ಬೆಂಗಳೂರು: ಈ ಬಾರಿಯ 2ನೇ ರಾಜ್ಯ ಒಲಂಪಿಕ್ ಕೂಟವು ಇದೇ ತಿಂಗಳ ಮೇ 16 ರಿಂದ 22 ರವರೆಗೆ ಬೆಂಗಳೂರಿನ ಹಲವು ಸ್ಥಳಗಳಲ್ಲಿ ನಡೆಯಲಿದೆ. ಈ ಕೂಟದಲ್ಲಿ 14 ವರ್ಷದೊಳಗಿನ ಐದು ಸಾವಿರ ಕ್ರೀಡಾಪಟುಗಳು 21 ಕ್ರೀಡಾ ಸ್ಪರ್ದೆಗಳಲ್ಲಿ ಭಾಗವಹಿಸಲಿದ್ದಾರೆ.
ರಾಜ್ಯ ಯುವ ಸಬಲೀಕರಣ ಮ್ತತು ಕ್ರೀಡಾ ಇಲಾಖೆ ( ಡಿವೈಇಎಸ್) ಹಾಗೂ ಕರ್ನಾಟಕ ಒಲಂಪಿಕ್ಸ್ ಅಸೋಸಿಯೇಷನ್(ಕೆಒಎ) ಈ ಕ್ರೀಡಾಕೂಟವನ್ನ ಜಂಟಿಯಾಗಿ ನಡೆಸುತ್ತಿದ್ದಾರೆ.
ʼಭವಿಷ್ಯದ ಕ್ರೀಡಾ ಪ್ರತಿಭೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಈ ಕೂಟವು ಬಹಳಷ್ಟು ನೆರವಾಗಲಿದೆ ಎಂಬ ಉದ್ದೇಶದಿಂದ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದು ಕ್ರೀಡಾ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಶಾಲಿನ್ ರಜನೀಶ್ ತಿಳಿಸಿದ್ದಾರೆ.
ಈ ಮಿನಿ ಒಲಂಪಿಕ್ಸ್ಗೆ ರಾಜ್ಯ ಸರ್ಕಾರವು ₹ 504 ಕೋಟಿ ಅನುದಾನವನ್ನು ಮೀಸಲಿಟ್ಟಿದ್ದು, ಮುಂಬರುವ ದಿನಗಳಲ್ಲಿ ಕ್ರೀಡಾ ಮೂಲಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆʼ ಎಂದರು.
ಈ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್, ಆರ್ಚರಿ, ಬ್ಯಾಡ್ಮಿಂಟನ್, ಬ್ಯಾಸ್ಕೆಟ್ ಬಾಲ್, ಬಾಕ್ಸಿಂಗ್, ಸೈಕ್ಲಿಂಗ್, ಫೆನ್ಸಿಂಗ್, ಫುಟ್ ಬಾಲ್, ಜಿಮ್ನಾಸ್ಟಿಕ್ಸ್, ಹ್ಯಾಂಡ್ ಬಾಲ್, ಹಾಕಿ, ಜುಡೊ, ಖೋ-ಖೋ, ಟೆನಿಸ್, ನೆಟ್ ಬಾಲ್, ರೈಫಲ್ ಶೂಟಿಂಗ್, ಈಜು, ಟೇಬಲ್ ಟೆನಿಸ್, ಟೆಕ್ವಾಂಡೂ, ವೇಟ್ ಲಿಫ್ಟಿಂಗ್ ಕ್ರೀಡಾ ಸ್ಪರ್ಧೆಗಳು ಇದ್ದು, ಇವುಗಳು ಕಂಠೀರವ, ವಿದ್ಯಾನಗರದಲ್ಲಿ ಕ್ರೀಡಾ ಶಾಲೆಯಲ್ಲಿ ಮೈದಾನ, ಭಾರತ ಕ್ರೀಡಾ ಪ್ರಾಧಿಕಾರದ ಶೂಟಿಂಗ್ ರೇಂಜ್, ರಾಜ್ಯ ಪುಟ್ಬಾಲ್ ಸಂಸ್ಥೆ ಕ್ರೀಡಾಂಗಣ, ಹೂಡಿ ಗೋಪಾಲನ್ ಸ್ಪೋರ್ಟ್ನ ಸೆಂಟರ್, ಬಸವನಗುಡಿ ಈಜು ಕೇಂದ್ರ ಮತ್ತು ಶಾಂತಿನಗರದ ಹಾಕಿ ಕ್ರೀಡಾಂಗಣದಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿವೆ.
ಮಿನಿ ಒಲಂಪಿಕ್ಸ್ಗೆ 16 ಮೇ ರಂದು ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯಪಾಲ ಥಾಮರ್ ಚಂದ್ ಗೆಹಲೋಟ್ ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಲಿದ್ದು, ಕ್ರೀಡಾ ಸಚಿವ ನಾರಾಯಣ ಗೌಡ ಹಾಜರಿರುತ್ತಾರೆ. ಹಾಗೆ ಕೂಟದ ಕೊನೆಯ ದಿನವಾದ ಮೇ 22 ರಂದು ಸಮಾರೋಪ ಸಮಾರಂಭದಲ್ಲಿ ಪ್ರಾಥಮಿಕ ಮತ್ತು ಪ್ರೌಡಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹಾಜರಿರುತ್ತಾರೆ ಎಂದು ಕೆಒಎ ಅಧ್ಯಕ್ಷ ಕೆ. ಗೋವಿಂದರಾಜ್ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಕೆಒಎ ಮಹಾ ಪ್ರಧಾನ ಕಾರ್ಯದರ್ಶಿ ಟಿ. ಅನಂತರಾಜು ಮತ್ತಿತರರು ಹಾಜರಿದ್ದರು.