ಖನಿಜಗಳು ಮತ್ತು ಸಾಮ್ರಾಜ್ಯಶಾಹಿ

ಬೂರ್ಜ್ವಾ ಅರ್ಥಶಾಸ್ತ್ರವು ಸಾಮ್ರಾಜ್ಯಶಾಹಿ ಎಂಬುದು ಇಲ್ಲ ಎಂದು ವಾದಿಸುತ್ತಿದ್ದರೂ, ಬಂಡವಾಳಶಾಹಿಯು ಈಗಲೂ ಕಚ್ಚಾ ವಸ್ತುಗಳ, ಮುಖ್ಯವಾಗಿ ನೈಸರ್ಗಿಕ ಸಂಪನ್ಮೂಲಗಳ ಪೂರೈಕೆಯನ್ನು ನಿರಂತರವಾಗಿ ಮತ್ತು ಖಚಿತವಾಗಿ ಪಡೆಯಲು ತನ್ನಹಿಂದಿನ ವಸಾಹತುಗಳ ಮೇಲೆ ಸಾಮ್ರಾಜ್ಯಶಾಹೀ ಪ್ರಾಬಲ್ಯ ಹೇರಲು ಮುಂದಾಗುತ್ತಿದೆ. ಜಾಗತಿಕ ದಕ್ಷಿಣದ ದೇಶಗಳ ಮೇಲೆ ಹೇರಿದ ನವ ಉದಾರವಾದಿ ಆಳ್ವಿಕೆಯಡಿಯಲ್ಲಿ ಹಲವೆಡೆಗಳಲ್ಲಿ ಅವುಗಳ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ನಿಯಂತ್ರಣವು ಮತ್ತೆ ಮೆಟ್ರೊಪಾಲಿಟನ್ ಬಂಡವಾಳಕ್ಕೆ ದಕ್ಕಿದೆ. ಆದರೆ, ನವ ಉದಾರವಾದಿ ವ್ಯವಸ್ಥೆಯು ಬಿಕ್ಕಟ್ಟಿಗೆ ಸಿಲುಕಿರುವ ಪ್ರಸಕ್ತ ಸನ್ನಿವೇಶದಲ್ಲಿ ಖನಿಜಗಳೂ ಸೇರಿದಂತೆ ತಮ್ಮ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ನಿಯಂತ್ರಣವನ್ನು ಮರು ಸ್ವಾಧೀನಪಡಿಸಿಕೊಳ್ಳುವ ಈ ದೇಶಗಳ ಹೋರಾಟವು ಮುಂಬರುವ ದಿನಗಳಲ್ಲಿ ಹೆಚ್ಚು ಬಲಗೊಳ್ಳುತ್ತದೆ. ಹೀಗಾಗಿ ಬಂಡವಾಳಶಾಹಿಯ ಬಿಕ್ಕಟ್ಟು ಸಾಮ್ರಾಜ್ಯಶಾಹಿಯನ್ನು ಇನ್ನೂ ಕಷ್ಟಕ್ಕೆ ಈಡು ಮಾಡುತ್ತದೆ, ಮತ್ತು ಅದರಿಂದಾಗಿ ಅದು ಇನ್ನಷ್ಟು ದುಷ್ಟತನಕ್ಕೂ ಇಳಿಯಬಹುದು.

-ಪ್ರೊ. ಪ್ರಭಾತ್ ಪಟ್ನಾಯಕ್

-ಅನು: ಕೆ.ಎಂ. ನಾಗರಾಜ್

ಜಗತ್ತಿನಲ್ಲಿ ಕೈಗಾರಿಕಾ ಬಂಡವಾಳಶಾಹಿಯನ್ನು ಹುಟ್ಟುಹಾಕಿದ ಕೈಗಾರಿಕಾ ಕ್ರಾಂತಿಯು ಮೊಟ್ಟ ಮೊದಲಿಗೆ ಬ್ರಿಟನ್‌ನಲ್ಲಿ ಹತ್ತಿ ಜವಳಿ ಯಂತ್ರಗಳ ಆವಿಷ್ಕಾರದೊಂದಿಗೆ ಆರಂಭಗೊಂಡಿತು. ಆದರೆ, ಬ್ರಿಟನ್ ಅಥವಾ ಉತ್ತರ ಯುರೋಪಿನ ಯಾವುದೇ ದೇಶವು ಕಚ್ಚಾ ಹತ್ತಿಯನ್ನು ಬೆಳೆಯುವುದು ಸಾಧ್ಯವಾಗಲಿಲ್ಲ. ವಿಷಯವನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ಕೈಗಾರಿಕಾ ಬಂಡವಾಳಶಾಹಿಯು ಅಸ್ತಿತ್ವಕ್ಕೆ ಬರುವುದೇ ಈ ಮೆಟ್ರೊಪಾಲಿಟನ್ (ಮುಂದುವರೆದಬಂಡವಾಳಶಾಹಿ) ದೇಶಗಳು ಕಚ್ಚಾ ವಸ್ತುಗಳು ಎಲ್ಲೆಲ್ಲಿ ಉತ್ಪಾದನೆಯಾಗುತ್ತವೋ ಅಲ್ಲಿಂದ ನಿರಂತರವಾಗಿ ಪೂರೈಕೆಯಾಗುವುದರ ಮೇಲೆ ಅವಲಂಬಿತವಾಗಿತ್ತು.

ಅಂದಿನಿಂದ ಇಂದಿನವರೆಗೆ ಈ ಪರಿಸ್ಥಿತಿ ಎಳ್ಳಷ್ಟೂ ಸಹ ಬದಲಾಗಿಲ್ಲ. ಮೆಟ್ರೊಪಾಲಿಟನ್ ಬಂಡವಾಳಶಾಹಿಯ ಉತ್ಪನ್ನಗಳ ವೈವಿಧ್ಯವು ಕಾಲ ಕ್ರಮೇಣ ಬದಲಾಗಿದೆ. ಹಳೆಯ ಉತ್ಪನ್ನಗಳಸ್ಥಾನದಲ್ಲಿ ನವ ನವೀನ ಉತ್ಪನ್ನಗಳು ಬಂದಿವೆ ಮತ್ತು ಅದರೊಂದಿಗೇ ಅವಕ್ಕೆ ಬೇಕಾದ ಕಚ್ಚಾ ವಸ್ತುಗಳ ಪಟ್ಟಿಯೂ ಬದಲಾಗಿದೆ. ಆದರೆ, ಕಚ್ಚಾ ವಸ್ತುಗಳ ಗಣನೀಯ ಪ್ರಮಾಣವು ಮೆಟ್ರೊಪಾಲಿಟನ್ ಬಂಡವಾಳಶಾಹಿಯ ವ್ಯಾಪ್ತಿಯ ಹೊರಗಿದೆ. ಹಾಗಾಗಿ, ಈ ಕಚ್ಚಾ ವಸ್ತುಗಳ ಪೂರೈಕೆಯನ್ನು ಅದು ನಿರಂತರವಾಗಿ ಮತ್ತು ಖಚಿತವಾಗಿ ಪಡೆಯುವುದು ಅಗತ್ಯವಾಗುತ್ತದೆ. ಈ ಅಗತ್ಯವೇ ಮೆಟ್ರೊಪಾಲಿಟನ್ ಬಂಡವಾಳಶಾಹಿಗೆ ತನ್ನ ವ್ಯಾಪಿಯಲ್ಲಿರದ “ಹೊರಗಿನ” ಜಗತ್ತಿನ ಮೇಲೆ ಸಾಮ್ರಾಜ್ಯಶಾಹಿ ನಿಯಂತ್ರಣವನ್ನು ಹೊಂದಲು ಒಂದು ಪ್ರೇರಣೆಯನ್ನು ಒದಗಿಸುತ್ತದೆ.

ಇದನ್ನೂ ಓದಿ: ಛತ್ತೀಸ್ಗಢ ಕ್ರೈಸ್ತ ಸನ್ಯಾಸಿಯರ ಬಂಧನ: ಆರೆಸ್ಸೆಸ್ ನ ವಿಷಪೂರಿತ ‘ಹಿಂದುತ್ವ ರಾಷ್ಟ್ರ’ ಕಾರ್ಯಸೂಚಿ

ಸಾಂಪ್ರದಾಯಿಕ ಬೂರ್ಜ್ವಾ ಅರ್ಥಶಾಸ್ತ್ರವು ಕಚ್ಚಾ ವಸ್ತುಗಳು ರೂಢಿಯಲ್ಲಿರುವ ಸರಕು ವಿನಿಮಯ ವ್ಯವಹಾರದ ಮೂಲಕ ಮೆಟ್ರೊಪಾಲಿಟನ್ ದೇಶಗಳಿಗೆ ಸರಬರಾಜಾಗುತ್ತವೆ ಎಂಬಂತೆ ಬಿಂಬಿಸುತ್ತದೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಬೂರ್ಜ್ವಾ ಅರ್ಥಶಾಸ್ತ್ರವು ಈ ಕಚ್ಚಾ ವಸ್ತುಗಳನ್ನು ಅವು ಈಗಾಗಲೇ ಉತ್ಪಾದಿಸಿದ ಸರಕುಗಳು ಮತ್ತು ಬೆಲೆ ವ್ಯತ್ಯಾಸಗಳ ಮೂಲಕ ಅವುಗಳಿಗೆ ಇರುವ ಬೇಡಿಕೆಯನ್ನು ಪೂರೈಸಲು ಸಾಕಷ್ಟು ಪ್ರಮಾಣದಲ್ಲಿ ಅವುಗಳ ಉತ್ಪಾದನೆಯನ್ನು ಖಚಿತಪಡಿಸಿಕೊಳ್ಳಲಾಗುತ್ತದೆ ಎಂದು ಭಾವಿಸುತ್ತದೆ. ಹಾಗಾಗಿ, ಅದರ ಪ್ರಕಾರ, ಕಚ್ಚಾ ವಸ್ತುಗಳ ಮೇಲೆ ಸಾಮ್ರಾಜ್ಯಶಾಹಿ ನಿಯಂತ್ರಣ ಅಗತ್ಯವಾಗುವುದಿಲ್ಲ.

ಆದರೆ ಈ ತರ್ಕವು ಎಲ್ಲ ಕಚ್ಚಾ ವಸ್ತುಗಳ ಇಡೀ ಉತ್ಪಾದನೆಯನ್ನು ಈಗಾಗಲೇ ಬಂಡವಾಳಶಾಹಿ ಪರಿಸ್ಥಿತಿಗಳಲ್ಲಿ ಮಾಡಲಾಗುತ್ತಿದೆ, ಬಹುಶಃ ಕಚ್ಚಾ ವಸ್ತುಗಳನ್ನು ಸಂಸ್ಕರಿಸುವ ಮೆಟ್ರೊಪಾಲಿಟನ್ ಕಂಪನಿಗಳ ಮೂಲಕ, ಎಂದು ಊಹಿಸಿಕೊಳ್ಳುತ್ತದೆ. ಹೀಗೆ, ಸಾಮ್ರಾಜ್ಯಶಾಹಿಯ ಅಗತ್ಯವನ್ನು, ಈ ತರ್ಕವು, ಸಾಮ್ರಾಜ್ಯಶಾಹಿಯು ಈಗಾಗಲೇ ಜಗತ್ತಿನಲ್ಲಿ ಹರಡಿದೆ ಎಂದು ಊಹಿಸಿಕೊಳ್ಳುವ ಮೂಲಕ ನಿರಾಕರಿಸುತ್ತದೆ. ಅಥವಾ, ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಈ ಮೆಟ್ರೊಪಾಲಿಟನ್ ಅಥವ ಮುಂದುವರೆದ ಬಂಡವಾಳಶಾಹಿ ದೇಶಗಳಿಗೂ ಮತ್ತು “ಹೊರಗಿನ ” ಜಗತ್ತಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಅದು ಪ್ರತಿಪಾದಿಸುತ್ತದೆ. ಏಕೆಂದರೆ, ಈ “ಹೊರಗಿನ” ಜಗತ್ತಿನ ಬಹು ಭಾಗವನ್ನು ಅದಾಗಲೇ ಮುಂದುವರೆದ ದೇಶಗಳು ಸ್ವಾಧೀನಪಡಿಸಿಕೊಂಡು ಜೀರ್ಣಿಸಿಕೊಂಡಾಗಿದೆ ಎಂದು ಭಾವಿಸಲಾಗಿದೆ. ವಿಪರ್ಯಾಸದ ಸಂಗತಿಯೆಂದರೆ, ಬೂರ್ಜ್ವಾ ಅರ್ಥಶಾಸ್ತ್ರವು ಸಾಮ್ರಾಜ್ಯಶಾಹಿ ಎಂಬುದು ಅಸ್ತಿತ್ವದಲ್ಲಿಲ್ಲ ಎಂದು ವಾದಿಸಲು ಸಾಮ್ರಾಜ್ಯಶಾಹಿಯು ಈಗಾಗಲೇ ವ್ಯಾಪಕವಾಗಿ ಹರಡಿ ಹೋಗಿದೆ ಎಂದೇ ಸೂಚ್ಯವಾಗಿ ಊಹಿಸಿಕೊಳ್ಳುತ್ತದೆ.

ಬೂರ್ಜ್ವಾ ಅರ್ಥಶಾಸ್ತ್ರದ ಪೇಚಾಟ

ಬಂಡವಾಳಶಾಹಿಯು ತಾನು ಸಾಮ್ರಾಜ್ಯಶಾಹಿಯಾಗುವತ್ತ ಸಾಗುತ್ತಿಲ್ಲ ಎಂಬುದಕ್ಕೆ ಆಗಾಗ ಇನ್ನೊಂದು ತರ್ಕವನ್ನೂ ಮಂಡಿಸುತ್ತದೆ. ಮುಂದುವರೆದ ದೇಶಗಳ ಒಟ್ಟು ಉತ್ಪಾದನೆಯ ಮೌಲ್ಯಕ್ಕೆ ಹೋಲಿಸಿದರೆ “ಹೊರಗಿನ” ಜಗತ್ತಿನ ಕಚ್ಚಾ ವಸ್ತುಗಳ ಪಾಲು ಅತಿ ಸಣ್ಣದು ಎಂದು ಅನೇಕ ಬರಹಗಾರರು ಹೇಳುತ್ತಾರೆ. ಮೆಟ್ರೊಪಾಲಿಟನ್ ಬಂಡವಾಳಶಾಹಿಯು ತನ್ನ ಒಟ್ಟು ಉತ್ಪಾದನಾ ಮೌಲ್ಯದಲ್ಲಿ ಇಷ್ಟು ಸಣ್ಣ ಭಾಗವನ್ನು ಹೊಂದಿರುವ ಕಚ್ಚಾ ವಸ್ತುಗಳನ್ನು ಪಡೆಯುವುದಕ್ಕಾಗಿ ವಿಶ್ವದ ಮೇಲೆ ಪ್ರಾಬಲ್ಯ ಹೇರುವ ಸಾಮ್ರಾಜ್ಯಶಾಹಿ ಉದ್ದೇಶದಲ್ಲಿ ತೊಡಗಿಸಿಕೊಳ್ಳುವ ಅಸಾಧಾರಣ ಪ್ರಯತ್ನ ಮಾಡುತ್ತದೆ ಎಂದು ಸೂಚಿಸುವುದು ಹಾಸ್ಯಾಸ್ಪದವಾಗಿ ಕಾಣುತ್ತದೆ ಎಂದು ಈ ಬರಹಗಾರರು ವಾದಿಸುತ್ತಾರೆ.

ಇದಕ್ಕೆ ಉತ್ತರವನ್ನು ತಮ್ಮ ‘ದಿ ಏಜ್ ಆಫ್ ಇಂಪೀರಿಯಲಿಸಂ’ ಪುಸ್ತಕದಲ್ಲಿ ಹ್ಯಾರಿ ಮ್ಯಾಗ್ಡಾಫ್ ಎಂಬುವರು ಒದಗಿಸಿದ್ದಾರೆ. ಕಚ್ಚಾ ವಸ್ತುಗಳ ವಿನಿಮಯ ಮೌಲ್ಯವು ಉತ್ಪನ್ನದ ಒಟ್ಟು ವಿನಿಮಯ ಮೌಲ್ಯಕ್ಕೆ ಹೋಲಿಸಿದರೆ ಎಷ್ಟೇ ಸಣ್ಣದಿದ್ದರೂ ಸಹ, ಈ ಕಚ್ಚಾ ವಸ್ತುಗಳನ್ನು ಬಳಕೆ-ಮೌಲ್ಯಗಳಾಗಿ ಬಳಸದ ಹೊರತು ಯಾವ ತಯಾರಿಕೆಯೂ ಸಾಧ್ಯವಾಗುವುದಿಲ್ಲ ಎಂಬ ನಿರ್ಣಾಯಕ ಅಂಶವನ್ನು ಈ ಪುಸ್ತಕದಲ್ಲಿ ಅವರು ಮಂಡಿಸಿದ್ದಾರೆ. ಈ ಸಂಗತಿಯು ನಿಜವೂ ಹೌದು. ಮೆಟ್ರೋಪಾಲಿಟನ್ ಬಂಡವಾಳವು ಹೊಂದಿರುವ ಶಕ್ತಿಯ ಮೂಲಕ ಅದು ಕಚ್ಚಾ ವಸ್ತುಗಳ ವಿನಿಮಯ ಮೌಲ್ಯವನ್ನು ಶೂನ್ಯದ ಮಟ್ಟಕ್ಕೂ ತಳ್ಳಬಹುದು. ಆದರೆ, ಉತ್ಪಾದನೆಗಾಗಿ ಕಚ್ಚಾ ವಸ್ತುಗಳ ಭೌತಿಕ ಬಳಕೆಯನ್ನು ನೈಸರ್ಗಿಕವಾಗಿ ನಿರ್ಧರಿಸಲಾಗುತ್ತದೆ ಮತ್ತು ಅದನ್ನು ಸುಮ್ಮ ಸುಮ್ಮನೆ ತಪ್ಪಿಸಲಾಗದು.

ಆದ್ದರಿಂದ, ಈ ಭೌತಿಕ ಕಚ್ಚಾ ವಸ್ತುಗಳನ್ನು “ಹೊರಗಿನಿಂದ” ಪಡೆಯುವುದು ಮೆಟ್ರೊಪಾಲಿಟನ್ ಬಂಡವಾಳಶಾಹಿಗೆ ಒಂದು ಪರಮ ಅಗತ್ಯವಾಗುತ್ತದೆ. ಕಚ್ಚಾ ವಸ್ತುಗಳು ಒಳಗೊಂಡಿರುವ ವಿನಿಮಯ ಮೌಲ್ಯವು ತುಲನಾತ್ಮಕವಾಗಿ ಅತಿ ಸಣ್ಣದು ಎಂಬ ಅಂಶದಿಂದಾಗಿ ಉತ್ಪಾದನೆಯಲ್ಲಿ ಅವುಗಳು ಹೊಂದಿರುವ ಮಹತ್ವವು ಅತ್ಯಲ್ಪ ಎಂದಾಗಲಿ ಅಥವಾ ಅವುಗಳ ಪೂರೈಕೆಯ ಮೂಲಗಳ ಮೇಲೆ ನಿಯಂತ್ರಣ ಪಡೆದುಕೊಳ್ಳುವುದು ಅಮುಖ್ಯ ಎಂದು ವಾದಿಸುವುದಾಗಲಿ ಒಂದು ದೊಡ್ಡ ತಪ್ಪಾಗುತ್ತದೆ.

ಕೃಷಿ-ಮೂಲ ಉತ್ಪನ್ನಗಳು ಮೆಟ್ರೊಪಾಲಿಟನ್ ಬಂಡವಾಳಶಾಹಿ ಕೈಗಾರಿಕೆಗಳಿಗೆ ಪ್ರಮುಖ ಅವಶ್ಯಕತೆಗಳಾಗಿವೆ ಮತ್ತು ಆಹಾರ ಬೆಳೆಗಳು ಮೆಟ್ರೊಪಾಲಿಟನ್ ಬಂಡವಾಳಶಾಹಿಯ ವ್ಯಾಪ್ತಿಯಲ್ಲಿ ವಾಸಿಸುವ ಜನರಿಗೆ ಪ್ರಮುಖ ಅವಶ್ಯಕತೆಗಳಾಗಿವೆ. ಅದಕ್ಕಾಗಿ ಬಂಡವಾಳಶಾಹಿಯು ವಿಶ್ವಾದ್ಯಂತ ಭೂ ಬಳಕೆಯ ಮಾದರಿಯನ್ನು ನಿಯಂತ್ರಿಸಲು ಬಯಸುತ್ತದೆ. ಆದಾಗ್ಯೂ, ನಾವೀಗ ಖನಿಜಗಳ ವಿಷಯದ ಬಗ್ಗೆ ಮಾತ್ರ ಗಮನಹರಿಸೋಣ. ವಾಸ್ತವವಾಗಿ, “ಹೊರಗಿನಿಂದ” ಮಾಡಿಕೊಳ್ಳುವ ಖನಿಜ ಆಮದಿನ ಮೇಲಿನ ಮೆಟ್ರೊಪಾಲಿಟನ್ ಬಂಡವಾಳಶಾಹಿ ಅವಲಂಬನೆಯ ನಿರ್ಣಾಯಕ ಸ್ವರೂಪವನ್ನು ಇತ್ತೀಚೆಗೆ ಅಮೇರಿಕವು ಅಪರೂಪದ ಭೂನಿಕ್ಷೇಪಗಳಿಗೆ ಸಂಬಂಧಿಸಿದಂತೆ ಹೊಂದಿದ ಅನುಭವವೇ ತೋರಿಸುತ್ತದೆ.

ಟ್ರಂಪ್‌ಗೆ ಚೀನಾದ ಎದುರೇಟು-ಒಂದು ಉದಾಹರಣೆ

ಚೀನಾದಿಂದ ಮಾಡಿಕೊಳ್ಳುವ ಆಮದುಗಳ ಮೇಲೆ ಸುಂಕವನ್ನು ಏರಿಕೆ ಮಾಡುವ ಟ್ರಂಪ್ ಅವರ ಬೆದರಿಕೆಗೆ ಎದುರಾಗಿ, ಚೀನಾ ಸರ್ಕಾರವು ಅಮೆರಿಕಕ್ಕೆ ರಫ್ತು ಮಾಡುವ ಕೆಲವು ಅಪರೂಪದ ಭೂ-ಖನಿಜಗಳ ಮೇಲೆ ಒಂದು ತಾತ್ಕಾಲಿಕ ನಿಷೇಧವನ್ನು ಘೋಷಿಸಿತು. ಚೀನಾವು ವಿಶ್ವದ ಅಪರೂಪದ ಭೂ-ಖನಿಜಗಳ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದ್ದು, ಒಟ್ಟು ವಿಶ್ವ ಉತ್ಪಾದನೆಯ ಸುಮಾರು ಶೇ. 70ರಷ್ಟು ಪಾಲನ್ನು ಹೊಂದಿದೆ ಮತ್ತು ವಿಶ್ವದ ಅಪರೂಪದ ಭೂ-ಖನಿಜಗಳ ಸಂಸ್ಕರಣಾ ಸಾಮರ್ಥ್ಯದ ಸುಮಾರು ಶೇ. 90ರಷ್ಟು ಪಾಲನ್ನು ಹೊಂದಿದೆ. ಟ್ರಂಪ್ ಸುಂಕ ಬೆದರಿಕೆಗೆ ಉತ್ತರವಾಗಿ ಸಂಸ್ಕರಿಸಿದ ಅಪರೂಪದ ಭೂ-ಖನಿಜಗಳ ರಫ್ತುಗಳನ್ನು ಚೀನಾ ಸ್ಥಗಿತಗೊಳಿಸಿತು. ಇದು ಅಮೆರಿಕವನ್ನು ನಿಜಕ್ಕೂ ಒಂದು ಇಕ್ಕಟ್ಟಿಗೆ ಸಿಕ್ಕಿಸಿತು.

ಚೀನಾದಿಂದ ಅವುಗಳನ್ನು ಪಡೆಯುವುದು ಸಾಧ್ಯವಾಗಲಿಲ್ಲ ಮಾತ್ರವಲ್ಲ, ಚೀನಾದ ಸರಬರಾಜುಗಳನ್ನು ಬದಲಾಯಿಸಲು ಬೇರೆ ಯಾವುದೇ ದೇಶದಿಂದ ಸಾಕಷ್ಟು ಪ್ರಮಾಣದಲ್ಲಿ ಅವುಗಳನ್ನು ಪಡೆಯುವುದೂ ಸಹ ಸಾಧ್ಯವಾಗಲಿಲ್ಲ. ಏಕೆಂದರೆ, ಚೀನಾದ ಉತ್ಪಾದನೆಯ ಮಟ್ಟದ ಹತ್ತಿರ ಯಾವ ದೇಶವೂ ಸುಳಿಯಲಾಗದು. ಹಾಗಾಗಿ, ಚೀನಾದಿಂದ ಅಪರೂಪದ ಭೂ-ಖನಿಜಗಳ ಪೂರೈಕೆಯ ಪುನರಾರಂಭಕ್ಕೆ ಪ್ರತಿಯಾಗಿ ಅದರೊಂದಿಗೆ ಮಾತುಕತೆ ನಡೆಸುವ ಒತ್ತಾಯಕ್ಕೆ ಅಮೆರಿಕ ಒಳಗಾಯಿತು.

ನಾವಿಲ್ಲಿ ಗಮನಿಸಬೇಕಾದ ಅಂಶವೆಂದರೆ: 2024ರಲ್ಲಿ ಯುಎಸ್ ಮಾಡಿಕೊಂಡ ಅಪರೂಪದ ಭೂ ಖನಿಜಗಳ ಆಮದಿನ ಒಟ್ಟು ಮೌಲ್ಯವು ಕೇವಲ $170 ಮಿಲಿಯನ್ ಆಗಿತ್ತು ಎಂಬುದು. 2024ರಲ್ಲಿ ಅಮೆರಿಕದ ಎಲ್ಲ ಸರಕು ಮತ್ತು ಸೇವೆಗಳ ಆಮದಿನ ಒಟ್ಟು ಮೌಲ್ಯವು 4.11 ಟ್ರಿಲಿಯನ್ ಆಗಿದ್ದು, ಅಪರೂಪದ ಭೂ-ಖನಿಜಗಳ ಆಮದು ಮಾತ್ರ ಅಮೆರಿಕದ ಒಟ್ಟು ಆಮದಿನ ಸುಮಾರು ಶೇ. 0.004ರಷ್ಟಿತ್ತು. ಬಳಕೆ ಮೌಲ್ಯ ಮತ್ತು ವಿನಿಮಯ ಮೌಲ್ಯಗಳು ಬೇರೆ ಬೇರೆ ದಿಕ್ಕಿನಲ್ಲಿ ಹೋಗುತ್ತವೆ ಎಂಬುದು ಈ ಪ್ರಕರಣದಲ್ಲಿರುವುದಕ್ಕಿಂತಲೂ ಹೆಚ್ಚು ತೀಕ್ಷ್ಣವಾಗಿ ಕಾಣಿಸಿಕೊಳ್ಳುವುದು ಸಾಧ್ಯವಿಲ್ಲ: ಅಮೆರಿಕದ ಸಂದರ್ಭದಲ್ಲಿ ಆಮದುಗಳ ಕೇವಲ ಶೇ. 0.004ರಷ್ಟು ಪಾಲನ್ನು ಹೊಂದಿರುವ ಕೆಲವು ಅಪರೂಪದ ಭೂ-ಖನಿಜಗಳು ಎಲೆಕ್ಟ್ರಾನಿಕ್ಸ್ ಉಪಕರಣಗಳಿಂದ ಹಿಡಿದು ಸ್ವಯಂಚಾಲಿಕ ವಾಹನಗಳವರೆಗೆ, ಗಾಳಿ ಟರ್ಬೈನ್‌ಗಳು ಮತ್ತು ಹೆಚ್ಚು ಕಾರ್ಯಕ್ಷಮತೆಯ ಮ್ಯಾಗ್ನೆಟ್‌ಗಳಿಂದ ಹಿಡಿದು ವೈದ್ಯಕೀಯ ಉಪಕರಣಗಳವರೆಗಿನ ಎಲ್ಲ ಕೈಗಾರಿಕೆಗಳಲ್ಲೂ ಒಂದು ನಿರ್ಣಾಯಕವಾದ ಪ್ರಾಮುಖ್ಯತೆಯನ್ನು ಹೊಂದಿವೆ. ಹಾಗಾಗಿ, ಅವುಗಳ ಪೂರೈಕೆಯಲ್ಲಿ ಉಂಟಾಗುವ ತಾತ್ಕಾಲಿಕ ಅಡಚಣೆ ಕೂಡ ಹೆಚ್ಚು ಕಳವಳದ ವಿಷಯವಾಗುತ್ತದೆ.

ಈ ಅಂಶವು ಸಾಮ್ರಾಜ್ಯಶಾಹಿ ವಿಸ್ತರಣೆಗೆ ಒದಗಿಸುವ ಪ್ರೇರಣೆಯೂ ಸಹ ಈ ನಿದರ್ಶನದಿಂದ ಸ್ಪಷ್ಟವಾಗುತ್ತದೆ. ಅಪರೂಪದ ಭೂ-ಖನಿಜಗಳ ಪೂರೈಕೆಗಾಗಿ ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ಅಮೆರಿಕವು ಗ್ರೀನ್‌ಲ್ಯಾಂಡ್‌ನಂತಹ ಇತರ ಸಂಭಾವ್ಯ ಪೂರೈಕೆ ಮೂಲಗಳನ್ನು ಅನ್ವೇಷಿಸುತ್ತಿದೆ. ಗ್ರೀನ್‌ಲ್ಯಾಂಡ್‌ನ ಮೇಲೆ ಅಮೆರಿಕ ಹೊಂದಿರುವ ಆಸಕ್ತಿಯು ಅಪರೂಪದ ಭೂ-ಖನಿಜಗಳಿಗೆ ಮಾತ್ರವಲ್ಲದೆ ಇತರ ಖನಿಜ ಉತ್ಪನ್ನಗಳ ಇಡೀ ಶ್ರೇಣಿಯ ಮೇಲೆ ಇದೆ. ಆದರೆ, ಗ್ರೀನ್‌ಲ್ಯಾಂಡ್ ಮೇಲಿನ ಈ ಸಾಮ್ರಾಜ್ಯಶಾಹಿ ಅನ್ವೇಷಣೆಗೆ ಚೀನಾದ ಅಪರೂಪದ ಭೂ-ಖನಿಜಗಳ ಪೂರೈಕೆಯ ತಾತ್ಕಾಲಿಕ ಅಡಚಣೆಯು ಒಂದು ಮೊನಚನ್ನು ನೀಡಿದೆ. ಯಾವ ಪರ್ಯಾಯ ಪೂರೈಕೆ ಮೂಲಗಳೂ ಸಹ ಚೀನಾವನ್ನು ಸಂಪೂರ್ಣವಾಗಿ ಹಿಂದಿಕ್ಕುವುದು ಸಾಧ್ಯವಿಲ್ಲ. ಏಕೆಂದರೆ, ಚೀನಾವು ವಿಶ್ವದ ಅಪರೂಪದ ಭೂ-ಖನಿಜಗಳ ಅರ್ಧದಷ್ಟು ನಿಕ್ಷೇಪಗಳನ್ನು ಹೊಂದಿದೆ. ಆದರೆ, ಈ ಉದಾಹರಣೆಯು ಬಂಡವಾಳಶಾಹಿ ಸಾಮ್ರಾಜ್ಯಶಾಹಿ ವಿಸ್ತರಣೆಗೆ ಒಂದು ನಿರ್ಣಾಯಕ ಪ್ರೇರಣೆ ಇದೆ ಎಂಬುದನ್ನು ವಿಷದಪಡಿಸುತ್ತದೆ.

ಕಚ್ಚಾ ವಸ್ತುಗಳ ಅನ್ವೇಷಣೆಯಲ್ಲಿ

ಖಚಿತವಾಗಿ ಹೇಳಬೇಕೆಂದರೆ, ಇದೊಂದು ಮಾತ್ರವೇ ಪ್ರೇರಣೆಯಲ್ಲ. ಸಾಮ್ರಾಜ್ಯಶಾಹಿಯ ಮಾರುಕಟ್ಟೆ ಉದ್ದೇಶವನ್ನು ರೋಸಾ ಲಕ್ಸೆಂಬರ್ಗ್ ಒತ್ತಿಹೇಳಿದ್ದುದು ಸರಿಯಾಗಿಯೇ ಇದೆ. ಮೆಟ್ರೊಪಾಲಿಟನ್ ಬಂಡವಾಳಶಾಹಿ ದೇಶಗಳ ನಿರಂತರ ಬಂಡವಾಳ ಸಂಗ್ರಹಣೆಯು ಅದರ ವ್ಯಾಪ್ತಿಯ ಹೊರಗಡೆ ಇರುವ ಬಂಡವಾಳಶಾಹಿ-ಪೂರ್ವ ಮಾರುಕಟ್ಟೆಗಳಿಗೆ ಪ್ರವೇಶಿಸದ ಹೊರತು ಅಸಾಧ್ಯ ಎಂಬುದು ಒಂದು ವಾಸ್ತವಾಂಶ. ಅದಕ್ಕಾಗಿ ಈ ಹೊರಗಿನ ಪ್ರದೇಶಗಳ ಮೇಲೆ ಸಾಮ್ರಾಜ್ಯಶಾಹಿ ಆಕ್ರಮಣಗಳು ಅಗತ್ಯವಾಗುತ್ತವೆ. ನಿಜ, ಬಂಡವಾಳಶಾಹಿ-ಪೂರ್ವ ಮಾರುಕಟ್ಟೆಗಳನ್ನು ಹೊರತುಪಡಿಸಿದರೆ, ಬಂಡವಾಳಶಾಹಿ ವಲಯವು ಬಯಸುವ ಬಾಹ್ಯ ಉತ್ತೇಜಕಗಳು ಇರುವುದು ಸಾಧ್ಯವಿದೆ. ಉದಾಹರಣೆಗೆ, ಬಂಡವಾಳಶಾಹಿ ಉತ್ಪಾದನಾ ವಿಧಾನದೊಳಗಿರುವ ಬಂಡವಾಳಶಾಹಿ ಪ್ರಭುತ್ವದಿಂದ ಉಂಟಾಗುವ ಬೇಡಿಕೆ. ಜಾಗತೀಕರಣದ ಯುಗದಲ್ಲಿ ಈ ಪರ್ಯಾಯ ಉತ್ತೇಜಕದ ಪ್ರಾಮುಖ್ಯತೆ ಕೂಡ ಕ್ಷೀಣಿಸುತ್ತಿದೆ. ಆದರೂ, ಮೆಟ್ರೊಪಾಲಿಟನ್ ದೇಶಗಳೊಳಗೆ ಬಂಡವಾಳಶಾಹಿಗೆ ಅಗತ್ಯವಿರುವ ಎಲ್ಲ ಕಚ್ಚಾ ವಸ್ತುಗಳ ಪರ್ಯಾಯ ಮೂಲಗಳು ಇರುವುದು ಸಾಧ್ಯವಿಲ್ಲ. ಖನಿಜಗಳೂ ಸೇರಿದಂತೆ ಕಚ್ಚಾ ವಸ್ತುಗಳ ಅನ್ವೇಷಣೆಯು ಬಂಡವಾಳಶಾಹಿ ಸಾಮ್ರಾಜ್ಯಶಾಹಿಗೆ ಒಂದು ಶಾಶ್ವತವಾದ ಉದ್ದೇಶವನ್ನು ಒದಗಿಸುತ್ತದೆ.

ಜಾಗತಿಕ ದಕ್ಷಿಣದ ದೇಶಗಳ ವಿರುದ್ಧ ಮುಂದುವರಿದ ಬಂಡವಾಳಶಾಹಿ ದೇಶಗಳು ನಿಜಕ್ಕೂ ಒಂದು ತೀವ್ರ ಸ್ವರೂಪದ ಹೋರಾಟವನ್ನು ಆರಂಭಿಸಿರುವುದು ಆಶ್ಚರ್ಯವೇನಲ್ಲ, ಏಕೆಂದರೆ, ರಾಜಕೀಯವಾಗಿವಸಾಹತೀಕರಣವನ್ನುಕೊನೆಗೊಳಿಸಿದ ತರುವಾಯ,ಜಾಗತಿಕ ದಕ್ಷಿಣದ ದೇಶಗಳುತಮ್ಮ ಖನಿಜ ಸಂಪತ್ತೂ ಸೇರಿದಂತೆ ತಮ್ಮ ನೈಸರ್ಗಿಕ ಸಂಪನ್ಮೂಲಗಳ ಮೇಲೆ ನಿಯಂತ್ರಣ ಸಾಧಿಸುವ ಮೂಲಕ ಆರ್ಥಿಕವಾಗಿಯೂ ಸಹ ವಸಾಹತೀಕರಣವನ್ನು ನಿವಾರಿಸಲು ಪ್ರಯತ್ನಿಸಿದವು. ಇರಾನ್‌ನಲ್ಲಿ ಮೊಸಾದೆಗ್, ಗ್ವಾಟೆಮಾಲಾದಲ್ಲಿ ಅರ್ಬೆನ್ಜ್, ಚಿಲಿಯಲ್ಲಿ ಅಲೆಂದೆ ಮತ್ತು ಕಾಂಗೋದಲ್ಲಿ ಲುಮುಂಬಾ ಇವರುಗಳ ವಿರುದ್ಧ ಸಾಮ್ರಾಜ್ಯಶಾಹಿಯು ನಡೆಸಿದ ದಂಗೆಗಳು, ಹೆಚ್ಚಿನ ಸಂದರ್ಭಗಳಲ್ಲಿ, ಖನಿಜ ಸಂಪತ್ತೂ ಸೇರಿದಂತೆ ತಮ್ಮ ದೇಶಗಳ ನೈಸರ್ಗಿಕ ಸಂಪನ್ಮೂಲಗಳ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶ ಹೊಂದಿದ್ದ ಈ ನಾಯಕರ ಯೋಜನೆಗಳೊಂದಿಗೆ ಸಂಬಂಧ ಹೊಂದಿವೆ.

ಜಾಗತಿಕ ದಕ್ಷಿಣದ ದೇಶಗಳ ಮೇಲೆ ಹೇರಿದ ನವ ಉದಾರವಾದಿ ಆಳ್ವಿಕೆಯಡಿಯಲ್ಲಿ ಜಾಗತಿಕ ದಕ್ಷಿಣದ ದೇಶಗಳ ಅನೇಕ ಪ್ರಕರಣಗಳಲ್ಲಿ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ನಿಯಂತ್ರಣವು ಮತ್ತೆ ಮೆಟ್ರೊಪಾಲಿಟನ್ ಬಂಡವಾಳಕ್ಕೆ ದಕ್ಕಿದೆ. ಇದು ಸಾಮ್ರಾಜ್ಯಶಾಹಿ ಏರ್ಪಾಟಿಗೆ ಹೆಚ್ಚಿನ ಸ್ಥಿರತೆಯನ್ನು ಮತ್ತು ವಿಶ್ವಾಸಾರ್ಹತೆಯನ್ನು ಒದಗಿಸಿದೆ. ಈ ವಿದ್ಯಮಾನವು ಕ್ಷಿಪ್ರಕ್ರಾಂತಿಗಳ ಅಗತ್ಯವನ್ನು ಸ್ವಲ್ಪ ಮಟ್ಟಿಗೆ ನಿವಾರಿಸಿದೆ. ಈ ದೇಶಗಳ ಮೇಲೆ ಹೇರಲಾದ ಸಂರಚನಾ ನಿರ್ಬಂಧಗಳು ಈಗ, ಆ ಪಾತ್ರವನ್ನು ನಿರ್ವಹಿಸಲು ಆರಂಭಿಸಿವೆ. ಆದರೆ, ನವ ಉದಾರವಾದಿ ವ್ಯವಸ್ಥೆಯು ಒಂದು ಬಿಕ್ಕಟ್ಟಿಗೆ ಸಿಲುಕಿರುವುದರಿಂದ ಮತ್ತು ಇತರ ದೇಶಗಳ ಮೇಲೆ, ಅದರಲ್ಲೂ ವಿಶೇಷವಾಗಿ ಜಾಗತಿಕ ದಕ್ಷಿಣದ ದೇಶಗಳ ಮೇಲೆ, “ನನ್ನ-ನೆರೆಯವನು-ಹಾಳಾಗಲಿ” ಎಂಬ ಏಕಮುಖ ನೀತಿಯನ್ನು ಹೇರುವ ಮೂಲಕ ಈ ಬಿಕ್ಕಟ್ಟನ್ನು ನಿಭಾಯಿಸಲು ಅಮೆರಿಕ ಸಾಮ್ರಾಜ್ಯಶಾಹಿಯು ಪ್ರಯತ್ನಿಸುತ್ತಿರುವುದರಿಂದ, ಪರಿಸ್ಥಿತಿ ಬದಲಾಗಲಾರಂಭಿಸಿದೆ. ಈ ಹೊಸ ಪರಿಸ್ಥಿತಿಯಲ್ಲಿ ಈ ದೇಶಗಳ ಸಾಮ್ರಾಜ್ಯಶಾಹಿ-ವಿರೋಧಿ ಪ್ರತಿರೋಧವು ಬಲಗೊಳ್ಳುತ್ತಿದೆ. ಖನಿಜಗಳೂ ಸೇರಿದಂತೆ ತಮ್ಮ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ನಿಯಂತ್ರಣವನ್ನು ಮರು ಸ್ವಾಧೀನಪಡಿಸಿಕೊಳ್ಳುವ ಈ ದೇಶಗಳ ಹೋರಾಟವು ಮುಂಬರುವ ದಿನಗಳಲ್ಲಿ ಹೆಚ್ಚು ಬಲಗೊಳ್ಳುತ್ತದೆ. ಹೀಗಾಗಿ ಬಂಡವಾಳಶಾಹಿಯ ಬಿಕ್ಕಟ್ಟು ಸಾಮ್ರಾಜ್ಯಶಾಹಿಯನ್ನು ಇನ್ನೂ ಕಷ್ಟಕ್ಕೆ ಈಡು ಮಾಡುತ್ತದೆ, ಮತ್ತು ಅದರಿಂದಾಗಿ ಅದು ಇನ್ನಷ್ಟು ದುಷ್ಟತನಕ್ಕೂ ಇಳಿಯಬಹುದು.

ಇದನ್ನೂ ನೋಡಿ: ಯುವಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತಗಳು ಮತ್ತು ಪರಿಹಾರ Janashakthi Media | DYFI

Donate Janashakthi Media

Leave a Reply

Your email address will not be published. Required fields are marked *