ಬೆಂಗಳೂರು: ರಾಜ್ಯದಲ್ಲಿ ಪಠ್ಯ ಪುಸ್ತಕ ಮರು ಪರಿಷ್ಕರಣೆಯ ಹೆಸರಲ್ಲಿ ನಡೆದ ವಿದ್ಯಮಾನಗಳು ಈಗ ತೀವ್ರ ವಿವಾದಕ್ಕೆ ಎಡೆ ಮಾಡಿದೆ. ಈ ನಾಡಿನ ನೆಲದ ಸಾಮರಸ್ಯ ಪರಂಪರೆಗೆ ತಿಲಾಂಜಲಿ ಇಡುವ ಕೆಲಸ ಒಂದೆಡೆಯಾದರೆ, ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ಎದುರಿಸಿ, ತಾರುಣ್ಯದಲ್ಲಿಯೇ ದೇಶಕ್ಕಾಗಿ ನೇಣುಗಂಬವೇರಿದ ಭಗತ್ ಸಿಂಗ್, ಸಾಮಾಜಿಕ ಬದಲಾವಣೆಗಳ ಹರಿಕಾರರಾದ ನಾರಾಯಣ ಗುರು, ಪೆರಿಯಾರ್ ರವರ ಪಾಠವನ್ನು ಕೈ ಬಿಟ್ಟ ಸಂಗತಿಗಳು ಇನ್ನೊಂದೆಡೆ ವಿವಾದದ ಕಾವೇರಿಸಿದವು.
ಈ ಸಂದರ್ಭದಲ್ಲಿ ಜನರೆದುರು ಪಠ್ಯ ಪುಸ್ತಕಗಳ ರಚನೆ ಹೇಗೆ ನಡೆಯುತ್ತದೆ, ಪರಿಷ್ಕರಣೆ ಬೇಕಾದರೆ ಅದಕ್ಕೆ ಮಾನದಂಡಗಳೇನು, ಈ ಹಿಂದಿನ ಪಠ್ಯ ಪುಸ್ತಕ ರಚನೆ ಮತ್ತು ಪರಿಷ್ಕರಣಾ ಸಮಿತಿಗಳು ಯಾವ ಮಾದರಿಯನ್ನು ಅನುಸರಿಸಿದ್ದವು. ಈಗಿನ ಮರು ಪರಿಶೀಲನಾ ಸಮಿತಿ ಏನು ಮಾಡಿದೆ, ಯಾಕೆ ಮಾಡಿದೆ ಮತ್ತು ಯಾಕದು ಸರಿಯಲ್ಲ ಎಂಬ ಎಲ್ಲಾ ವಿಚಾರಗಳು ಸಾರ್ವಜನಿಕವಾಗಿ ತಿಳಿಯಬೇಕೆಂಬ ಉದ್ದೇಶದಿಂದ ಜಾಗೃತ ನಾಗರಿಕರು ಕರ್ನಾಟಕ ವೇದಿಕೆಯಡಿ ನಾಳೆ (ಮೇ 25) ಬೆಳಿಗ್ಗೆ 11.00 ಘಂಟೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ಶಿಕ್ಷಣ ತಜ್ಞರ, ಪರಿಣಿತರ ಜೊತೆ ಸಮಾಲೋಚನೆ ಚರ್ಚೆಯನ್ನು ಆಯೋಜಿಸಲಾಗಿದೆ.
ಮರು ಪರಿಷ್ಕರಣೆಯ ಮೂಲಕ ದೇಶದ ಬಹುತ್ವವನ್ನು ವಿರೋಧಿಸುವ ಹಿಂದುತ್ವವಾದದ ಜನಕರಾದ ಕೆ ಬಿ ಹೆಡ್ಗೆವಾರರ ಪಠ್ಯವನ್ನು ಸೇರಿಸಲಾಗಿದೆ. ಜೊತೆಗೆ ನಾಡಿನ ಸಂವೇದನಾಶೀಲ ಬರಹಗಾರರ ಪಠ್ಯವನ್ನು ಕೈ ಬಿಡಲಾಗಿದೆ ಎಂಬ ವಿಷಯವೀಗ ಜಗಜ್ಜಾಹಿರವಾಗಿದೆ.
ಕರಾಳ ಜಾತಿ ವ್ಯವಸ್ಥೆಯಲ್ಲಿ ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳಲ್ಲಿ ಮತ್ತು ವಿಭಾಗಗಳಲ್ಲಿ ಹುಟ್ಟಿ, ಈ ಅಸಮಾನ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸುತ್ತಲೇ ತಮ್ಮ ಅಸ್ತಿತ್ವ, ಅಸ್ಮಿತೆಗಳನ್ನು ದಾಖಲಿಸಿರುವ ಕನ್ನಡದ ಸಂವೇದನಾಶೀಲ ಬರಹಗಾರರ ಪಠ್ಯಗಳನ್ನು ಕೈ ಬಿಟ್ಟು, ಶ್ರೇಣೀಕೃತ ಜಾತಿ ವ್ಯವಸ್ಥೆಯ ಮೇಲ್ತುದಿಯಲ್ಲಿರುವ ಬ್ರಾಹ್ಮಣ ಸಮುದಾಯದ ಜನರೇ ತುಂಬಿರುವ ಸಮಿತಿಯನ್ನು ರಚಿಸಲಾಗಿದೆ ಮತ್ತು ಅವರ ಪಠ್ಯಗಳನ್ನು ತುಂಬಲಾಗಿದೆ.
ಎಳೆ ಮಕ್ಕಳ ತಲೆಯಲ್ಲಿ ಭಾರತದ ಬಹುತ್ವಕ್ಕೆದುರಾಗಿ ಹಿಂದುತ್ವ ವಾದವನ್ನು ತುಂಬುವ, ಮಹಿಳೆಯರ ಕುರಿತು ಕೀಳು ಭಾವನೆಯನ್ನು ಮೂಡಿಸುವ ಪಠ್ಯಗಳಲ್ಲ ಬೇಕಿರುವುದು ಎಂಬುದು ಮುನ್ನೆಲೆಗೆ ಬರಬೇಕಿದೆ ಎಂಬುದು ಜಾಗೃತ ನಾಗರಿಕರು ಕರ್ನಾಟಕದ ಆಶಯವಾಗಿದೆ.
ಇತ್ತೀಚೆಗಷ್ಟೇ ಪರಿಷ್ಕರಿಸಲಾದ ಪಠ್ಯ ಪುಸ್ತಕದ ಮರು ಪರಿಷ್ಕರಣೆಗಾಗಿ ರಚಿಸಿದ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥರ ಅರ್ಹತೆಗಳ ಬಗ್ಗೆಯೇ ಗೊಂದಲಗಳಿದ್ದು, ಸಮಿತಿಯನ್ನು ರಚಿಸಿದಾಗಲೇ ಎದ್ದ ಅನುಮಾನಗಳು ಸತ್ಯವೆಂದು ಈಗ ಸಾಬೀತಾಗಿದೆ.
ಈ ಎಲ್ಲ ಕಾರಣಗಳಿಂದ ಪಠ್ಯ ಪುಸ್ತಕ ರಚನೆ ಮತ್ತು ಸೂಕ್ತ ಪರಿಷ್ಕರಣಾ ವಿಧಾನಗಳ ಬಗ್ಗೆ ಚರ್ಚಿಸಿ ಪ್ರಜಾತಾಂತ್ರಿಕ ಆಶಯಗಳ ಅನುಸಾರ ಜಾತಿ ಧರ್ಮ, ವರ್ಗ, ನಿರಪೇಕ್ಷವಾದ ಮಕ್ಕಳ ಸ್ನೇಹೀ ಪರ್ಯಾಯ ಪಠ್ಯಪುಸ್ತಕಗಳ ಬಗ್ಗೆ ಸೂಚನೆಗಳನ್ನು ಮಂಡಿಸಲು ಈ ಸಮಾಲೋಚನೆ ಹಮ್ಮಿಕೊಳ್ಳಲಾಗಿದೆ.
ಹಾಗೆಯೇ ಪಿ.ಯು. ಪಠ್ಯಪುಸ್ತಕ ಪರಿಷ್ಕರಣೆಗೂ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಿ ಪಠ್ಯಗಳನ್ನು ತಿರುಚಲು ಮುಂದಾಗಿರುವುದರ ಬಗ್ಗೆಯೂ ಚರ್ಚಿಸುವ ಉದ್ದೇಶದಿಂದ ಸಮಾಲೋಚನಾ ಸಭೆ ನಡೆಯುತ್ತಿದೆ.