ಬದುಕುಳಿಯುವ ಮಟ್ಟಕ್ಕಿಂತ ಏಕೆ ಕೆಳಗಿವೆ? ಏಕೆಂದರೆ ಹಲವು ದಶಕಗಳಿಂದಲೂ ಅಧಿಕೃತ ಬಡತನ ರೇಖೆಗಳನ್ನು ಲೆಕ್ಕಹಾಕುವಾಗ ಪೌಷ್ಟಿಕಾಂಶದ ಮಾನದಂಡವನ್ನು ಕೈಬಿಡಲಾಗಿದೆ. ಇದಕ್ಕೆ ಯಾವ ವಿವರಣೆಯನ್ನೂ ಕೊಟ್ಟಿಲ್ಲ. ಪ್ರತಿ ದೇಶದಲ್ಲೂ ಬಡತನದ ಮೊಟ್ಟಮೊದಲ ಬಡತನದ ಅಂದಾಜು ಮಾತ್ರವೇ ಬಡಜನರು ನಿರ್ದಿಷ್ಟ ಪೌಷ್ಟಿಕಾಂಶ ಮಾನದಂಡದ ಮಟ್ಟವನ್ನು ತಲುಪಲು ಅನುವು ಮಾಡಿಕೊಡುವ ‘ಬಡತನ ರೇಖೆ’ಯನ್ನು ಆಧರಿಸಿತ್ತು. ತದನಂತರ ಮಾಡಿದ ಪ್ರತಿ ಅಂದಾಜನ್ನೂ ತಪ್ಪಾಗಿ ಮಾಡಲಾಗಿದೆ. ಏಕೆಂದರೆ ನಂತರದ ವರ್ಷಗಳ ಬಡತನ ರೇಖೆಯನ್ನು ಲೆಕ್ಕ ಹಾಕುವಾಗ, ಆರಂಭಿಕ ವರ್ಷದ ಅಂಕಿ ಅಂಶಗಳಿಗೆ ಒಂದು ಲಾಸ್ಪೇರ್ ಬೆಲೆ ಸೂಚ್ಯಂಕವನ್ನು ಅನ್ವಯ ಮಾಡಲಾಯಿತು. ಪೌಷ್ಟಿಕಾಂಶ ಮಾನದಂಡದ ಮಟ್ಟವನ್ನು ತಲುಪಲಾಯಿತೇ ಎಂಬ ಪ್ರಶ್ನೆಯನ್ನೇ ಎತ್ತಲಿಲ್ಲ. ಈ ಸೂಚ್ಯಂಕವು ಮೂಲ ವರ್ಷದಲ್ಲಿ ಬಳಕೆಯ ಬುಟ್ಟಿಯಲ್ಲಿದ್ದ ವಸ್ತುಗಳ-ಬಳಕೆಯ ಪ್ರಮಾಣದ ಬದಲಾವಣೆಯನ್ನು ಪರಿಗಣಿಸುವುದಿಲ್ಲ. ಮೂಲ ವರ್ಷದಲ್ಲಿ ಬಡತನ ರೇಖೆಯ ಮಟ್ಟದಲ್ಲಿ ಖರೀದಿಸಿದ ವಸ್ತುಗಳು ಮತ್ತು ಸೇವೆಗಳು ಮತ್ತು ಅವುಗಳ ಪ್ರಮಾಣಗಳು ಹಾಗೆಯ್ಲೇ ಇರುತ್ತವೆ ಎಂದಿಟ್ಟುಕೊಂಡು, ಅವುಗಳ ಬೆಲೆಗಳನ್ನಷ್ಟೆ ಬದಲಿಸಲಾಗುತ್ತದೆ.

ಬಡತನದ ರೇಖೆಯನ್ನು ನಿಗದಿಪಡಿಸಲು ಭಾರತದಲ್ಲಿ 1973ನ್ನು ಮತ್ತು ಚೀನಾದಲ್ಲಿ 1978ನ್ನು ಮೂಲ ವರ್ಷವಾಗಿ ಇಟ್ಟುಕೊಳ್ಳಲಾಗಿತ್ತು. ಈ ಮೂಲ ವರ್ಷಗಳಿಗೆ ಕ್ರಮವಾಗಿ ಈಗ 52 ವರ್ಷಗಳು ಮತ್ತು 47 ವರ್ಷಗಳು ಸಂದಿವೆ. 1973ರಲ್ಲಿ ಮತ್ತು 1978ರಲ್ಲಿ ಮೊಟ್ಟಮೊದಲ ಬಡತನದ ಅಂದಾಜುಗಳನ್ನು ಮಾಡುವಾಗ, ಭಾರತ ಮತ್ತು ಚೀನಾ ಸರ್ಕಾರಗಳು ಕ್ರಮವಾಗಿ 1921ರಲ್ಲಿ ಮತ್ತು 1931ರಲ್ಲಿ ಚಾಲ್ತಿಯಲ್ಲಿದ್ದ ಬಳಕೆಯ ಬುಟ್ಟಿಯ ವಸ್ತುಗಳ ಸಮಕಾಲಿಕಗೊಳಿಸಿದ ವೆಚ್ಚವನ್ನು ತೆಗೆದುಕೊಳ್ಳುತ್ತಿರುವುದಾಗಿ ಒಂದು ವೇಳೆ ಘೋಷಿಸಿದವು ಎಂದು ಭಾವಿಸಿಕೊಳ್ಳೋಣ. ಆಗ ಅವು ನಗೆಪಾಟಲಿಗೆ ಗುರಿಯಾಗುತ್ತಿದ್ದವು. ಆದರೆ ಇಂದು ಸರ್ಕಾರಗಳು ಮತ್ತು ವಿಶ್ವ ಬ್ಯಾಂಕ್ ಅರ್ಧ ಶತಮಾನದಷ್ಟು ಹಿಂದಿನ ಬಳಕೆ ಬುಟ್ಟಿಯ ಆಧಾರದ ಮೇಲೆ ಇಂದಿನ ಬಡತನದ ಬಗ್ಗೆ ಸಲೀಸಾಗಿ ಮಾತಾಡುತ್ತವೆ ಮತ್ತು ಅದಕ್ಕೆ ಯಾವ ಟೀಕೆಯೂ ಬರುವುದಿಲ್ಲ. ಏಕೆಂದರೆ ವಿದ್ಯಾವಂತ ಸಾರ್ವಜನಿಕರಿಗೆ ಅವರು ಬಳಸುವ ಅಂದಾಜು ಮಾಡುವ ಕಾರ್ಯವಿಧಾನÀ ಅಸಂಬದ್ಧವಾಗಿದೆ ಎಂದು ತಿಳಿದಿಲ್ಲ.
ಇಳಿಕೆಯ ಬದಲು ಗಮನಾರ್ಹ ಏರಿಕೆ
1973ರಲ್ಲಿ, ಗ್ರಾಮೀಣ ಭಾರತದಲ್ಲಿ ದೈನಿಕ 2200 ಕ್ಯಾಲೋರಿಗಳ ಪೌಷ್ಟಿಕಾಂಶದ ಮಾನದಂಡವನ್ನು ತಲುಪಲು ಮಾಸಿಕ ತಲಾ 49 ರೂ.ಗಳ ಅಗತ್ಯವಿತ್ತು ಮತ್ತು ಶೇ. 56.4ರಷ್ಟು ವ್ಯಕ್ತಿಗಳು ಈ ಮೊತ್ತಕ್ಕಿಂತಲೂ ಕಡಿಮೆ ಖರ್ಚು ಮಾಡುತ್ತಾರೆ ಎಂಬುದು ಅಧಿಕೃತ ಬಡತನದ ಸರಿಯಾದ ಅನುಪಾತವಾಗಿತ್ತು. 2011-12ರ ವೇಳೆಗೆ ಅದೇ ಪೌಷ್ಟಿಕಾಂಶದ ಮಾನದಂಡವನ್ನು ಪೂರೈಸಿಕೊಳ್ಳಲು ಮಾಸಿಕವಾಗಿ 1320 ರೂ.ಗಳನ್ನು ಖರ್ಚು ಮಾಡಬೇಕಾಗಿತ್ತು ಮತ್ತು ಶೇ. 66.8ರಷ್ಟು ವ್ಯಕ್ತಿಗಳು ಈ ಮಟ್ಟದ ಕೆಳಕ್ಕೆ ಉಳಿಯುತ್ತಾರೆ. ಇದು ಆರಂಭದ ವರ್ಷದಲ್ಲಿದ್ದ ಶೇ. 56.4ರ ಮಟ್ಟಕ್ಕೆ ಹೋಲಿಸಿದರೆ, ಬಡತನವು ಗಮನಾರ್ಹವಾಗಿ ಏರಿಕೆಯಾಗಿರುವುದನ್ನು ತೋರಿಸುತ್ತದೆ. ಆದರೆ, 1973ರ ನಂತರದ ಅವಧಿಯಲ್ಲಿ ಅಧಿಕೃತ ಅಂದಾಜುಗಾರರು ಪೌಷ್ಠಿಕಾಂಶ ಮಾನದಂಡವನ್ನು ಸದ್ದಿಲ್ಲದೆ ಕೈಬಿಟ್ಟರು ಮತ್ತು ಮೂಲ ವರ್ಷದ ಅಂಕಿ ಅಂಶವನ್ನು ಕೇವಲ ಬೆಲೆ ಸೂಚ್ಯಂಕದೊAದಿಗೆ ಹೊಂದಿಸಿ ಪಡೆದ 816 ರೂ.ಗಳನ್ನು ಅಧಿಕೃತ ಬಡತನ ರೇಖೆ ಎಂದು ನಿಗದಿಪಡಿಸಿದರು ಮತ್ತು ಶೇ.25.7 ರಷ್ಟು ಜನರು ಅದರ ಕೆಳಗೆ ಬರುತ್ತಾರೆ ಎಂದು ಘೋಷಣೆ ಮಾಡಿದರು. ಆದರೆ, ಈ ಹಿಂದೆ ಹೇಳಿದ ಸರಿಯಾದ ರೀತಿಯ ಲೆಕ್ಕಾಚಾರದ ಪ್ರಕಾರ ಬಡತನ ರೇಖೆಯನ್ನು 1320 ರೂ.ಗಳಿಗೆ ನಿಗದಿಪಡಿಸಬೇಕಾಗುತ್ತದೆ ಮತ್ತು ಈ ಪ್ರಕಾರವಾಗಿ ಶೇ. 66.8ರಷ್ಟು ಜನರು ಬಡತನ ರೇಖೆಯ ಕೆಳಗೆ ಇರುತ್ತಾರೆ. ಹಾಗಾಗಿ, ಅಧಿಕೃತ ಬಡತನ ರೇಖೆಯ ಮಟ್ಟದಲ್ಲಿ ಕ್ಯಾಲೋರಿ ಸೇವನೆಯ ಪ್ರಮಾಣ ಇಳಿದಿದೆ ಎಂಬುದು ಮತ್ತು ಬಡವರನ್ನು ಸ್ಥಿರ ಪೌಷ್ಠಿಕಾಂಶ ಮಾನದಂಡದ ಬದಲಿಗೆ ಇಳಿಕೆಯಾದ ಪೌಷ್ಠಿಕಾಂಶದೊAದಿಗೆ ಲೆಕ್ಕಾಚಾರ ಮಾಡಿರುವುದರಿಂದ ಬಡತನ ಇಳಿಕೆಯ ಹೇಳಿಕೆಯು ತಪ್ಪಾಗಿದೆ ಎಂಬುದು ಸ್ಪಷ್ಟವಾಗುತ್ತದೆ.
ಅದೇ ರೀತಿಯಲ್ಲಿ, 1973ರಲ್ಲಿ, ನಗರ ಭಾರತದಲ್ಲಿ ದೈನಿಕ 2100 ಕ್ಯಾಲೋರಿಗಳ ಪೌಷ್ಟಿಕಾಂಶದ ಮಾನದಂಡವನ್ನು ತಲುಪಲು ಮಾಸಿಕ ತಲಾ 56.6 ರೂ.ಗಳ ಅಗತ್ಯವಿತ್ತು ಮತ್ತು ಶೇ. ಶೇ.49ರಷ್ಟು ವ್ಯಕ್ತಿಗಳು ಈ ಮೊತ್ತಕ್ಕಿಂತಲೂ ಕಡಿಮೆ ಖರ್ಚು ಮಾಡುತ್ತಾರೆ ಎಂಬುದು ಅಧಿಕೃತ ಬಡತನದ ಸರಿಯಾದ ಅನುಪಾತವಾಗಿತ್ತು. 2011-12ರ ವೇಳೆಗೆ 2100 ಕ್ಯಾಲೋರಿಗಳ ಪೌಷ್ಟಿಕಾಂಶದ ಮಾನದಂಡವನ್ನು ಪೂರೈಸಿಕೊಳ್ಳಲು ಮಾಸಿಕವಾಗಿ 2,130 ರೂ.ಗಳನ್ನು ಖರ್ಚು ಮಾಡಬೇಕಾಗಿತ್ತು ಮತ್ತು ಶೇ. 66.8ರಷ್ಟು ವ್ಯಕ್ತಿಗಳು ಈ ಮಟ್ಟದ ಕೆಳಗೆ ಬರುತ್ತಿದ್ದರು. ಆದರೆ, ದೈನಿಕ ಕೇವಲ 1775 ಕ್ಯಾಲೊರಿಗಳನ್ನು ಒದಗಿಸುವ ಮಾಸಿಕ 1,000 ರೂ. ಗಳ ಖರ್ಚನ್ನು 2011-12ರ ಅಧಿಕೃತ ಬಡತನ ರೇಖೆ ಎಂದು ನಿಗದಿಪಡಿಸಿ, ಶೇ.13.7 ರಷ್ಟು ಜನರು ಮಾತ್ರ ಅದರ ಕೆಳಗೆ ಬರುತ್ತಾರೆ ಎಂದು ಘೋಷಣೆ ಮಾಡಲಾಗಿದೆ. ಈ ಸಂಗತಿಯ ಬಗ್ಗೆ ಎಲ್ಲಿಯೂ ಉಲ್ಲೇಖ ಇಲ್ಲ.
ಇಲ್ಲಿಯವರೆಗಿನ ಪ್ರತಿಯೊಂದು ಹೊಸ ಅಧಿಕೃತ ಬಡತನ ರೇಖೆಯೂ ಕಡಿಮೆ ಮತ್ತು ಇನ್ನೂ ಕಡಿಮೆ ಪೌಷ್ಟಿಕಾಂಶ ಸೇವನೆಯ ಮಟ್ಟದಲ್ಲಿ ನಿಗದಿಯಾಗಿದೆ. ಈಗ, ಜೀವ ಹಿಡಿದಿಟ್ಟುಕೊಂಡು ಬದುಕುಳಿಯುವ ಮಟ್ಟಕ್ಕಿಂತ ಕೆಳಗಿರುವ ಬಡತನ ರೇಖೆಯು ಅದರ ಅಸಂಬದ್ಧತೆಯ ಪರಾಕಾಷ್ಠೆಯನ್ನು ತಲುಪಿದೆ (ಈ ಮುನ್ಸೂಚನೆಯನ್ನು ನಾನು 2013ರಲ್ಲಿ ಬರೆದ ಒಂದು ಲೇಖನದಲ್ಲಿ ಹೇಳಿದ್ದೆ). ಬದುಕುಳಿಯುವುದನ್ನು ಗಮನಕ್ಕೆ ತೆಗೆದುಕೊಳ್ಳದ ಈ ‘ಶೂನ್ಯ ಕಡು ಬಡತನ’ವನ್ನು ಸಂಭ್ರಮಿಸಲಾಗುತ್ತಿದೆ! ಅನೇಕ ಆಫ್ರಿಕನ್ ದೇಶಗಳು ಬಡತನದ ಅಂದಾಜನ್ನು ತಡವಾಗಿ ಪ್ರಾರಂಭಿಸಿದವು. ಅವು ಹೊಂದಿರುವ ಮೂಲ ವರ್ಷಗಳು ಒಂದು ದಶಕಕ್ಕಿಂತ ಹೆಚ್ಚು ಹಿಂದಿನದಲ್ಲ. ಆದ್ದರಿಂದ ಅವು ವಾಸ್ತವಕ್ಕೆ ಹತ್ತಿರದಲ್ಲಿರುವ ಮಟ್ಟದಲ್ಲಿ ಬಡತನವನ್ನು ಗುರುತಿಸಿವೆ ಎಂಬುದು ಗಮನಾರ್ಹವಾಗಿದೆ.
ತರ್ಕಹೀನ, ಅಪ್ರಾಮಾಣಿಕ ನಿಲುವು
ಅರ್ಧ ಶತಮಾನದಷ್ಟು ಹಿಂದಿನ ಬಳಕೆಯ ಬುಟ್ಟಿಯನ್ನು ಆಧರಿಸಿ ಬಡತನ ರೇಖೆಯನ್ನು ನಿರ್ಧರಿಸುವ ಕ್ರಮವು ಭಾರತದಲ್ಲಿ ಬಡತನವೇ ಇಲ್ಲ ಎಂದು ಊಹಿಸಿಕೊಳ್ಳುವುದಕ್ಕೆ ಸಮನಾಗುತ್ತದೆ. ಏಕೆಂದರೆ, ಉಪಯೋಗದಲ್ಲಿರುವ ಬುಟ್ಟಿಯು ಬದಲಾವಣೆಯನ್ನು ಉಂಟುಮಾಡುವAಥಹ ಅಗತ್ಯ ಸರಕು-ಸೇವೆಗಳನ್ನು ಒಳಗೊಂಡಾಗ ಬುಟ್ಟಿಯ ಸ್ವರೂಪವೇ ಬದಲಾಗುತ್ತದೆ ಮತ್ತು ಬುಟ್ಟಿಯು ಒಳಗೊಂಡ ಆಂಶಗಳು ಬಡತನ ಏರುತ್ತಿದೆಯೇ ಅಥವಾ ಇಳಿಯುತ್ತಿದೆಯೇ ಎಂಬ ಪ್ರಶ್ನೆಗೆ ಮುಖ್ಯವಾಗುತ್ತವೆ. ಸರ್ಕಾರವೊಂದು ಒದಗಿಸಬೇಕಾದ ಅಗತ್ಯ ಸೇವೆಗಳಾದ ಆರೋಗ್ಯ ರಕ್ಷಣೆ, ಇತರ ಉಪಯುಕ್ತ ಸೇವೆಗಳು ಮತ್ತು ಶಿಕ್ಷಣವನ್ನು ಖಾಸಗಿ ವಲಯಕ್ಕೆ ತೀವ್ರಗತಿಯಲ್ಲಿ ವರ್ಗಾಯಿಸಲಾಗಿದೆ. ಇವು ಕಳೆದ ಮೂರು ದಶಕಗಳ ಮಾರುಕಟ್ಟೆ-ನಿರ್ಧರಿತ ಸುಧಾರಣೆಗಳ ಅಡಿಯಲ್ಲಿ ಒಂದು ಉಗ್ರವಾದ ಬೆಲೆ ಏರಿಕೆಯನ್ನು ಕಂಡಿವೆ. ಈ ವೆಚ್ಚಗಳನ್ನು ಕೈಗೊಳ್ಳುವುದು ಮತ್ತು ಪೌಷ್ಠಿಕಾಂಶದ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಹೆಚ್ಚು ಹೆಚ್ಚು ಕುಟುಂಬಗಳಿಗೆ ಸಾಧ್ಯವಾಗುತ್ತಿಲ್ಲ, ಏಕೆಂದರೆ, ಅವರ ವರಮಾನ ಸಮರ್ಪಕವಾಗಿ ಏರಿಕೆಯಾಗಿಲ್ಲ. ಈ ನಿಟ್ಟಿನಲ್ಲಿ ಭಾರತದಲ್ಲಿ ಕುಟುಂಬಗಳ ಸಾಲದ ಹೆಚ್ಚಳವು ಒಂದು ಸೂಚಕವಾಗಿದೆ. ಬಡವರಲ್ಲದ ಕುಟುಂಬಗಳು ಬಡತನಕ್ಕೆ ಜಾರಿವೆ. ಅದಾಗಲೇ ಬಡತನದಲ್ಲಿದ್ದವರ ಪೌಷ್ಠಿಕಾಂಶದ ಕೊರತೆ ಮತ್ತಷ್ಟು ಹೆಚ್ಚಿದೆ. ರಾಷ್ಟ್ರೀಯ ಸ್ಯಾಂಪಲ್ ಸರ್ವೆ ಸಂಸ್ಥೆಯು ಪ್ರಕಟಿಸಿರುವ ಬಳಕೆಯ ದತ್ತಾಂಶವು ಗ್ರಾಮೀಣ ಮತ್ತು ನಗರ ಭಾರತದಲ್ಲಿ ಸರಾಸರಿ ತಲಾ ಆಹಾರ (ಶಕ್ತಿ ಮತ್ತು ಪ್ರೋಟೀನ್) ಸೇವನೆ ಕಾಲಕ್ರಮೇಣ ಕುಸಿಯುತ್ತಿದೆ ಎಂಬುದನ್ನು ತೋರಿಸುತ್ತದೆ.
ಒಬ್ಬ ಒಲಿಂಪಿಕ್ ಹೈಜಂಪ್ ಕ್ರೀಡಾಪಟು ತನ್ನ ಪ್ರದರ್ಶನವನ್ನು ಉತ್ತಮಗೊಳಿಸಿಕೊಳ್ಳುವ ಸಲುವಾಗಿ ಹಾರಬೇಕಾದ ಅಡ್ಡಗೋಲನ್ನು (ಬಾರ್‌ಅನ್ನು) ತಗ್ಗಿಸುವಂತೆ ಪದೇ ಪದೇ ಕೇಳಿಕೊಂಡರೆ, ಅವವನ್ನು ಸ್ಪರ್ಧೆಯಿಂದ ಜೀವಾವಧಿಗಾಗಿ ನಿಷೇಧಿಸಲಾಗುತ್ತದೆ. ಶಾಲೆಯ ನಪಾಸು ಶೇ. 40ರಿಂದ ಶೂನ್ಯ ಮಟ್ಟಕ್ಕೆ ತೀವ್ರವಾಗಿ ಇಳಿದಿದೆ ಎಂದು ಒಬ್ಬ ಪ್ರಾಂಶುಪಾಲ ಹೇಳಿಕೊಂಡರೆ ಮತ್ತು ಈ ಇಳಿಕೆಯು ಪಾಸ್ ಮಾರ್ಕನ್ನು 100 ರಲ್ಲಿ 50ದ ಬದಲುÀ 100 ರಲ್ಲಿ 2ಕ್ಕೆ ಇಳಿಸಿರುವುದರಿಂದ ಉಂಟಾಗಿದೆ ಎಂಬುದು ಕಂಡುಬAದರೆ, ಆ ಪ್ರಾಂಶುಪಾಲರನ್ನು ವಜಾ ಮಾಡಲಾಗುತ್ತದೆ. ಆದರೆ, ಒಂದು ತಾರ್ಕಿಕ ಮತ್ತು ನೈತಿಕ ಅಂದಾಜು ಕಾರ್ಯವಿಧಾನವನ್ನು ಅನುಸರಿಸುವಂತೆ ಮತ್ತು ಏಷ್ಯಾದಲ್ಲಿ ಬಡತನ ರೇಖೆಯನ್ನು ಬದುಕುಳಿಯುವ ಮಟ್ಟಕ್ಕಿಂತಲೂ ಕೆಳ ಮಟ್ಟದಲ್ಲಿಟ್ಟಿರುವ ತರ್ಕಬದ್ಧವಲ್ಲದ ಮತ್ತು ಅಪ್ರಾಮಾಣಿಕ ನಿಲುವನ್ನು ತ್ಯಜಿಸುವಂತೆ ವಿಶ್ವ ಬ್ಯಾಂಕ್‌ಅನ್ನು ಶಿಸ್ತಿಗೊಳಪಡಿಸುವ ಅಂತರರಾಷ್ಟ್ರೀಯ ಸಂಸ್ಥೆ ಯಾವುದೂ ಇಲ್ಲ ಎಂದು ತೋರುತ್ತದೆ. ಬ್ಯಾಂಕ್ ಬಳಸುವ ಅವಾಸ್ತವಿಕ ಬಡತನ ರೇಖೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವಿಶ್ವಸಂಸ್ಥೆಯ ತೀವ್ರ ಬಡತನ ಮತ್ತು ಮಾನವ ಹಕ್ಕುಗಳ ವಿಶೇಷ ವರದಿಗಾರರಾಗಿ ನೇಮಕಗೊಂಡ ಫಿಲಿಪ್ ಆಲ್‌ಸ್ಟನ್ ಅವರ ವರದಿಯನ್ನು (2020) ಬ್ಯಾಂಕ್ ಈಗಾಗಲೇ ತಿರಸ್ಕರಿಸಿದೆ. ಲಕ್ಷಾಂತರ ಜನರನ್ನು ‘ತೀವ್ರ ಬಡತನದಿಂದ ಮೇಲೆತ್ತಲಾಗಿದೆ’ ಎಂದು ಹೇಳುವ ಮೂಲಕ ಬಡವರ ಅವಹೇಳನವನ್ನು ಬ್ಯಾಂಕ್ ಮುಂದುವರಿಸುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ವಾಸ್ತವಿಕವಾಗಿ ಹೆಚ್ಚುತ್ತಿರುವ ವೈದ್ಯಕೀಯ ಮತ್ತು ಇತರ ವೆಚ್ಚಗಳ ಸಮಸ್ಯೆಯನ್ನು ಎದುರಿಸುತ್ತಿರುವ ಹೆಚ್ಚು ಹೆಚ್ಚು ಕುಟುಂಬಗಳು ಸಾಲದ ಹೊರೆಯಿಂದ ಮತ್ತು ಪೌಷ್ಟಿಕಾಂಶದ ಇಳಿಕೆಯಿಂದ ಮುಳುಗುತ್ತಿವೆ.
ಇದನ್ನೂ ನೋಡಿ : 2026 | ನಿರಾತಂಕ ಹಗಲು, ನಿರ್ಭಯದ ರಾತ್ರಿಗಳ ಖಾತ್ರಿಯಾಗಿರಲಿ Janashakthi Media
