- ಎಂಇಎಸ್ ನಿಷೇಧಿಸದಿದ್ದರೆ ಕರ್ನಾಟಕ ಬಂದ್
- ಅಧಿವೇಶನ ಮುಗಿಯುವುದರೊಳಗೆ ನಿರ್ಧಾರ ಪ್ರಕಟಿಸಲು ಸರ್ಕಾರಕ್ಕೆ ಕನ್ನಡಪರ ಸಂಘಟನೆಗಳ ಗಡುವು
- ಮುಂದಿನ ನಡೆ ಬಗ್ಗೆ ಚರ್ಚಿಸಲು ಇಂದು ಬೆಂಗಳೂರಲ್ಲಿ ಸಭೆ
ಮೈಸೂರು: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನ ಎಂಇಎಸ್ ಪುಂಡರು ವಿರೂಪಗೊಳಿಸಿ ಅಪಮಾನ ಹಾಗೂ ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿಹಚ್ಚಿ ವಿಕೃತಿ ಮೆರೆದಿರೋ ವಿಚಾರ ಎಲ್ಲೆಡೆ ಸಾಕಷ್ಟು ಸದ್ದು ಮಾಡುತ್ತಿದೆ. ರಾಜ್ಯಾದ್ಯಂತ ಪ್ರತಿಭಟನೆ ತೀವ್ರ ಗೊಳ್ಳುತ್ತಿದೆ. ಕನ್ನಡ ಪರ ಸಂಘಟನೆಗಳು ರೊಚ್ಚಿಗೆದ್ದಿದ್ದು ಕಠಿಣ ಕ್ರಮಕ್ಕೆ ಅಗ್ರಹಿಸುತ್ತಿವೆ. ಹಿರಿಯ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಘಟನೆಯನ್ನ ತೀವ್ರವಾಗಿ ಖಂಡಿಸಿದ್ದಾರೆ.
ಮೈಸೂರಿನ ಹಾರ್ಡಿಂಜ್ ವೃತ್ತದಲ್ಲಿ
ಮಂಗಳವಾರ ಸಂಜೆ ವಿನೂತನ ರೀತಿ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್ ಎಂಇಎಸ್ ಹಾಗೂ ಸಂಸದರು, ಸಚಿವರ ವಿರುದ್ಧ ಕಿಡಿಕಾರಿದರು. ರಾಜ್ಯದ ಸಂಸದರ ಭಾವಚಿತ್ರಗಳನ್ನು ಹರಾಜು ಹಾಕಿ ಪ್ರತಿಭಟನೆ ನಡೆಸಲಾಯಿತು. ಈ ಪ್ರಕ್ರಿಯೆಯಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ಭಾವಚಿತ್ರ 1 ರೂಪಾಯಿಗೆ ಹರಾಜು ಆಗಿದೆ. ಉಳಿದ ಸಂಸದರನ್ನ ಯಾರು ಖರೀಸದೇ ಇದ್ದರಿಂದ ಅವರಿಗೆ ಒಂದು ರೂಪಾಯಿಯ ಬೆಲೆ ಇಲ್ಲ ಎಂದು ವಾಟಾಳ್ ಹೇಳಿದ್ದಾರೆ. ಇನ್ನು ಶಾಸನ ಸಭೆಯಲ್ಲಿ ಮನ್ನಣೆ ಇಲ್ಲದ ಮಾತುಗಳನ್ನಾಡುತ್ತಿದ್ದಾರೆ. ಈ ಬಗ್ಗೆ ಧ್ವನಿ ಎತ್ತದ ಸಂಸದರನ್ನು ಹರಾಜು ಹಾಕಿ ಮಾನ ಕಳೆದಿದ್ದೇವೆ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಎಂಇಎಸ್ ಕಾರ್ಯಕರ್ತರ ಪುಂಡಾಟಿಕೆ ಹೆಚ್ಚಾಗಿದೆ. ಎಂಇಎಸ್ ಬ್ಯಾನ್ ಮಾಡುವುದಕ್ಕೆ ರಾಜ್ಯದ ಜನಪ್ರತಿನಿಧಿಗಳು ಮೀನಾಮೇಷ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ರಾಜ್ಯದ ಸಂಸದರು ನಮಗೇನು ಗೊತ್ತಿಲ್ಲ ಅನ್ನೋ ರೀತಿ ವರ್ತಿಸುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಈ ಬಗ್ಗೆ ಸರ್ಕಾರ ಕಠಿಣ ನಿರ್ಧಾರ ಕೈಗೊಳ್ಳದಿದ್ರೆ ಸಿಎಂ ರಾಜಿನಾಮೆ ನೀಡಬೇಕಾಗುತ್ತೆ. ಕೇಂದ್ರ ಸರ್ಕಾರ ಉದ್ಧವ್ ಠಾಕ್ರೆಯ ಸರ್ಕಾರವನ್ನು ವಜಾ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಬುಧವಾರ ಬೆಂಗಳೂರಿನಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಸಭೆ ನಡೆಸಿ ಕರ್ನಾಟಕ ಬಂದ್ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದು ವಾಟಾಳ್ ನಾಗರಾಜ್ ಮಾಹಿತಿ ನೀಡಿದ್ದಾರೆ.