ಸಚಿವ ಎಂ.ಬಿ.ಪಾಟೀಲ್ ಜೊತೆ ನನಗೆ ವೈಯಕ್ತಿಕ ದ್ವೇಷ ಇಲ್ಲ: ಮುರುಗೇಶ್ ನಿರಾಣಿ

ಬೆಂಗಳೂರು: ನನಗೂ ಹಾಲಿ ಬೃಹತ್ ಕೈಗಾರಿಕಾ ಸಚಿವರಾ ಎಂ.ಬಿ.ಪಾಟೀಲ್ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ. ಸಚಿವರಾದ ನಂತರ ಅವರು ಇಲಾಖೆಯಲ್ಲಿ ಉತ್ತಮ ಕೆಲಸ ಮಾಡುತ್ತಿದ್ದು, ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ನಾನು ಅವರ ಜೊತೆ ಕೈ ಜೋಡಿಸಲು ಸಿದ್ದ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಶುಕ್ರವಾರ ಖಾಸಗಿ ಹೋಟೆಲ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂ.ಬಿ.ಪಾಟೀಲ್ ಮತ್ತು ನಾನು ಒಂದೇ ಜಿಲ್ಲೆಯಿಂದ ಬಂದವರು. ವೈಯಕ್ತಿಕವಾಗಿ ಇಬ್ಬರ ನಡುವೆ ಯಾವುದೇ ದ್ವೇಷ, ಅಸೂಯೆ ಇಲ್ಲ. ಕರ್ನಾಟಕದ ಅಭಿವೃದ್ದಿ ವಿಷಯ ಬಂದಾಗ ನಾವಿಬ್ಬರೂ ಒಂದೇ. ಏಕೆಂದರೆ ಅವರು ಇಂಜಿನಿಯರಿಂಗ್ ಪದವೀಧರರು, ನಾನು ಇಂಜಿನಿಯರಿಂಗ್ ಪದವೀಧರ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಅಭಿವೃದ್ಧಿ ವಿಷಯ ಬಂದಾಗ ನಾವು ನಮ್ಮ ಪಕ್ಷ ರಾಜಕಾರಣ ಬಿಟ್ಟು ಕೈ ಜೋಡಿಸಬೇಕಾಗುತ್ತದೆ. ಎಂ.ಬಿ.ಪಾಟೀಲರು ನಾನು ನಿರ್ವಹಿಸಿದ ಇಲಾಖೆಯಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ನನ್ನ ಸಹಮತವಿದೆ. ಸಕ್ರಿಯವಾಗಿ ಕೆಲಸ ಮಾಡುತ್ತಿರುವ ಕೆಲವೇ ಸಚಿವರಲ್ಲಿ ಅವರು ಕೂಡ ಒಬ್ಬರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ವೇಳೆ ಕಾರ್ಟೂನ್ ಚಿತ್ರಕ್ಕೆ ಹಣ ದುರುಪಯೋಗಿಸಲಾಗಿದೆ. ಹೀಗಾಗಿ ನನ್ನನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಎಂ.ಬಿ.ಪಾಟೀಲರು ಹೇಳಿದ್ದರು. ಇದಕ್ಕೆ ನಾನು ಸ್ಪಷ್ಟನೆ ನೀಡಬೇಕಾದಾಗ, ನಾನು ಮಾಡಿರುವ ತಪ್ಪಾದರೂ ಏನು ಎಂದು ಕೇಳಿದ್ದೆ. ಒಂದು ವೇಳೆ ಹಣ ದುರುಪಯೋಗವಾಗಿದ್ದರೆ ಅದರ ಬಗ್ಗೆ ಮಾಹಿತಿ ನೀಡಿ ಕಾನೂನು ಕ್ರಮ ಜರುಗಿಸಿ ಎಂದು ಮನವಿ ಮಾಡಿಕೊಂಡಿದ್ದೆ. ಅದನ್ನು ಹೊರತುಪಡಿಸಿದರೆ ವೈಯಕ್ತಿಕವಾಗಿ ನನಗೆ ಅವರ ಬಗ್ಗೆ ಗೌರವವಾಗಿದೆ. ಈ ಬಗ್ಗೆ ಹರಿದಾಡುತ್ತಿರುವ ಸುದ್ದಿ ವದಂತಿ ಎಂದು ಸ್ಪಷ್ಟಪಡಿಸಿದರು.

ದಾವೋಸ್‍ಗೆ ಕರ್ನಾಟಕದಿಂದ ಮುಖ್ಯಮಂತ್ರಿಗಳು ಇಲಾಖೆಯ ಸಚಿವರು ಮತ್ತು ಅಧಿಕಾರಿಗಳನ್ನು ಕಳುಹಿಸಿಕೊಡಬೇಕಿತ್ತು. ನಾನು ಸಚಿವನಾಗಿದ್ದ ವೇಳೆ ಎರಡು ಬಾರಿ ಹೋಗಿಬಂದಿದ್ದೇನೆ. ರಾಜ್ಯಕ್ಕೆ ಬಂಡವಾಳ ಹರಿದುಬಂದರೆ ಉದ್ಯೋಗ ಸೃಷ್ಟಿಯಾಗುತ್ತದೆ. ಇಡೀ ಜಗತ್ತಿನ ಉದ್ದಿಮೆದಾರರು ಒಂದೇ ವೇದಿಕೆಯಲ್ಲಿ ಸಿಗುತ್ತಾರೆ. ನಮ್ಮ ಕರ್ನಾಟಕದಲ್ಲಿರುವ ಅವಕಾಶಗಳನ್ನು ಮನವರಿಕೆ ಮಾಡಿಕೊಡಲು ಇದು ಉತ್ತಮ ವೇದಿಕೆ. ಸರ್ಕಾರ ಕೈಗಾರಿಕೆಗಳನ್ನು ಕಡೆಗಣಿಸುತ್ತದೆಯೇ ಎಂಬ ಮನೋಭಾವನೆ ಎಲ್ಲರಲ್ಲೂ ಇದೆ. ಈಗಲಾದರೂ ಎಚ್ಚೆತ್ತುಕೊಳ್ಳಬೇಕೆಂದು ಸಲಹೆ ಮಾಡಿದರು.

ಇನ್ನು ಪಕ್ಷದೊಳದಗಿನ ಬಿನ್ನಮತ ಚಟುವಟಿಕೆ ಕುರಿತು ಮಾತನಾಡಿದ ನಿರಾಣಿ ಅವರು, ಇತ್ತೀಚಿನ ದಿನಗಳಲ್ಲಿ ಬಿಜೆಪಿಯಲ್ಲಿ ಅಸಮಾಧಾನ ಇರುವುದು ಸತ್ಯ ಎಂಬುದನ್ನು ಒಪ್ಪಿಕೊಂಡರು.

ಬೆಂಕಿ ಇಲ್ಲದೇ ಹೊಗೆಯಾಡುವುದಿಲ್ಲ. ಎರಡು ಮೂರು ಗುಂಪು ಇದೆ ಅದನ್ನು ಸರಿ ಮಾಡುವ ಅಧಿಕಾರ ಕೇಂದ್ರ ನಾಯಕರ ಕೈಯಲ್ಲಿ ಇದೆ. ರಾಮುಲು ಮಾತನ್ನು ಗಮನಿಸಿದ್ದೇನೆ.ವರಿಷ್ಟರು ಅವರನ್ನು ಕರೆದು ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸುತ್ತಾರೆ ಎಂದರು.

ಇನ್ನೂ ಇನ್ನಿಬ್ಬರ ಹೆಸರಿನ ಬಗ್ಗೆಯೂ ವರಿಷ್ಠರ ಗಮನದಲ್ಲಿದೆ. ರಾಧಾ ಮೋಹನ್ ದಾಸ್ ಅಗರ್ ವಾಲಾ ವರದಿವರಿಷ್ಠರಿಗೆ ಸಲ್ಲಿಸಿದ್ದಾರೆ. ಯತ್ನಾಳ್ ಅನುಭವ ಇರುವಂತವರು. ಯಡಿಯೂರಪ್ಪ ಗರಡಿಯಲ್ಲೇ ವಿಜಯೇಂದ್ರ ಬೆಳೆದಿದ್ದಾರೆ. ಎಲ್ಲವನ್ನೂ ಅಳೆದು ತೂಗಿಯೇ ವಿಜಯೇಂದ್ರರನ್ನು ನೇಮಕ ಮಾಡಿದ್ದಾರೆ. ವಿಜಯೇಂದ್ರ ಯುವಕ ಇದ್ದಾನೆ, ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತಾನೆ ಎಂದರು.

ವಿಜಯೇಂದ್ರ ಮುಂದುವರಿಸುವ ಅಥವಾ ಬದಲಾವಣೆ ಬಗ್ಗೆ ರಾಜ್ಯದ ನಾಯಕರಿಗೆ ಯಾವುದೇ ಅಧಿಕಾರ ಇಲ್ಲ. ಅವರನ್ನು ತೆಗೆದೇ ಬಿಡುತ್ತಾರೆ ಎಂಬ ಮಾತಿಗೆ ಅರ್ಥ ಇಲ್ಲ. ಎರಡು ಗುಂಪಿನ ಸದಸ್ಯರ ಬಗ್ಗೆ ಹೈಕಮಾಂಡ್ ಸೂಕ್ತ ತೀರ್ಮಾನ ಮಾಡುತ್ತದೆ ಎಂದರು.

ನಾನು ಬಸನಗೌಡ ಯತ್ನಾಳ್‍ಗೆ ಸಲಹೆ ಕೊಡುವಷ್ಟು ದೊಡ್ಡವನಲ್ಲ ಎಂದು ಮಾಧ್ಯಮಗಳ ಪ್ರಶ್ನೆಗೆ ಅವರು ಉತ್ತರಿಸಿದರು.

Donate Janashakthi Media

Leave a Reply

Your email address will not be published. Required fields are marked *