ನವದೆಹಲಿ: ಉದ್ಯಮಿ ಮೆಹುಲ್ ಚೋಕ್ಸಿ ಅಕ್ರಮವಾಗಿ ಡೊಮಿನಿಕಾ ಗಡಿ ಪ್ರವೇಶಿಸಿರುವುದಕ್ಕ ಸಂಬಂಧ ಪಟ್ಟಂತೆ 51 ದಿನಗಳ ಕಾಲ ಪೊಲೀಸರು ವಶಕ್ಕೆ ಪಡೆದು ಬಂಧನದಲ್ಲಿ ಇರಿಸಿದ್ದರು. ಸದ್ಯ ಚೋಕ್ಸಿಗೆ ಜಾಮೀನು ಸಿಕ್ಕಿದ್ದು ಡೊಮಿನಿಕಾದಿಂದ ಆಂಟಿಗುವಾ ಮತ್ತು ಬರ್ಬುದಾಗೆ ತೆರಳಿದ್ದಾರೆ.
ತೀವ್ರ ಅನಾರೋಗ್ಯದ ಕಾರಣವನ್ನು ನೀಡಿ ಡೊಮಿನಿಕಾದ ನ್ಯಾಯಾಲಯದಿಂದ ಜಾಮೀನು ಪಡೆದ ಉದ್ಯಮಿ ಮೆಹುಲ್ ಚೋಕ್ಸಿ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಬಿಡುಗಡೆಗೊಳಿಸಲು ವಿನಂತಿಸಿದ್ದರು. 10,000 ಕೆರಿಬಿಯನ್ ಡಾಲರ್ ಬಾಂಡ್ ಸಲ್ಲಿಸುವುದು ಹಾಗೂ ಚಿಕಿತ್ಸೆ ನಂತರದಲ್ಲಿ ಡೊಮಿನಿಕಾಗೆ ವಾಪಸ್ ಆಗುವಂತೆ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಲಾಗಿದೆ.
ಇದನ್ನು ಓದಿ: ಭ್ರಷ್ಟಾಚಾರಿ ಮೆಹುಲ್ ಚೋಕ್ಸಿ ನಾಪತ್ತೆ: ಯಾವುದೇ ಮಾಹಿತಿ ಲಭ್ಯವಿಲ್ಲವೆಂದ ಆ್ಯಂಟಿಗುವಾ ಪೊಲೀಸರು
ಚೋಕ್ಸಿ ಪರ ವಕೀಲರು ಮಾತ್ರ ಅವರನ್ನು ಅಪಹರಿಸಸಿದ್ದರು ಎಂದೇ ನ್ಯಾಯಾಲಯದಲ್ಲಿ ವಾದ ಮಾಡಿದ್ದರು. “ನಮ್ಮ ಕಕ್ಷಿದಾರ ಮೆಹುಲ್ ಚೋಕ್ಸಿ ಸುರಕ್ಷಿತವಾಗಿ ಆಂಟಿಗುವಾದ ತಮ್ಮ ನಿವಾಸಕ್ಕೆ ವಾಪಸ್ ಆಗಿದ್ದಾರೆ. ಆಂಟಿಗುವಾಗೆ ಹಿಂತಿರುಗುವ ವೇಳೆ ಯಾವುದೇ ಸಮಸ್ಯೆಗಳು ಆಗಲಿಲ್ಲ. ಚೋಕ್ಸಿ ಸದ್ಯ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಕುಟುಂಬ ಸದಸ್ಯರು ನಿರಾಳರಾಗಿದ್ದಾರೆ. ಆದರೆ ಅಪಹರಣಕ್ಕೊಳಗಾದ ಸಂದರ್ಭದಲ್ಲಿ ತೀವ್ರ ಚಿತ್ರಹಿಂಸೆ, ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಲಾಗಿದೆ. ಎಲ್ಲವೂ ಸುಖಾಂತ್ಯ ಕಂಡಿದೆ. ಡೊಮಿನಿಕಾದಲ್ಲಿ ಯಶಸ್ಸಿನ ನಂತರ, ಈಗ ಆಂಟಿಗುವಾದಲ್ಲಿ ಕಾನೂನು ಹೋರಾಟಕ್ಕೆ ನಮ್ಮ ತಂಡವು ಸಜ್ಜಾಗಿದೆ,” ಎಂದು ವಕೀಲ ವಿಜಯ್ ಅಗರ್ವಾಲ್ ಹೇಳಿದ್ದಾರೆ.
ಮೇ 23ರಂದು ರಾತ್ರಿ ವೇಳೆ ಭಾರತೀಯ ಮೂಲದ ಪುರುಷರು ಹಾಗೂ ಮಹಿಳೆಯ ಜಬಾರಿಕಾ ಸೇರಿದಂತೆ ಮೆಹುಲ್ ಚೋಕ್ಸಿ ಅಪಹರಣ ಮಾಡಿದ್ದರು ಎಂಬ ಕಾರ್ಯಾಚರಣೆಯ ಭಾವಚಿತ್ರ ಮತ್ತು ವಿಡಿಯೋವನ್ನು ಇಂಗ್ಲೆಂಡಿನ ತನಿಖಾ ತಂಡವು ಬಿಡುಗಡೆಗೊಳಿಸಿದೆ.
ಇದನ್ನು ಓದಿ: ಮೆಹುಲ್ ಚೋಕ್ಸಿ ಭಾರತದ ಹಸ್ತಾಂತರಕ್ಕೆ ತಡೆ ನೀಡಿದ ಡೊಮಿನಿಕಾ ಕೋರ್ಟ್
ಭಾರತದ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13,500 ಕೋಟಿ ರೂಪಾಯಿ ವಂಚನೆ ಆರೋಪ ಎದುರಿಸುತ್ತಿರುವ ಮೆಹುಲ್ ಚೋಕ್ಸಿ ಹಾಗೂ ಆತನ ಸೋದರಳಿಯ ನೀರವ್ ಮೋದಿ 2018ರ ಜನವರಿ ಮೊದಲ ವಾರದಲ್ಲಿ ದೇಶ ಬಿಟ್ಟು ಪರಾರಿಯಾಗಿದ್ದರು. ಭಾರತದಿಂದ ಯುರೋಪಿಗೆ ಓಡಿ ಹೋದ ನೀರವ್ ಮೋದಿ ಅಂತಿಮವಾಗಿ ಇಂಗ್ಲೆಂಡಿನಲ್ಲಿ ಪತ್ತೆಯಾಗಿದ್ದು, ಆತನನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ. ಇನ್ನೊಂದು ಕಡೆಯಲ್ಲಿ 2017ರಲ್ಲೇ ಆಂಟಿಗುವಾ ಮತ್ತು ಬರ್ಬುಡಾ ರಾಷ್ಟ್ರಗಳ ನಾಗರಿಕತ್ವ ಪಡೆದುಕೊಂಡ ಮೆಹುಲ್ ಚೋಕ್ಸಿ ಇಲ್ಲಿಯವರೆಗೂ ಅದೇ ದೇಶದಲ್ಲಿ ವಾಸವಾಗಿದ್ದಾರೆ.