ಬೆಂಗಳೂರು: ರಾಜ್ಯದಲ್ಲಿ ಮತ್ತೆ ‘ಸಿ.ಡಿ’ ಬಾಂಬ್ ಮುನ್ನೆಲೆಗೆ ಬಂದಿದೆ. ಮುಖ್ಯಮಂತ್ರಿ ರೇಸ್ ನಲ್ಲಿರುವ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಈ ಆರೋಪ ಕೇಳಿ ಬಂದಿದೆ. ನಿರಾಣಿ ಬಳಿ ಸುಮಾರು 500 ಸಿ.ಡಿಗಳಿವೆ ಎಂದು ಸಾಮಾಜಿಕ ಹೋರಾಟಗಾರ ಅಲಂ ಪಾಷಾ ಗಂಭೀರ ಆರೋಪ ಮಾಡಿದ್ದಾರೆ.
ದಿ ಕ್ಯಾಪಿಟಲ್ ಹೋಟೆಲ್ನಲ್ಲಿ ಇಂದು ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅಲಂ ಪಾಷಾ, ಮುರುಗೇಶ್ ನಿರಾಣಿ ಬಳಿ ಇರುವ ಸಿಡಿಗಳು ಯಾರದ್ದು ಬೇಕಾದರೂ ಆಗಿರಬಹುದು. ಇವರಿಗೆ ಈಗ ಆರೂವರೆ ಕೋಟಿ ಜನರ ಬೆಂಬಲ ಸಿಕ್ಕಿಬಿಟ್ಟರೆ ಈ ಸಿಡಿಗಳ ಸಂಖ್ಯೆ 50 ಲಕ್ಷ ಕೂಡ ಆಗಬಹುದು ಎಂದು ಲೇವಡಿ ಮಾಡಿದ್ಧಾರೆ. ರಾಜ್ಯದ ಕೆಲ ಸಚಿವರು ಮತ್ತು ಶಾಸಕರು ಸಿಡಿ ಭಯದಿಂದ ಕೋರ್ಟ್ನಿಂದ ಮಾಧ್ಯಮ ಪ್ರಸಾರಕ್ಕೆ ತಡೆ ತಂದಿರುವ ವಿಚಾರವನ್ನ ಪ್ರಸ್ತಾಪಿಸಿದ ಅವರು ಮುರುಗೇಶ್ ನಿರಾಣಿ ಬಳಿ ಸುಮಾರು 500 ಸಿಡಿಗಳು ಇವೆ ಎಂದು ಆರೋಪಿಸಿದ್ದಾರೆ.
ಮುರುಗೇಶ್ ನಿರಾಣಿ ಒಬ್ಬ ಸಿಡಿ ಬಾಬ ಎಂದು ಹೇಳಿರುವ ಆಲಂ ಪಾಷ, ಸಾಕಷ್ಟು ಸೆಕ್ಸ್ ಸಿಡಿಗಳು ಮುರುಗೇಶ್ ನಿರಾಣಿ ಬಳಿ ಇದೆ. ರಾಜಕಾರಣಿ ಮತ್ತು ಪ್ರಮುಖ ನಾಯಕರ ಸೆಕ್ಸ್ ಸಿಡಿಗಳು ನಿರಾಣಿ ಬಳಿ ಇದೆ ಎಂದು ಹೇಳಿದ್ದಾರೆ.
ಪ್ರಭಾವ ಬಳಸಿ ಅಕ್ರಮ : ಮುಗುರೇಶ್ ನಿರಾಣಿ ತಮ್ಮ ಪ್ರಭಾವ ಬಳಸಿ ಅನೇಕ ಕಡೆ ಅಕ್ರಮ ಎಸಗಿದ್ದಾರೆ. ಬ್ಯಾಂಕ್ ಆಫ್ ಇಂಡಿಯಾದ ಶಹಾಪುರ ಶಾಖೆಯಲ್ಲಿ ನಕಲಿ ಹೆಸರು ಬಳಸಿ ಸಾಲ ಪಡೆದಿದ್ದಾರೆ. ಸಣ್ಣ ರೈತರ ಹೆಸರಲ್ಲಿ ಬೆಳೆ ಸಾಲವನ್ನು ಪಡೆದು ಬಳಿಕ ಆ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ನಕಲಿ ಹೆಸರು, ಖಾತೆಗಳ ಮೂಲಕ ಶ್ರೀ ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರಿ ಲಿಮಿಟೆಡ್ನ ಲ್ಲಿ ಹೂಡಿಕೆ ಮಾಡಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ರೈತರಿಗೆ ಸಿಗುವ ಸಾಲವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಉತ್ತರ ಕರ್ನಾಟಕ ಭಾಗದ ಅಮಾಯಕ ರೈತರಿಗೆ ಮುರುಗೇಶ್ ನಿರಾಣಿ ವಂಚಿಸಿದ್ದಾರೆ. ಸಕ್ಕರೆ ಕಾರ್ಖಾನೆ ಮತ್ತು ರೈತರ ಹೆಸರಲ್ಲಿ ವಂಚನೆ ಆಗುತ್ತಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟ ಆಗುತ್ತಿದೆ. ನಿರಾಣಿ ಒಡೆತನದ ಮುಧೋಳದ ಸಕ್ಕರೆ ಕಾರ್ಕಾನೆ ಅಕ್ರಮವಾಗಿ ಸ್ಥಾಪನೆಯಾಗಿದೆ. ನಿರಾಣಿ ಶುಗರ್ಸ್ನಲ್ಲಿ ಬಾಯ್ಲರ್ ಸ್ಫೋಟಗೊಂಡು ನಾಲ್ವರು ಸಾವನ್ನಪ್ಪಿದ್ದರು. ಇದರ ಬಗ್ಗೆ ಏನು ಕ್ರಮ ಕೈಗೊಳ್ಳಲಾಯಿತು ಎಂದು ಸಚಿವರಿಗೆ ಅಲಂ ಪಾಷ ಪ್ರಶ್ನೆ ಮಾಡಿದ್ಧಾರೆ.