ಬೆಂಗಳೂರು: ಇತ್ತೀಚಿಗೆ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಮತದಾರರನ್ನು ಸೆಳೆಯುವ ದೃಷ್ಟಿಯಿಂದ ತಲಾ ಮತದಾರರಿಗೆ ₹6 ಸಾವಿರ ನೀಡುವುದಾಗಿ ಹೇಳಿಕೆ ನೀಡಿರುವುದರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಕಾಂಗ್ರೆಸ್ ಪಕ್ಷದ ನಿಯೋಗ ಚುನಾವಣಾ ಆಯೋಗವನ್ನು ಭೇಟಿ ಮಾಡಿ ದೂರು ಸಲ್ಲಿಸಿದೆ.
ರಾಜ್ಯ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದ್ದು, ಈಗಾಗಲೇ ರಾಜಕೀಯ ಪಕ್ಷಗಳು ಮತದಾರರನ್ನು ಓಲೈಸಲು ಮತ ಭೇಟೆ ಮುಂದುವರೆಸಿದ್ದಾರೆ. ಈಗಾಗಲೇ ಹಲವು ಘೋಷಣೆ ಮಾಡಲಾಗುತ್ತಿದೆ. ಮತದಾರರಿಗೆ ಹಣದ ಅಮಿಷ ಒಡ್ಡಿ ಮತ ಪಡೆಯಲು ಸಹ ಮುಂದಾಗಿದ್ದಾರೆ. ಅದರಂತೆಯೇ ರಮೇಶ ಜಾರಕಿಹೊಳಿ ಬಹಿರಂಗ ಅಮಿಷ ಒಡ್ಡಿದ್ದಾರೆ.
ಇದನ್ನು ಓದಿ: 70 ವರ್ಷಗಳಿಂದ ನಿಷೇಧ ಹೇರಲಾಗಿದ್ದ ದೇವಾಲಯ ಪ್ರವೇಶಿಸಿದ 300 ಮಂದಿ ದಲಿತರು
ಮುಖ್ಯ ಚುನಾವಣಾಧಿಕಾರಿಗಳನ್ನು ಭೇಟಿ ಮಾಡಿದ ಕಾಂಗ್ರೆಸ್ ನಿಯೋಗವು ರಮೇಶ ಜಾರಕಿಹೊಳಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಪ್ರಕರಣ ದಾಖಲಿಸಲು ಸೂಚನೆ ನೀಡಬೇಕೆಂದು ತಿಳಿಸಿದ್ದಾರೆ.
ಬಿಜೆಪಿ ಪಕ್ಷವು ರಾಜ್ಯದ ಐದು ಕೋಟಿ ಮತದಾರರನ್ನು ಸೆಳೆಯಲು ಅಂದಾಜು ರೂ.30 ಸಾವಿರ ಕೋಟಿ ರೂಪಾಯಿ ಯೋಜನೆ ರೂಪಿಸಿಕೊಂಡಿದೆ. ಮತದಾರರಿಗೆ ಅಮಿಷ ಒಡ್ಡಲು ಮುಂದಾಗುತ್ತಿದ್ದಾರೆ. ಇದರ ಹಿಂದೆ ಮುಖ್ಯಮಂತ್ರಿ, ಬಿಜೆಪಿ ರಾಷ್ಟ್ರೀಯ ಮತ್ತು ರಾಜ್ಯ ಅಧ್ಯಕ್ಷರ ಕೈವಾಡವಿದೆ. ಇದರ ಬಗ್ಗೆ ತನಿಖೆಗೆ ಮುಂದಾಗಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಮಾತನಾಡಿ ‘ಪ್ರತಿಯೊಬ್ಬ ಮತದಾರರಿಗೆ ತಲಾ ₹6 ಸಾವಿರ ಕೊಡುತ್ತೇವೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ನಾವು ಈಗಾಗಲೇ ಪೊಲೀಸರಿಗೂ ದೂರು ಸಲ್ಲಿಸಿದ್ದೇವೆ. ಆದರೆ, ಪೊಲೀಸರು ಮಾತ್ರ ಕಾನೂನು ಸಲಹೆ ಪಡೆಯುತ್ತೇವೆ ಎನ್ನುತ್ತಿದ್ದಾರೆ. ಇದು ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ವಿಷಯವಾಗಿದ್ದು, ಆಯೋಗಕ್ಕೂ ದೂರು ನೀಡಿದ್ದೇವೆ’ ಎಂದು ತಿಳಿಸಿದರು.
ನಿಯೋಗದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಶಾಸಕ ರಿಜ್ವಾನ್ ಅರ್ಷದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ಇದ್ದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ