ಬೆಂಗಳೂರು: ಕೆಲಸ ಕೊಡಿಸ್ತೀನಿ, ಟ್ರಾನ್ಸ್ಫರ್ ಮಾಡಿಸಿಕೊಡ್ತೀನಿ ಎಂದು ವಂಚಿಸಿದ್ದಾರೆ ಅನ್ನೋ ಆರೋಪದ ಮೇಲೆ ಸಚಿವ ಶ್ರೀರಾಮುಲು ಅವರ ಪಿಎ ರಾಜಣ್ಣ ಅವರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರನಲ್ಲಿ ಸಚಿವ ಶ್ರೀರಾಮುಲು ಮನೆಯಲ್ಲಿದ್ದ ವೇಳೆಯೇ ಸಿಸಿಬಿ ತಂಡ ಬಂಧಿಸಿದ್ದು, ರಾಜಣ್ಣ ಕೆಲಸದ ಆಮಿಷ, ಅಧಿಕಾರಿಗಳಿಗೆ ವರ್ಗಾವಣೆ ಆಮಿಷ ಒಡ್ಡಿ ಕೋಟ್ಯಾಂತರ ಹಣ ಕಬಳಿಕೆ ಮಾಡಿದ್ದರು ಎಂದು ಹೇಳಲಾಗಿದೆ. 2 ದಿನಗಳ ಹಿಂದೆ ರಾಜಣ್ಣ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ದಾಖಲಾಗಿತ್ತು. ನಿನ್ನೆ ಬೆಳಗ್ಗೆಯಿಂದ ಕಾಯ್ದ ಸಿಸಿಬಿ ಇಂದು ರಾಜಣ್ಣ ಅವರನ್ನು ಬಂಧಿಸಿದ್ದಾರೆ.
ಶ್ರೀರಾಮುಲು ಹೆಸರಿನ ಜತೆಗೆ ವಿಜಯೇಂದ್ರ ಹೆಸರುನ್ನೂ ರಾಜಣ್ಣ ದುರ್ಬಳಕೆ ಮಾಡಿಕೊಂಡಿದ್ದರು ಎಂಬ ಅರೋಪ ಕೇಳಿಬಂದಿದ್ದು, ಬಿಜೆಪಿ ನಾಯಕ ಬಿ.ವೈ.ವಿಜಯೇಂದ್ರ ದೂರಿನ ಮೇಲೆ ರಾಜಣ್ಣ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ : ಅಹಿಂದ ನಾಯಕ ಸಿದ್ದರಾಮಯ್ಯಗೆ ಅವಮಾನ ಮಾಡುವ ಕೆಲಸ ನಡೆದಿದೆ – ಸಚಿವ ಶ್ರೀರಾಮಲು
ವಿಜಯೇಂದ್ರ ದೂರು: ರಾಜಣ್ಣ ಅವರು ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಹೆಸರಲ್ಲಿಯೂ ಕೂಡ ವಂಚನೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಖುದ್ದು ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೇ ರಾಮುಲು ಪಿಎ ವಿರುದ್ಧ ದೂರು ನೀಡಿದ್ದರು ಎನ್ನಲಾಗಿದೆ.
ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಪಿಎ ಸಚಿವರ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ವಸೂಲಿ ಮಾಡಿರುವ ಆರೋಪ ಕೇಳಿಬಂದಿದೆ. ರಾಜಣ್ಣ ಅಲಿಯಾಸ್ ರಾಜು ವಿರುದ್ಧ ವಿಜಯೇಂದ್ರಗೆ ಹಲವು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ವಿಜಯೇಂದ್ರ ಟೀಂ ಖುದ್ದು ಪರಿಶೀಲನೆ ಮಾಡಿತ್ತು. ಈ ವೇಳೆ ರಾಜಣ್ಣ ಅವರ ಅಸಲಿಯತ್ತು ಬಯಲಾಗಿತ್ತು ಎನ್ನಲಾಗಿದೆ.
ನಂತರ ದೂರು ನೀಡಿದ ಬಳಿಕ ವಂಚನೆಗೆ ಸಂಬಂಧಿಸಿದ ಸಾಕ್ಷಿಗಳನ್ನ ಸಿಸಿಬಿ ಪೊಲೀಸರು ಕಲೆ ಹಾಕಿದ್ದರು. ಇನ್ನು ಹಲವು ವರ್ಷಗಳಿಂದ ಶ್ರೀರಾಮುಲು ಹಾಗೂ ರೆಡ್ಡಿ ಕುಟುಂಬದ ಜೊತೆ ರಾಜಣ್ಣ ಗುರುತಿಸಿಕೊಂಡಿದ್ದರು ಎನ್ನಲಾಗಿದೆ.
ಸಿಸಿಬಿ ಪೊಲೀಸರು ಬಂಧಿಸಲು ತೆರಳಿದ್ದಾಗ ಬಂಧನಕ್ಕೆ ಅವಕಾಶ ನೀಡದೇ ರಾಜಣ್ಣ ಬೃಹನ್ನಾಟಕವಾಡಿದ್ದಾರೆ. ಪೊಲೀಸರ ಜತೆ ವಾದ ನಡೆಸಿದ್ದಾರೆ. ಕೊನೆಗೆ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.