ಬೆಂಗಳೂರು: ಆಸ್ಪತ್ರೆಗಳಲ್ಲಿ ರೋಗಿಗಳಿಗೆ ನೀಡಲಾಗುವ ದುಬಾರಿ ಔಷಧಗಳು, ಕ್ಯಾನ್ಸರ್ ಔಷಧಗಳು, ವೈದ್ಯಕೀಯ ಸಾಧನಗಳು ಹಾಗೂ ಆಸ್ಪತ್ರೆಯ ಬಳಕೆ ಸಾಮಗ್ರಿಗಳ ಖರೀದಿ ಬೆಲೆ ಮತ್ತು ಗರಿಷ್ಠ ಚಿಲ್ಲರೆ ಬೆಲೆ (ಎಂಆರ್‌ಪಿ) ನಡುವೆ ಭಾರಿ ವ್ಯತ್ಯಾಸ ಕಂಡುಬಂದಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರದ ಮಧ್ಯಪ್ರವೇಶಕ್ಕೆ ಆಗ್ರಹಿಸಿದೆ. ಔಷಧಗಳ
ಕರ್ನಾಟಕದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ನಡೆಸಿದ ಪರಿಶೀಲನೆಯಲ್ಲಿ 253 ಔಷಧಗಳು ಮತ್ತು ವೈದ್ಯಕೀಯ ಬಳಕೆ ಸಾಮಗ್ರಿಗಳಲ್ಲಿ ಅತಿಯಾದ ಬೆಲೆ ವ್ಯತ್ಯಾಸ ಕಂಡುಬಂದಿದೆ. ಕೆಲವು ಉತ್ಪನ್ನಗಳ ಎಂಆರ್‌ಪಿ ಅವುಗಳ ಆಸ್ಪತ್ರೆಯ ಖರೀದಿ ಬೆಲೆಗಿಂತ 10 ಪಟ್ಟುಗಳಿಂದ 52 ಪಟ್ಟುಗಳಿಗೂ ಅಧಿಕ ಇರುವುದು ಪತ್ತೆಯಾಗಿದೆ.
₹86ಕ್ಕೆ ಖರೀದಿ, ₹4,528ಕ್ಕೆ ಎಂಆರ್‌ಪಿ
ಪರಿಶೀಲನೆಯಲ್ಲಿ ಪತ್ತೆಯಾದ ಪ್ರಕರಣಗಳಲ್ಲಿ ಗ್ಯುಫಿಪೋಲ್ (Gufipol) ಔಷಧವನ್ನು ₹86ರ ಖರೀದಿ ಬೆಲೆಗೆ ಪಡೆಯಲಾಗಿದ್ದರೂ ಅದರ ಎಂಆರ್‌ಪಿ ₹4,528ರಷ್ಟಿದೆ. ಅಂದರೆ ಖರೀದಿ ಬೆಲೆಗೆ ಹೋಲಿಸಿದರೆ ಎಂಆರ್‌ಪಿ ಸುಮಾರು 52.6 ಪಟ್ಟು ಹೆಚ್ಚಾಗಿದೆ. ಅದೇ ರೀತಿ ಗ್ಯುಫಿಸೈಕ್ಲಿನ್–50 ಇಂಜೆಕ್ಷನ್ ₹160ರ ಖರೀದಿ ಬೆಲೆಗೆ ದೊರೆಯುತ್ತಿದ್ದರೆ, ಅದರ ಎಂಆರ್‌ಪಿ ₹7,110. ಟೆರ್ಲಿಟಿಸ್ ಔಷಧದ ಖರೀದಿ ಬೆಲೆ ₹118 ಇದ್ದರೂ ಎಂಆರ್‌ಪಿ ₹4,416ರಷ್ಟಿದೆ.
ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಕೆಲವು ದುಬಾರಿ ಔಷಧಗಳಲ್ಲೂ ಇದೇ ರೀತಿಯ ವ್ಯತ್ಯಾಸ ಕಂಡುಬಂದಿದೆ. ಟ್ಯಾಕ್ಸೋಕೇರ್ 120 ಎಂಜಿ ಔಷಧದ ಖರೀದಿ ಬೆಲೆ ಸುಮಾರು ₹1,000 ಇದ್ದರೆ ಎಂಆರ್‌ಪಿ ₹21,617. ಕ್ಯಾನ್ಮ್ಯಾಬ್ 440 ಎಂಜಿ ₹6,600ಕ್ಕೆ ಖರೀದಿಯಾಗುತ್ತಿದ್ದರೆ ಅದರ ಎಂಆರ್‌ಪಿ ₹57,457 ಎಂದು ಇಲಾಖೆ ಗುರುತಿಸಿದೆ. ಔಷಧಗಳ
ಆಸ್ಪತ್ರೆಯ ಬಳಕೆ ಸಾಮಗ್ರಿಗಳಲ್ಲೂ ಭಾರಿ ವ್ಯತ್ಯಾಸ
ಬೆಲೆ ವ್ಯತ್ಯಾಸ ಕೇವಲ ಔಷಧಗಳಿಗೆ ಸೀಮಿತವಾಗಿಲ್ಲ. ₹44.50ಕ್ಕೆ ಖರೀದಿಸಲಾದ ವಯಸ್ಕರ ನೆಬ್ಯುಲೈಸರ್ ಮಾಸ್ಕ್‌ನ ಎಂಆರ್‌ಪಿ ₹950 ಆಗಿದ್ದರೆ, ₹14.75ಕ್ಕೆ ಖರೀದಿಸಲಾದ ಐವಿ ಸೆಟ್‌ನ ಎಂಆರ್‌ಪಿ ₹295 ಎಂದು ಪರಿಶೀಲನೆಯಲ್ಲಿ ಕಂಡುಬಂದಿದೆ.
ಆಸ್ಪತ್ರೆಗಳು ಔಷಧ ಕಂಪನಿಗಳಿಂದ ದೊಡ್ಡ ಪ್ರಮಾಣದಲ್ಲಿ ಟೆಂಡರ್ ಮೂಲಕ ರಿಯಾಯಿತಿ ದರದಲ್ಲಿ ಔಷಧಗಳು ಮತ್ತು ಸಾಮಗ್ರಿಗಳನ್ನು ಖರೀದಿಸುತ್ತವೆ. ಆದರೆ ಕೆಲವು ಸಂದರ್ಭಗಳಲ್ಲಿ ರೋಗಿಗಳಿಂದ ಮುದ್ರಿತ ಎಂಆರ್‌ಪಿಗೆ ಸಮೀಪದ ದರದಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬುದು ರಾಜ್ಯ ಸರ್ಕಾರದ ಪ್ರಮುಖ ಆರೋಪವಾಗಿದೆ. ಔಷಧಗಳ
ಇದನ್ನೂ ಓದಿ : ಹೆಬ್ಬಾಳ ಶಾರ್ಟ್ ಟನಲ್‌ಗೆ ‘ಚಿಪ್ಕೋ’ ಚಳವಳಿ; 1,128 ಮರಗಳ ಕಡಿತಕ್ಕೆ ನಾಗರಿಕರ ತೀವ್ರ ವಿರೋಧ
ರೋಗಿಗಳ ಬಿಲ್‌ನಲ್ಲಿ ಖರೀದಿ ಬೆಲೆ–ಎಂಆರ್‌ಪಿ ವಿವರ ಕಡ್ಡಾಯಕ್ಕೆ ಆಗ್ರಹ
ಈ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆದು ಔಷಧಗಳ ಬೆಲೆ ನಿಯಂತ್ರಣವನ್ನು ವಿಸ್ತರಿಸುವಂತೆ ಹಾಗೂ ರೋಗಿಗಳಿಗೆ ನೀಡುವ ಬಿಲ್‌ನಲ್ಲಿ ಖರೀದಿ ಬೆಲೆ ಮತ್ತು ಎಂಆರ್‌ಪಿ ಎರಡನ್ನೂ ಕಡ್ಡಾಯವಾಗಿ ನಮೂದಿಸುವ ವ್ಯವಸ್ಥೆ ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ.
ಅಲ್ಲದೆ, ಹೆಚ್ಚಿನ ಬೆಲೆಯ ಅಗತ್ಯ ಔಷಧಗಳು ಮತ್ತು ಆಸ್ಪತ್ರೆಯ ಬಳಕೆ ಸಾಮಗ್ರಿಗಳ ಮೇಲಿನ ವ್ಯಾಪಾರ ಲಾಭಾಂಶವನ್ನು ನಿಯಂತ್ರಿಸುವುದು, ಅಗತ್ಯ ಔಷಧಗಳ ರಾಷ್ಟ್ರೀಯ ಪಟ್ಟಿಯನ್ನು ವಿಸ್ತರಿಸುವುದು ಹಾಗೂ ಬೆಲೆ ನಿಗದಿ ಮತ್ತು ಆಸ್ಪತ್ರೆಗಳ ಖರೀದಿ–ಬಿಲ್ಲಿಂಗ್ ವ್ಯವಸ್ಥೆ ಕುರಿತು ರಾಷ್ಟ್ರೀಯ ಮಟ್ಟದ ಅಧ್ಯಯನ ನಡೆಸುವಂತೆ ಕರ್ನಾಟಕ ಸರ್ಕಾರ ಆಗ್ರಹಿಸಿದೆ.
768 ಬಳಕೆ ಸಾಮಗ್ರಿ, 189 ದುಬಾರಿ ಔಷಧಗಳ ಪರಿಶೀಲನೆ
ಸೆಪ್ಟೆಂಬರ್ 25 ಮತ್ತು 26ರಂದು ಕರ್ನಾಟಕದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಸಗಟು ಔಷಧ ಮಳಿಗೆಗಳು, ಆಸ್ಪತ್ರೆಗಳು ಮತ್ತು ಇತರ ಸಂಸ್ಥೆಗಳಲ್ಲಿ ವಿಶೇಷ ಪರಿಶೀಲನೆ ನಡೆಸಿದ್ದಾರೆ.
ಈ ಹಂತದಲ್ಲಿ 768ಕ್ಕೂ ಹೆಚ್ಚು ಆಸ್ಪತ್ರೆ ಬಳಕೆ ಸಾಮಗ್ರಿಗಳು ಮತ್ತು 189 ದುಬಾರಿ ಔಷಧಗಳನ್ನು ಪರಿಶೀಲಿಸಲಾಗಿದೆ. ಮುಂದಿನ ಹಂತದಲ್ಲಿ ಎಚ್‌ಐವಿ ವಿರೋಧಿ ಔಷಧಗಳು, ಅತ್ಯಾಧುನಿಕ ಹಾಗೂ ತೀವ್ರ ಸೋಂಕುಗಳಿಗೆ ಬಳಸುವ ಪ್ರತಿಜೀವಕಗಳು, ವೈದ್ಯಕೀಯ ಸಾಧನಗಳು ಮತ್ತು ರೋಗಿಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಉಂಟುಮಾಡುವ ಆಸ್ಪತ್ರೆ ಬಳಕೆ ಸಾಮಗ್ರಿಗಳ ಪರಿಶೀಲನೆ ಮುಂದುವರಿಯಲಿದೆ.
ಬೆಲೆ ನಿಯಂತ್ರಣ ವಿಸ್ತರಣೆಗೆ ಒತ್ತಾಯ
ಪ್ರಸ್ತುತ ಔಷಧ ಬೆಲೆ ನಿಯಂತ್ರಣ ಆದೇಶದ ವ್ಯಾಪ್ತಿಯಲ್ಲಿರುವ ಔಷಧಗಳಿಗೆ ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ ನಿಗದಿಪಡಿಸುವ ಗರಿಷ್ಠ ಬೆಲೆ ಅನ್ವಯಿಸುತ್ತದೆ. ಆದರೆ ನಿಯಂತ್ರಣದ ವ್ಯಾಪ್ತಿಗೆ ಬಾರದ ಹಲವು ಔಷಧಗಳು, ವೈದ್ಯಕೀಯ ಸಾಧನಗಳು ಮತ್ತು ಬಳಕೆ ಸಾಮಗ್ರಿಗಳ ಬೆಲೆ ನಿಗದಿಯಲ್ಲಿ ಹೆಚ್ಚಿನ ಸ್ವಾತಂತ್ರ್ಯವಿದೆ.
ಹೀಗಾಗಿ ಹೆಚ್ಚಿನ ಬೆಲೆಯ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುವ ಅಗತ್ಯ ಔಷಧಗಳನ್ನು ಬೆಲೆ ನಿಯಂತ್ರಣದ ವ್ಯಾಪ್ತಿಗೆ ತರಬೇಕು. ಆಸ್ಪತ್ರೆಗಳು ಪಡೆಯುವ ಸಗಟು ರಿಯಾಯಿತಿಯ ಲಾಭ ರೋಗಿಗಳಿಗೂ ದೊರೆಯುವಂತೆ ಸ್ಪಷ್ಟ ನಿಯಮಗಳನ್ನು ರೂಪಿಸಬೇಕು ಎಂಬುದು ಕರ್ನಾಟಕದ ಬೇಡಿಕೆಯಾಗಿದೆ.
ದುಬಾರಿ ಚಿಕಿತ್ಸೆಯ ಹೊರೆ ಹೊತ್ತಿರುವ ರೋಗಿಗಳಿಗೆ ಔಷಧಗಳ ಬೆಲೆಯಲ್ಲಿನ ಇಂತಹ ಭಾರಿ ಅಂತರ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಈ ಕುರಿತು ರಾಷ್ಟ್ರೀಯ ಮಟ್ಟದಲ್ಲಿ ನಿಯಂತ್ರಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಇದೀಗ ಮುನ್ನೆಲೆಗೆ ಬಂದಿದೆ. ಔಷಧಗಳ
ಇದನ್ನೂ ನೋಡಿ : SIR ಕರ್ನಾಟಕ | ಬಾಲ್ಕಿಯಲ್ಲಿ ಫಾರ್ಮ್–7 ಮೂಲಕ ಏನಾಗುತ್ತಿದೆ? ಹೆಸರು ಅಳಿಸುವಿಕೆಯ ಹಿಂದಿರುವವರು ಯಾರು?
