ಕೊಪ್ಪಳ: ‘ಅಬಕಾರಿ ಸಚಿವರಿಗೆ ಪ್ರತಿ ಜಿಲ್ಲೆಯಿಂದ ₹5 ಲಕ್ಷ ನೀಡಬೇಕು’ ಎಂದು ಮಹಿಳಾ ಅಧಿಕಾರಿಯೊಬ್ಬರು ಕಿರಿಯ ಅಧಿಕಾರಿಯೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ವೈರಲ್ ಆಗಿದೆ. ಏತನ್ಮಧ್ಯೆ ಮೂವರು ಇನ್‌ಸ್ಪೆಕ್ಟರ್ ಸೇರಿ ನಾಲ್ವರನ್ನು ಅಮಾನತುಗೊಳಿಸಿ ಅಬಕಾರಿ ಇಲಾಖೆಯ ಹೊಸಪೇಟೆ ವಲಯದ ಜಂಟಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಗಂಗಾವತಿ ವಲಯದ ಅಬಕಾರಿ ಇನ್‌ಸ್ಪೆಕ್ಟರ್‌ಗಳಾದ ಅಜಯ್, ಸ್ವತಂತ್ರಕುಮಾರ, ಶಿವಯ್ಯ ಮತ್ತು ಸಬ್ ಇನ್‌ಸ್ಪೆಕ್ಟರ್ ವಿಜಯಕುಮಾರ ರಡ್ಡಿ ಅಮಾನತುಗೊಂಡವರು.
ಆಡಿಯೊದಲ್ಲಿ ಏನಿದೆ? : ‘ಅಬಕಾರಿ ಖಾತೆ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಜಿಲ್ಲೆಯ ಅಬಕಾರಿ ಇಲಾಖೆ ಕಾರ್ಯವನ್ನು ಶ್ಲಾಘಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಇಲಾಖೆಯ ಆಂತರಿಕ ಸಭೆಯಲ್ಲಿ ಸಚಿವರಿಗೆ ₹5 ಲಕ್ಷ ನೀಡುವಂತೆ ಸೂಚಿಸಲಾಗಿದೆ. ನಮ್ಮ ಮೇಲೆ ಒತ್ತಡ ಇರುವುದರಿಂದ ಹಣ ತಲುಪಿಸಬೇಕು’ ಎಂದು ಮಹಿಳಾ ಅಧಿಕಾರಿಯೊಬ್ಬರು ಕಿರಿಯ ಅಧಿಕಾರಿಗಳಿಗೆ ಹೇಳುವ ಆಡಿಯೊ ವೈರಲ್ ಆಗಿದೆ.
‘ಕೊಪ್ಪಳ ಜಿಲ್ಲಾ ಅಬಕಾರಿ ಉಪ ಆಯುಕ್ತೆ ಸಿ.ಸೆಲೀನಾ ಅವರು ಇನ್‌ಸ್ಪೆಕ್ಟರ್ ಅಜಯ್ ಎಂಬುವರ ಜೊತೆ ಒಂದು ತಿಂಗಳ ಹಿಂದೆ ಮಾತನಾಡಿದ್ದರು ಎನ್ನಲಾದ ಆಡಿಯೊ ಇದಾಗಿದೆ. ಇದು ಮೇಲಾಧಿಕಾರಿಗಳ ಗಮನಕ್ಕೆ ಬಂದು ಕರ್ತವ್ಯ ಲೋಪದ ಆರೋಪದ ಮೇಲೆ ನಾಲ್ವರನ್ನು ಅಮಾನತು ಮಾಡಲಾಗಿದೆ’ ಎಂಬ ಮಾಹಿತಿ ಲಭ್ಯವಾಗಿದೆ.
‘ಅಮಾನತುಗೊಂಡ ಇನ್‌ಸ್ಪೆಕ್ಟರ್‌ವೊಬ್ಬರು ಆಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಅದು ವೈರಲ್ ಆಗಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ’ ಅವರು ಪ್ರಜ್ಞಾಪೂರ್ವಕವಾಗಿ ಆಡಿಯೊ ಹೊರಗಡೆ ಹಾಕಿದ್ದಾರೊ ಅಥವಾ ಯಾವುದೊ ದುರುದ್ದೇಶ ಇಟ್ಟುಕೊಂಡು ವೈರಲ್ ಮಅಡಿದ್ದಾರೋ ಗೊತ್ತಿಲ್ಲ. ಆದರೆ ಪ್ರಶ್ನೆ ಇರುವುದು ಆಡಿಯೋ ವೈರಲ್ ಆಗಿರುವುದು ಅಲ್ಲ. ಆಡಿಯೊದಿಂದ ದೊಡ್ಡ ಪ್ರಮಾಣದ ಭ್ರಷ್ಟಾಚಾರವೊಂದು ಈಗ ಹೊರ ಬಿದ್ದಿದೆ.
ತನಿಖೆಗೆ ಕುಮಾರಸ್ವಾಮಿ ಆಗ್ರಹ : ನೀರಾವರಿ ಇಲಾಖೆಯ ₹20,000 ಕೋಟಿ ಯೋಜನೆಯಲ್ಲಿ 10% ಕಿಕ್ ಬ್ಯಾಕ್ ಪಡೆಯಲಾಗಿದೆ ಎಂಬ ಆರೋಪ ಜೀವಂತವಾಗಿರುವಾಗಲೇ ಅಬಕಾರಿ ಇಲಾಖೆಯ ಅಕ್ರಮ ಬಯಲಾಗಿದೆ. ಅಬಕಾರಿ ಸಚಿವರಿಗೆ ಪ್ರತಿ ಜಿಲ್ಲೆಯಿಂದ ₹5 ಲಕ್ಷ ಹೋಗಬೇಕು ಎಂಬ ಅಧಿಕಾರಿಗಳ ಸಂಭಾಷಣೆ ಬಹಿರಂಗವಾಗಿದೆ. ಹಣ ಖರ್ಚು ಮಾಡಿ ಅಧಿಕಾರಕ್ಕೆ ಬಂದ ಬಿಜೆಪಿ ಹಣ ಲೂಟಿ ಮಾಡುವಲ್ಲಿ ನಿರತವಾಗಿದೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿದ ಹೆಚ್ ಡಿ ಕೆ, ಆಡಿಯೊ ಬಹಿರಂಗವಾಗುತ್ತಲೇ ಅಬಕಾರಿ ಇಲಾಖೆಯ ಮೂವರು ಇನ್ಸ್‌ಪೆಕ್ಟರ್‌ಗಳನ್ನು ಅಮಾನತು ಮಾಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕೊಟ್ಟಿರಬಹುದಾದವರಿಗೆ ಶಿಕ್ಷೆ ಕೊಟ್ಟ ಮೇಲೆ ಈಸ್ಕೋಂಡಿರಬಹುದಾದವರಿಗೆ ಶಿಕ್ಷೆ ಇಲ್ಲ ಏಕೆ? ಅಧಿಕಾರಿಗಳ ಮೇಲಿನ ಕ್ರಮ ಭ್ರಷ್ಟಾಚಾರಕ್ಕಾಗಿಯೋ ಅಥವಾ ಸರ್ಕಾರದ ಬಂಡವಾಳ ಬಯಲು ಮಾಡಿದರು ಎಂಬ ಕಾರಣಕ್ಕೋ? ಎಂದು ಪ್ರಶ್ನಿಸಿದ್ದಾರೆ.
₹2 ಸಾವಿರ ಕೋಟಿ ಕಿಕ್ ಬ್ಯಾಕ್ ಪ್ರಕರಣವನ್ನು ತನಿಖೆಗೆ ಒಳಪಡಿಸುವಂತೆ ಈಗಾಗಲೇ ನಾನು ಆಗ್ರಹಿಸಿದ್ದೇನೆ. ಅದರಲ್ಲಿನ @BSYBJP ಕುಟುಂಬದ ಪಾತ್ರದ ಬಗ್ಗೆ ತನಿಖೆಯಾಗಲಿ ಎಂದು ಹೇಳಿದ್ದೇನೆ. ಅದರ ಜೊತೆಗೆ ಅಬಕಾರಿ ಇಲಾಖೆಯಲ್ಲಿನ ಈ ಪ್ರಕರಣದ ಬಗ್ಗೆಯೂ ತನಿಖೆಯಾಗಬೇಕು. ಸರ್ಕಾರ ಈ ಪ್ರಕರಣವನ್ನು ಕೂಡಲೇ ಸೂಕ್ತ ತನಿಖಾ ಸಂಸ್ಥೆಗೆ ವಹಿಸಬೇಕು.
3/4— H D Kumaraswamy (@hd_kumaraswamy) June 22, 2021
ಈ ಆಡಿಯೋದ ಸತ್ಯಾಸತ್ಯತೆ, ಅಬಕಾರಿ ಮಂತ್ರಿಗಳಿಗೆ ಲಂಚ ಹೋಗುತ್ತಿದೆಯೋ ಇಲ್ಲವೋ, ಅಥವ ಮಂತ್ರಿಗಳ ಹೆಸರಿನಲ್ಲಿ ಅಧಿಕಾರಿಗಳು ಭ್ರಷ್ಟಾಚಾರಕ್ಕೆ ಇಳಿದಿದ್ದಾರೆಯೇ ಎನ್ನುವ ಮಾಹಿತಿಗಳು ಪ್ರಾಮಾಣಿಕ ತನಿಖೆಯಿಂದ ಹೊರಬರಬೇಕು ಎಂದು ಅವರು ಆಗ್ರಹಿಸಿದ್ದಾರೆ.