ಬೆಂಗಳೂರು: ನಮ್ಮ ಮೆಟ್ರೊ ನಿಲ್ದಾಣದಲ್ಲಿ ಅಳವಡಿಸಿರುವ ಸಾವರ್ಕರ್ ಫೋಟೋ ತೆರವುಗೊಳಿಸಬೇಕೆಂದು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿರುವ ಸಾರ್ವಜನಿಕರು ಕೂಡಲೇ ಸಾವರ್ಕರ್ ಫೋಟೋವನ್ನು ತೆಗೆಯಬೇಕೆಂದು ಅಭಿಯಾನ ಆರಂಭಿಸಿದ್ದಾರೆ.
ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಮೆಟ್ರೋ ನಿಲ್ದಾಣದಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾದವರ ಫೋಟೋಗಳನ್ನು ಅಳವಡಿಸಲಾಗಿದೆ. ಆದರೆ ಹಾಕಲಾಗಿರುವ ಪೋಟೋಗಳಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ಯಾವ ಕೊಡುಗೆಯನ್ನು ನೀಡದ ವಿ ಡಿ ಸಾವರ್ಕರ್ ಫೋಟೋ ಯಾವ ಮೌಲ್ಯವನ್ನು ತಿಳಿಸುತ್ತದೆ ಎಂದು ಪ್ರಶ್ನೆ ಮಾಡಲಾಗಿದೆ. ಅಲ್ಲದೆ, ಫೋಟೋ ತೆಗೆಯುವಂತೆ ಟ್ವೀಟ್ ಮಾಡಿ ಅಭಿಯಾನ ಆರಂಭಿಸಿದ್ದಾರೆ.
ಸ್ವಾತಂತ್ರ್ಯ ಚಳವಳಿಯಲ್ಲಿ ಸಮರಧೀರ ಹೋರಾಟ ನಡೆಸಿದವರಿಗೆ ನಮ್ಮ ಗೌರವ ಸದಾ ಕಾಲ ಇರಲಿದೆ. ಆದರೆ, ಬ್ರಿಟಿಷ್ ಸಾಮ್ರಾಜ್ಯಶಾಹಿಯೊಂದಿಗೆ ಕ್ಷಮೆ ಕೇಳಿದವರನ್ನು ನಾವೇಕೆ ಗೌರವಿಸಬೇಕು. ಇದು ಯಾರ ಆದೇಶ ಅಂತಾ ಟ್ವೀಟ್ ಮಾಡಿ ಟ್ಯಾಗ್ ಮಾಡಲಾಗುತ್ತಿದೆ. ಆದರೆ ಇಷ್ಟೆಲ್ಲಾ ವಿವಾದ ಆದರೂ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೆಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಸಾರ್ವಕರ್ ಫೋಟೋ ತೆರವು ಮಾಡಿಲ್ಲ.
ಮುಂಗಡ ಟಿಕೆಟ್ ಪಡೆಯುವ ಕೇಂದ್ರದ ಬಳಿಯೇ ಫೋಟೋ ಹಾಕಲಾಗಿದೆ. ಒಟ್ಟಿನಲ್ಲಿ ಟ್ವಿಟ್ಟರ್ ಸೇರಿ ಹಲವು ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾದರೂ ಬಿಎಂಆರ್ ಸಿಎಲ್ ಮಾತ್ರ ವಿವಾದದ ಗಂಭೀರತೆ ಅರಿದಂತೆ ಕಾಣುತ್ತಿಲ್ಲ.