ದುಡಿಯುವ ವರ್ಗಗಳ ಘನತೆಯ ಬದುಕು ಮತ್ತು ಹಕ್ಕುಗಳಿಗಾಗಿ: ಸಿಐಟಿಯು-ಎಐಕೆಎಸ್-ಎಐಎಡಬ್ಲ್ಯೂಯು
ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಅದಾನಿ ಮತ್ತು ಅಂಬಾನಿಯಂತಹ ತಮ್ಮ ಬಂಟರಿಗೆ ʻಅಮೃತಕಾಲʼವನ್ನು ಖಚಿತಪಡಿಸಲು ಕಾರ್ಮಿಕರು ಮತ್ತು ರೈತರನ್ನು ಶೋಷಣೆ ಮತ್ತು ಲೂಟಿ ಮಾಡಲು ಹೊರಟಿದೆ ಎಂದಿರುವ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು), ಅಖಿಲ ಭಾರತ ಕಿಸಾನ್ ಸಭಾ(ಎಐಕೆಎಸ್) ಮತ್ತು ಅಖಿಲ ಭಾರತ ಕೃಷಿ ಕೂಲಿಕಾರರ ಸಂಘ(ಎಐಎಡಬ್ಲ್ಯುಯು) ದೇಶದ ದುಡಿಯುವ ವರ್ಗಗಳ ಜನರು ಒಂದು ಘನತೆಯ ಬದುಕಿಗೆ ಆಗ್ರಹಿಸಿ ಎಪ್ರಿಲ್ 5 ರಂದು ದಿಲ್ಲಿಯಲ್ಲಿ ನಡೆಯಲಿರುವ ಬೃಹತ್ ಮಜ್ದೂರ್-ಕಿಸಾನ್ ಸಂಘರ್ಷ ರ‍್ಯಾಲಿಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿವೆ. ದುಡಿಮೆಗಾರರ ಈ ಘನತೆ ಮತ್ತು ಹಕ್ಕುಗಳ ಹೋರಾಟಕ್ಕೆ ಭಾರತದ ಜನತೆ ಬೆಂಬಲ ನೀಡಬೇಕು, ಇದರಲ್ಲಿ ಭಾಗವಹಿಸಬೇಕು ಎಂದೂ ಕರೆ ನೀಡಿವೆ.
ಇದನ್ನು ಓದಿ: ದಿಲ್ಲಿಯಲ್ಲಿ “ಮಜ್ದೂರ್-ಕಿಸಾನ್ ಅಧಿಕಾರ್ ಮಹಾಧಿವೇಶನ”
ಉತ್ಪಾದನೆಯಲ್ಲಿ ತೊಡಗಿರುವ ವರ್ಗಗಳ ದೈನಂದಿನ ಬದುಕನ್ನು ಕಾರ್ಪೊರೇಟ್ ಪರ ನೀತಿಗಳು ಭಾರೀ ಹಣದುಬ್ಬರದ ಒತ್ತಡಕ್ಕೆ ತುತ್ತಾಗಿಸಿವೆ. ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳು-ಅಕ್ಕಿ, ಗೋಧಿ, ಬೇಳೆಕಾಳುಗಳು, ಹಾಲು, ಮೊಸರು, ತರಕಾರಿಗಳು ಮತ್ತು ಮುಂತಾದವುಗಳು ಹೆಚ್ಚುವಂತೆ ಮಾಡಲಾಗಿದೆ. ಒಂದೆಡೆ ತುತ್ತ ತುದಿಗೇರಿರುವ ನಿರುದ್ಯೋಗದ ಸಮಸ್ಯೆ ಬಗ್ಗೆ ಸಂವೇದನಾಶೂನ್ಯವಾಗಿರುವ ಸರಕಾರ, ಇನ್ನೊಂದೆಡೆಯಲ್ಲಿ ಉದ್ಯೋಗದ ಕಾನೂನಾತ್ಮಕ ಖಾತ್ರಿ ನೀಡಿರುವ ಮನರೇಗ ಮುಂತಾದ ಯೋಜನೆಗಳನ್ನು ಕೈಬಿಡಲು ಮತ್ತು ಕಾರ್ಮಿಕರು ಪಡೆದುಕೊಂಡಿರುವ ಹಕ್ಕುಗಳೆಲ್ಲವನ್ನೂ ನಿರ್ಮೂಲ ಮಾಡಲು ಹಾಗೂ ಕಾರ್ಪೊರೇಟ್‌ಗಳಿಗೆ ಲಂಗುಲಗಾಮಿಲ್ಲದ ಲಾಭಗಳನ್ನು ಪೇರಿಸಿಕೊಳ್ಳುವ ವಾತಾವರಣವನ್ನು ನಿರ್ಮಾಣ ಮಾಡಲು ಸರ್ವಪ್ರಯತ್ನ ನಡೆಸುತ್ತಿದೆ.
ಮೋದಿ ಆಡಳಿತದ ಕಾರ್ಪೊರೇಟ್ ಕೃಷಿ ಪರ ನೀತಿಗಳು ಎಲ್ಲಾ ಸ್ತರಗಳ ರೈತ ಕೃಷಿಯನ್ನು ಅಸಾಧ್ಯಗೊಳಿಸುತ್ತಿದೆ. ಐತಿಹಾಸಿಕ ರೈತರ ಹೋರಾಟದ ಸಮಯದಲ್ಲಿ ಕನಿಷ್ಟ ಬೆಂಬಲ ಬೆಲೆಗಳಿಗೆ ಕಾನೂನಾತ್ಮಕ ಖಾತರಿ ಸೇರಿದಂತೆ ರೈತ ಸಂಘಟನೆಗಳಿಗೆ ನೀಡಿದ ಲಿಖಿತ ಭರವಸೆಗಳನ್ನು ಸಂಪೂರ್ಣವಾಗಿ ವಂಚಿಸಲಾಗಿದೆ.
ಆಹಾರ, ಆರೋಗ್ಯ ಮತ್ತು ಶಿಕ್ಷಣದ ಜನರ ಕಾನೂನಾತ್ಮಕ ಹಕ್ಕುಗಳನ್ನು ಮೊಟಕುಗೊಳಿಸಲಾಗುತ್ತಿದೆ.
ಅದೇ ಸಮಯದಲ್ಲಿ ಎಲ್ಲಾ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಕಳಚಿ ಹಾಕಲಾಗುತ್ತಿದೆ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಮೊಟಕುಗೊಳಿಸಲಾಗುತ್ತಿದೆ. ಯುಎಪಿಎಯಂತಹ ಕಠೋರ ಕಾನೂನುಗಳ ಮೂಲಕ ಆಡಳಿತಾರೂಢರ ವಿರುದ್ಧದ ಎಲ್ಲಾ ಭಿನ್ನಾಭಿಪ್ರಾಯದ ಧ್ವನಿಗಳನ್ನು ಹತ್ತಿಕ್ಕಲಾಗುತ್ತಿದೆ.
ಇದನ್ನು ಓದಿ: ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಪ್ರಮುಖ ಆರು ಬೇಡಿಕೆಗಳು ಈಡೇರಿಸಬೇಕೆಂದು ಪ್ರಧಾನಿಗೆ ಪತ್ರ ಬರೆದ ಎಸ್‌ಕೆಎಂ
ಜನಗಳ ಬದುಕಿನ ನೈಜ ಪ್ರಶ್ನೆಗಳಲ್ಲಿ ಜನರ ಒಗ್ಗಟ್ಟನ್ನು ವಿಭಜಿಸಲು ಆಡಳಿತಾರೂಢ ಆರೆಸ್ಸೆಸ್-ಬಿಜೆಪಿ ಕೋಮು ವಿಷವನ್ನು ಹರಡುತ್ತಿವೆ.
ಇಂತಹ ಸನ್ನಿವೇಶದಲ್ಲಿ ಸಿಐಟಿಯು, ಎಐಕೆಎಸ್ ಮತ್ತು ಎಐಎಡಬ್ಲ್ಯೂಯು ನೇತೃತ್ವದಲ್ಲಿ ಭಾರತದ ಸಂಪತ್ತು ಉತ್ಪಾದಿಸುವ ವರ್ಗಗಳು-ಕಾರ್ಮಿಕರು, ರೈತರು ಮತ್ತು ಕೃಷಿ ಕಾರ್ಮಿಕರು- ಜಂಟಿಯಾಗಿ ತಮ್ಮ ಅವಿರತ ಹೋರಾಟಗಳನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ ಎಂದು ಈ ಮೂರು ಸಂಘಟನೆಗಳ ಮುಖಂಡರು ಒಂದು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸೆಪ್ಟೆಂಬರ್ 5, 2022 ರಂದು ದೆಹಲಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ, ಆಹಾರ, ಆರೋಗ್ಯ, ಶಿಕ್ಷಣ, ಉದ್ಯೋಗ ಮತ್ತು ನ್ಯಾಯಯುತ ಮತ್ತು ಫಲದಾಯಕ ಬೆಲೆಗಳ ಮೂಲಭೂತ ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ಜನಪರ ನೀತಿಗಳ ಬೇಡಿಕೆಗಳ ಮೇಲೆ ಈ ಸಮಸ್ಯೆಗಳನ್ನು ಜನರ ಬಳಿಗೆ ತೆಗೆದುಕೊಂಡು ಅವರನ್ನು ಸಜ್ಜುಗೊಳಿಸಲು ನಿರ್ಧರಿಸಲಾಯಿತು. ನಮ್ಮ ಉತ್ಪನ್ನಗಳಿಗೆ ಮತ್ತು ನಮ್ಮ ಕೆಲಸಕ್ಕೆ ನ್ಯಾಯಯುತ ಜೀವನ ವೇತನಕ್ಕಾಗಿ ಈ ಜಂಟಿ ಅಭಿಯಾನದ ಪರಾಕಾಷ್ಠೆಯಾಗಿ, 5 ಏಪ್ರಿಲ್ 2023 ರಂದು ʻಮಜ್ದೂರ್ ಕಿಸಾನ್ ಸಂಘರ್ಷ ರ‍್ಯಾಲಿʼಯಲ್ಲಿ ದೆಹಲಿಗೆ ಬರುತ್ತಿದ್ದೇವೆ, ಘನತೆ ಮತ್ತು ಭದ್ರತೆಯ ಜೀವನ, ಪರಸ್ಪರ ಭಯ ಮತ್ತು ದ್ವೇಷವಿಲ್ಲದ ಜೀವನವನ್ನು ಒತ್ತಾಯಿಸುತ್ತೇವೆ ಎಂದು ಈ ಜಂಟಿ ಹೇಳಿಕೆ ಘೋಷಿಸಿದೆ.
ಇದು ಕಾರ್ಮಿಕರು ಮತ್ತು ರೈತರ ವಿವಿಧ ಜಂಟಿ ವೇದಿಕೆಗಳಲ್ಲಿ ನಮ್ಮ ನಿರಂತರ ಹೋರಾಟಗಳ ಮುಂದುವರಿಕೆಯಾಗಿದೆ – ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆ ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ಈ ಜಂಟಿ ಅಭಿಯಾನ ಮತ್ತು ಜನಾಂದೋಲನವು ಕಾರ್ಮಿಕರು, ರೈತರು ಮತ್ತು ಕೃಷಿ ಕಾರ್ಮಿಕರ ಜಂಟಿ ಹೋರಾಟಗಳನ್ನು ಮತ್ತಷ್ಟು ಕ್ರೋಢೀಕರಿಸುತ್ತದೆ ಮತ್ತು ಮುನ್ನಡೆಸುತ್ತವೆ.
ಇದನ್ನು ಓದಿ: ಕದನ ಗೆದ್ದಿದ್ದೇವೆ, ರೈತರ ಹಕ್ಕುಗಳಿಗಾಗಿ ಯುದ್ಧ ಮುಂದುವರೆಯುತ್ತದೆ – ಸಂಯುಕ್ತ ಕಿಸಾನ್ ಮೋರ್ಚಾ
ಏಪ್ರಿಲ್ 5, 2023 ರಂದು ಮಜ್ದೂರ್ ಕಿಸಾನ್ ಸಂಘರ್ಷ ರ‍್ಯಾಲಿಯನ್ನು ಯಶಸ್ವಿಗೊಳಿಸಲು, ರಾಜ್ಯ, ಜಿಲ್ಲೆ ಮತ್ತು ಸ್ಥಳೀಯ ಮಟ್ಟದಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಕರಪತ್ರಗಳ ವಿತರಣೆ, ಭಿತ್ತಿಪತ್ರಗಳು, ಗೋಡೆ ಬರಹ, ಗುಂಪು ಸಭೆಗಳು, ಜಾಥಾಗಳು ಮತ್ತು ಮೆರವಣಿಗೆಗಳ ಮೂಲಕ ದೇಶದಾದ್ಯಂತ ಬೃಹತ್ ಪ್ರಚಾರಗಳು ನಡೆಯುತ್ತಿವೆ. ಎಲ್ಲಾ ರೀತಿಯ ಪ್ರಚಾರದಲ್ಲಿ ಜನರು ಅಗಾಧ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ.
5ನೇ ಸೆಪ್ಟೆಂಬರ್ 2018 ರಂದು ಈ ಮೂರು ಸಂಘಟನೆಗಳು ಜಂಟಿಯಾಗಿ ಸಂಘಟಿಸಿದ ಮೊದಲ ಮಜ್ದೂರ್ ಕಿಸಾನ್ ಸಂಘರ್ಷ್ ರ‍್ಯಾಲಿಗಿಂತ ಎಷ್ಟೋ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು, ರೈತರು ಮತ್ತು ಕೃಷಿಕೂಲಿಕಾರರು ಈ ಭಾರಿಯ ಸಂಘರ್ಷ ರ‍್ಯಾಲಿಗೆ ಸಜ್ಜುಗೊಳ್ಳುತ್ತಿದ್ದಾರೆ ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ತಪನ್ ಸೆನ್, ಎಐಕೆಎಸ್ ಪ್ರಧಾನ ಕಾರ್ಯದರ್ಶಿ ವಿಜೂ ಕೃಷ್ಣನ್ ಮತ್ತು ಎಐಎಡಬ್ಲ್ಯೂಯುನ ಪ್ರಧಾನ ಕಾರ್ಯದರ್ಶಿ ಬಿ.ವೆಂಕಟ್ ಸಹಿ ಮಾಡಿರುವ ಈ ಜಂಟಿ ಹೇಳಿಕೆ ತಿಳಿಸಿದೆ.
ಮಜ್ದೂರ್ ಕಿಸಾನ್ ಸಂಘರ್ಷ ರ‍್ಯಾಲಿಯ ಬೇಡಿಕೆಗಳು
1) ಸ್ಕೀಮ್ ಕಾರ್ಮಿಕರು ಸೇರಿದಂತೆ ಎಲ್ಲಾ ಕಾರ್ಮಿಕರಿಗೆ ಕನಿಷ್ಠ ವೇತನ ರೂ. 26,000 ಮತ್ತು ಪಿಂಚಣಿ ರೂ.10,000 ಖಾತ್ರಿಪಡಿಸಬೇಕು; ಕಾಮಗಾರಿಗಳ ಗುತ್ತಿಗೆ ನೀಡುವುದು ಬೇಡ; ಅಗ್ನಿಪಥ್ ಯೋಜನೆಯನ್ನು ರದ್ದು ಮಾಡಬೇಕು.
2) ಖಾತರಿಪಡಿಸಿದ ಸಂಗ್ರಹಣೆಯೊಂದಿಗೆ ಎಲ್ಲಾ ಕೃಷಿ ಉತ್ಪನ್ನಗಳಿಗೆ ಸಿ2+50% ಕನಿಷ್ಟ ಬೆಂಬಲ ಬೆಲೆಯ ಕಾನೂನಾತ್ಮಕ ಖಾತ್ರಿ ಒದಗಿಸಬೇಕು.
3) ಎಲ್ಲಾ ಬಡ ಮತ್ತು ಮಧ್ಯಮ ರೈತರು ಮತ್ತು ಕೃಷಿ ಕಾರ್ಮಿಕರಿಗೆ ಕೇಂದ್ರ ಸರ್ಕಾರದಿಂದ ಒಂದು ಬಾರಿಯ ಸಾಲ ಮನ್ನಾ; ಅವರಲ್ಲಿ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಪಿಂಚಣಿ.
4) ನಾಲ್ಕು ಕಾರ್ಮಿಕ ಸಂಹಿತೆಗಳು ಮತ್ತು ವಿದ್ಯುತ್ ತಿದ್ದುಪಡಿ ಮಸೂದೆ-2022 ರ ರದ್ದತಿ.
5) ಎಲ್ಲರಿಗೂ ಉದ್ಯೋಗ ಭದ್ರತೆ ಮತ್ತು ಆ ಕುರಿತು ಖಾತರಿ; ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೊಜನೆಯನ್ನು ವಿಸ್ತರಿಸಬೇಕು ಮತ್ತು ಕೆಲಸದ ದಿನಗಳನ್ನು 200ಕ್ಕೆ ಹೆಚ್ಚಿಸಿ ದಿನಕ್ಕೆ ಕನಿಷ್ಠ ವೇತನ ರೂ.600 ಮಾಡಬೇಕು; ಎಲ್ಲಾ ಬಾಕಿ ಕೂಲಿಗಳನ್ನು ಪಾವತಿಸಬೇಕು; ರಾಷ್ಟ್ರೀಯ ನಗರ ಉದ್ಯೋಗ ಖಾತರಿ ಕಾಯಿದೆಯನ್ನು ತರಬೇಕು.
6) ಸಾರ್ವಜನಿಕ ವಲಯದ ಘಟಕಗಳ ಮತ್ತು ಸಾರ್ವಜನಿಕ ಸೇವೆಗಳ ಖಾಸಗೀಕರಣವನ್ನು ನಿಲ್ಲಿಸಬೇಕು; ನ್ಯಾಷನಲ್ ಮಾನಿಟೈಸೇಶನ್ ಪೈಪ್‌ಲೈನ್ (ಎನ್‌ಎಂಪಿ) ರದ್ದಾಗಬೇಕು.
7) ಬೆಲೆ ಏರಿಕೆ ತಡೆಯಬೇಕು, ಆಹಾರ ಪದಾರ್ಥಗಳು ಮತ್ತು ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ಹಿಂತೆಗೆದುಕೊಳ್ಳಬೇಕು; ಪೆಟ್ರೋಲ್/ಡೀಸೆಲ್/ಸೀಮೆಎಣ್ಣೆ ಅಡುಗೆ ಅನಿಲದ ಮೇಲೆ ಕೇಂದ್ರೀಯ ಅಬಕಾರಿ ಸುಂಕವನ್ನು ಗಣನೀಯವಾಗಿ ಇಳಿಸಬೇಕು; ಅಡುಗೆ ಅನಿಲ ಬೆಲೆ ಏರಿಕೆಯನ್ನು ಕೂಡಲೇ ಹಿಂಪಡೆಯಬೇಕು.
8) ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಸಾರ್ವತ್ರಿಕಗೊಳಿಸಬೇಕು ಮತ್ತು 14 ಅಗತ್ಯ ವಸ್ತುಗಳನ್ನು ಸೇರಿಸಲು ಅದರ ವ್ಯಾಪ್ತಿಯನ್ನು ವಿಸ್ತರಿಸಬೇಕು; ಎಲ್ಲಾ ಆದಾಯ ತೆರಿಗೆ ಪಾವತಿಸಬೇಕಾಗಿರದ ಕುಟುಂಬಗಳಿಗೆ ಆಹಾರ ಮತ್ತು ಆದಾಯದ ಬೆಂಬಲವನ್ನು ಖಚಿತಪಡಿಸಬೇಕು.
9) ಅರಣ್ಯ ಹಕ್ಕು ಕಾಯಿದೆಯ ಕಟ್ಟುನಿಟ್ಟಿನ ಅನುಷ್ಠಾನ; ನಿವಾಸಿಗಳಿಗೆ ತಿಳಿಸದೆ ಅರಣ್ಯವನ್ನು ತೆರವುಗೊಳಿಸಲು ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡುವ ಅರಣ್ಯ (ಸಂರಕ್ಷಣೆ) ಕಾಯಿದೆ ಮತ್ತು ನಿಯಮಗಳಿಗೆ ತಿದ್ದುಪಡಿಗಳನ್ನು ಹಿಂಪಡೆಯಬೇಕು.
10) ತಳಮಟ್ಟದಲ್ಲಿರುವ ವಿಭಾಗಗಳ ದಮನವನ್ನು ನಿಲ್ಲಿಸಬೇಕು ಮತ್ತು ಸಾಮಾಜಿಕ ನ್ಯಾಯವನ್ನು ಖಾತರಿಪಡಿಸಬೇಕು.
11) ಎಲ್ಲರಿಗೂ ಸಾರ್ವತ್ರಿಕ ಮತ್ತು ಗುಣಮಟ್ಟದ ಆರೋಗ್ಯ ಮತ್ತು ಶಿಕ್ಷಣವನ್ನು ಖಚಿತಪಡಿಸಬೇಕು; ಹೊಸ ಶಿಕ್ಷಣ ನೀತಿ(ಎನ್‌ಇಪಿ) 2020ನ್ನು ರದ್ದುಪಡಿಸಬೇಕು.
12) ಎಲ್ಲರಿಗೂ ವಸತಿಯನ್ನು ಖಾತ್ರಿಪಡಿಸಬೇಕು.
13) ಅತಿ ಶ್ರೀಮಂತರ ಮೇಲೆ ತೆರಿಗೆ ಹಾಕಬೇಕು; ಕಾರ್ಪೊರೇಟ್ ತೆರಿಗೆಯನ್ನು ಹೆಚ್ಚಿಸಬೇಕು; ಸಂಪತ್ತು ತೆರಿಗೆಯನ್ನು ಪರಿಚಯಿಸಬೇಕು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ