ಬಡವರನ್ನು ಸಾರ್ವಜನಿಕ ಸ್ಥಳಗಳಿಂದ ತೆರವುಗೊಳಿಸುವ ಬದಲು ಸಾಮಾಜಿಕ-ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಆಗ್ರಹ
ಬೆಂಗಳೂರು: 2027ರೊಳಗೆ ಬೆಂಗಳೂರನ್ನು “ಭಿಕ್ಷುಕರ ಮುಕ್ತ” ನಗರವನ್ನಾಗಿ ಮಾಡುವ ಕರ್ನಾಟಕ ಸರ್ಕಾರದ ಪ್ರಸ್ತಾವನೆಗೆ ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿ (MGSP) ತೀವ್ರ ವಿರೋಧ ವ್ಯಕ್ತಪಡಿಸಿದೆ. ನಗರದೊಳಗೆ ವಾಸಿಸುವ ಹಾಗೂ ಬದುಕಿಗಾಗಿ ಹೋರಾಡುತ್ತಿರುವ ಪ್ರತಿಯೊಬ್ಬರ ಘನತೆ, ಸ್ವಾಯತ್ತತೆ ಮತ್ತು ಸಂವಿಧಾನಾತ್ಮಕ ಹಕ್ಕುಗಳನ್ನು ಗೌರವಿಸುವ ಹಕ್ಕು-ಆಧಾರಿತ ಕ್ರಮವನ್ನು ಸರ್ಕಾರ ಅನುಸರಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ. ಭಿಕ್ಷುಕರ
ಸರ್ಕಾರ ಘೋಷಿಸಿರುವ “ಜಾಗೃತಿ, ರಕ್ಷಣೆ ಮತ್ತು ಪುನರ್ವಸತಿ” ಎಂಬ ಮೂರು ಹಂತಗಳ ಕಾರ್ಯಕ್ರಮದ ಬಗ್ಗೆ ಆತಂಕ ವ್ಯಕ್ತಪಡಿಸಿರುವ MGSP, ಮೊದಲ ಹಂತದಲ್ಲಿ ಸಾರ್ವಜನಿಕರು ಭಿಕ್ಷೆ ನೀಡುವುದನ್ನು ನಿರುತ್ಸಾಹಗೊಳಿಸುವುದು, ಬಳಿಕ “ರಕ್ಷಣೆ” ಕಾರ್ಯಾಚರಣೆ ನಡೆಸುವುದು ಮತ್ತು ಸರ್ಕಾರಿ ನಿರ್ವಹಣೆಯ ಕೇಂದ್ರಗಳಲ್ಲಿ ಪುನರ್ವಸತಿ ಕಲ್ಪಿಸುವ ಯೋಜನೆ ರೂಪಿಸಲಾಗಿದೆ ಎಂದು ಹೇಳಿದೆ.
ಭಿಕ್ಷೆ ಬೇಡುವ ಪರಿಸ್ಥಿತಿ ಮೂಲಭೂತವಾಗಿ ಸಾಮಾಜಿಕ-ಆರ್ಥಿಕ ಸಮಸ್ಯೆಯಾಗಿದೆ. ಬಡತನ, ಸಾಮಾಜಿಕ ಬಹಿಷ್ಕಾರ, ನಿರಾಶ್ರಿತತೆ, ಅಂಗವೈಕಲ್ಯ, ಲಿಂಗತ್ವ, ಸಾಮಾಜಿಕ ಭದ್ರತೆಯ ಕೊರತೆ ಹಾಗೂ ಸೀಮಿತ ಜೀವನೋಪಾಯದ ಅವಕಾಶಗಳು ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಇಂತಹ ಸಮಸ್ಯೆಯನ್ನು ಪೊಲೀಸ್ ಕ್ರಮ ಅಥವಾ “ರಕ್ಷಣೆ” ಕಾರ್ಯಾಚರಣೆಯ ಮೂಲಕ ಮಾತ್ರ ಪರಿಹರಿಸಲು ಮುಂದಾದರೆ, ಮೂಲ ಕಾರಣಗಳನ್ನು ಬದಿಗೊತ್ತಿ ನಿಗಾ, ಬಂಧನ, ಸ್ಥಳಾಂತರ ಮತ್ತು ಬಲವಂತದ ಪುನರ್ವಸತಿಗೆ ದಾರಿ ಮಾಡಿಕೊಡುವ ಅಪಾಯವಿದೆ ಎಂದು MGSP ತಿಳಿಸಿದೆ.
ಕೇಂದ್ರದ ಉಪಕ್ರಮದ ಭಾಗ
ಬೆಂಗಳೂರಿನಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ಈ ಅಭಿಯಾನವು ಕೇಂದ್ರ ಸರ್ಕಾರದ ವಿಶಾಲ ಉಪಕ್ರಮದ ಭಾಗವಾಗಿದೆ ಎಂದು ಸಂಘಟನೆ ಹೇಳಿದೆ. ಜನವರಿ 2026ರಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು SMILE ಯೋಜನೆಯಡಿ “ಭಿಕ್ಷುಕರ ಮುಕ್ತ” ಉಪಕ್ರಮಕ್ಕಾಗಿ ದೆಹಲಿ, ಮುಂಬೈ, ಕೊಲ್ಕತ್ತಾ, ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್ ನಗರಗಳನ್ನು ಗುರುತಿಸಿತ್ತು.
ನಗರಗಳನ್ನು “ಭಿಕ್ಷುಕರ ಮುಕ್ತ”ಗೊಳಿಸುವ ಹೆಸರಿನಲ್ಲಿ ಬಡ ಜನರನ್ನು ಅಗೋಚರಗೊಳಿಸುವುದು ಅಥವಾ ಸಾರ್ವಜನಿಕ ಸ್ಥಳಗಳಿಂದ ತೆರವುಗೊಳಿಸುವುದು ಪರಿಹಾರವಲ್ಲ. ಬದಲಾಗಿ, ಸಾಮಾಜಿಕ ಭದ್ರತೆ ಮತ್ತು ಗೌರವಯುತ ಜೀವನೋಪಾಯಕ್ಕೆ ಅಗತ್ಯವಾದ ಬೆಂಬಲವನ್ನು ಬಲಪಡಿಸಬೇಕು ಎಂದು MGSP ಒತ್ತಾಯಿಸಿದೆ. ಭಿಕ್ಷುಕರ
ಇದನ್ನೂ ಓದಿ :ಔಷಧಗಳ ಬೆಲೆಯಲ್ಲಿ ಭಾರಿ ಅಂತರ; ಕೇಂದ್ರದ ಮಧ್ಯಪ್ರವೇಶಕ್ಕೆ ಕರ್ನಾಟಕ ಆಗ್ರಹ
ಲಿಂಗತ್ವ ಅಲ್ಪಸಂಖ್ಯಾತರ ಗುರಿಪಡಿಸುವಿಕೆಗೆ ವಿರೋಧ
ಕರ್ನಾಟಕದಲ್ಲಿ ಭಿಕ್ಷೆ ಬೇಡುವಿಕೆ ಹೆಚ್ಚಾಗಲು “ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ ಭಿಕ್ಷಾಟನೆ” ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಸರ್ಕಾರ ಗುರುತಿಸಿರುವುದಕ್ಕೂ ಸಂಘಟನೆ ತೀವ್ರ ಆತಂಕ ವ್ಯಕ್ತಪಡಿಸಿದೆ. ಇದು ಲಿಂಗತ್ವ ಅಲ್ಪಸಂಖ್ಯಾತರನ್ನು ಕಳಂಕಿತಗೊಳಿಸುವ ಹಾಗೂ ಅವರ ವಿರುದ್ಧ ಗುರಿಪಡಿಸಿದ ನಿಗಾ ಮತ್ತು ಪ್ರೊಫೈಲಿಂಗ್‌ಗೆ ಕಾರಣವಾಗುವ ಸಾಧ್ಯತೆಯಿದೆ ಎಂದು ಹೇಳಿದೆ.
ಲಿಂಗತ್ವ ಅಲ್ಪಸಂಖ್ಯಾತರು ದೀರ್ಘಕಾಲದಿಂದ ಶಿಕ್ಷಣ, ಉದ್ಯೋಗ, ವಸತಿ ಮತ್ತು ಸಾಮಾಜಿಕ ಭದ್ರತೆಯಿಂದ ಹೊರಗುಳಿದಿದ್ದಾರೆ. ಇದರ ಪರಿಣಾಮವಾಗಿ ಕೆಲವರು ಅನೌಪಚಾರಿಕ ಹಾಗೂ ಅಸ್ಥಿರ ಜೀವನೋಪಾಯವನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸರ್ಕಾರದ ಪ್ರತಿಕ್ರಿಯೆ ಪೊಲೀಸ್ ಕ್ರಮ ಅಥವಾ ಬಲವಂತದ ಪುನರ್ವಸತಿಯಾಗದೆ, ಸಾಮಾಜಿಕ ಮತ್ತು ಆರ್ಥಿಕ ಬೆಂಬಲವಾಗಿರಬೇಕು ಎಂದು MGSP ಹೇಳಿದೆ.
ಸ್ವಯಂಪ್ರೇರಿತ ಭಿಕ್ಷಾಟನೆ ಮತ್ತು ಬಲವಂತದ ಭಿಕ್ಷಾಟನೆ ನಡುವೆ ವ್ಯತ್ಯಾಸ ಅಗತ್ಯ
ಬದುಕಿಗಾಗಿ ಸ್ವಯಂಪ್ರೇರಣೆಯಿಂದ ಭಿಕ್ಷೆ ಬೇಡುವ ವಯಸ್ಕರು ಮತ್ತು ಮಾನವ ಕಳ್ಳಸಾಗಣೆ, ಬಲವಂತದ ಭಿಕ್ಷಾಟನೆ ಅಥವಾ ಶೋಷಣೆಗೆ ಒಳಗಾಗುವ ವ್ಯಕ್ತಿಗಳ ನಡುವೆ ಸ್ಪಷ್ಟವಾದ ವ್ಯತ್ಯಾಸವನ್ನು ಸರ್ಕಾರ ಗುರುತಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಮಾನವ ಕಳ್ಳಸಾಗಣೆ ಹಾಗೂ ಬಲವಂತದ ಭಿಕ್ಷಾಟನೆಯನ್ನು ತಡೆಯಲು ಪರಿಣಾಮಕಾರಿ ರಾಜ್ಯ ಹಸ್ತಕ್ಷೇಪ ಅಗತ್ಯ. ಆದರೆ ಬದುಕಿಗಾಗಿ ಸ್ವಯಂಪ್ರೇರಣೆಯಿಂದ ಭಿಕ್ಷೆ ಬೇಡುವ ವಯಸ್ಕರ ಸ್ವಾಯತ್ತತೆ, ಸ್ವಾತಂತ್ರ್ಯ ಮತ್ತು ಘನತೆಯ ಹಕ್ಕನ್ನು ಗೌರವಿಸಬೇಕು. ಅವರನ್ನು ಬಂಧಿಸುವುದು, ಸಾರ್ವಜನಿಕ ಸ್ಥಳಗಳಿಂದ ಬಲವಂತವಾಗಿ ತೆರವುಗೊಳಿಸುವುದು ಅಥವಾ ಬಲವಂತದ “ಪುನರ್ವಸತಿ”ಗೆ ಒಳಪಡಿಸುವುದು ಸೂಕ್ತವಲ್ಲ ಎಂದು ತಿಳಿಸಿದೆ.
ಅಗತ್ಯವಿರುವವರಿಗೆ ಸರ್ಕಾರ ಸ್ವಯಂಪ್ರೇರಿತ ಹಾಗೂ ಸುಲಭವಾಗಿ ಲಭ್ಯವಾಗುವ ವಸತಿ, ಆರೋಗ್ಯ ಸೇವೆ, ಸಾಮಾಜಿಕ ಭದ್ರತೆ ಮತ್ತು ಗೌರವಯುತ ಜೀವನೋಪಾಯದ ಅವಕಾಶಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದೆ.
ಭಿಕ್ಷಾಟನೆ ನಿಷೇಧ ಕಾಯ್ದೆ ರದ್ದುಪಡಿಸಲು ಒತ್ತಾಯ
ಕರ್ನಾಟಕ ಭಿಕ್ಷಾಟನೆ ನಿಷೇಧ ಕಾಯ್ದೆ, 1975 ಅನ್ನು ರದ್ದುಪಡಿಸಿ, ಭಿಕ್ಷೆ ಬೇಡುವಿಕೆಯನ್ನು ಅಪರಾಧಮುಕ್ತಗೊಳಿಸಬೇಕು ಎಂದು MGSP ಆಗ್ರಹಿಸಿದೆ. Harsh Mander v. Union of India ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಭಿಕ್ಷೆ ಬೇಡುವಿಕೆಯನ್ನು ಅಪರಾಧೀಕರಿಸುವ ದೆಹಲಿ ಕಾನೂನಿನ ಕೆಲವು ನಿಬಂಧನೆಗಳನ್ನು ರದ್ದುಗೊಳಿಸಿತ್ತು. ಇದೇ ರೀತಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಕೂಡ ಅಲ್ಲಿನ ಭಿಕ್ಷಾಟನೆ ವಿರೋಧಿ ಕಾನೂನನ್ನು ರದ್ದುಗೊಳಿಸಿದೆ. ಬಡತನ ಮತ್ತು ಸಾಮಾಜಿಕ ವಂಚನೆಯಂತಹ ಸಮಸ್ಯೆಗಳನ್ನು ಅಪರಾಧ ಕಾನೂನಿನ ಮೂಲಕ ಪರಿಹರಿಸುವ ವಿಧಾನವೇ ಪ್ರಶ್ನಾರ್ಹವಾಗಿದೆ ಎಂದು ಈ ತೀರ್ಪುಗಳು ತೋರಿಸುತ್ತವೆ ಎಂದು ಸಂಘಟನೆ ಹೇಳಿದೆ.
ಬಡವರನ್ನು ಅಗೋಚರಗೊಳಿಸುವುದು ಪರಿಹಾರವಲ್ಲ
ಬೆಂಗಳೂರಿನಲ್ಲಿ ಅನೌಪಚಾರಿಕ ಜೀವನೋಪಾಯವನ್ನು ಅವಲಂಬಿಸಿರುವ ಬೀದಿ ವ್ಯಾಪಾರಿಗಳು, ಪೌರಕಾರ್ಮಿಕರು ಮತ್ತು ಇತರ ಕಾರ್ಮಿಕ ವರ್ಗದ ಸಮುದಾಯಗಳ ಮೇಲಿನ ವ್ಯಾಪಕ ಒತ್ತಡದ ಹಿನ್ನೆಲೆಯಲ್ಲಿ “ಭಿಕ್ಷುಕರ ಮುಕ್ತ ಬೆಂಗಳೂರು” ಯೋಜನೆಯನ್ನು ನೋಡಬೇಕು ಎಂದು MGSP ಹೇಳಿದೆ.
ಬಡವರು ಮತ್ತು ಅಂಚಿನಲ್ಲಿರುವ ಜನರ ಸಾರ್ವಜನಿಕ ಸ್ಥಳಗಳಲ್ಲಿನ ಅಸ್ತಿತ್ವವನ್ನೇ ಅನಪೇಕ್ಷಿತವೆಂದು ಪರಿಗಣಿಸುವ ಮನೋಭಾವಕ್ಕೆ ಈ ಯೋಜನೆ ಮತ್ತಷ್ಟು ಬಲ ನೀಡುವ ಅಪಾಯವಿದೆ. ಬಡ ಜನರನ್ನು ಸಾರ್ವಜನಿಕ ಸ್ಥಳಗಳಿಂದ ತೆರವುಗೊಳಿಸುವುದು ಪರಿಹಾರವಲ್ಲ. ಜನರು ಅಸ್ಥಿರ ಮತ್ತು ಅಸುರಕ್ಷಿತ ಜೀವನೋಪಾಯವನ್ನು ಅವಲಂಬಿಸಬೇಕಾದ ಪರಿಸ್ಥಿತಿಯನ್ನು ಸರ್ಕಾರವೇ ಪರಿಹರಿಸಬೇಕು ಎಂದು ಸಂಘಟನೆ ತಿಳಿಸಿದೆ.
MGSPಯ ಪ್ರಮುಖ ಹಕ್ಕೊತ್ತಾಯಗಳು
- ಕರ್ನಾಟಕ ಭಿಕ್ಷಾಟನೆ ನಿಷೇಧ ಕಾಯ್ದೆ, 1975 ಅನ್ನು ರದ್ದುಪಡಿಸಿ ಭಿಕ್ಷೆ ಬೇಡುವಿಕೆಯನ್ನು ತಕ್ಷಣ ಅಪರಾಧಮುಕ್ತಗೊಳಿಸಬೇಕು.
- ಭಿಕ್ಷೆ ಬೇಡುವ ಜನರನ್ನು ಅನಿಯಂತ್ರಿತ ಅಥವಾ ಬಲವಂತದ ತೆರವು, ಬಂಧನ ಮತ್ತು ಪುನರ್ವಸತಿಗೆ ಒಳಪಡಿಸುವುದನ್ನು ನಿಲ್ಲಿಸಬೇಕು.
- ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಇತರ ಅಂಚಿನ ಸಮುದಾಯಗಳ ಗುರಿಪಡಿಸುವಿಕೆ, ಪ್ರೊಫೈಲಿಂಗ್ ಮತ್ತು ಕಳಂಕೀಕರಣವನ್ನು ತಡೆಯಬೇಕು.
- ಸಾರ್ವಜನಿಕರು ಭಿಕ್ಷೆ ನೀಡುವುದನ್ನು ನಿರುತ್ಸಾಹಗೊಳಿಸುವುದಕ್ಕಿಂತ, ಜನರು ಭಿಕ್ಷೆ ಬೇಡುವ ಪರಿಸ್ಥಿತಿಗೆ ಕಾರಣವಾಗಿರುವ ಬಡತನ, ಸಾಮಾಜಿಕ ಬಹಿಷ್ಕಾರ ಮತ್ತು ಸಾಮಾಜಿಕ ಭದ್ರತೆಯ ಕೊರತೆಯನ್ನು ಪರಿಹರಿಸುವ ಜವಾಬ್ದಾರಿಯನ್ನು ಸರ್ಕಾರ ವಹಿಸಬೇಕು.
ಇದನ್ನೂ ನೋಡಿ : SIR ಕರ್ನಾಟಕ | ಬಾಲ್ಕಿಯಲ್ಲಿ ಫಾರ್ಮ್–7 ಮೂಲಕ ಏನಾಗುತ್ತಿದೆ? ಹೆಸರು ಅಳಿಸುವಿಕೆಯ ಹಿಂದಿರುವವರು ಯಾರು?
