ವಜಾಗೊಂಡಿದ್ದ 4200 ಸಾರಿಗೆ ನೌಕರರು ಮರು ನೇಮಕಕ್ಕೆ ಆದೇಶ

ಬೆಂಗಳೂರು: ಕೆಲವು ತಿಂಗಳುಗಳ ಹಿಂದೆ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರದ ಸಂದರ್ಭದಲ್ಲಿ ವಜಾಗೊಂಡಿದ್ದ ನೌಕರರನ್ನು ಮರು ನೇಮಕಕ್ಕೆ ಸರ್ಕಾರ  ಆದೇಶ ಹೊರಡಿಸಿದೆ. ಸರಿಸುಮಾರು 4,200 ಸಾರಿಗೆ ನೌಕರರನ್ನು ವಜಾ ಮಾಡಲಾಗಿತ್ತು.

ಈ ಕುರಿತು ಸಾರಿಗೆ ಸಚಿವ ಬಿ.ಶ್ರೀರಾಮುಲು ಮಾತನಾಡಿ ವಜಾಗೊಂಡಿದ್ದ ಅಷ್ಟೂ ಸಾರಿಗೆ ನೌಕರರನ್ನು ಮರು ನೇಮಕ ಮಾಡಲು ಸರ್ಕಾರ ಆದೇಶ ನೀಡಿದ್ದು, ಸಾರಿಗೆ ಯೂನಿಯನ್ ನಾಯಕರ ಜೊತೆ ಚರ್ಚೆ ಮಾಡಲಾಗಿದೆ. 12 ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದರು. ಅವುಗಳ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ. ಯಾವುದೇ ತೊಂದರೆಗಳು ಎದುರಾಗುವುದಿಲ್ಲ ಎಂದರು.

ಇದನ್ನು ಓದಿ: ಮಂಡಳಿಯ ಭ್ರಷ್ಟತೆ ಖಂಡಿಸಿ-ಸಮರ್ಪಕ ನೆರವಿಗಾಗಿ ಕಟ್ಟಡ ಕಾರ್ಮಿಕರ ಪ್ರತಿಭಟನೆ

ಕಳೆದ ಸಾರಿಗೆ ಮುಷ್ಕರದ ಸಮಯದಲ್ಲಿ 4,200 ನೌಕರರನ್ನು ನಿಗಮಗಳು ವಜಾಗೊಳಿಸಿತ್ತು. ಮರು ನೇಮಕಕ್ಕಾಗಿ ಸಾರಿಗೆ ನೌಕರರ ಯೂನಿಯನ್ ಬೇಡಿಕೆ ಇಟ್ಟಿತ್ತು. ನೆನ್ನೆ ನೌಕರರು ಪ್ರತಿಭಟನೆ ನಡೆಸುವ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದ್ದರು. ಸಚಿವರು ಎಲ್ಲಾ ನೌಕರರ ಯೂನಿಯನ್ ಮುಖಂಡರನ್ನು ಕರೆಸಿ ಮಾತುಕತೆ ನಡೆಸಿದರು. ಸಾರಿಗೆ ನೌಕರರ ಮುಖಂಡರಾದ ಅನಂತ ಸುಬ್ಬಾರಾವ್, ಸಿಐಟಿಯು ಹೆಚ್‌.ಡಿ.ರೇವಪ್ಪ, ಹೆಚ್‌.ಎಸ್‌.ಮಂಜುನಾಥ್, ಪ್ರಕಾಶ್ ಕೆ. ಸೇರಿ ಹಲವು ಮುಖಂಡರ ಜೊತೆ ಚರ್ಚಿಸಿದರು.

ವೇತನ ತಾರತಮ್ಯ ಬಗ್ಗೆಯೂ ಸಾರಿಗೆ ನೌಕರರ ಬೇಡಿಕೆ ಇಟ್ಟಿದ್ದರು. ಮುಖ್ಯಮಂತ್ರಿಗಳೊಂದಿಗೆ ಇದರ ಬಗ್ಗೆ ಮಾತನಾಡುವುದಾಗಿ ಸಚಿವರು ತಿಳಿಸಿದರು.

ಶಾಲಾ, ಕಾಲೇಜಿಗೆ ಹೋಗುವುದಕ್ಕೆ ಮಕ್ಕಳಿಗೆ ವಿಶೇಷ ಬಸ್ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ ಸಾರಿಗೆ ಸಚಿವ ಶ್ರೀರಾಮುಲು ಅವರು ಡಿಪೋಗಳಲ್ಲಿ ಕೆಲಸ ಮಾಡುವ ಸಾರಿಗೆ ನೌಕರರಿಗೆ ಕಿರುಕುಳ, ಸಾರಿಗೆ ನೌಕರರ ಎಲ್ಲಾ ಸಮಸ್ಯೆ, ಬೇಡಿಕೆಗಳನ್ನ ಬಗೆಹರಿಸುತ್ತೇವೆ. ಸ್ವತಃ ನಾನೇ ಡಿಪೋಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದರು.

Donate Janashakthi Media

Leave a Reply

Your email address will not be published. Required fields are marked *