ನವದೆಹಲಿ : ಈಗಾಗಲೇ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆಯಿಂದ ಜನರು ಕಂಗೆಟ್ಟಿದ್ದಾರೆ. ಈ ಬೆನ್ನಲ್ಲೆ ಬೆಂಕಿ ಪೊಟ್ಟಣದ ಬೆಲೆ ಏರಿಕೆ ಮಾಡಲಾಗಿದ್ದು, ಡಿಸೆಂಬರ್ 1ರಿಂದ ಬೆಂಕಿಪೊಟ್ಟಣದ ಬೆಲೆ ದುಪ್ಪಟ್ಟಾಗಲಿದೆ.
2007ರಲ್ಲಿ 50 ಪೈಸೆಯಿದ್ದ ಒಂದು ಬೆಂಕಿ ಪೆಟ್ಟಿಗೆ ಬೆಲೆಯನ್ನು 1 ರೂ.ಗೆ ಹೆಚ್ಚಳ ಮಾಡಲಾಗಿತ್ತು. ಇದೀಗ ಹಣದುಬ್ಬರ ಹೆಚ್ಚುತ್ತಿರುವ ಕಾರಣ ಡಿಸೆಂಬರ್ 1 ರಿಂದ 1 ರೂ. ಇದ್ದ ಬೆಂಕಿ ಪೊಟ್ಟಣ ಮಾರಾಟದ ಬೆಲೆಯನ್ನು 2 ರೂ.ಗೆ ಏರಿಕೆ ಮಾಡಲಾಗುತ್ತಿದೆ.
ದರ ಏರಿಕೆಗೆ ಕಾರಣವೇನು? : ಸಾಮಾನ್ಯವಾಗಿ ಬೆಂಕಿ ಕಡ್ಡಿಗಳನ್ನು ತಯಾರಿಸಲು 14 ಬಗೆಯ ಕಚ್ಚಾ ಸಾಮಗ್ರಿಗಳು ಬೇಕಾಗುತ್ತವೆ ಎಂದು ತಯಾರಕರು ತಿಳಿಸಿದ್ದಾರೆ. ಬೆಂಕಿ ಪೊಟ್ಟಣ ಉತ್ಪಾದನೆಗೆ ಬೇಕಾಗಿರುವ ಕಚ್ಚಾ ವಸ್ತುಗಳಾದ ಫಾಸ್ಪರಸ್ ಬೆಲೆ 425 ರೂಪಾಯಿಯಿಂದ 810 ರೂಪಾಯಿಗೆ ಏರಿಕೆಯಾಗಿದೆ. ಇನ್ನು ಮೇಣದ ದರ 58 ರಿಂದ 80 ರೂಪಾಯಿಗೆ ಏರಿಕೆಯಾಗಿದೆ. ಹೊರ ಬಾಕ್ಸ್ ಬೋರ್ಡ್ ಬೆಲೆ 36 ರಿಂದ 55 ರೂಪಾಯಿಗೆ ಏರಿಕೆಯಾಗಿದ್ದರೆ, ಒಳ ಬಾಕ್ಸ್ ಬೋರ್ಡ್ ಬೆಲೆ 32 ರೂಪಾಯಿಂದ 58 ರೂಪಾಯಿಗೆ ಏರಿಕೆಯಾಗಿದೆ.
ಅಕ್ಟೋಬರ್ ತಿಂಗಳಲ್ಲಿ ಪೋಟಾಸಿಯಂ ಕ್ಲೋರೈಡ್, ಕಾಗದ ಸ್ಪ್ಲಿಂಟ್ ಮತ್ತು ಗಂಧಕದ ಬೆಲೆ ಹೆಚ್ಚಾಗಿದೆ. ಹಣದುಬ್ಬರ, ಕಚ್ಚಾ ವಸ್ತುಗಳ ಬೆಲೆ ಏರಿಕೆ, ಸಾರಿಗೆ ವೆಚ್ಚಗಳಿಂದ ಬೆಂಕಿ ಪೊಟ್ಟಣವನ್ನು 1 ರೂಪಾಯಿಯಲ್ಲಿ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಅನಿವಾರ್ಯವಾಗಿ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದು ಬೆಂಕಿ ಪೊಟ್ಟಣ ಕಂಪನಿಗಳು ಹೇಳಿವೆ.