ಮೈಕ್ರೋಫೈನಾನ್ಸ್ ಬಲೆಗೆ ಸಿಲುಕದಂತೆ ಮಾಡುವುದು ಹೇಗೆ?

ಕೇರಳದ ‘ಕುಡುಂಬಶ್ರೀ’ ಮತ್ತು ಪಿ.ಎ.ಸಿ.ಎಸ್. ದಾರಿ ತೋರಿಸಿವೆ

ಕಿರುಸಾಲ ಮಹಿಳೆಯರನ್ನು ಸಬಲೀಕರಣಗೊಳಿಸಬೇಕು, ಗುಲಾಮಗಿರಿಗೆ ಇಳಿಸಬಾರದು. ಭಾರತ ಈಗ ಆಯ್ಕೆ ಮಾಡಬೇಕಾಗಿರುವುದು ಬಂಡವಾಳ ಅಥವ ಸಮುದಾಯ, ಶೋಷಣೆ ಅಥವ ಸಹಕಾರ ಮತ್ತು  ಸಾಲ ಅಥವ  ಬದುಕು ಇವುಗಳ ನಡುವೆ.. ಸಹಜವಾಗಿಯೇ ಅದು ಸಮುದಾಯ, ಸಹಕಾರ ಮತ್ತು ಬದುಕನ್ನು ಆಯ್ಕೆ ಮಾಡಬೇಕಾಗಿದೆ. ಅದು ಸಾಧ್ಯ ಎಂದು ಕೇರಳದ ಮಾದರಿಯು ಸಾಬೀತುಪಡಿಸಿದೆ. ಉಳಿದಿರುವುದು ಅದನ್ನು ಕಾರ್ಯಗತಗೊಳಿಸುವ ರಾಜಕೀಯ ಇಚ್ಛಾಶಕ್ತಿ.
(ಆಧಾರ: ಲೆಫ್ಟ್ ವ್ಯೂ: ಸಂಗ್ರಹ-ಜಿ.ಎಸ್‍.ಮಣಿ)

ಭಾರತದ ಅನೇಕ ರಾಜ್ಯಗಳಲ್ಲಿ ಮೈಕ್ರೋಫೈನಾನ್ಸ್ ಸಂಸ್ಥೆಗಳು (ಕಿರು ಸಾಲ ಸಂಸ್ಥೆ- ಎಂಎಫ್‍ಐ)  ಬಡ ಕುಟುಂಬಗಳಿಗೆ ಸಾಲ ನೀಡುತ್ತವೆ. ಆದರೆ ಹೆಚ್ಚಿನ ಬಡ್ಡಿದರಗಳು ಮತ್ತು ಕಠಿಣ ವಸೂಲಿ ವಿಧಾನಗಳಿಂದಾಗಿ ಅನೇಕರು ಸಾಲದ ಬಲೆಗೆ ಸಿಲುಕುತ್ತಾರೆ. ವಿಶೇಷವಾಗಿ ಮಹಿಳೆಯರು ಈ ಒತ್ತಡವನ್ನು ಎದುರಿಸುತ್ತಾರೆ.

ಕೇರಳವು ಈ ಬಲೆಗೆ ಸಿಲುಕದೆ ಸಮುದಾಯ ಆಧಾರಿತ ಸ್ವಯಂ ಸಹಾಯ ಗುಂಪು(ಎಸ್‍ಹೆಚ್‍ಜಿ)ಗಳ ಮೂಲಕ ಬೇರೆಯ ದಾರಿ ಹಿಡಿದಿದೆ. ‘ಕುಡುಂಬಶ್ರೀ’ (1998ರಲ್ಲಿ ಅಲ್ಲಿ ಎಲ್‍ಡಿಎಫ್‍ ಸರಕಾರ ಆರಂಭಿಸಿದ ಕಾರ್ಯಕ್ರಮ) ಇದರ ಕೇಂದ್ರಬಿಂದು. ಮಹಿಳೆಯರ “ನೆರೆಹೊರೆ ಗುಂಪು” (Neighbourhood Groups -ಎನ್‍ಹೆಚ್‍ಜಿ) ಮೂಲಕ ಸಮೂಹ ಉಳಿತಾಯ ಮತ್ತು ಕಡಿಮೆ ಬಡ್ಡಿದರದ ಸಾಲ ವ್ಯವಸ್ಥೆ-ಇದು ಸ್ಥಳೀಯ ಸ್ವಯಮಾಡಳಿತ ಸಂಸ್ಥೆಗಳೊಂದಿಗೆ ನೇರವಾಗಿ ಜೋಡಿಸಿಕೊಂಡಿರುವುದರಿಂದ ಪಾರದರ್ಶಕತೆ ಮತ್ತು ಹೆಚ್ಚಿನ ಹೊಣೆಗಾರಿಕೆ ಹೊಂದಿದೆ.

ಭಾರತದಲ್ಲಿ ಕಿರುಬಂಡವಾಳ ವಲಯವು ಬಿಕ್ಕಟ್ಟಿನ ವರ್ಷವನ್ನು ಪ್ರವೇಶಿಸುತ್ತಿದೆ. ಇತ್ತೀಚಿನ ಅಂದಾಜಿನ ಕೆಟ್ಟ ಸಾಲಗಳು ರೂ.61000 ಕೋಟಿಗಳಿಗೆ ಏರಿವೆ. ಇದಕ್ಕೆ ಮೊದಲು ಆಗಸ್ಟ್ 2025ರಲ್ಲಿ ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘಟನೆ (AIDWA) ಆಯೋಜಿಸಿದ್ದ ರಾಷ್ಟ್ರೀಯ ಸಾರ್ವಜನಿಕ ವಿಚಾರಣೆ ಈ ಕ್ಷೇತ್ರದಲ್ಲಿ ಪರಿಸ್ಥಿತಿ ಎಂತಹ ಗಂಭೀರ ಮಟ್ಟವನ್ನು ತಲುಪಿದೆ ಎಂಬುದನ್ನು ದೇಶದ ಗಮನಕಕ್ಕೆ ತಂದಿತ್ತು. ಈ ವಿಚಾರಣೆಯಲ್ಲಿ ಭಾಗವಹಿಸಿದ  500 ಕ್ಕೂ ಹೆಚ್ಚು ಮಹಿಳೆಯರು ಸಬಲೀಕರಣದ ಸಾಧನಗಳೆಂದು  ಪ್ರಚಾರ ಮಾಡಲಾದ ಮೈಕ್ರೋಫೈನಾನ್ಸ್ ಸಂಸ್ಥೆಗಳು ಮಹಿಳೆಯರನ್ನು ಸಾಲ ಮತ್ತು ಕಿರುಕುಳದ ಚಕ್ರಗಳಲ್ಲಿ ಸಿಲುಕಿಸುತ್ತಿವೆ ಎಂಬುದಕ್ಕೆ ಸಾಕ್ಷ್ಯಗಳನ್ನು ನೀಡಿದರು. ಈ ವಿಚಾರಣೆಯ ಮೊದಲು ದೇಶದ 100 ಜಿಲ್ಲೆಗಳಲ್ಲಿ 9,000 ಕ್ಕೂ ಹೆಚ್ಚು ಮಹಿಳೆಯರನ್ನು ಒಳಗೊಂಡ ಒಂದು ವರ್ಷದ ಸಮೀಕ್ಷೆಯನ್ನು ನಡೆಸಲಾಗಿತ್ತು.

ಈ ಸಮೀಕ್ಷೆಯಲ್ಲಿ ಕಂಡುಬಂದ ಸಂಗತಿಗಳು ಈ ಎಂಎಫ್‍ಐ ಗಳು  ವ್ಯವಸ್ಥಿತ ಶೋಷಣೆಯನ್ನು ನಡೆಸಿವೆ ಎಂಬುದನ್ನು ಬಯಲಿಗೆ ತಂದವು. ಸಮೀಕ್ಷೆಯಲ್ಲಿ ಭಾಗವಹಿಸಿದ ಮಹಿಳೆಯರಲ್ಲಿ ಸುಮಾರು 40% ದಷ್ಟು ಮಹಿಳೆಯರು 50000 ರೂ.ಗಳಿಗಿಂತ ಹೆಚ್ಚು ಸಾಲವನ್ನು ಹೊಂದಿದ್ದರೆ , 40% ದಷ್ಟು ಮಹಿಳೆಯರು 1 ಲಕ್ಷದಿಂದ 2.5 ಲಕ್ಷ ರೂ.ಗಳವರೆಗೆ ಸಾಲವನ್ನು ಹೊಂದಿದ್ದರು . ಶೇ 70 ರಷ್ಟು ಮಹಿಳೆಯರು ಮಾಸಿಕ ರೂ.10000 ಕ್ಕಿಂತ ಕಡಿಮೆ ಆದಾಯ ಗಳಿಸುವ ಕುಟುಂಬಗಳಿಂದ ಬಂದವರು . ಸುಮಾರು ಮೂರನೇ ಒಂದು ಭಾಗದಷ್ಟು ಜನರು ಸಾಲದ ಸುಳಿಯಲ್ಲಿ ಸಿಲುಕಿಕೊಂಡರು, ಹಳೆಯ ಸಾಲಗಳನ್ನು ಚುಕ್ತಾ ಮಾಡಲು  ಬೇರೆ ಸಂಸ್ಥೆಗಳಿಂದ ಸಾಲ ಪಡೆದವರು. ಮೇಲಾಧಾರ-ಮುಕ್ತ ಕಿರುಸಾಲ ಕುರಿತಂತೆ ಆರ್‌ಬಿಐ ಮಾರ್ಗಸೂಚಿಗಳ ಹೊರತಾಗಿಯೂ , 50-60% ಜನರು ವೈಯಕ್ತಿಕ ವಸ್ತುಗಳನ್ನು ಒತ್ತೆ ಇಡುವ ಅಸಹಾಯಕತೆಗೆ ಸಿಲುಕಿದವರು.

ಭಾರತದಲ್ಲಿ ಕಿರುಬಂಡವಾಳ ವಲಯದಲ್ಲಿನ ಕೆಟ್ಟ ಸಾಲಗಳು ರೂ.61000 ಕೋಟಿಗಳಿಗೆ ಏರಿವೆ  ಎಂಬುದು ಇತ್ತೀಚಿನ ಅಂದಾಜು. ಆಗಸ್ಟ್ 2025ರಲ್ಲಿ ದಿಲ್ಲಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸಾರ್ವಜನಿಕ ವಿಚಾರಣೆ ಈ ಕ್ಷೇತ್ರದಲ್ಲಿ ಪರಿಸ್ಥಿತಿ ಎಂತಹ ಗಂಭೀರ ಮಟ್ಟವನ್ನು ತಲುಪಿದೆ ಎಂಬುದನ್ನು ದೇಶದ ಗಮನಕಕ್ಕೆ ತಂದಿತ್ತು. ಈ ವಿಚಾರಣೆಯಲ್ಲಿ ಭಾಗವಹಿಸಿದ  500 ಕ್ಕೂ ಹೆಚ್ಚು ಮಹಿಳೆಯರು ಸಬಲೀಕರಣದ ಸಾಧನಗಳೆಂದು  ಪ್ರಚಾರ ಮಾಡಲಾದ ಮೈಕ್ರೋಫೈನಾನ್ಸ್ ಸಂಸ್ಥೆಗಳು ಮಹಿಳೆಯರನ್ನು ಸಾಲ ಮತ್ತು ಕಿರುಕುಳದ ಚಕ್ರಗಳಲ್ಲಿ ಸಿಲುಕಿಸುತ್ತಿವೆ ಎಂಬುದಕ್ಕೆ ಸಾಕ್ಷ್ಯಗಳನ್ನು ನೀಡಿದರು. ಈ ಬಿಕ್ಕಟ್ಟು ಉದ್ಭವಿಸಿರುವುದು ಈ ಕ್ಷೇತ್ರದಲ್ಲಿ ತಂದಿರುವ ನೀತಿ ಬದಲಾವಣೆಗಳಿಂದ ಎಂದು ಕಂಡುಬಂದಿದೆ.

ಈ ಸಾಲಗಳಿಗೆ ಶೋಷಣಕಾರೀ ದರಗಳಲ್ಲಿ  ಬಡ್ಡಿ ವಸೂಲು ಮಾಡುವುದು ಕಂಡುಬಂದಿದೆ. ಬ್ಯಾಂಕುಗಳು ಕಿರುಬಂಡವಾಳ ಸಂಸ್ಥೆಗಳಿಗೆ 10-11% ಗೆ ಸಾಲ ನೀಡಿದರೆ, ಈ ಕಂಪನಿಗಳು ಮಹಿಳೆಯರಿಗೆ 22-26%, ಕೆಲವೊಮ್ಮೆ 60% ವರೆಗೆ ಬಡ್ಡಿ ವಿಧಿಸುತ್ತವೆ. ಅನೇಕ ಸಾಲಗಾರರಿಗೆ ತಮ್ಮ ಬಡ್ಡಿದರ ಎಷ್ಟೆಂದು ತಿಳಿದಿರಲಿಲ್ಲ. ಶೇ 30 ಕ್ಕಿಂತ ಹೆಚ್ಚು ಮಂದಿ ಮೌಖಿಕ ನಿಂದನೆಯನ್ನು ಎದುರಿಸಿದವರು.  ಶೇ10 ಜನರು ಮನೆಯ ಸರಕುಗಳ ಜಪ್ತಿಗೆ ಒಳಗಾದವರು. ಮತ್ತು ಶೇ 5 ಜನರು ವಸೂಲಾತಿ ಏಜೆಂಟ್‌ಗಳಿಂದ ದೈಹಿಕ ಅಥವಾ ಲೈಂಗಿಕ ದೌರ್ಜನ್ಯವನ್ನು ವರದಿ ಮಾಡಿದ್ದಾರೆ.

ಈ ಬಿಕ್ಕಟ್ಟು ಉದ್ಭವಿಸಿರುವುದು ಈ ಕ್ಷೇತ್ರದಲ್ಲಿ ತಂದಿರುವ ನೀತಿ ಬದಲಾವಣೆಗಳಿಂದ ಎಂದು ಕಂಡುಬಂದಿದೆ.  2014 ರಲ್ಲಿ ಭಾರತೀಯ ರಿಸರ್ವ ಬ್ಯಾಂಕ್ ಆದ್ಯತೆಯ ವಲಯ ಸಾಲದಲ್ಲಿ ಕಿರುಹಣಕಾಸನ್ನು ಸೇರಿಸುವ ನಿರ್ಧಾರ ಮಾಡಿತು. ಇದು ಬ್ಯಾಂಕುಗಳು ಬಡವರಿಗೆ ನೇರವಾಗಿ ಸಾಲ ನೀಡುವ ಬದಲು ಈ ಕಂಪನಿಗಳಿಗೆ ಹಣಕಾಸು ಒದಗಿಸುವ ಮೂಲಕ ತಮ್ಮ ಬಾಧ್ಯತೆಗಳನ್ನು ಪೂರೈಸಲು ಅವಕಾಶ ಮಾಡಿಕೊಟ್ಟಿತು. ಬ್ಯಾಂಕುಗಳು ವ್ಯಕ್ತಿಗಳಿಗೆ ಸಣ್ಣ ನೇರ ಸಾಲಗಳಿಗಿಂತ ಸಂಸ್ಥೆಗಳಿಗೆ ಬೃಹತ್ ಸಾಲವನ್ನು ಕೊಡಲು ಆದ್ಯತೆ ನೀಡಿದವು. ಪರಿಣಾಮವಾಗಿ, ಸಾರ್ವಜನಿಕ ವಲಯದ ಬ್ಯಾಂಕುಗಳಿಂದ 4ರಿಂದ 8% ಬಡ್ಡಿದರಗಳಲ್ಲಿ ಸಾಲವನ್ನು ಪಡೆಯಬಹುದಾದ ಮಹಿಳೆಯರು ಖಾಸಗಿ ಸಂಸ್ಥೆಗಳಿಗೆ 24ರಿಂದ 26% ಪಾವತಿಸುವಂತಾಯಿತು. ಪಶ್ಚಿಮ ಬಂಗಾಳ ಮತ್ತು ಬಿಹಾರದಂತಹ ರಾಜ್ಯಗಳು ಈಗ ಈ ಹಾನಿಕಾರಕ ಕಿರುಹಣಕಾಸು ಮಾರುಕಟ್ಟೆಯ ಕೇಂದ್ರಬಿಂದುಗಳಾಗಿವೆ .

ಕೇರಳದ ಒಂದು ಪರ್ಯಾಯ ಮಾದರಿ

ಇಂತಹ ಸನ್ನಿವೇಶದಲ್ಲಿ ಕೇರಳವು ತನ್ನ 4146 ಸಾಲ ಸಹಕಾರ ಸಂಘಗಳ ಜಾಲದ ಮೂಲಕ ಪ್ರಬಲ ಪರ್ಯಾಯವನ್ನು ಪ್ರಸ್ತುತಪಡಿಸಿದೆ. ಇದರ ಬುನಾದಿ 3.03 ಕೋಟಿ ಸದಸ್ಯರನ್ನು ಹೊಂದಿರುವ ಪ್ರಾಥಮಿಕ ಕೃಷಿ ಸಾಲ ಸೊಸೈಟಿಗಳು (PACS). ಕೇರಳದ PACS ಸದಸ್ಯತ್ವವು ಭಾರತದಲ್ಲಿಯೇ ಅತಿದೊಡ್ಡದಾಗಿದೆ. ತಮ್ಮ ಸದಸ್ಯರ ಒಡೆತನದಲ್ಲಿರುವ ಮತ್ತು ಪ್ರಜಾಸತ್ತಾತ್ಮಕವಾಗಿ ನಿಯಂತ್ರಿಸಲ್ಪಡುವ ಈ ಸಂಸ್ಥೆಗಳು, ಭಾರತದಲ್ಲಿನ ಎಲ್ಲಾ PACS ಠೇವಣಿಗಳಲ್ಲಿ ಮೂರನೇ ಎರಡರಷ್ಟು ಹಣವನ್ನು ಸಂಗ್ರಹಿಸಿವೆ. ಇದರ ಮೊತ್ತ  ₹121.7 ಶತಕೋಟಿ .

ಈ ಮಾದರಿಯ ಯಶಸ್ಸು ಈ ಸಂಘಗಳ ಸಂರಚನೆ ಮತ್ತು ಉದ್ದೇಶದಲ್ಲಿದೆ. ಲಾಭ-ಚಾಲಿತ ಕಿರುಹಣಕಾಸು ಸಂಸ್ಥೆಗಳಿಗಿಂತ ಭಿನ್ನವಾಗಿ , ಸಹಕಾರಿ ಸಂಸ್ಥೆಗಳು ಸ್ಥಳೀಯವಾಗಿ ಲಾಭವನ್ನು ಮರುಹೂಡಿಕೆ ಮಾಡುತ್ತವೆ. ಇದು ಅವುಗಳನ್ನು ನಿಜವಾಗಿಯೂ ಜನರ ಅಳವಿಗೆ ಸಿಗುವಂತೆ ಮಾಡುತ್ತದೆ. ಕೇರಳದಲ್ಲಿ ಕಡಿಮೆ ಆದಾಯದ ಗ್ರಾಮೀಣ ಕುಟುಂಬಗಳಲ್ಲಿ ಅರ್ಧದಷ್ಟು ಜನರು ಸಾಲಕ್ಕಾಗಿ ಇವುಗಳ ಮೇಲೆ ಅವಲಂಬಿತರಾಗಿದ್ದಾರೆ. ದಲಿತ , ಆದಿವಾಸಿ ಮತ್ತು ಅತ್ಯಂತ ಬಡ ಕುಟುಂಬಗಳು ಗಮನಾರ್ಹವಾಗಿ ಈ ಸೊಸೈಟಿಗಳನ್ನು ಇತರರಿಗಿಂತ ಹೆಚ್ಚು ಅವಲಂಬಿಸಿರುವುದು ಕಂಡು ಬಂದಿದೆ.

ಆರ್‌ಬಿಐ ಮತ್ತು ಸಾಮಾಜಿಕ-ಆರ್ಥಿಕ ಮತ್ತು ಪರಿಸರ ಅಧ್ಯಯನ ಕೇಂದ್ರದ ಅಧ್ಯಯನಗಳು, ಬಡ ಜನರಿಗೆ ಸಹಕಾರಿ ಬ್ಯಾಂಕುಗಳು ವಾಣಿಜ್ಯ ಬ್ಯಾಂಕುಗಳಿಗಿಂತ ಹೆಚ್ಚು ಸುಲಭವಾಗಿವೆ ಮತ್ತು ವಿಶ್ವಾಸಾರ್ಹವಾಗಿ ಕಂಡಿವೆ ಎಂದು ದಾಖಲಿಸಿವೆ. ಏಕೆಂದರೆ ವಾಣಿಜ್ಯ ಬ್ಯಾಂಕುಗಳಲ್ಲಿ, ಸಂಕೀರ್ಣ ಕಾರ್ಯವಿಧಾನಗಳು ಮತ್ತು ಔಪಚಾರಿಕ ವಾತಾವರಣವು ಅಡೆತಡೆಗಳನ್ನು ಸೃಷ್ಟಿಸುತ್ತವೆ.

ಕೇರಳ ಮಾದರಿಯ ಯಶಸ್ಸು ಈ ಸಂಘಗಳ ಸಂರಚನೆ ಮತ್ತು ಉದ್ದೇಶದಲ್ಲಿದೆ. ಲಾಭ-ಚಾಲಿತ ಕಿರುಹಣಕಾಸು ಸಂಸ್ಥೆಗಳಿಗಿಂತ ಭಿನ್ನವಾಗಿ , ಸಹಕಾರಿ ಸಂಸ್ಥೆಗಳು ಸ್ಥಳೀಯವಾಗಿ ಲಾಭವನ್ನು ಮರುಹೂಡಿಕೆ ಮಾಡುತ್ತವೆ. ಇದು ಅವುಗಳನ್ನು ನಿಜವಾಗಿಯೂ ಜನರ ಅಳವಿಗೆ ಸಿಗುವಂತೆ ಮಾಡುತ್ತದೆ.

ಕೇರಳದ ಈ ಮಾದರಿಯು ಅಲ್ಲಿನ ಜಾತಿ-ವಿರೋಧಿ ಹೋರಾಟಗಳು, ಸಾಮಾಜಿಕ ಸುಧಾರಣೆ ಮತ್ತು ಕಮ್ಯುನಿಸ್ಟ್ ಚಳುವಳಿಯಿಂದ ಹೊರಹೊಮ್ಮಿದೆ. 1957 ರಲ್ಲಿ ಅಲ್ಲಿನ ಮೊದಲ ಕಮ್ಯುನಿಸ್ಟ್‍ ಸರಕಾರ ತಂದ ಭೂ ಸುಧಾರಣೆಗಳ ನಂತರ, ಸಾಲ ಸಹಕಾರಿ ಸಂಘಗಗಳು ಸಣ್ಣ ರೈತರಿಗೆ ಅಗತ್ಯವಾದ ಬಂಡವಾಳವನ್ನು ಒದಗಿಸಿದವು.  ಇದರಿಂದಾಗಿ ಅವರು ಭೂಮಾಲೀಕರ ಸಾಲಕ್ಕೆ ಸಿಲುಕದಂತೆ ರಕ್ಷಣೆ ಸಿಕ್ಕಿತು.

ಪಳ್ಳಿಯಕ್ಕಲ್ ಸೇವಾ ಸಹಕಾರಿ ಬ್ಯಾಂಕ್ ಈ ತತ್ವಕ್ಕೆ ಒಂದು ಉದಾಹರಣೆ. 2000 ದಲ್ಲಿ, ಸದಸ್ಯರು ಬಲಾತ್ಕಾರದ ಸಾಲ ವಸೂಲಾತಿ ಬಹಳ ಕೆಳಮಟ್ಟಕ್ಕಿಳಿದ ಸಂದರ್ಭದಲ್ಲಿ, ಅದು ವಸೂಲಿಗಳನ್ನು ಬಿಗಿಗೊಳಿಸುವ ನಿರ್ಧಾರಕ್ಕೆ ಬರುವ ಬದಲು, ಸಮುದಾಯವನ್ನು ಹೇಗೆ ಹೆಚ್ಚು ಸಮೃದ್ಧಗೊಳಿಸುವುದು ಎಂದು ಕೇಳಲು ನಿರ್ಧರಿಸಿತು. ಬ್ಯಾಂಕ್ ಸ್ಥಳೀಯ ಆಹಾರ ಸ್ವಾವಲಂಬನೆಗಾಗಿ ಸಮಗ್ರ ಯೋಜನೆಯನ್ನು ಅಭಿವೃದ್ಧಿಪಡಿಸಿತು.  ಏಳು ಕೃಷಿ ವಲಯಗಳಲ್ಲಿ ಪರಸ್ಪರ ಸಹಾಯ ಗುಂಪುಗಳನ್ನು ರೂಪಿಸಿತು. ಇದು ಸಂಸ್ಕರಣಾ ಸೌಲಭ್ಯಗಳು ಮತ್ತು ಪ್ರೀಮಿಯಂ ಮಾರುಕಟ್ಟೆಯನ್ನು ಸ್ಥಾಪಿಸುವುದರ ಜೊತೆಗೆ ಸಾಲ, ತರಬೇತಿ, ಸಲಹಾ ಮತ್ತು ಮಾರುಕಟ್ಟೆ ಸಂಪರ್ಕಗಳನ್ನು ಒದಗಿಸಿತು. ಇಂದು, 1000 ಕ್ಕೂ ಹೆಚ್ಚು ಕುಟುಂಬಗಳು ಇದರಲ್ಲಿ ಭಾಗವಹಿಸುತ್ತಿವೆ ಮತ್ತು ಬ್ಯಾಂಕ್ ತನ್ನ ಸುಸ್ಥಿರತೆಗಾಗಿ ಬಲಾತ್ಕಾರದ ವಸೂಲಿಯ ಕ್ರಮಗಳನ್ನು ವಹಿಸಬೇಕಾಗಿ ಬರಲಿಲ್ಲ,  ಬದಲಿಗೆ, ಸಮುದಾಯದ ಸಮೃದ್ಧಿಯಿಂದ ಅದನ್ನು ಸಾಧಿಸಿದೆ

ನಿಜದಲ್ಲಿ  ಇದು ವಿಮೋಚನೆ: ಏಕೆಂದರೆ ಇಲ್ಲಿ ಬ್ಯಾಂಕ್ ಅದರ ಸದಸ್ಯರ ನಿಯಂತ್ರಣದಲ್ಲಿದೆ, ಅದು ನ್ನಸದಸ್ಯರ ಹಿತ ಕಾಪಾಡಲು ಸಾಮೂಹಿಕವಾಗಿ ಹೂಡಿಕೆ ಮಾಡುತ್ತವೆ ಮತ್ತು ಸಮಸ್ಯೆಗಳನ್ನು ಪ್ರಜಾಸತ್ತಾತ್ಮಕವಾಗಿ ಪರಿಹರಿಸುತ್ತವೆ. ಕೇರಳದ ಸಹಕಾರಿ ಸಂಸ್ಥೆಗಳು ಮತ್ತು ವಾಣಿಜ್ಯ ಕಿರುಬಂಡವಾಳಗಳ ನಡುವಿನ ಸಂರಚನಾತ್ಮಕ ವ್ಯತ್ಯಾಸವು ಒಂದು ಹಣಕಾಸು ವ್ಯವಸ್ಥೆಯ ಉದ್ದೇಶವು ಅದರ ಮಾಲೀಕತ್ವದಿಂದ ನಿರ್ಧರಿಸಲ್ಪಡುತ್ತದೆ ಮತ್ತು ಅದರ ಫಲಿತಾಂಶಗಳನ್ನು ನಿರ್ದೇಶಿಸುತ್ತದೆ ಎಂಬ ಮೂಲಭೂತ ಸತ್ಯವನ್ನು ಬಹಿರಂಗಪಡಿಸುತ್ತದೆ ಎಂದು ಈ ಕುರಿತ ಅಧ್ಯಯನ ನಡೆಸಿರುವವರು ಹೇಳುತ್ತಾರೆ.

ವಾಣಿಜ್ಯ ಕಿರುಹಣಕಾಸು ಸಂಸ್ಥೆಗಳು, ವಿಶೇಷವಾಗಿ 2000 ರ ದಶಕದ ವಾಣಿಜ್ಯೀಕರಣದ ನಂತರ, ಲಾಭ ಗಳಿಸುವ ಸಾಧನಗಳಾದವು. ಆಗಸ್ಟ್ 2010 ರಲ್ಲಿ, ಎಸ್‌ಕೆಎಸ್ ಮೈಕ್ರೋಫೈನಾನ್ಸ್ ಎಂಬ ಪ್ರಸಿದ್ಧ ಸಂಸ್ಥೆ ಮಾರುಕಟ್ಟೆಗೆ ಬಂದು ತನ್ನ ಶೇರುಗಳನ್ನು ವಿತರಣೆ ಮಾಡಿತು. ಹೂಡಿಕೆದಾರರು ಇದನ್ನು ಆರ್ಥಿಕ ಸೇರ್ಪಡೆಯ(inclusiveness) ಯಶೋಗಾಥೆ ಎಂದು ಹೊಗಳಿದರು. ಕೆಲವೇ ತಿಂಗಳುಗಳಲ್ಲಿ, ಆಂಧ್ರಪ್ರದೇಶವು ಮೈಕ್ರೋಫೈನಾನ್ಸ್ ಬಿಕ್ಕಟ್ಟಿನಲ್ಲಿ ಮುಳುಗಿತು. ಸಾಲದ ಸುಳಿಯಲ್ಲಿ ಸಿಲುಕಿದ್ದ 200 ಕ್ಕೂ ಹೆಚ್ಚು ಸಾಲಗಾರರು ಆತ್ಮಹತ್ಯೆಯಿಂದ ಸಾವನ್ನಪ್ಪಿದರು.

ಇದು ಒಂದು ಕ್ರೂರ ಸತ್ಯವನ್ನು ಬಯಲಿಗೆ ತಂದಿತು. ಬಡವರಿಗೆ ಬ್ಯಾಂಕಿಂಗ್ ಎಂದು ಪ್ರಚಾರ ಮಾಡಲಾಗುತ್ತಿದ್ದದ್ದು ಶ್ರೀಮಂತ ಹೂಡಿಕೆದಾರರಿಗೆ ಕಳಪೆ ಬ್ಯಾಂಕಿಂಗ್ ಆಗಿ ಮಾರ್ಪಟ್ಟಿತು. ಇದಕ್ಕೆ ಮಹಿಳೆಯರನ್ನು ಗುರಿಯಾಗಿಸಿಕೊಳ್ಳುವುದು ಸಾಮಾಜಿಕ ರೂಢಿಯನ್ನು ಬಳಸಿಕೊಂಡ ಒಂದು ಸಿನಿಕತನದ ಲೆಕ್ಕಾಚಾರವಾಗಿತ್ತು. ಏಕೆಂದರೆ  ಇಲ್ಲಿ ಮಹಿಳೆಯರಿಗೆ ಸಾಲದ ಹಣದ ಮೇಲೆ ನಿಯಂತ್ರಣವಿಲ್ಲದಿದ್ದರೂ, ಮರುಪಾವತಿ ಮತ್ತು ಸಂಬಂಧಿತ ಕಿರುಕುಳದ ಹೊರೆಯನ್ನು ಅವರೇ ಹೊರಬೇಕಾಗುತ್ತದೆ.

ಇದಕ್ಕೆ ವ್ಯತಿರಿಕ್ತವಾಗಿ, ಜಾತಿ-ವಿರೋಧಿ ಮತ್ತು ಕಾರ್ಮಿಕ ವರ್ಗದ ಚಳುವಳಿಗಳಿಂದ ಕಟ್ಟಿದ ಕೇರಳದ ಸಹಕಾರಿ ಸಂಸ್ಥೆಗಳು ಸಾಲವನ್ನು ಸಾಮೂಹಿಕ ಶಕ್ತಿಗಾಗಿ ಒಂದು ಸಾಧನವಾಗಿ ನೋಡುತ್ತವೆ. ಅವರ ಸದಸ್ಯ-ಮಾಲೀಕತ್ವದ, ಪ್ರಜಾಪ್ರಭುತ್ವ ರಚನೆಯು ಸಮುದಾಯದ ಸಮೃದ್ಧಿಯನ್ನು ಪ್ರಮುಖ ಧ್ಯೇಯವನ್ನಾಗಿ ಮಾಡುತ್ತದೆ. ಕಡಿಮೆ ಸಾಲ ವಸೂಲಾತಿಯಂತಹ ಸವಾಲುಗಳನ್ನು ಎದುರಿಸುವಾಗ, ಪಲ್ಲಿಯಕ್ಕಿಲ್‌ನಂತಹ ಸಹಕಾರಿ ಸಂಸ್ಥೆಯು ಇಡೀ ಸಮುದಾಯವನ್ನು ಉನ್ನತೀಕರಿಸಲು ಕೃಷಿ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡುತ್ತದೆ. ಲಾಭಕ್ಕಾಗಿ ಅಲ್ಲ. ಗರಿಷ್ಠ ಲಾಭ ಮಾಡಲು ಅಲ್ಲ. ಬದಲಿಗೆ  ಸದಸ್ಯರ-ಮಾಲೀಕತ್ವದ ಸಂಸ್ಥೆ ಯನ್ನು ಬೆಳೆಸಲು.

ಭಾರತದ ಮುಂದಿರುವ ಆಯ್ಕೆ

ಭಾರತವು ಒಂದು ಸ್ಪಷ್ಟ ಆಯ್ಕೆಯನ್ನು ಎದುರಿಸುತ್ತಿದೆ. ಕ್ರೆಡಿಟ್ ರೇಟಿಂಗ್ ಏಜೆನ್ಸಿ ಬ್ರಿಕ್‌ವರ್ಕ್ ರೇಟಿಂಗ್‌ಗಳ ಪ್ರಕಾರ, ಮೈಕ್ರೋಫೈನಾನ್ಸ್‌ನಲ್ಲಿನ ಕೆಟ್ಟ ಸಾಲಗಳು ಮಾರ್ಚ್ 2025 ರ ವೇಳೆಗೆ ಸುಮಾರು ದ್ವಿಗುಣಗೊಂಡು 16% ಕ್ಕೆ ತಲುಪಿವೆ. 2025 ರ ಹಣಕಾಸು ವರ್ಷದಲ್ಲಿ, ಈ ಕಂಪನಿಗಳ ಸಾಲನೀಡಿಕೆ ಹಿಂದಿನ ವರ್ಷಕ್ಕಿಂತ 25.4% ಕಡಿಮೆ ಯಾಗಿದೆ ಮತ್ತು ಅನೇಕ ಸಾಲಗಾರರು ಮರುಪಾವತಿ ಮಾಡಲು ಹೆಣಗಾಡುತ್ತಲೇ ಇದ್ದಾರೆ. ನಿಯಂತ್ರಣ ಮಾರ್ಗಸೂಚಿಗಳ ಹೊರತಾಗಿಯೂ ಸಾಲ ವಸೂಲಾತಿ ಏಜೆಂಟ್‌ಗಳಿಂದ ಕಿರುಕುಳ ಮುಂದುವರೆದಿದೆ ಎಂದು ಮಹಿಳಾ ಸಂಘಟನೆಗಳು ವರದಿ ಮಾಡಿವೆ.

ಆಗಸ್ಟ್ 2025ರಲ್ಲಿ ನಡೆದ AIDWA ವಿಚಾರಣೆಯು ಕೆಲವು ಮೂರ್ತ  ಶಿಫಾರಸುಗಳನ್ನು ಮಾಡಿದೆ: ಮಹಿಳೆಯರಿಗೆ 4% ದರದಲ್ಲಿ ಕೈಗೆಟುಕುವ ಸಾಲ ಪಡೆಯುವ ಕಾನೂನುಬದ್ಧ ಹಕ್ಕು; ಬಡ್ಡಿದರದ ಮೇಲೆ ಗರಿಷ್ಟ ಮಿತಿಗಳು; ಆದ್ಯತಾ ವಲಯದ ಸಾಲದಿಂದ ಮೈಕ್ರೋಫೈನಾನ್ಸ್ ಗಳನ್ನು ತೆಗೆಯುವುದು; ಮತ್ತು ನೇರ ಸಾರ್ವಜನಿಕ ಬ್ಯಾಂಕಿಂಗ್ ಅನ್ನು ವಿಸ್ತರಿಸುವುದು. ಇವು ಕಾರ್ಯಸಾಧ್ಯವಲ್ಲದ ಪ್ರಸ್ತಾಪಗಳೇನಲ್ಲ. ಕೇರಳದಲ್ಲಿ ಇದು ದಶಕಗಳಿಂದ ಚಾಲ್ತಿಯಲ್ಲಿದೆ ಎಂದು  ಟ್ರೈಕಾಂಟಿನೆಂಟಲ್  ಇನ್ಸ್ಟಿಟ್ಯೂಟ್ ಫಾರ್ ಸೋಶಿಯಲ್ ರಿಸರ್ಚ್ ನಡೆಸಿದ ಡಿಸೆಂಬರ್ 2025 ರ ಅಧ್ಯಯನ ಹೇಳುತ್ತದೆ.

2014 ರಿಂದ 2024 ರ ನಡುವೆ, ಭಾರತೀಯ ಬ್ಯಾಂಕುಗಳು ಒಟ್ಟು ₹16.35 ಲಕ್ಷ ಕೋಟಿ ಮರುಪಾವತಿಯಾಗದ ಸಾಲಗಳನ್ನು  ವಜಾ ಮಾಡಿವೆ ಎನ್ನುತ್ತವೆ  ಸರ್ಕಾರಿ ದತ್ತಾಂಶಗಳು. ಈ ‘ಕೆಟ್ಟ ಸಾಲ’ಗಳಲ್ಲಿ ಕೇವಲ 16% ಮಾತ್ರ ವಸೂಲಿಯಾಗಿದೆ . ಇತ್ತ ಬದುಕುಳಿಯಲು ಸಾಲ ಪಡೆಯುವ ಬಡ ಮಹಿಳೆಯರು ಮೈಕ್ರೋಫೈನಾನ್ಸ್ ಕಂಪನಿಗಳಿಗೆ 22-26% ಬಡ್ಡಿದರಗಳನ್ನು ಪಾವತಿಸುವ ಪರಿಸ್ಥಿತಿ ಏಕಿರಬೇಕು ಎಂಬುದು ಸಹಜವಾಗಿ ಏಳುವ ಪ್ರಶ್ನೆ.  ಈ ಮಹಿಳೆಯರು  ಕೈಗೆಟುಕುವ ಸಾಲದ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ತಾವು   ದಾನ ಕೇಳುತ್ತಿಲ್ಲ, ನ್ಯಾಯ ಕೇಳುತ್ತಿದ್ದೇವೆ ಎನ್ನುತ್ತಾರೆ ಅವರು. ಮಾನವ ಘನತೆಯನ್ನು ಕೇವಲ  ಸಬ್ಸಿಡಿ ಅಕ್ಕಿಯಿಂದ ಮಾತ್ರ ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ; ಅದಕ್ಕೆ ಶೋಷಣೆಯಿಲ್ಲದ ಬಂಡವಾಳದ ಲಭ್ಯತೆಯೂ ಇರಬೇಕು  ಎನ್ನುವುದು ನ್ಯಾಯಬದ್ಧ ಆಗ್ರಹ ತಾನೇ.

ಮಹಿಳೆಯರು  ಕೈಗೆಟುಕುವ ಸಾಲದ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ತಾವು   ದಾನ ಕೇಳುತ್ತಿಲ್ಲ, ನ್ಯಾಯ ಕೇಳುತ್ತಿದ್ದೇವೆ ಎನ್ನುತ್ತಾರೆ ಅವರು. ಮಾನವ ಘನತೆಯನ್ನು ಕೇವಲ  ಸಬ್ಸಿಡಿ ಅಕ್ಕಿಯಿಂದ ಮಾತ್ರ ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ; ಅದಕ್ಕೆ ಶೋಷಣೆಯಿಲ್ಲದ ಬಂಡವಾಳದ ಲಭ್ಯತೆಯೂ ಇರಬೇಕು  ಎನ್ನುವುದು ನ್ಯಾಯಬದ್ಧ ಆಗ್ರಹ ತಾನೇ.

ವೈಯಕ್ತಿಕ ದುರಂತಗಳು ವ್ಯವಸ್ಥೆಯ ಕ್ರೌರ್ಯವನ್ನು ಬಯಲಿಗೆಳೆಯುತ್ತವೆ: ಪಶ್ಚಿಮ ಬಂಗಾಳದ ಮಯೂರಿ ನಸ್ಕರ್ ಅಂತಹ ಮಹಿಳೆಯರು , ಕಿರುಬಂಡವಾಳದ ಕಿರುಕುಳದಿಂದ ತಪ್ಪಿಸಿಕೊಳ್ಳಲು ವಿಷ ಸೇವಿಸಿ ನಂತರ ಕಣ್ಮರೆಯಾದದ್ದು ಲಾಭ ಪಿಪಾಸೆಯ ನಿರೀಕ್ಷಿತ ಫಲಿತಾಂಶಗಳು. ಕೇರಳದ 3.03 ಕೋಟಿ ಸಹಕಾರಿ ಸೊಸೈಟಿಗಳ ಸದಸ್ಯರು ಇದಕ್ಕೊಂದು ಪರ್ಯಾಯ  ವ್ಯವಸ್ಥೆ ಸಾಧ್ಯ ಎಂದು ಸಾಬೀತುಪಡಿಸಿದ್ದಾರೆ.  ಮೇಲೆ ಹೇಳಿದ ಟ್ರೈಕಾಂಟಿನೆಂಟಲ್: ಇನ್ಸ್ಟಿಟ್ಯೂಟ್ ಫಾರ್ ಸೋಶಿಯಲ್ ರಿಸರ್ಚ್ ನಡೆಸಿದ ಡಿಸೆಂಬರ್ 2025 ರ ಅಧ್ಯಯನವು ಕೇರಳದ ಸಹಕಾರಿ ಬ್ಯಾಂಕಿಂಗ್ ವ್ಯವಸ್ಥೆಯು ವಾಣಿಜ್ಯ ಕಿರುಬಂಡವಾಳ ಭರವಸೆ ನೀಡಿ ಸಾಧಿಸಲು ವಿಫಲವಾದದ್ದನ್ನು ಹೇಗೆ ಸಾಧಿಸಿದೆ ಎಂಬುದನ್ನು ದಾಖಲಿಸಿದೆ. ಅದು ಶೋಷಣೆ ಇಲ್ಲದೆ ನಿಜವಾದ ಆರ್ಥಿಕ ಸೇರ್ಪಡೆ  ಕಾರ್ಯಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದೆ ಎಂದು ಈ ಅಧ್ಯಯನ ಹೇಳುತ್ತದೆ.

ಇಲ್ಲಿರುವ ಪ್ರಶ್ನೆ ರಾಜಕೀಯ ಇಚ್ಛಾಶಕ್ತಿಯದ್ದು. ನೀಲನಕ್ಷೆ ಅಸ್ತಿತ್ವದಲ್ಲಿದೆ.  ಆಗಸ್ಟ್ 2025ರ AIDWA ವಿಚಾರಣೆಯಲ್ಲಿ ಮಹಿಳೆಯರು ವೈಯಕ್ತಿಕ ದುಃಖವನ್ನು ಸಾಮೂಹಿಕ ಬೇಡಿಕೆಯಾಗಿ ಪರಿವರ್ತಿಸಿದರು: ಸಾಲವು ಸಬಲೀಕರಣಗೊಳಿಸಬೇಕು, ಗುಲಾಮಗಿರಿಗೆ ಇಳಿಸಬಾರದು. ಭಾರತ ಈಗ ಆಯ್ಕೆ ಮಾಡಬೇಕಾಗಿರುವುದು ಬಂಡವಾಳ ಅಥವ ಸಮುದಾಯ, ಶೋಷಣೆ ಅಥವ ಸಹಕಾರ

ಮತ್ತು  ಸಾಲ ಅಥವ  ಬದುಕು ಇವುಗಳ ನಡುವೆ. ಸಹಜವಾಗಿಯೇ ಅದು ಸಮುದಾಯ, ಸಹಕಾರ ಮತ್ತು ಬದುಕನ್ನು ಆಯ್ಕೆ ಮಾಡಬೇಕಾಗಿದೆ. ಅದು ಸಾಧ್ಯ ಎಂದು ಕೇರಳ ಮಾದರಿಯು ಸಾಬೀತುಪಡಿಸುತ್ತದೆ. ಉಳಿದಿರುವುದು ಅದನ್ನು ಕಾರ್ಯಗತಗೊಳಿಸುವ ರಾಜಕೀಯ ಇಚ್ಛಾಶಕ್ತಿ.

Donate Janashakthi Media

Leave a Reply

Your email address will not be published. Required fields are marked *