ಬೆಂಗಳೂರು: ಖಾತೆ ಹಂಚಿಕೆ ಬೆನ್ನಲ್ಲೇ ಸಚಿವರ ಅಸಮಾಧಾನ ಸ್ಪೋಟ ಗೊಂಡಿದೆ. ನಿರೀಕ್ಷಿತ ಖಾತೆ ಸಿಗದ ಹಿನ್ನಲೆ ಆನಂದ್ ಸಿಂಗ್ ಮತ್ತು ಎಂಟಿಬಿ ನಾಗರಾಜ್ ಬಹಿರಂಗವಾಗಿ ಅಸಂತೃಪ್ತಿ ಹೊರಹಾಕಿದ್ದಾರೆ.
ಕಳೆದ ಬಾರಿಯ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಈಗಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಖಾತೆ ಹಂಚಿಕೆಯಲ್ಲಿ ನನಗೆ ಅಸಮಾಧಾನವಿದೆ ಎಂದು ಸಚಿವ ಎಂಟಿಬಿ ನಾಗರಾಜ್ ಆಕ್ರೋಶ ಹೊರ ಹಾಕಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಎಂಟಿಬಿ, ಈ ಹಿಂದಿನ ಮುಖ್ಯಮಂತ್ರಿಗಳು ಮತ್ತು ಈಗಿನ ಮುಖ್ಯಮಂತ್ರಿಗಳು ನನಗೆ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಜನಸೇವೆ ಮಾಡುವಂತಹ ಖಾತೆ ನಿರೀಕ್ಷೆಯಲ್ಲಿ ಇರುವುದಾಗಿ ತಿಳಿಸಿದ್ದ ಎಂಟಿಬಿ ನಾಗರಾಜು ಅವರಿಗೆ ಸಿಎಂ ಪೌರಾಡಳಿತ, ಸಣ್ಣ ಕೈಗಾರಿಕೆ, ಸಾರ್ವಜನಿಕ ವಲಯ ಕೈಗಾರಿಕೆ ಇಲಾಖೆ ನೀಡಿದ್ದಾರೆ. ಆದರೆ, ಇದು ತಾವು ಬಯಸಿದ ಖಾತೆ ಅಲ್ಲ ಎಂದಿರುವ ಎಂಟಿಬಿ ನಾಗರಾಜ್, ಸಿಎಂ ನಡೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಾತೆ ಹಂಚಿಕೆಯಲ್ಲಿ ನನಗೆ ಅಸಮಾಧಾನವಿದೆ. ಮುಂದಿನ 2-3 ದಿನಗಳಲ್ಲಿ ನನ್ನ ನಿರ್ಧಾರ ತಿಳಿಸುವೆ ಎಂದು ಹೇಳಿದ್ದಾರೆ.
ಈ ಹಿಂದಿನ ಮುಖ್ಯಮಂತ್ರಿಗಳು ಮತ್ತು ಈಗಿನ ಮುಖ್ಯಮಂತ್ರಿಗಳು ನನಗೆ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಖಾತೆ ಹOಚಿಕೆಯಲ್ಲಿ ನನಗೆ ಅಸಮಾಧಾನವಿದೆ. ಮುಂದಿನ 2-3 ದಿನಗಳಲ್ಲಿ ನನ್ನ ನಿರ್ಧಾರ ತಿಳಿಸುವೆ. @BSYBJP @BSBommai @BJP4Karnataka #MTB
— N.Nagaraj (MTB) (@MtbNagaraju) August 7, 2021
ಮತ್ತೊಂದೆಡೆ ಖಾತೆ ಬಗ್ಗೆ ಆನಂದ್ ಸಿಂಗ್‌ಗೂ ತೃಪ್ತಿ ತಂದಿಲ್ಲ. ನಿರೀಕ್ಷಿಸಿದ್ದ ಖಾತೆ ಸಿಕ್ಕಿಲ್ಲವೆಂದು ಅಸಮಾಧಾನ ತೋಡಿಕೊಂಡಿದ್ದಾರೆ. ಆನಂದ್ ಸಿಂಗ್ಗೆ ಪರಿಸರ ಮತ್ತು ಪ್ರವಾಸೋದ್ಯಮ ಇಲಾಖೆ ಜವಾಬ್ದಾರಿಯನ್ನ ನೀಡಲಾಗಿದೆ. ಇದಕ್ಕೆ ಮಾಧ್ಯಮಗಳ ಮುಂದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಎಂ ಬೊಮ್ಮಾಯಿ ಮುಂದೆ ನಾನು ಇಂತಹದ್ದೇ ಖಾತೆ ಬೇಕು ಎಂದು ಬೇಡಿಕೆ ಇಟ್ಟಿದ್ದೆ. ಆದರೆ ನನ್ನ ನಿರೀಕ್ಷೆಯ ಖಾತೆಯನ್ನ ಸರ್ಕಾರ ಕೊಟ್ಟಿಲ್ಲ. ರಾತ್ರಿ ಬೆಂಗಳೂರಿಗೆ ಹೊರಟಿದ್ದೇನೆ. ಸಿಎಂ ಬೊಮ್ಮಾಯಿ ಅವರನ್ನ ಭೇಟಿ ಮಾಡಿ ಚರ್ಚೆ ಮಾಡ್ತೀನಿ. ಸರ್ಕಾರ ಯಾವ ರೀತಿ ಸ್ಪಂದಿಸುತ್ತಾ ಅಂತಾ ಕಾದು ನೋಡುತ್ತೇನೆ. ಸ್ಪಂದಿಸದೆ ಇದ್ದರೆ ನನ್ನ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದಿದ್ದಾರೆ.