ಮಾನವನ ಉಗಮ ಮತ್ತು ಅಭ್ಯುದಯದ ಇತಿಹಾಸವನ್ನು ಅರಿತಿರುವ ಯಾರಿಗೇ ಆದರೂ ಒಂದು ಅಂಶ ತಿಳಿದಿರಲೇಬೇಕು. ಅದೇನೆಂದರೆ, ಮಾನವನಲ್ಲಿ ಸ್ವಾಭಾವಿಕವಾದ ಆಂದೋಲನದ ತುಡಿತ ಮತ್ತು ಸಂವೇದನೆ ಇಲ್ಲದೆ ಹೋಗಿದ್ದಲ್ಲಿ ಬಹುಶಃ ಮನುಕುಲ ಶಿಲಾಯುಗದಿಂದ ಒಂದು ಹೆಜ್ಜೆಯೂ ಮುಂದೆ ಚಲಿಸಲಾಗುತ್ತಿರಲಿಲ್ಲ. ತನಗೆ ಹಸಿವಾಗುವುದನ್ನು ಹೇಳಲಾರದೆ ರಚ್ಚೆ ಹಿಡಿಯುವ ಎಳೆ ಕೂಸಿನ ಅಳು ಸಹ ಒಂದು ರೀತಿಯ ಆಂದೋಲನವೇ. ಅಂಬೆಗಾಲಿನ ಹಂತವನ್ನು ದಾಟಿ ಹೆಜ್ಜೆ ಹಾಕಲು ಕಲಿಯುವ ಹಸುಳೆ ಬೀಳುತ್ತಾ, ಏಳುತ್ತಾ, ಗಾಯ ಮಾಡಿಕೊಳ್ಳುತ್ತಾ ನಡೆಯುವ ಪ್ರಕ್ರಿಯೆಯೂ ಒಂದು ರೀತಿಯ ಆಂತರಿಕ ಆಂದೋಲನವೇ. ಅಂದರೆ, ಮಾನವ ತನ್ನ ಅಭ್ಯುದಯದ ಹಾದಿಯಲ್ಲಿ ಸ್ಥಾಪಿತ ನೆಲೆಯ ವಿರುದ್ಧ ಬಂಡಾಯ ಹೂಡುತ್ತಲೇ ತನ್ನ ಮುನ್ನಡೆ ಸಾಧಿಸಲೆತ್ನಿಸುತ್ತಾನೆ.
ನಾ ದಿವಾಕರ
ತನಗೆ ನ್ಯಾಯಯುತವಾಗಿ ದಕ್ಕಬೇಕಾಗಿರುವುದನ್ನು, ತನ್ನಿಂದ ಕಸಿದುಕೊಳ್ಳಲಾಗಿರುವುದನ್ನು, ತನಗೆ ವಂಚಿಸಲಾಗಿರುವುದನ್ನು ಮತ್ತು ತನ್ನ ಸ್ವಾಭಾವಿಕ ಹಕ್ಕುಗಳನ್ನು ಸಾಧಿಸಲು ಮನುಷ್ಯ ವ್ಯಕ್ತಿಗತ ನೆಲೆಯಲ್ಲಿ, ಸಾಮುದಾಯಿಕ ನೆಲೆಯಲ್ಲಿ, ಸಾಂಘಿಕ ನೆಲೆಯಲ್ಲಿ ವೈಯಕ್ತಿಕವಾಗಿ, ಸಾಮುದಾಯಿಕವಾಗಿ, ಸಾಂಸ್ಥಿಕವಾಗಿ ಆಂದೋಲನಗಳ ಮೂಲಕವೇ ಪ್ರಯತ್ನಿಸುತ್ತಾ ಬಂದಿದ್ದಾನೆ. ಮಾನವ ಸಮಾಜ ಇಂದು ಪ್ರಜಾತಂತ್ರ, ಗಣತಂತ್ರ, ಸಂವಿಧಾನ, ಕಾನೂನು ಕಟ್ಟಳೆ ಮುಂತಾದ ನಾಗರಿಕ ಸಮಾಜದ ರೀತಿ ರಿವಾಜುಗಳನ್ನು ರೂಢಿಸಿಕೊಂಡು, ಮೈಗೂಡಿಸಿಕೊಂಡು ನಡೆದು ಬಂದಿದ್ದರೆ ಅದರ ಹಿಂದೆ ಶತಮಾನಗಳಿಂದಲೂ ನಡೆದು ಬಂದ ಜನಾಂದೋಲನಗಳಿವೆ, ಚಳುವಳಿಗಳ ಇತಿಹಾಸವಿದೆ, ಪ್ರತಿರೋಧ ಪ್ರತಿಭಟನೆಯ ಪರಂಪರೆ ಇದೆ.
ಗುಲಾಮಗಿರಿಯ ವಿರುದ್ಧ ಮೊಟ್ಟಮೊದಲ ಬಾರಿಗೆ ದಂಗೆಯೆದ್ದು, ಪ್ರತಿರೋಧದ ಪಂಜುಗಳನ್ನು ತನ್ನ ಮುಂದಿನ ಹಲವು ಶತಮಾನಗಳ ಪೀಳಿಗೆಗೆ ಬಿಟ್ಟು ಹೋದ ಸ್ಪಾರ್ಟಕಸ್ ನಿಂದ ಹಿಡಿದು ಇತ್ತೀಚಿನ ರೈತ ಮುಷ್ಕರದವರೆಗೆ ಮಾನವ ಸಮಾಜ ಜನಾಂದೋಲನಗಳ ಮೂಲಕವೇ, ವೈಯಕ್ತಿಕ/ಸಾಂಘಿಕ ಪ್ರತಿಭಟನೆ, ಪ್ರತಿರೋಧ, ಬಂಡಾಯಗಳ ಮೂಲಕವೇ ತನ್ನ ವಿಕಾಸವನ್ನು ಕಂಡಿದೆ. ಬಹುಶಃ ಈ ಇತಿಹಾಸದ ವಿಭಿನ್ನ ಕಾಲಘಟ್ಟಗಳಲ್ಲಿ, ವಿಭಿನ್ನ ನೆಲೆಗಳಲ್ಲಿ ಈ ಪ್ರತಿರೋಧದ ದನಿಗಳು ದಾಖಲಾಗದೆ ಹೋಗಿದ್ದರೆ 21ನೆಯ ಶತಮಾನದ ಮನುಕುಲ ಶಿಲಾಯುಗದ ಅಥವಾ ಗುಲಾಮಿ ಸಮಾಜದಲ್ಲೇ ಉಳಿದುಬಿಡುತ್ತಿತ್ತು. ಆಂದೋಲನಗಳ ಮೂಲಕ ತಮ್ಮ ಹಕ್ಕೊತ್ತಾಯಗಳನ್ನು ಮಂಡಿಸಿ ನಾಗರಿಕ ಸಮಾಜದ ವಿಕಸನಕ್ಕೆ ಕಾರಣವಾಗುವ ಮನುಷ್ಯರನ್ನು ಒಂದು ‘ ತಳಿ ’ ಎಂದು ಮೂದಲಿಸುವ, ಆಂದೋಲನಜೀವಿಗಳು ಎಂದು ಹೀಗಳೆಯುವ ಪ್ರಧಾನಮಂತ್ರಿಗಳು ಇತಿಹಾಸದ ಪುಟಗಳನ್ನು ಒಮ್ಮೆಯಾದರೂ ತಿರುವಿಹಾಕುವುದು ಒಳಿತು.
ಇದನ್ನೂ ಓದಿ : ಬೌದ್ಧಿಕ ದಾರಿದ್ರ್ಯದ ವ್ಯಾಧಿಯೂ ಸಮೂಹ ಸನ್ನಿಯ ವ್ಯಸನವೂ
ಆಂದೋಲನಜೀವಿಗಳ ಈ ತಳಿ ತನ್ನ ಜೀವವಂತಿಕೆಯನ್ನು ಕಾಪಾಡಿಕೊಂಡು ಬಂದಿರುವುದರಿಂದಲೇ ಇಂದು ಭಾರತದಲ್ಲಿ ಒಂದು ಸಂವಿಧಾನ, ಪ್ರಜಾತಂತ್ರ ಮತ್ತು ಸಮಾನತೆಯ ಕನಸುಗಳು ಜೀವಂತವಾಗಿವೆ. ಈ ತಳಿಯ ಇತಿಹಾಸ ಮತ್ತು ಪರಂಪರೆ ಮನುಕುಲದ ಇತಿಹಾಸದಷ್ಟೇ ಹಳೆಯದು, ಅಷ್ಟೇ ಅಮೂಲ್ಯವಾದುದಲ್ಲವೇ ? ಟಿಪ್ಪುಸುಲ್ತಾನನಿಂದ ಆರಂಭವಾಗಿ, 1857ರ ಸ್ವಾತಂತ್ರ್ಯ ಸಂಗ್ರಾಮವನ್ನು ಹಾದು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಜೀವ, ಜೀವನ, ಜೀವನೋಪಾಯ ಎಲ್ಲವನ್ನೂ ಕಳೆದುಕೊಂಡ ಲಕ್ಷಾಂತರ ಜೀವಿಗಳು ಈ ತಳಿಗೇ ಸೇರಿದವರು. ದುರಂತ ಎಂದರೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಂತತಿಯನ್ನು ಪ್ರತಿನಿಧಿಸದ ಒಂದು ಪೀಳಿಗೆ ಇಂದು ದೇಶ ಮತ್ತು ದೇಶಪ್ರೇಮದ ನಿಷ್ಕರ್ಷೆ ಮಾಡುತ್ತಿದೆ. ಈ ಪೀಳಿಗೆಯ ಕೂಸುಗಳು ಆಂದೋಲನ ಜೀವಿಗಳನ್ನು ಅಪಮಾನಿಸುತ್ತಿವೆ.
ಬುದ್ಧನ ಸಾತ್ವಿಕ ಆಂದೋಲನದಿಂದ ಅಂಬೇಡ್ಕರರ ತಾತ್ವಿಕ ಪ್ರಜಾಂದೋಲನದವರೆಗಿನ ಹೆಜ್ಜೆಗುರುತುಗಳನ್ನು ಗಮನಿಸಿದ್ದರೆ ಅಥವಾ ಶತಮಾನಗಳ ಅಸಮಾನತೆ ಮತ್ತು ತಾರತಮ್ಯಗಳ ಪಳೆಯುಳಿಕೆಗಳನ್ನು ಇಂದಿಗೂ ಉಳಿಸಿಕೊಂಡು ಬಂದಿರುವ ಭಾರತೀಯ ಸಮಾಜದಲ್ಲಿನ ಚಾರಿತ್ರಿಕ ಪ್ರತಿರೋಧದ ದನಿಗಳನ್ನು, ಹೋರಾಟಗಳನ್ನು, ಜನಾಂದೋಲನಗಳನ್ನು ಗಮನಿಸಿದ್ದರೆ, ಪ್ರಧಾನಿ ನರೇಂದ್ರ ಮೋದಿಯವರು ‘ ತಳಿ ’ ಎನ್ನುವ ಪದ ಬಳಸುವ ಬದಲು ಪರಂಪರೆ, ನಾಗರಿಕತೆ ಎಂಬ ಮೌಲಿಕ ಪದವನ್ನು ಬಳಸುತ್ತಿದ್ದರು. ಅಸ್ಪೃಶ್ಯತೆ, ಬಾಲ್ಯ ವಿವಾಹ ಮುಂತಾದ ಅನಿಷ್ಟ ಪದ್ಧತಿಗಳನ್ನು ಇಂದಿಗೂ ಜೀವಂತವಾಗಿರಿಸಿಕೊಂಡು ಬಂದಿರುವ ಭಾರತೀಯ ಸಮಾಜದಲ್ಲಿ ಆಂದೋಲನ ನಾಗರಿಕತೆಯ ಒಂದು ಭಾಗವಾಗಿ ಬೆಳೆದುಬಂದಿರುವುದನ್ನು ಅರಿತಿದ್ದರೆ ‘ ಆಂದೋಲನಜೀವಿ ’ ಎನ್ನುವ ಲೇವಡಿಯ ಮಾತುಗಳು ಹೊರಬರುತ್ತಿರಲಿಲ್ಲ.
ನಿಜ, ಭಾರತದಲ್ಲಿ ‘ ಅಂದೋಲನಜೀವಿಗಳ ’ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಾಗಿ, ಜಾತಿ ತಾರತಮ್ಯ ಮತ್ತು ದೌರ್ಜನ್ಯಗಳ ವಿರುದ್ಧ, ಮಹಿಳೆಯರ ಘನತೆಗಾಗಿ, ಹೆಣ್ತನದ ರಕ್ಷಣೆಗಾಗಿ, ಅಸ್ಪೃಶ್ಯತೆ ಮತ್ತು ಜಾತಿ ದೌರ್ಜನ್ಯದ ವಿರುದ್ಧ, ಸಾಮಾಜಿಕ ಅನ್ಯಾಯಗಳ ವಿರುದ್ಧ ಆಂದೋಲನಜೀವಿಗಳ ಒಂದು ಪರಂಪರೆಯೇ ಇಲ್ಲಿ ಬೆಳೆದು ಬಂದಿದೆ. ಬಸವಣ್ಣನಿಂದ ಅಂಬೇಡ್ಕರ್ ವರೆಗೆ ಈ ಪರಂಪರೆ ಬೆಳೆಯುತ್ತಲೇ ಬಂದಿದೆ. ಮಾರ್ಕ್ಸ್, ಲೆನಿನ್, ಮಾವೋ, ಫುಲೆ, ಗಾಂಧಿ, ಅಂಬೇಡ್ಕರ್, ಲೋಹಿಯಾ, ಪೆರಿಯಾರ್ ಹೀಗೆ ಮಹಾನ್ ಚಿಂತಕರ ಸಂತತಿ ಮತ್ತು ವಿಚಾರಧಾರೆ ಈ ಪರಂಪರೆಯನ್ನು ಪೋಷಿಸುತ್ತಾ ಬಂದಿದೆ. ಇದು ಯಾವುದೇ ವೈಜ್ಞಾನಿಕ ಪ್ರಯೋಗಾಲಯದಲ್ಲಿ ಸೃಷ್ಟಿಸಿದ ತಳಿ ಅಲ್ಲ. ಇದು ಶತಮಾನಗಳ ಅನ್ಯಾಯಗಳ ವಿರುದ್ಧ ಜನಮಾನಸದ ನಡುವೆ ಸೃಷ್ಟಿಯಾಗಿರುವ ಸಂಘರ್ಷದ ಪರಂಪರೆಗಳು, ಹೋರಾಟದ ವಾಹಿನಿಗಳು, ಜನಾಂದೋಲನದ ಸಾಗರಗಳು.
ವಸಾಹತು ದಾಸ್ಯದಿಂದ ವಿಮೋಚನೆ ಪಡೆದ ನಂತರ ವಿಶ್ವದ ಅತ್ಯುತ್ತಮ ಸಂವಿಧಾನವನ್ನು ರಚಿಸಿ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಸಾಧಿಸುವ ನಿಟ್ಟಿನಲ್ಲಿ 73 ವರ್ಷಗಳ ಸ್ವತಂತ್ರ ಆಡಳಿತ ನಡೆಸಿದ ನಂತರವೂ ಭಾರತದಲ್ಲಿ ಆಂದೋಲನಜೀವಿಗಳು ಸಕ್ರಿಯರಾಗಿದ್ದರೆ ಅದು ಆಡಳಿತ ವ್ಯವಸ್ಥೆ ಮತ್ತು ಆಳುವ ವರ್ಗಗಳು ನಾಚಿಕೆಪಡಬೇಕಾದ ವಿಚಾರ. ಸಂವಿಧಾನದ ಆಶಯದಂತೆ ಸಮಸಮಾಜವನ್ನು ಕಟ್ಟುವ ಪ್ರಕ್ರಿಯೆಯಲ್ಲಿ, ಶೋಷಣೆ ಮುಕ್ತ, ದೌರ್ಜನ್ಯ ಮುಕ್ತ, ಭ್ರಷ್ಟಾಚಾರ ಮುಕ್ತ, ಸಂವೇದನಾಶೀಲ ಸಮಾಜ ನಿರ್ಮಾಣಕ್ಕಾಗಿ ಈ ದೇಶದ ಆಳುವ ವರ್ಗಗಳು, ರಾಜಕೀಯ ಪಕ್ಷಗಳು ಸಂವಿಧಾನ ಬದ್ಧತೆ ಮತ್ತು ಪ್ರಜಾತಂತ್ರ ನಿಷ್ಠೆಯಿಂದ ಶ್ರಮಿಸಿದ್ದರೆ ಬಹುಶಃ ಆಂದೋಲನಜೀವಿಗಳೂ ತಮ್ಮ ಬದುಕಿನ ಅಮೂಲ್ಯ ಕ್ಷಣಗಳನ್ನು ಪ್ರತಿಭಟನೆ, ಪ್ರತಿರೋಧ, ಮುಷ್ಕರ, ಧರಣಿ ಮುಂತಾದ ಸಂಘರ್ಷಗಳಲ್ಲಿ ಕಳೆಯುತ್ತಿರಲಿಲ್ಲ.
1970ರ ದಶಕದ ರೈಲ್ವೆ ಮುಷ್ಕರದಿಂದ 2020ರ ರೈತ ಮುಷ್ಕರದವರೆಗೆ, ನೆಲ್ಲಿ ಹತ್ಯಾಕಾಂಡದಿಂದ ಶಹೀನ್ ಭಾಗ್‍ವರೆಗೆ, ಮಥುರಾ ಅತ್ಯಾಚಾರ ಪ್ರಕರಣದಿಂದ ಹಥ್ರಾಸ್‍ವರೆಗೆ, ತುರ್ತುಪರಿಸ್ಥಿತಿಯಿಂದ ಈ ಕ್ಷಣದವರೆಗೆ ಈ ದೇಶದ ಹಾದಿ ಬೀದಿಗಳಲ್ಲಿ ನಡೆದ ಹೋರಾಟಗಳನ್ನು, ನ್ಯಾಯಾಂಗದ ಅಂಗಳದಲ್ಲಿ ನಡೆದ ಸಂಘರ್ಷಗಳನ್ನು ಗಮನಿಸಿದರೆ ಭಾರತದ ಆಳುವ ವರ್ಗಗಳು ‘ಆಂದೋಲನಜೀವಿಗಳನ್ನು’ ಹೇಗೆ ತುದಿಗಾಲಲ್ಲಿ ನಿಲ್ಲಿಸಿವೆ ಎಂದು ಅರ್ಥವಾಗುತ್ತದೆ. ಶಿಕ್ಷಣ ಹಕ್ಕು, ಆಹಾರ ಹಕ್ಕು, ಅರಣ್ಯ ಹಕ್ಕು, ಮಾಹಿತಿ ಹಕ್ಕು ಹೀಗೆ ಸಾರ್ವಭೌಮ ಪ್ರಜೆಗಳ ಜೀವನ ಮತ್ತು ಜೀವನೋಪಾಯಕ್ಕೆ ಅತ್ಯವಶ್ಯವಾದ ಹಕ್ಕುಗಳನ್ನು ಸಾಂವಿಧಾನಿಕವಾಗಿ ಪ್ರಜೆಗಳಿಗೆ ಒದಗಿಸಲು ಈ ದೇಶಕ್ಕೆ ಆರು ದಶಕಗಳು ಬೇಕಾದವು. ಈ ಎಲ್ಲ ಹಕ್ಕುಗಳೂ ಆಳುವವರ ಔದಾರ್ಯದಿಂದ ಪಡೆದಿದ್ದಲ್ಲ, ಜನಪರ ಸಂಘಟನೆಗಳ, ಜನಾಂದೋಲನಗಳ ಅವಿರತ ಶ್ರಮ, ಹೋರಾಟ ಮತ್ತು ನ್ಯಾಯಯುತ ಪ್ರಯತ್ನಗಳ ಫಲವಾಗಿ ಪಡೆದದ್ದು.
ಪ್ರತಿಭಟನೆ ಮತ್ತು ಪ್ರತಿರೋಧ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಡಳಿತ ಯಂತ್ರವನ್ನು ಸುಸ್ಥಿತಿಯಲ್ಲಿಡಲು ನೆರವಾಗುವ ಪ್ರಬಲ ಅಸ್ತ್ರಗಳು. ಸರ್ವಾಧಿಕಾರಿ, ನಿರಂಕುಶ ವ್ಯವಸ್ಥೆಯಲ್ಲಿ ದಾಸ್ಯದಿಂದ ಮುಕ್ತಿಪಡೆಯಲು ಇರುವ ಮಾರ್ಗಗಳು. ಜಗತ್ತಿನ ಇತಿಹಾಸದಲ್ಲಿ ಅನೇಕಾನೇಕ ಸರ್ವಾಧಿಕಾರಿಗಳು, ನಿರಂಕುಶ ಪ್ರಭುಗಳು ಜನಾಂದೋಲನಗಳಿಗೆ ಮಣಿದು ಪದತ್ಯಾಗ ಮಾಡಿರುವುದನ್ನು ಕಂಡಿದ್ದೇವೆ, ಇಂದಿಗೂ ಕಾಣುತ್ತಿದ್ದೇವೆ. 1990 ದಶಕದಲ್ಲಿ ವಿಶ್ವದ ಹಲವು ರಾಷ್ಟ್ರಗಳಲ್ಲಿ ಕಮ್ಯುನಿಸ್ಟ್ ಭದ್ರಕೋಟೆಯನ್ನು ಛಿದ್ರಗೊಳಿಸಿದ್ದು, ಹಿಂದೂ ರಾಷ್ಟ್ರ ಎಂಬ ಹೆಗ್ಗಳಿಕೆಯಿದ್ದ ನೇಪಾಲದಲ್ಲಿ ರಾಜಪ್ರಭುತ್ವವನ್ನು ಕೊನೆಗೊಳಿಸಿದ್ದು ಜನಾಂದೋಲನಗಳೇ ಅಲ್ಲವೇ ? ಭಾರತದಲ್ಲಿ ತುರ್ತುಪರಿಸ್ಥಿತಿಯ ಕರಾಳ ದಿನಗಳನ್ನು ಕೊನೆಗೊಳಿಸಿದ್ದೂ ಜನಾಂದೋಲನವೇ ಅಲ್ಲವೇ ? ಈ ಆಂದೋಲನಜೀವಿಗಳು ಇಲ್ಲದೆ ಹೋಗಿದ್ದರೆ ಭಾರತ ಮತ್ತು ವಿಶ್ವ ಹೇಗಿರುತ್ತಿತ್ತು ? ಈ ಪ್ರಶ್ನೆ ಒಂದು ಘಳಿಗೆ ಮನದಲ್ಲಿ ಸುಳಿದಿದ್ದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ‘ ಅಂದೋಲನಜೀವಿ ’ ಪದವನ್ನು ಅವಹೇಳನಕಾರಿಯಾಗಿ ಬಳಸುತ್ತಿರಲಿಲ್ಲ.
ಇಂದು ಭಾರತ ಕವಲು ಹಾದಿಯಲ್ಲಿದೆ. ಇಂದಿನ ಭಾರತ ತನ್ನ ಸ್ಥಾಪಿತ ಮಾನವೀಯ ನೆಲೆಗಳಿಂದ ವಿಮುಖವಾಗುತ್ತಿದೆ, ಶತಮಾನಗಳ ಬಹುಸಂಸ್ಕೃತಿಯ ನೆಲೆಗಳನ್ನು ಅಲ್ಲಗಳೆಯುತ್ತಿದೆ, ಈ ದೇಶದ ಅಂತಃಸತ್ವವನ್ನು ಕಾಪಾಡಿಕೊಂಡು ಬಂದಿರುವ ಜನಸಂಸ್ಕೃತಿಗಳನ್ನು ನಿರಾಕರಿಸುತ್ತಿದೆ, ಸಮಾಜೋ ಸಾಂಸ್ಕೃತಿಕ ನೆಲೆಯಲ್ಲಿ ಚಾರಿತ್ರಿಕವಾಗಿ ನೆಲೆಗೊಂಡಿರುವ ಭ್ರಾತೃತ್ವದ ನೆಲೆಗಳನ್ನು ನಾಶಪಡಿಸುತ್ತಿದೆ, ಮತ್ತೊಂದೆಡೆ ಈ ದೇಶದ ಬಹುಸಂಖ್ಯಾತ ಜನತೆಯನ್ನು ಶೋಷಣೆಗೊಳಪಡಿಸುತ್ತಲೇ ಬ್ರಾಹ್ಮಣ್ಯದ ಅಧಿಕಾರಶಾಹಿ ನೆಲೆಗಳಿಗೆ ಮರುಜನ್ಮ ಕಲ್ಪಿಸುತ್ತಿದೆ. ನವ ಭಾರತ ಪ್ರಾಚೀನ ಮನುಸ್ಮೃತಿಯ ಪರಂಪರೆಯನ್ನು ಪುನರ್ ಸ್ಥಾಪಿಸುವತ್ತ ಧಾವಿಸುತ್ತಿದೆ. ಸ್ವತಂತ್ರ ಭಾರತ ಶಿಲ್ಪಿಗಳ ಸುಂದರ ಕನಸುಗಳನ್ನು ಭಗ್ನಗೊಳಿಸಿ ಸಾಂವಿಧಾನಿಕ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಹೊಸಕಿಹಾಕುವತ್ತ ದಾಪುಗಾಲು ಹಾಕುತ್ತಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲೇ ಕಳೆದ ಎರಡು ವರ್ಷಗಳಲ್ಲಿ ಪ್ರಬಲ ಜನಾಂದೋಲನಗಳು ರೂಪುಗೊಳ್ಳುತ್ತಿವೆ, ಆಂದೋಲನಜೀವಿಗಳೂ ಹೆಚ್ಚಾಗುತ್ತಿದ್ದಾರೆ.
ದೇಶದ ಶ್ರಮಜೀವಿಗಳನ್ನು, ದುಡಿಯುವ ವರ್ಗಗಳನ್ನು ಶಾಶ್ವತವಾಗಿ ಗುಲಾಮಗಿರಿಗೆ ದೂಡುವ ಕಾರ್ಮಿಕ ಸಂಹಿತೆಗಳು, ಸಮಸ್ತ ರೈತಾಪಿಯನ್ನು ಕಾರ್ಪೋರೇಟ್ ಗುಲಾಮಗಿರಿಗೆ ಒಳಪಡಿಸುವ ಮೂರು ಕರಾಳ ಕೃಷಿ ಮಸೂದೆಗಳು, ದೇಶದ ಅವಕಾಶವಂಚಿತ ಜನಸಮುದಾಯಗಳನ್ನು ಮತ್ತು ಶೋಷಿತರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಹೊಸ ಶಿಕ್ಷಣ ನೀತಿ, ಶತಮಾನಗಳಿಂದ ಈ ದೇಶದಲ್ಲಿ ನೆಲೆಸಿರುವ ಜನಸಮುದಾಯಗಳನ್ನು ಹೊರದಬ್ಬುವ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್ ಆರ್ ಸಿ ಕಾಯ್ದೆ, ಸಂವಿಧಾನ ಈ ದೇಶದ ಸಾರ್ವಭೌಮ ಪ್ರಜೆಗಳಿಗೆ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವಾಕ್ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಯುಎಪಿಎ ಎನ್ನುವ ಕರಾಳ ಶಾಸನ, ಸಂವಿಧಾನದ ಕನಸಿನ ಒಕ್ಕೂಟ ವ್ಯವಸ್ಥೆಯನ್ನು ನಾಶಪಡಿಸುವ ಆಡಳಿತ ನೀತಿಗಳು ಇವೆಲ್ಲವೂ ಆಂದೋಲನಜೀವಿಗಳ ಸಂಖ್ಯೆಯನ್ನು ಹೆಚ್ಚಿಸುತ್ತಿವೆ. ಸಹಜವೇ ಅಲ್ಲವೇ “ ದೇಶ ಎಂದರೆ ಮಣ್ಣಲ್ಲವೋ ಮನುಷ್ಯರು ” ಎಂಬ ಕವಿವಾಣಿ ನಿಜ ಅಲ್ಲವೇ ?
ದೇಶದ ಆಡಳಿತ ನಿರ್ವಹಿಸುವವರ ನೈತಿಕ ನೆಲೆ ಪರಿಶುದ್ಧವಾಗಿರಬೇಕು, ವ್ಯಕ್ತಿಗತ ಹಿನ್ನೆಲೆ ದೋಷಮುಕ್ತವಾಗಿರಬೇಕು, ವೈಯಕ್ತಿಕ ನೆಲೆ ಪ್ರಾಮಾಣಿಕವಾಗಿರಬೇಕು. ಹೀಗಿದ್ದಾಗ ಮಾತ್ರ ಸಾಮಾಜಿಕ ಸ್ವಾಸ್ಥ್ಯ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಕಾಪಾಡಲು ಸಾಧ್ಯ. ಸಾರ್ವಭೌಮ ಪ್ರಜೆಗಳ ಅಮೂಲ್ಯ ಮತಗಳನ್ನು ಪಡೆದು ವಿಧಾನಸಭೆ, ಸಂಸತ್ತನ್ನು ಪ್ರವೇಶಿಸುವ ಜನಪ್ರತಿನಿಧಿಗಳು ತಮ್ಮ ನಾಲಿಗೆಯ ಮೇಲೆ ಹಿಡಿತ ಕಳೆದುಕೊಂಡರೆ ಶಾಸನಸಭೆಗಳು ತಮ್ಮ ಮೌಲ್ಯವನ್ನು ಕಳೆದುಕೊಳ್ಳುತ್ತವೆ. ಇತ್ತೀಚಿನ ದಿನಗಳಲ್ಲಿ ಇದನ್ನು ಗಮನಿಸುತ್ತಲೇ ಬಂದಿದ್ದೇವೆ. ಗುಂಡಿಟ್ಟು ಕೊಲ್ಲುವವರು, ತಲೆ ಕಡಿಯುವವರು, ಸಮುದ್ರಕ್ಕೆ ಎಸೆಯುವವರು, ಕೈಕಾಲು ಕತ್ತರಿಸುವವರು ಅಧಿಕಾರ ಪೀಠಗಳನ್ನು ಅಲಂಕರಿಸುತ್ತಿದ್ದಾರೆ. ಶಾಸನಸಭೆಗಳ ಅಂಗಳದಲ್ಲಿ ಸಚ್ಚಾರಿತ್ರ್ಯದ ಪ್ರತಿನಿಧಿಗಳ ಸಂಖ್ಯೆ ಕಡಿಮೆಯಾಗುತ್ತಿರುವಂತೆಲ್ಲಾ, ಸಭ್ಯ ನಡತೆ, ಸೌಜನ್ಯಯುತ ಮಾತು, ಸಂವೇದನಾಶೀಲ ವರ್ತನೆ ಮತ್ತು ಮಾನವೀಯ ಧೋರಣೆ ಕ್ಷೀಣಿಸುವುದು ಸಹಜ. ಈ ದುರಂತ ಸನ್ನಿವೇಶವನ್ನು ನಾವು ಎದುರಿಸುತ್ತಿದ್ದೇವೆ.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಈ ಮೌಲ್ಯರಹಿತ ಭೂಮಿಕೆಯ ಮೇಲೆ ನಿಂತು, ತಮ್ಮ ಹಕ್ಕುಗಳಿಗಾಗಿ, ಅಸ್ಮಿತೆ ಅಸ್ತಿತ್ವಗಳಿಗಾಗಿ, ತಮ್ಮ ಭವಿಷ್ಯಕ್ಕಾಗಿ ಹೋರಾಡುವ ಪ್ರಜೆಗಳನ್ನು ‘ ಆಂದೋಲನಜೀವಿಗಳು’ ಎಂದು ಮೂದಲಿಸುವುದು ಪ್ರಧಾನಮಂತ್ರಿಗಳ ಸ್ಥಾನಕ್ಕೆ ಶೋಭೆ ತರುವಂತಹುದಲ್ಲ. ಪ್ರಧಾನಿಗಳ ಈ ಹೇಳಿಕೆ ಕೊರೋನಾಗಿಂತಲೂ ಶೀಘ್ರವಾಗಿ ವ್ಯಾಪಿಸಿದ್ದು ತೆಲಂಗಾಣದ ಮುಖ್ಯಮಂತ್ರಿ ಹೋರಾಟನಿರತ ಮಹಿಳೆಯರನ್ನು ನಾಯಿಗಳಿಗೆ ಹೋಲಿಸಿದ್ದಾರೆ. ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡುತ್ತಿದ್ದ ಕೆ ಚಂದ್ರಶೇಖರ್ ರಾವ್ ತಮ್ಮ ಹಕ್ಕೊತ್ತಾಯಗಳಿಗಾಗಿ ಮನವಿ ಸಲ್ಲಿಸಲು ನೆರೆದಿದ್ದ ಮಹಿಳೆಯರನ್ನು ಉದ್ದೇಶಿಸಿ “ ನೀವು ಈಗ ಅರ್ಜಿ ಸಲ್ಲಿಸಿದ್ದೀರಿ ಈಗ ಇಲ್ಲಿಂದ ಹೊರಡಿ, ನೀವು ಇಲ್ಲಿಯೇ ಇರಲು ಬಯಸಿದರೆ ಮೌನದಿಂದಿರಿ. ಅನಗತ್ಯವಾಗಿ ನೀವು ಏಟು ತಿನ್ನಬೇಕಾಗುತ್ತದೆ. ನಿಮ್ಮಂತಹ ಸಾಕಷ್ಟು ಜನರನ್ನು ನೋಡಿದ್ದೇವೆ, ಅಮ್ಮಾ, ನಿಮ್ಮಂತಹ ನಾಯಿಗಳು ಸಾಕಷ್ಟಿವೆ ಇಲ್ಲಿಂದ ಹೊರಡಿ ” ಎಂದು ಹೇಳಿದ್ದಾರೆ. (ಟೈಮ್ಸ್ ಆಫ್ ಇಂಡಿಯಾ-11-2-21). ಲಕ್ಷಾಂತರ ಆಂದೋಲನಜೀವಿಗಳ ಹೋರಾಟದ ಫಲಾನುಭವಿಯಾಗಿ ಅಧಿಕಾರ ಪೀಠದಲ್ಲಿರುವ ಓರ್ವ ಮುಖ್ಯಮಂತ್ರಿಯ ಕಣ್ಣಿಗೆ ಇಂದಿನ ಆಂದೋಲನಜೀವಿಗಳು ನಾಯಿಗಳಂತೆ ಕಾಣುತ್ತಾರೆ. ಇದು ಈ ದೇಶದ ದುರಂತ.
ಭಾರತದ ಸಂವಿಧಾನವನ್ನು ಮುನ್ನಡೆಸಿಕೊಂಡು ಹೋಗುವವರು ತಮ್ಮ ನಡತೆ, ಧೋರಣೆ, ಚಾರಿತ್ರ್ಯ ಮತ್ತು ಸದ್ಗುಣಗಳ ಮೂಲಕ ಮುಂದಿನ ಪೀಳಿಗೆಗೆ ಮಾರ್ಗದರ್ಶಕರಾಗಿದ್ದರೆ ಮಾತ್ರ ಈ ದೇಶದಲ್ಲಿ ಪ್ರಜಾತಂತ್ರ ಉಳಿಯಲು ಸಾಧ್ಯ ಎನ್ನುವುದನ್ನು ಇನ್ನಾದರೂ ನಾವು ಅರ್ಥಮಾಡಿಕೊಳ್ಳಬೇಕಿದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಇಂತಹ ಉದಾತ್ತ ಚಿಂತನೆಯ ನಾಯಕರು ಇದ್ದುದರಿಂದಲೇ ಭಾರತ ತನ್ನ ಮೌಲ್ಯಗಳನ್ನು ಕೊಂಚಮಟ್ಟಿಗಾದರೂ ಉಳಿಸಿಕೊಂಡು ಬಂದಿದೆ. ಸರ್ಕಾರದ ಆಡಳಿತ ನೀತಿಗಳ ವಿರುದ್ಧ, ಜನಸಾಮಾನ್ಯರ ಸಾಂವಿಧಾನಿಕ ಹಕ್ಕುಗಳಿಗಾಗಿ ದನಿ ಎತ್ತುವ, ಹೋರಾಡುವ ಪ್ರಜೆಗಳನ್ನು ‘ ಆಂದೋಲನಜೀವಿಗಳು’ ಎಂದು ಮೂದಲಿಸುವ ಒಂದು ಸರ್ಕಾರ ಈ ಮೌಲ್ಯಗಳನ್ನು ಸಂರಕ್ಷಿಸಲು ಸಾಧ್ಯವೂ ಇಲ್ಲ, ಅರ್ಹವೂ ಅಲ್ಲ. ಈ ವಿಕೃತ ಮನಸ್ಥಿತಿಯ ಆಡಳಿತವ ವ್ಯವಸ್ಥೆಯಲ್ಲೇ “ಭಾರತದ ಪ್ರಜೆಗಳಾದ ನಾವು,,, ನಮಗೆ ನಾವೇ ಅರ್ಪಿಸಿಕೊಂಡಿರುವ ” ಸಂವಿಧಾನವನ್ನು ರಕ್ಷಿಸಲು ನಿರಂತರ ಆಂದೋಲನಗಳ ಹೊಸ ಯುಗವನ್ನು ಪ್ರವೇಶಿಸಬೇಕಿದೆ.