ಮತಾಂತರವಾಗುವುದು ಅವರ ವೈಯುಕ್ತಿಕ: ಸಿದ್ದರಾಮಯ್ಯ

  • ಲವ್‌ ಜಿಹಾದ್‌ ಕಾನೂನಿನ ವಿರುದ್ಧ ಸಿದ್ದರಾಮಯ್ಯ ಕಿಡಿ

ಬೆಂಗಳೂರು: ಲವ್ ಜಿಹಾದ್‌ಗಾಗಿ ಮತಾಂತರ ನಿಷೇಧ ಕಾನೂನು ಜಾರಿಗೆ ತರುವುದಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ  ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಹಾಗೂ ಆರೆಸ್ಸೆಸ್  ವಿರುದ್ಧ ಕಿಡಿಕಾರಿದ ಮಾಜಿ ಸಿಎಂ, ಅವರಿನ್ನೂ‌ ಮನುಸ್ಮೃತಿಯಲ್ಲೇ ಇದ್ದಾರೆ. ಸಂವಿಧಾನದ ಬಗ್ಗೆ ಅವರಿಗೆ ಗೌರವ ಇಲ್ಲ. ನಾನು ಯಾರನ್ನ ಮದುವೆ ಆಗಬೇಕು ಅಂತ ಹೇಳಕ್ಕೆ ನೀವ್ಯಾರು..? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅವರು ಹೇಳಿರೋರನ್ನ ಮದುವೆ ಆಗೋಕೆ ಸಾಧ್ಯವೇ?. ಮದುವೆ ಆಗೋದು ಅವರ ವೈಯುಕ್ತಿಕ ವಿಚಾರ. ಯಾರು ಯಾರ ಮೇಲೆ ಬಲವಂತ ಮಾಡೋಕೆ ಆಗಲ್ಲ. ಯಾರನ್ನ ಮದುವೆ ಆಗಬೇಕು ಅನ್ನೋದು ನನ್ನಿಷ್ಟ. ಇನ್ನೊಂದು ಧರ್ಮಕ್ಕೆ ಮತಾಂತರ ವೈಯುಕ್ತಿಕ ನಿರ್ಧಾರ. ಅದನ್ನ ತಡಯಲು ಆಗಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಸಿಟಿ ರವಿಗೆ ಟಾಂಗ್‌!

ಇನ್ನು ಇದೆ ವೇಳೆ ಗೋ ಹತ್ಯೆ ಮಸೂದೆ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿ ನಾಯಕ ಸಿ.ಟಿ. ರವಿ ವಿರುದ್ಧ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಉತ್ತರ ಪ್ರದೇಶದಲ್ಲಿ ಗೋ ಮಾಂಸ ಹೆಚ್ಚು ರಪ್ತು ಮಾಡ್ತಾರೆ. ಅದು ಯಾವ ಪಕ್ಷದವರು ಅಂತ ಮೊದಲು‌ ಹೇಳಲಿ. ಆಮೇಲೆ ‌ಗೋ ಹತ್ಯೆ‌ ನಿಷೇಧ ಮಾಡಲಿ. ಇಲ್ಲಿ ಸಿ.ಟಿ ರವಿ ಬುರುಡೆ ಬಿಡುವುದು ಬೇಡ ಎಂದು ಕಿಡಿಕಾರಿದರು.

ನಾನು ಆರೆಸ್ಸೆಸ್ ವಿರೋಧಿ. ಆರೆಸ್ಸೆಸ್ ಬಗ್ಗೆ ನನಗೆ ಗೊತ್ತಿಲ್ಲ ಎನ್ನುವ ಸಿ.ಟಿ. ರವಿ, ಹೆಗ್ಡೆವಾರ್ ಜೊತೆ ಇದ್ನಾ…?. ಸಿ.ಟಿ ರವಿ ಆರ್‌ಎಸ್ಎಸ್‌ನ ಫೌಂಡರ್ ಮೆಂಬರಾ…? ಎಂದು ಇದೆ ವೇಳೆ ಮಾಜಿ ಸಿಎಂ ಪ್ರಶ್ನಿಸಿದ್ದಾರೆ. ಹೆಗ್ಡೆವಾರ್ ಕಾಂಗ್ರೆಸ್ ನಲ್ಲಿ ಇದ್ದವರು. ಗೋಲ್ವಾಲ್ಕರ್ ಆರ್‌ಎಸ್‌ಎಸ್ ಎರಡನೇ ಸರ ಸಂಗಚಾಲಕರು. ಇವರು ಎಲ್ಲಿದ್ದರು, ಕಾಂಗ್ರೆಸ್ ನಲ್ಲಿ ತಾನೇ. ಜನ ಸಂಘ ಇದ್ದಾಗ ಸಿ.ಟಿ. ರವಿ ಎಲ್ಲಿದ್ದ…? ಎಂದು ಏಕವಚನದಲ್ಲೇ ಕಿಡಿಕಾರಿದ್ದಾರೆ.

ಉಪ ಚುನಾವಣೆ ಬಗ್ಗೆ ಮಾಹಿತಿ!
23ರಂದು ತುರ್ವೀಹಾಳ ಕಾಂಗ್ರೆಸ್ ಸೇರ್ತಾರೆ. ಅವರೇ ಮಸ್ಕಿಗೆ ಸಂಭಾವ್ಯ ಕಾಂಗ್ರೆಸ್‌ ಅಭ್ಯರ್ಥಿ.ಹೀಗಾಗಿ 23ರಂದು ಮಸ್ಕಿಯಲ್ಲಿ ಪಕ್ಷದ ಸ್ಥಳೀಯ ಕಾರ್ಯಕರ್ತರ ಜೊತೆ ಸಭೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ. ಬೈ ಎಲೆಕ್ಷನ್‌ನಲ್ಲಿ ಆಡಳಿತ ಪಕ್ಷಕ್ಕೆ ಎರಡು ಲಾಭ. ಆಡಳಿತ ದುರುಪಯೋಗ ಮಾಡ್ತಾರೆ.

ಯಾವ ಪಕ್ಷ ಅಧಿಕಾರದಲ್ಲಿರುತ್ತೆ ಅವರೇ ಗೆಲ್ಲೋದು. ನಾನು ಸಿಎಂ ಆಗಿದ್ದಾಗ ಹಾಗೇ ಆಗಿತ್ತು. ಒಂದು ಕ್ಷೇತ್ರ ಬಿಟ್ಟು ಉಳಿದೆಲ್ಲದರಲ್ಲೂ ನಾವೇ ಗೆದ್ದಿದ್ದೆವು. ಶಿರಾದಲ್ಲಿ ನಾವು ಹಣದ ಕೊರತೆಯಿಂದ ಸೋತೆವು ಬಿಜೆಪಿಯವರು ಸಿಕ್ಕಾಪಟ್ಟೆ ಹಣ ಹಂಚಿದ್ದರು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಇನ್ನು ಬಸವಕಲ್ಯಾಣಕ್ಕೆ ಸಾಕಷ್ಟು ಆಕಾಂಕ್ಷಿಗಳಿದ್ದಾರೆ ಕಾಂಗ್ರೆಸ್ ಗೆ ಅಭ್ಯರ್ಥಿ ಕೊರತೆಯಿಲ್ಲ ಬೈ ಎಲೆಕ್ಷನ್ ಸಾರ್ವತ್ರಿಕ ಚುನಾವಣೆಗೆ ಅನ್ವಯವಾಗಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *