11 ವರ್ಷಗಳ ಹಿಂದಿನ ಅತ್ಯಾಚಾರ-ಕೊಲೆ ಪ್ರಕರಣವನ್ನು ಮರುತನಿಖೆ ಮಾಡುವಂತೆ ಆಗ್ರಹ ಸೌಜನ್ಯ
ಬೆಂಗಳೂರು: ಸೌಜನ್ಯ ಪ್ರಕರಣವನ್ನು ಮರು ತನಿಖೆ ಮಾಡಬೇಕು ಎಂದು ಒತ್ತಾಯಿಸಿ ಪ್ರಗತಿಪರ ‘ಸಂಘಟನೆಗಳ ಹೋರಾಟ ಸಮಿತಿ-ಕರ್ನಾಟಕ’ ಜುಲೈ 28ರ ಶುಕ್ರವಾರ ಧರಣಿ ನಡಸಲಿದೆ. ಪ್ರತಿಭಟನೆ ಬೆಳಿಗ್ಗೆ 11 ಗಂಟೆಗೆ ನಡೆಯಲಿದ್ದು, ರಾಜ್ಯದ 60 ಸಂಘಟನೆಗಳು ಧರಣಿಗೆ ಬೆಂಬಲ ವ್ಯಕ್ತಪಡಿಸಿವೆ. ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಬಳಿ 2012ರ ಅಕ್ಟೋಬರ್ 9ರಂದು 17 ವರ್ಷದ ಅಪ್ರಾಪ್ತ ಬಾಲಕಿ ಸೌಜನ್ಯ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಲಾಗಿತ್ತು.
ಪ್ರಕರಣ ಕುರಿತು 11 ವರ್ಷಗಳ ಕಾಲ ದೀರ್ಘ ತನಿಖೆ ನಡೆಸಿದ ಸಿ.ಬಿ.ಐನ ವಿಶೇಷ ನ್ಯಾಯಾಲಯವು ಆರೋಪಿ ಎಂದು ಗುರುತಿಸಲಾಗಿದ್ದ ಸಂತೋಷ್ ರಾವ್ ಅವರನ್ನು ದೋಷಮುಕ್ತಗೊಳಿಸಿತ್ತು. ಜೊತೆಗೆ ಪ್ರಕರಣದ ತನಿಖೆಯು ಲೋಪ-ದೋಷಗಳಿಂದ ಕೂಡಿದ್ದು, ಆದ್ದರಿಂದ ಪ್ರಕರಣವು ಮುಂದುವರಿದ ತನಿಖೆಗೆ ಅರ್ಹವಾಗಿದೆ ಎಂದು ಹೇಳಿತ್ತು.
ಇದನ್ನೂ ಓದಿ: ಸೌಜನ್ಯ ಹತ್ಯೆ-ಅತ್ಯಾಚಾರ ಪ್ರಕರಣ | ಮರು ತನಿಖೆಗಾಗಿ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ
ಸಿಬಿಐ ತನಿಖೆಯ ಲೋಪಗಳನ್ನು ಪಟ್ಟಿ ಮಾಡಿದ್ದ ವಿಶೇಷ ನ್ಯಾಯಾಲಯವು ‘ಸಿಬಿಐ ತನಿಖೆಯು ಸರಿಯಾದ ದಿಕ್ಕಿನಲ್ಲಿ ನಡೆದಿಲ್ಲ’ ಎಂದು ಬೊಟ್ಟು ಮಾಡಿತ್ತು. ಜೊತೆಗೆ ನಿರ್ದೋಷಿ ಸಂತೋಷ್ ರಾವ್ ಅವರಿಗೆ ಕಾನೂನು ಪರಿಹಾರ ನೀಡಬೇಕೆಂದು ಆದೇಶಿಸಿದೆ.
ಧರಣಿಯ ಬಗ್ಗೆ ಮಾಹಿತಿ ನೀಡಿರುವ ಪ್ರಗತಿಪರ ಸಂಘಟನೆಗಳ ಒಕ್ಕೂಟ, “ಸೌಜನ್ಯ ಮೇಲೆ ನಡೆದದ್ದು ಅತ್ಯಂತ ಕ್ರೂರ ಅತ್ಯಾಚಾರ ಮತ್ತು ಕೊಲೆ ಎಂದು ಪರಿಗಣಿಸಿ ವಿಶೇಷ ನ್ಯಾಯಾಲಯವು ಇದನ್ನು ಆದ್ಯತೆಯಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದು ಆರಂಭದಲ್ಲಿಯೇ ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶಿಸಿತ್ತು. ಆದರೆ, ಈ ವಿಶೇಷ ನ್ಯಾಯಾಲಯದ ನಿರ್ದೇಶನವನ್ನು ನಿರ್ಲಕ್ಷಿಸಿದ ಸಿ.ಬಿ.ಐ. ರಾಜಕೀಯ ಪ್ರಭಾವದಿಂದ ತನಿಖೆ ನಡೆಸಿ ನಿಜವಾದ ತಪ್ಪಿತಸ್ಥರನ್ನು ರಕ್ಷಿಸಿ ನಿರಪರಾಧಿಯೊಬ್ಬರನ್ನು ಬಲಿ ಹಾಕಿದ್ದು ಸುಸ್ಪಷ್ಟವಾಗಿದೆ” ಎಂದು ಆರೋಪಿಸಿದೆ.
“ಅಪರಾಧಿಗಳನ್ನು ಹಿಡಿದು ಶಿಕ್ಷಿಸದೇ ಬಿಡುವುದು ಸಮಾಜಕ್ಕೆ ಅಪಾಯಕಾರಿಯಾಗಿದೆ. ಹಾಗಾಗಿ ಅಪರಾಧಿಗಳನ್ನು ಪತ್ತೆ ಮಾಡಿ ಶಿಕ್ಷಿಸುವುದು ಸರ್ಕಾರದ ಕರ್ತವ್ಯವಾಗಿದೆ. ಈ ಕನಿಷ್ಠ ಕರ್ತವ್ಯವನ್ನು ನಿಭಾಯಿಸದಿದ್ದರೆ ಸಮಾಜ ಅರಾಜಕತೆಯೆಡೆಗೆ ಸಾಗುತ್ತದೆ. ಈಗಾಗಲೇ ಅಂಕೆಗೆ ಸಿಗದ ಹಿಂಸಾಚಾರಗಳು ದೇಶದ ಅನೇಕ ಕಡೆಗಳಲ್ಲಿ ದಿನನಿತ್ಯ ಹೆಚ್ಚಾಗುತ್ತಿರುವುದನ್ನು ನೋಡುತ್ತಿದ್ದೇವೆ. ಕರ್ನಾಟಕವನ್ನು ಹಿಂಸೆ ಮತ್ತು ಅಪರಾಧಗಳಿಂದ ಮುಕ್ತಗೊಳಿಸಲು ಈ ನಮ್ಮ ಮನವಿಗಳನ್ನು ಈ ಕೂಡಲೇ ಪರಿಗಣಿಸಲೇಬೇಕು” ಎಂದು ಪ್ರಗತಿಪರ ಸಂಘಟನೆಗಳ ಹೋರಾಟ ಸಮಿತಿಯು ಆಗ್ರಹಿಸಿದೆ.
ವಿಡಿಯೊ ನೋಡಿ: ಸೌಜನ್ಯ ಪ್ರಕರಣ : ಮರು ತನಿಖೆಗಾಗಿ ಮೊಳಗಿದ ಧ್ವನಿ Janashakthi Media