ವಿಜಯಪುರ: ಮೇ 2 ಶುಕ್ರುವಾರದಂದು ಶಾಸಕ ಬಸನಗೌಡ ಯತ್ನಾಳ್ ಸವಾಲು ಸ್ವೀಕರಿಸಿ ಶಾಸಕ ಸ್ಥಾನಕ್ಕೆ ಸಚಿವ ಶಿವಾನಂದ ಪಾಟೀಲ್ ರಾಜೀನಾಮೆ ಸಲ್ಲಿಸಿದ್ದಾರೆ. ಸ್ಪೀಕರ್ ಯುಟಿ ಖಾದರ್ ರಿಗೆ ಶಿವಾನಂದ ಪಾಟೀಲ್ ರಾಜೀನಾಮೆ ನೀಡಿದ್ದಾರೆ. ಹೀಗೆ ದಿಢೀರ್ ಬೆಳವಣಿಗೆ ರಾಜ್ಯದಲ್ಲಿ ನಡೆದಿದ್ದು ಭಾರೀ ಕುತೂಹಲ ಮೂಡಿಸಿದೆ.
ಬಸನಗೌಡ ಯತ್ನಾಳ್ ಕಾಂಗ್ರೆಸ್ ನಾಯಕರಿಗೆ ಸವಾಲ್ ಹಾಕಿದ್ದರು. ಬಸವನ ಬಾಗೇವಾಡಿ ರಾಜೀನಾಮೆ ನೀಡಿ ಗೆದ್ದು ತೋರಿಸಿ ಎನ್ನುವ ಸವಾಲು ಹಾಕಿದ್ದರು. ಈ ಸವಾಲನ್ನು ಶಿವಾನಂದ ಪಾಟೀಲ್ ಸ್ವೀಕಾರ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಶಿವಾನಂದ ಪಾಟೀಲ್, ‘ಆ ಕ್ಷೇತ್ರದಿಂದ ಮರು ಸ್ಪರ್ಧಿಸಲು ನಾನು ರಾಜೀನಾಮೆ ನೀಡಿದ್ದೇನೆ, ಯತ್ನಾಳ್ ಕೂಡ ರಾಜೀನಾಮೆ ನೀಡಬೇಕು. ಅವರ ರಾಜೀನಾಮೆ ಅಂಗೀಕಾರ ಆದರೆ ಮಾತ್ರ ನನ್ನ ರಾಜೀನಾಮೆ ಸ್ವೀಕರ ಮಾಡಿ’ ಎಂದು ಶಿವಾನಂದ ಪಾಟೀಲ್ ಸ್ಪೀಕರ್‌ಗೆ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳು ಮತ್ತೊಂದು ಮೇ ಹೋರಾಟಕ್ಕೆ ನಾಂದಿಯಾಗಲಿ
ಎರಡು ದಿನದ ಹಿಂದೆ ವಿಜಯಪುರದಲ್ಲಿ ಮಾತನಾಡಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಚಿವ ಶಿವಾನಂದ ಪಾಟೀಲ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ಮಾಡಿದ್ದರು. ‘ಶಿವಾನಂದ್ ಪಾಟೀಲ್ ಅವರಪ್ಪನಿಗೆ ಹುಟ್ಟಿದ್ದರೆ ನನ್ನ ವಿರುದ್ಧ ಸ್ಪರ್ಧೆ ಮಾಡಲಿ, ಅವರ ಮನೆ ಹೆಸರು ಪಾಟೀಲ್ ಅಲ್ಲ ಹಚಡದ ಎಂದು, ನಿಮ್ಮಪ್ಪ ನೀವು ಸೇರಿ ನಿಮ್ಮ ಅಡ್ಡ ಹೆಸರು ಬದಲಾಯಿಸಿಕೊಂಡಿದ್ದೀರಿ, ರಾಜಕಾರಣಕ್ಕಾಗಿ ಪಾಟೀಲ್ ಎಂದು ಮಾಡಿಕೊಂಡಿದ್ದಾರೆ’ ಎಂದು ಹೇಳಿದ್ದರು.
ಅಲ್ಲದೆ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ವಾಗ್ದಾಳಿ ಮಾಡಿದ್ದರು. ಶಿವಾನಂದ ಪಾಟೀಲ್ ಹಾಗೂ ವಿಜಯಾನಂದ ಕಾಶಪ್ಪನವರ ಒಂದು ವಾರದಲ್ಲಿ ತಮ್ಮ ಶಾಸಕತ್ವಕ್ಕೆ ರಾಜೀನಾಮೆ ನೀಡಿ, ಸಭಾಪತಿಯವರಿಂದ ರಾಜೀನಾಮೆ ಅಂಗೀಕಾರ ಮಾಡಿಕೊಂಡು ಬನ್ನಿ, ನೀವು ಪಕ್ಷೇತರರಾಗಿ ಬನ್ನಿ ನಾನು ಬರುವೆ, ಬಾಗೇವಾಡಿಯಲ್ಲೇ ಬಂದು ಮಣ್ಣು ಕೊಡುತ್ತೇನೆಂದು ಯತ್ನಾಳ್ ಸವಾಲ್ ಹಾಕಿದ್ದರು.
ವಿಜಯಪುರದಲ್ಲಿ ಶಿವಾನಂದ ಪಾಟೀಲ್ ಕಾಂಗ್ರೆಸ್‌ನಿಂದ ನಿಂತರೂ ಮುಸ್ಲಿಮರು ಮತ ಹಾಕಲ್ಲ. ಮುಸ್ಲಿಮರು ಅವರದ್ದೇ ಅಭ್ಯರ್ಥಿಗೆ ಮತ ಹಾಕುತ್ತಾರೆ. ಯಾವುದೇ ಹಿಂದೂಗಳು ಸಹ ನಿಮಗೆ ಮತ ಹಾಕಲ್ಲ. ಎಲ್ಲಾ ಹಿಂದೂಗಳು ನನಗೆ ಮತ ಹಾಕುತ್ತಾರೆ ಎಂದಿದ್ದರು ಯತ್ನಾಳ್.
ಇತ್ತೀಚೆಗೆ ನನ್ನ ವಿರುದ್ಧ ಹೋರಾಟ ಮಾಡಿದ ಒಬ್ಬನಾದರೂ ಭಾರತ್ ಮಾತಾ ಕೀ ಜೈ, ಪಾಕಿಸ್ತಾನ ಕಿ ಮುರ್ದಾಬಾದ್ ಎಂದು ಹೇಳಿದರಾ? ಇಂಡಿ ಶಾಸಕ ಸಹ ಹೋರಾಟಕ್ಕೆ ಮುಸ್ಲಿಮರನ್ನು ಕರೆದುಕೊಂಡು ಬಂದಿದ್ದರು. ವೇದಿಕೆಯಲ್ಲಿ ಕುಳಿತಿದ್ದ ಎಲ್ಲರಿಗೂ ಮುಂದಿನ ಚುನಾವಣೆಯಲ್ಲಿ ಸರಿಯಾಗಿ ಬುದ್ದಿ ಕಲಿಸುತ್ತೇನೆ. ಹಿಂದೂಗಳ ಒಂದೂ ಮತ ಬೀಳದಂತೆ ಮಾಡುತ್ತೇನೆ ಎಂದು ಯತ್ನಾಳ್ ಚಾಲೆಂಜ್ ಮಾಡಿದ್ದರು. ಈ ಸವಾಲನ್ನು ಸ್ವೀಕರಿಸಿದ ಶಿವಾನಂದ ಪಾಟೀಲ್ ಇಂದು ಸ್ಪೀಕರ್‌ಗೆ ರಾಜೀನಾಮೆ ಕೊಟ್ಟಿದ್ದಾರೆ.
ಈ ಮೂಲಕ ಅಖಾಡಕ್ಕೆ ಶಿವಾನಂದ ಪಾಟೀಲ್ ಯತ್ನಾಳ್‌ಗೆ ನೇರವಾಗಿ ಕರೆ ಕೊಟ್ಟಿದ್ದಾರೆ. ಶಿವಾನಂದ ಪಾಟೀಲ್ ರಾಜೀನಾಮೆ ಸ್ವೀಕಾರ ಆಗಬೇಕು ಅಂದರೆ ಇದೀಗ ಯತ್ನಾಳ್ ಅವರು ಕೂಡ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅಂದಾಗ ಮಾತ್ರ ಯತ್ನಾಳ್ ಮಾತಿನಲ್ಲಿ ಹೇಳುವುದು ಮಾತ್ರವಲ್ಲ ಮಾತಿನಂತೆ ನಡೆದುಕೊಂಡಂತಾಗುತ್ತದೆ.
ಹಾಗಾದರೆ ಯತ್ನಾಳ್ ರಾಜೀನಾಮೆ ನೀಡ್ತಾರಾ? ಬರೀ ಮಾತಿನ ಮೂಲಕ ಸವಾಲು ಹಾಕಿ ಸುಮ್ಮನಾಗುತ್ತಾರಾ? ಎನ್ನುವುದು ಇದೀಗ ಕೂತೂಹಲವನ್ನು ಮೂಡಿಸಿದೆ.
ಇದನ್ನೂ ನೋಡಿ: ಮೇ ದಿನದ ವಿಶೇಷ | ಕನಿಷ್ಠ ವೇತನಕ್ಕೆ ಯಾಕಿಷ್ಟು ವಿಳಂಬ – ಮೀನಾಕ್ಷಿ ಸುಂದರಂ Janashakthi Media