ರಾಮನಗರ: ಬೆಳೆ ಪರಿಹಾರ ಆನ್ಲೈನ್ ಮೂಲಕವೇ ರೈತರಿಗೆ ತಲುಪಲಿದ್ದು, ಅವರ ಮಾಹಿತಿ ಬಿಟ್ಟುಹೋದರೆ ಮ್ಯಾನ್ಯುವಲ್ ಆಗಿ ಅವರಿಗೆ ಪರಿಹಾರ ನೀಡಲು ಸಾಧ್ಯವಿಲ್ಲ. ಹೀಗಾಗಿ ಅಧಿಕಾರಿಗಳು ಉಡಾಫೆ ಬಿಟ್ಟು ಶೇ.100 ರಷ್ಟು ಎಲ್ಲಾ ರೈತರ ಬೆಳೆ ಸಮೀಕ್ಷೆಯ ಮಾಹಿತಿಯನ್ನು ಒಂದು ವಾರದಲ್ಲಿ ‘ಫ್ರೂಟ್ಸ್’ ತಂತ್ರಾಂಶದಲ್ಲಿ ನಮೂದಿಸಿ ಅವರಿಗೆ ನ್ಯಾಯಯುತ ಪರಿಹಾರ ತಲುಪಿಸಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.
ರಾಮನಗರದಲ್ಲಿ ನವೆಂಬರ್-15 ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಈ ವರ್ಷ ಇತಿಹಾಸ ಕಾಣದ ಬರಕ್ಕೆ ತುತ್ತಾಗಿದೆ. ಮಳೆ ಇಲ್ಲದ ಕಾರಣ ರೈತರು ಪರಿತಪಿಸುವಂತಾಗಿದೆ. ಬೆಳೆ ಕೈಸೇರದೆ ಸಂಕಷ್ಟಕ್ಕೀಡಾಗಿದ್ದಾರೆ ಇಂತಹ ಸಂದರ್ಭದಲ್ಲಿ ನಾವು ರೈತರ ಪರ ನಿಲ್ಲಬೇಕಾಗಿದೆ. ಹೀಗಾಗಿ ರೈತರಿಗೆ ನ್ಯಾಯಯುತ ಪರಿಹಾರ ತಲುಪಿಸಲು ಬೆಳೆ ಸಮೀಕ್ಷೆ ಅಗತ್ಯವಿದೆ ಎಂದರು.
ಇದನ್ನೂ ಓದಿ:120 ತಾಲ್ಲೂಕುಗಳಲ್ಲಿ ಮಳೆ ಕೊರತೆ :ವರದಿ ನೀಡಲು ಸಚಿವ ಕೃಷ್ಣ ಬೈರೇಗೌಡ ಸೂಚನೆ
ರಾಮನಗರದಲ್ಲಿ 242 ಗ್ರಾಮ ಆಡಳಿತ ಅಧಿಕಾರಿಗಳ ವೃತ್ತ ಇದೆ. ಆದರೆ, ಈವರೆಗೆ ಸಂಪೂರ್ಣ ಬೆಳೆ ಸಮೀಕ್ಷೆ ಆಗಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ಅನೇಕ ರೈತರಿಗೆ ಅನ್ಯಾಯವಾಗುತ್ತದೆ ಎಂದು ಕಿಡಿಕಾರಿದ ಸಚಿವರು, ಮುಂದಿನ ಒಂದು ವಾರದಲ್ಲಿ ಬೆಳೆ ಸಮೀಕ್ಷೆ ನಡೆಸಿ ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿಸಬೇಕು ಎಂದು ಸಮಯದ ಗಡುವು ನೀಡಿದರು.
ಕುಡಿಯುವ ನೀರು ತಕ್ಷಣ ಪೂರೈಸಿ:
ರಾಮನಗರ ಭಾಗದಲ್ಲಿ ಎಲ್ಲೇ ಕುಡಿಯುವ ನೀರಿನ ಸಮಸ್ಯೆ ಉಂಟಾದರೂ ಖಾಸಗಿ ಟ್ಯಾಂಕರ್ ಮೂಲಕ ನೀರು ಪೂರೈಸಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸೂಚಿಸಿದರು.
ಈ ವರ್ಷ ಬರಗಾಲ ಎದುರಾಗಿದೆ. ಮುಂದಿನ ಬೇಸಿಗೆ ಅಥವಾ ಅದಕ್ಕೂ ಮುನ್ನವೇ ರಾಮನಗರ ಭಾಗದ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ. ಅಧಿಕಾರಿಗಳು ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆ ಎಂದು ಸರ್ವೆ ನಡೆಸಿ ನೀರಿನ ಸಮಸ್ಯೆ ಕಂಡುಬರುವ ಕಡೆಗಳಲ್ಲಿ ಖಾಸಗಿ ಟ್ಯಾಂಕರ್ ಮೂಲಕ ನೀರನ್ನು ಪೂರೈಸಿ. ಯಾವ ಭಾಗದಲ್ಲೂ ಸಾರ್ವಜನಿಕರು ನೀರಿನ ಸಮಸ್ಯೆ ಎದುರಿಸದಂತೆ ನೋಡಿಕೊಳ್ಳಿ, ಈ ಖರ್ಚಿಗೆ ಜಿಲ್ಲಾಧಿಕಾರಿಗಳ ಖಾತೆಯಿಂದ ಎಸ್ ಡಿ ಆರ್ ಎಫ್ ಹಣವನ್ನು ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.
ನರೇಗಾ ಕೆಲಸದ ದಿನ 150 ದಿನಕ್ಕೆ ಏರಿಕೆ!
ಸಭೆಯಲ್ಲಿ ನರೇಗಾ ಕೆಲಸದ ದಿನದ ಏರಿಕೆಯ ಬಗ್ಗೆಯೂ ಚರ್ಚೆ ನಡೆಯಿತು. ಈ ಬಗ್ಗೆ ಗಮನ ಸೆಳೆದ ಸಚಿವ ಕೃಷ್ಣ ಬೈರೇಗೌಡ ಅವರು, “ರಾಜ್ಯದಲ್ಲಿ ಈಗಾಗಲೇ ಬರ ಘೋಷಿಸಲಾಗಿದೆ. ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ಬರ ಘೋಷಿಸಿದ ತಕ್ಷಣ ನರೇಗಾ ಕೆಲಸದ ದಿನ 100 ರಿಂದ 150 ದಿನಕ್ಕೆ ಏರಿಕೆಯಾಗುತ್ತದೆ. ಈಗಾಗಲೇ ಈ ಬಗ್ಗೆ ಕೇಂದ್ರಕ್ಕೆ ಪತ್ರವನ್ನೂ ಬರೆಯಲಾಗಿದೆ. ಹೀಗಾಗಿ ಯಾವುದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಈ ಬಗ್ಗೆ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ” ತಿಳಿಸಿದರು.
ಮುಂದುವರೆದು, “ರಾಜ್ಯದಲ್ಲಿ 3 ಲಕ್ಷ ನರೇಗಾ ಕಾರ್ಡುದಾರರ ಕೆಲಸದ ಅವಧಿ ಈಗಾಗಲೇ 80 ದಿನ ದಾಟಿದೆ. ಒಂದು ವೇಳೆ 100 ದಿನ ದಾಟಿದ್ದರೆ ಅಂತವರಿಗೆ ಮತ್ತೆ ಕೆಲಸದ ದಿನ ವಿಸ್ತರಿಸುವುದು ಸಾಧ್ಯವಿಲ್ಲ. ಹೀಗಾಗಿ ಅಧಿಕಾರಿಗಳು ಈ ಬಗ್ಗೆ ನಿಗಾ ವಹಿಸಬೇಕು, ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳಬೇಕು” ಎಂದು ಸೂಚಿಸಿದರು.
ಇದನ್ನೂ ಓದಿ:ರಾಜ್ಯದಲ್ಲಿ ಬರದಿಂದ 42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ: ಸಚಿವ ಕೃಷ್ಣ ಬೈರೇಗೌಡ
ಬಗರ್ ಹುಕುಂ ವಿಲೇವಾರಿಗೆ ಆರು ತಿಂಗಳು ಗಡುವು:
ವಿಲೇವಾರಿಯಾಗದ ಬಗರ್ ಹುಕುಂ ಅರ್ಜಿಗಳ ಬಗ್ಗೆ ಗಮನ ಸೆಳೆದ ಸಚಿವ ಕೃಷ್ಣ ಬೈರೇಗೌಡ ಅವರು, “ನಮೂನೆ 50, 53, 57ಕ್ಕೆ ಸಂಬಂಧಿಸಿದಂತೆ ಅಕ್ರಮ-ಸಕ್ರಮಗೊಳಿಸಿ ಸಾಗುವಳಿ ಚೀಟಿ ನೀಡಲು ಕೋರಿ ರಾಮನಗರದಲ್ಲಿ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿವೆ. ನಮೂನೆ 57ರ ಅಡಿಯಲ್ಲೇ ಸುಮಾರು 27,000 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ ಈವರೆಗೆ 10,000 ಅರ್ಜಿಗಳು ಮಾತ್ರ ವಿಲೇವಾರಿಯಾಗಿದೆ. ಹೀಗಾಗಿ ರೈತರು ದಿನಂಪ್ರತಿ ಸರ್ಕಾರಿ ಕಚೇರಿಗಳಿಗೆ ಅಲೆಯುವಂತಾಗಿದೆ. ಇದು ಸರಿಯಲ್ಲ. ಹೀಗಾಗಿ ಈ ಎಲ್ಲಾ ಅರ್ಜಿಗಳನ್ನು ಮುಂದಿನ 6 ತಿಂಗಳಲ್ಲಿ ಬಾಕಿ ಉಳಿಸದಂತೆ ವಿಲೇವಾರಿಗೊಳಿಸಬೇಕು, ಅರ್ಹರಿಗೆ ಸಾಗುವಳಿ ಚೀಟಿ ನೀಡಬೇಕು” ಎಂದು ಹೇಳಿದರು.
ಮುಂದುವರೆದು, “ಬಗರ್ ಹುಕುಂ ಅರ್ಜಿ ವಿಲೇವಾರಿ ಸಂದರ್ಭದಲ್ಲಿ ಅಧಿಕಾರಿಗಳು ಯಾವುದೇ ಪ್ರಭಾವಿಗಳ ಅಥವಾ ರಾಜಕೀಯ ಪಕ್ಷದ ನಾಯಕರಿಗೆ ಅನುಕೂಲವಾಗುವಂತೆ ವರ್ತಿಸಬಾರದು, ಬದಲಾಗಿ ಬಡ ಜನರಿಗೆ ಮತ್ತು ಅರ್ಹರಿಗೆ ನ್ಯಾಯ ಒದಗಿಸಲು ಬದ್ಧರಾಗಿರಬೇಕು. ನಿಜಕ್ಕೂ ಉಳುಮೆಯಲ್ಲಿ ತೊಡಗಿರುವ ರೈತರಿಗೆ ಮಾತ್ರ ಸಾಗುವಳಿ ಚೀಟಿ ನೀಡಬೇಕು. ಆದರೆ, ಬಗರ್ ಹುಕುಂ ಅಡಿಯಲ್ಲಿ ಗೋಮಾಳ ಜಮೀನನ್ನು ನೀಡಲು ಸಾಧ್ಯವಿಲ್ಲದ ಕಾರಣ ಅಧಿಕಾರಿಗಳು ಈಬಗ್ಗೆಯೂ ಎಚ್ಚರಿಕೆವಹಿಸಬೇಕು” ಎಂದು ಅವರು ತಾಕೀತು ಮಾಡಿದರು.
ಬಗರ್ ಹುಕುಂ ಅರ್ಜಿ ವಿಲೇವಾರಿಗೆ ಆ್ಯಪ್:ನಮೂನೆ 50, 53, 57ರ ಅಕ್ರಮ ಸಕ್ರಮ ಯೋಜನೆಯಡಿ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿರುವವರಿಗೂ ಸಹ ಸಾಗುವಳಿ ಚೀಟಿ ನೀಡುವುದು ಅಸಾಧ್ಯ. ಅಲ್ಲದೆ, ಸಾವಿರಾರು ಎಕರೆ ಸರ್ಕಾರಿ ಭೂಮಿ ಅಕ್ರಮ ಸಾಗುವಳಿದಾರರ ಪಾಲಾಗಿದ್ದು, ಪ್ರತಿಯೊಂದು ಭಾಗಕ್ಕೂ ಅಧಿಕಾರಿಗಳೇ ನೇರ ಹೋಗಿ ಕೃಷಿ ನಡೆಯುತ್ತಿದೆಯೇ? ಎಂದು ಪರಿಶೀಲಿಸುವುದು ಸಾಧ್ಯವಿಲ್ಲ.
ಹೀಗಾಗಿ ಬಗರ್ ಹುಕುಂ ತಂತ್ರಾಶದ ಮೂಲಕ ಅಕ್ರಮ ಸಾಗುವಳಿ ಭೂಮಿಯಲ್ಲಿ ಕೃಷಿ ಅಥವಾ ಇನ್ಯಾವುದೇ ಚಟುವಟಿಕೆ ಬಗ್ಗೆ ಸ್ಯಾಟಲೈಟ್ ಇಮೇಜ್ ಮೂಲಕ ಮಾಹಿತಿ ಪಡೆದು ಅರ್ಜಿ ವಿಲೇವಾರಿ ಮಾಡುವುದು ನ್ಯಾಯಸಮ್ಮತವಾಗಲಿದೆ. ಅಲ್ಲದೆ, ಶೀಘ್ರ ಪ್ರಕ್ರಿಯೆಗೂ ಈ ಆ್ಯಪ್ ಸಹಕಾರಿಯಾಗಲಿದೆ. ಶೀಘ್ರದಲ್ಲೇ ಈ ಆ್ಯಪ್ ಅಧಿಕಾರಿಗಳ ಕೈಸೇರಲಿದೆ. ಈ ಆ್ಯಪ್ ಸಹಾಯದೊಂದಿಗೆ ಅಧಿಕಾರಿಗಳು ತ್ವರಿತಗತಿಯಲ್ಲಿ ಬಹರ್ ಹುಕುಂ ಅರ್ಜಿ ವಿಲೇವಾರಿಗೊಳಿಸಬಹುದು. ಅಲ್ಲದೆ, ಅರ್ಜಿ ವಿಲೇವಾರಿಯಾದ ನಂತರ ಅರ್ಹ ಫಲಾನುಭವಿಗಳಿಗೆ ಇ-ಸಾಗುವಳಿ ಚೀಟಿಯನ್ನೂ ತಂತ್ರಾಂಶದ ಮೂಲಕವೇ ಒದಗಿಸಬಹುದು. ಕಾವೇರಿ 2.0 ಮೂಲಕ ನೋಂದಣಿ ಮಾಡಿಸಿಕೊಟ್ಟರೆ ಜನರಿಗೂ ಅನುಕೂಲವಾಗಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ವಿಡಿಯೋ ನೋಡಿ:ರಾಜ್ಯ ಮಟ್ಟದ ದಲಿತರ ಬೃಹತ್ ಶೃಂಗಸಭೆ