ಮಂಗಳೂರು| ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ

ಮಂಗಳೂರು: ಕರ್ನಾಟಕ ಉಲಮಾ ಒಕ್ಕೂಟದ ನೇತೃತ್ವದಲ್ಲಿ ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಅಡ್ಯಾರ್ ಕಣ್ಣೂರಿನ ಶಾ ಗಾರ್ಡನ್‌ನಲ್ಲಿ  ಏಪ್ರಿಲ್‌ 18 ಶುಕ್ರವಾರದಂದು ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು.‌ 

ದ.ಕ.ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮತ್ತು ಉಡುಪಿ ಸಂಯುಕ್ತ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಮಾರ್ಗದರ್ಶನದಲ್ಲಿ ನಡೆದ ಈ ಸಮಾವೇಶಕ್ಕೆ ದ.ಕ.ಜಿಲ್ಲೆಯ ಮೂಲೆ ಮೂಲೆಗಳಿಂದ ಜನಸಾಗರವೇ ಹರಿದು ಬಂತು. ಉಡುಪಿ, ಕೊಡಗು, ಚಿಕ್ಕಮಗಳೂರು, ಕಾಸರಗೋಡು ಜಿಲ್ಲೆಯ ಸಾವಿರಾರು ಮಂದಿ ಭಾಗವಹಿಸಿದ್ದರು.

ಜಿಲ್ಲೆಯ ಬಹುತೇಕ ಮುಸ್ಲಿಂ ಸಂಘಟನೆ ಗಳ ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದರು. ನೇತ್ರಾವತಿ ನದಿಯಾಚೆಯ ಹರೇಕಳ, ಪಾವೂರು, ಕೊಣಾಜೆ, ಪಜೀರ್, ಅಂಬ್ಲಮೊಗರು, ಮುನ್ನೂರು, ಬೆಳ್ಮ, ಮಂಜನಾಡಿ, ಕಿನ್ಯ, ಕುರ್ನಾಡು, ಇರಾ ಗ್ರಾಮಗಳ ಜನರು ಹರೇಕಳ-ಅಡ್ಯಾರ್ ಸೇತುವೆ ಬಳಸಿ ಮತ್ತು ನೇತ್ರಾವತಿ ನದಿಯಲ್ಲಿ ದೋಣಿ ಬಳಸಿ ಶಾ ಗಾರ್ಡನ್ ತಲುಪುತ್ತಿದ್ದುದು ಕಂಡು ಬಂತು. ಶಾ ಗಾರ್ಡನ್ ಅಲ್ಲದೆ ಪಡೀಲ್‌ನಿಂದ ಅರ್ಕುಳ ದವರೆಗಿನ ರಾ.ಹೆ.ಯಲ್ಲಿ ಜನಸಂದಣಿ ಕಂಡು ಬಂತು. ಎಲ್ಲೆಡೆ ಆಝಾದಿ ಘೋಷಣೆ ಮೊಳಗಿತು. ಅಪರಾಹ್ನ ಕಣ್ಣೂರು ದರ್ಗಾ ಝಿಯಾರತ್ ನಡೆದ ಬಳಿಕ ಆರಂಭಗೊಂಡ ಕಾರ್ಯಕ್ರಮವು ಮುಸ್ಸಂಜೆಯ ವೇಳೆಗೆ ಮುಕ್ತಾಯಗೊಂಡಿತು.

ಇದನ್ನೂ ಓದಿ: ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಮೇನಲ್ಲಿ ಬಾಹ್ಯಾಕಾಶ ನಿಲ್ದಾಣದತ್ತ ವಿಮಾನಯಾನಕ್ಕೆ ಸಜ್ಜು!

ಸುನ್ನಿ ಸಂಘಟನೆಗಳ ಎರಡು ವಿಭಾಗದ ಉಲೆಮಾಗಳ ನಾಯಕತ್ವದಲ್ಲಿ ರೂಪುಗೊಂಡ ಕರ್ನಾಟಕ ಉಲೆಮಾ ಒಕ್ಕೂಟದ ವತಿಯಿಂದ ನಡೆದ ಈ ಬೃಹತ್ ಪ್ರತಿಭಟನೆಯಲ್ಲಿ ಸಂಘಟನೆಗಳ ಒಗ್ಗೂಡುವಿಕೆಗಾಗಿ ಶ್ರಮಿಸಿದ್ದ ಮರ್ಹೂಂ ಬಿ.ಎಂ.ಮುಮ್ತಾಝ್ ಅಲಿ ಮತ್ತು ಮರ್ಹೂಂ ನೌಶಾದ್ ಹಾಜಿ ಸೂರಲ್ಪಾಡಿ ಅವರನ್ನು ಸಂಘಟಕರು ವೇದಿಕೆಯಲ್ಲಿ ನೆನಪಿಸಿಕೊಂಡರು.

ಒಕ್ಕೂಟದ ಅಧ್ಯಕ್ಷ ಸೈಯದ್ ಇಸ್ಮಾಯೀಲ್ ತಂಙಳ್ ಉಜಿರೆ ದುಆಗೈದರು. ಕವಿ ಅಲ್ಲಾಮ ಇಕ್ಬಾಲರ ಕವನವನ್ನು ಉಲ್ಲೇಖಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ದ.ಕ.ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮಾತನಾಡಿ ವಕ್ಫ್ ಮುಸ್ಲಿಮರ ಹಕ್ಕಾಗಿದೆ. ಫ್ಯಾಶಿಸ್ಟ್ ಶಕ್ತಿಗಳು ವಕ್ಫ್ ಆಸ್ತಿಯನ್ನು ಕಿತ್ತು ಕೊಳ್ಳಲು ಯಾವ ಕಾರಣಕ್ಕೂ ಬಿಡಲಾರೆವು ಎಂದು ಘೊಷಿಸಿದರು.

“ನಮಗೆ ಕಾನೂನಿನ ಬಗ್ಗೆ ಅಪಾರ ಗೌರವವಿದೆ. ಈಗಾಗಲೇ ಬುಲ್ಡೋಜರ್ ಹತ್ತಿಸಿದವರ ಇಂಧನವನ್ನು ಸುಪ್ರೀಂ ಕೋರ್ಟ್ ತಾತ್ಕಾಲಿಕವಾಗಿ ಖಾಲಿ ಮಾಡಿಸಿದೆ. ಮೇ 5ರಂದು ಎಲ್ಲಾ ಬುಲ್ಡೋಜರ್‌ಗಳನ್ನು ಖಾಲಿ ಮಾಡಿ ಜಾತ್ಯತೀತ ಮತ್ತು ಪ್ರಜಾಪ್ರಭುತ್ವದ ಸೌಂದರ್ಯ ಕಾಪಾಡುವ ದಿನ ಬರಲಿದೆ ಎಂಬ ವಿಶ್ವಾಸ ನಮಗಿದೆ. ವಕ್ಫ್ ವಿರುದ್ಧದ ಹೋರಾಟವನ್ನು ಕೆಲವು ಮಾಧ್ಯಮಗಳು, ಫ್ಯಾಶಿಸ್ಟ್ ಶಕ್ತಿಗಳು ಹಿಂದೂಗಳು ಮತ್ತು ಅಥವಾ ಪಕ್ಷ, ಜಾತಿ, ಸಂಘಟನೆಗಳ ವಿರುದ್ಧ ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದಾರೆ.

ಆದರೆ ಇದು ಯಾವುದೇ ಒಂದು ಧರ್ಮ ಅಥವಾ ಪಕ್ಷ, ಸಂಘಟನೆಗಳ ವಿರುದ್ಧದ ಹೋರಾಟವಲ್ಲ. ಅಂಬೇಡ್ಕರ್‌ರ ಸಂವಿಧಾನವನ್ನು ಛಿದ್ರಗೊಳಿಸಿ ಬುಲ್ಡೋಜರ್‌ನಡಿಗೆ ಸಿಲುಕಿಸಿದ ಕೆಲವು ನಾಮಧಾರಿ, ಕೋಮುವಾದಿಗಳ, ಫಾಸಿಸ್ಟರ ವಿರುದ್ಧದ ಹೋರಾಟ ಇದಾಗಿದೆ. 1986ರಲ್ಲಿ ಶಾಬಾನು ಪ್ರಕರಣದಲ್ಲಿ ರಾಜೀವ್ ಗಾಂಧಿ ಸರಕಾರದ ವಿರುದ್ಧ ಉಲೆಮಾಗಳು ಒಟ್ಟಾಗಿ ಕುರ್‌ಆನ್‌ಗೆ ವಿರುದ್ಧವಾದ ಆದೇಶ ಹಿಂಪಡೆಸಿದ್ದರು. ಇದೀಗ ವಕ್ಪ್ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಲು ಈ ಹೋರಾಟ ನಡೆಯುತ್ತಿದೆ”.

-ಮೌಲಾನಾ ಶಾಫಿ ಸಅದಿ ಬೆಂಗಳೂರು, ಮಾಜಿ ಅಧ್ಯಕ್ಷರು, ರಾಜ್ಯ ವಕ್ಫ್ ಮಂಡಳಿ

“ವಕ್ಫ್ ವಿಚಾರದಲ್ಲಿ ಸರಕಾರಕ್ಕೆ ಯಾವುದೇ ಅಧಿಕಾರವಿಲ್ಲ. ನಾವು ಯಾವತ್ತೂ ಹಿಂದೂ, ಮುಸ್ಲಿಮರ ಹಕ್ಕನ್ನು ಕಸಿದಿಲ್ಲ. ನಮ್ಮ ಹಕ್ಕನ್ನು ಮಾತ್ರ ನಾವು ಕೇಳುತ್ತಿದ್ದೇವೆ. ನಮಗೆ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ”.

-ಉಸ್ಮಾನುಲ್ ಫೈಝಿ ತೋಡಾರು, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಲಮಾ ಒಕ್ಕೂಟ

“ಈ ಹಿಂದೆ ಸಿಎಎ, ಎನ್‌ಆರ್‌ಸಿ ಜಾರಿಗೊಳಿಸಲು ಮುಂದಾದಾಗಲೂ ಮುಸ್ಲಿಮರು ಪ್ರತಿಭಟಿಸಿದ್ದರು. ಇದೀಗ ವಕ್ಫ್ ವಿಚಾರಕ್ಕೆ ಸಂಬಂಧಿಸಿ ದೇಶಾದ್ಯಂತ ಮುಸ್ಲಿಮರು ಪ್ರತಿಭಟಿಸುತ್ತಿದ್ದಾರೆ. ಕೇಂದ್ರ ಸರಕಾರ ಇದನ್ನು ಗಮನಿಸಬೇಕು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಂದು ಎನ್‌ಆರ್‌ಸಿ ಜಾರಿಗೊಳಿಸುವುದಿಲ್ಲ ಎಂದಿದ್ದರು. ಇಂದು ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಲು ಬಿಡುವುದಿಲ್ಲ ಎಂದು ಧೈರ್ಯದಿಂದ ಹೇಳಿದ್ದಾರೆ. ಆ ಧೈರ್ಯವನ್ನು ಜಾತ್ಯತೀತ ಸರಕಾರವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಹೇಳದಿರುವ ಬಗ್ಗೆ ನಮಗೆ ಖೇದವಿದೆ”.

-ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ, ನಿರ್ದೇಶಕರು, ಕರ್ನಾಟಕ ಉಲಮಾ ಒಕ್ಕೂಟ

“ಫ್ಯಾಶಿಸ್ಟ್ ಸರಕಾರಗಳು ದೇಶದ 20 ಕೋಟಿ ಮುಸ್ಲಿಂ ಸಮುದಾಯವನ್ನು ಸದಾ ಕಟಕಟೆಯಲ್ಲಿ ನಿಲ್ಲಿಸುತ್ತಲೇ ಇದೆ. ಟಿವಿ ಚಾನೆಲ್‌ಗಳ ಆಯಂಕರ್‌ಗಳಂತೂ ಸುಳ್ಳುಗಳನ್ನೇ ಬಿತ್ತರಿಸುತ್ತಿದ್ದಾರೆ. ಮುಸ್ಲಿಮರನ್ನು ನಿರ್ನಾಮಗೊಳಿಸಲು ಸಂಚು ಹೂಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ರಾಷ್ಟ್ರ. ನಾವೇ ಪ್ರಭುಗಳು. ನಮ್ಮ ಹೋರಾಟ ನಿಲ್ಲುವುದಿಲ್ಲ. ಭಾರತವು ಭಾರತವಾಗಿ ಉಳಿಯುವ ತನಕ ಹೋರಾಟ ಮುಂದುವರಿಯಲಿದೆ. ನಮ್ಮದು ಹಿಂದೂಗಳ ವಿರುದ್ಧದ ಪ್ರತಿಭಟನೆಯಲ್ಲ. ಸಂವಿಧಾನದ ಉಳಿವಿಗಾಗಿ ನಡೆಸುವ ಪ್ರತಿಭಟನೆಯಾಗಿದೆ”.

-ಡಾ. ಎಂ.ಎಸ್.ಎಂ. ಅಬ್ದುಲ್ ರಶೀದ್ ಝೈನಿ, ಕಾರ್ಯದರ್ಶಿ, ಕರ್ನಾಟಕ ಉಲಮಾ ಒಕ್ಕೂಟ

“ಮುಸ್ಲಿಮರನ್ನು ಪಂಕ್ಚರ್ ಹಾಕುವವರು ಎನ್ನುವ ಫ್ಯಾಶಿಸ್ಟ್ ಶಕ್ತಿಗಳು ಇದೀಗ ಸಂವಿಧಾನವನ್ನೇ ಪಂಕ್ಚರ್ ಮಾಡುತ್ತಿದೆ. ಅಲ್ಪ ಸಂಖ್ಯಾತರ ಹಕ್ಕುಗಳನ್ನು ದಮನಿಸುತ್ತಿದೆ. ಆದರೆ ಈ ಫ್ಯಾಶಿಸ್ಟ್ ಶಕ್ತಿಗಳು ಒಂದು ವಿಚಾರವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, ಯಾವ ಕಾರಣಕ್ಕೂ ಮುಸ್ಲಿಮರನ್ನು ಕಟ್ಟಿಹಾಕಲು ಸಾಧ್ಯವಿಲ್ಲ. ನೀವು ನಮ್ಮನ್ನು ದಮನಿಸಿದಷ್ಟು ನಾವು ಪುಟಿದೇಳಲಿದ್ದೇವೆ. ಅದಕ್ಕೆ ಇಂದಿಲ್ಲಿ ಸೇರಿದ ಜನಸಾಗರವೇ ಸಾಕ್ಷಿಯಾಗಿದೆ”.

-ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಕಾರ್ಯದರ್ಶಿ, ಕರ್ನಾಟಕ ಉಲಮಾ ಒಕ್ಕೂಟ

“ವಕ್ಫ್ ವಿಚಾರಕ್ಕೆ ಸಂಬಂಧಿಸಿ ಮುಸ್ಲಿಂ ಸಮುದಾಯ ನೋವಿನಲ್ಲಿದೆ. ಆಕ್ರೋಶ ವ್ಯಕ್ತಪಡಿಸುವ ಸಲುವಾಗಿ ಇಂದಿಲ್ಲಿ ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ವಕ್ಫ್ ತಿದ್ದುಪಡಿ ಮಸೂದೆಯು ಮುಸ್ಲಿಂ ಸಮುದಾಯದ ಪರವಾಗಿಲ್ಲ. ಬಂಡವಾಳಶಾಹಿಗಳಿಗೆ ನೆರವಾಗಲು ಮಾಡಿರುವ ಕರಾಳ ಕಾಯ್ದೆಯಾಗಿದೆ”.

-ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಅಧ್ಯಕ್ಷರು, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ

ವೇದಿಕೆಯಲ್ಲಿ ಕರ್ನಾಟಕ ಉಲಮಾ ಒಕ್ಕೂಟದ ಪದಾಧಿಕಾರಿಗಳಾದ ಡಾ. ಫಾಝಿಲ್ ಹಝ್ರತ್ ಕಾವಳಕಟ್ಟೆ, ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಖಾಸಿಂ ದಾರಿಮಿ, ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ, ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ, ಅಬೂಸುಫಿಯಾನ್ ಸಖಾಫಿ, ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ್ಟ, ಮೆಹಬೂಬ್ ಸಖಾಫಿ ಕಿನ್ಯ, ಉಲೆಮಾಗಳಾದ ಎಸ್.ಬಿ.ಮುಹಮ್ಮದ್ ದಾರಿಮಿ, ಅಮೀರ್ ತಂಳ್ ಕಿನ್ಯ, ರಫೀಕ್ ಹುದವಿ ಕೋಲಾರ, ಅನ್ವರ್ ಅಸ್‌ಅದಿ ಚಿತ್ರದುರ್ಗ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ, ಮಾಜಿ ಶಾಸಕ ಮೊಯ್ದಿನ್ ಬಾವಾ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಜಿ.ಎ. ಬಾವ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಉದ್ಯಮಿಗಳಾದ ಝಕರಿಯಾ ಜೋಕಟ್ಟೆ, ಶರೀಫ್ ವೈಟ್‌ಸ್ಟೋನ್, ಎಸ್‌ಡಿಪಿಐ ಮುಖಂಡರಾದ ರಿಯಾಝ್ ಫರಂಗಿಪೇಟೆ, ಅನ್ವರ್ ಸಾದತ್ ಬಜತ್ತೂರು, ಅಥಾವುಲ್ಲಾ ಜೋಕಟ್ಟೆ, ದ.ಕ.ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್.ಮುಹಮ್ಮದ್, ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್, ಮುಖಂಡರಾದ ಹೈದರ್ ಪರ್ತಿಪ್ಪಾಡಿ, ಮುಹಮ್ಮದ್ ಕುಂಞಿ, ಎಂ.ಎ.ಗಫೂರ್, ಮಾಜಿ ಮೇಯರ್ ಕೆ.ಅಶ್ರಫ್, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಮತ್ತಿತರರು ಭಾಗವಹಿಸಿದ್ದರು.

ಬಿಗಿ ಪೊಲೀಸ್ ಭದ್ರತೆ- ಮೊಬೈಲ್ ನೆಟ್‌ವರ್ಕ್ ಜಾಮ್

ಶುಭ ಶುಕ್ರವಾರದ ನಿಮಿತ್ತ ಸರಕಾರಿ ರಜೆಯಾದ ಕಾರಣ ಜನರ ಓಡಾಟ ಮತ್ತು ವಾಹನಗಳ ಸಂಚಾರ ಕಡಿಮೆಯಾಗಿತ್ತು. ನಗರ ಮತ್ತು ಆಸುಪಾಸಿನ ಹಲವು ಕಡೆಗಳಲ್ಲಿ ಮಧ್ಯಾಹ್ನದ ಬಳಿಕ ಕೆಲವು ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಬಂದ್ ಆಗಿತ್ತು. ಮಧ್ಯಾಹ್ನ 2 ಗಂಟೆಯಾಗುತ್ತಲೇ ಬಿಸಿಲಝಳದ ಮಧ್ಯೆಯೂ ಅಡ್ಯಾರ್ ಕಣ್ಣೂರಿನತ್ತ ಜನರು ಆಗಮಿಸಲಾರಂಭಿಸಿದ್ದರು. ಹಾಗಾಗಿ ಹೆದ್ದಾರಿಯುದ್ದಕ್ಕೂ ವಾಹನಗಳು ನಿಧಾನಗತಿಯಲ್ಲಿ ಸಂಚರಿಸಿದವು.

ನಗರ ಹಾಗೂ ಅಡ್ಯಾರ್ ಸುತ್ತಮುತ್ತಲಿನ ಪ್ರದೇಶಗಳ ಜಂಕ್ಷನ್, ಕ್ರಾಸಿಂಗ್ ಪ್ರದೇಶಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ವಾಹನಗಳ ಗಸ್ತಿನ ಜತೆಗೆ ಅಲ್ಲಲ್ಲಿ ವಿಶೇಷ ಪೊಲೀಸ್ ವಾಹನಗಳನ್ನು ನಿಲ್ಲಿಸಲಾ ಗಿತ್ತು. ಸಿಸಿ ಕ್ಯಾಮರಾ ಅಳವಡಿಸಿದ್ದರೂ ಕೂಡ ಪೊಲೀಸರು ಎಲ್ಲ ವಾಹನಿಗರ ದೃಶ್ಯವನ್ನು ವೀಡಿಯೋ ಮೂಲಕ ಸೆರೆ ಹಿಡಿಯುತ್ತಿರುವುದು ಕಂಡು ಬಂತು.

ಅಚ್ಚುಕಟ್ಟಿನ ವ್ಯವಸ್ಥೆ

ಪ್ರತಿಭಟನಾ ಸ್ಥಳದಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಮಂಧಿ ಸ್ವಯಂ ಸೇವಕರ ಮೂಲಕ ಶಿಸ್ತುಬದ್ಧ ವ್ಯವಸ್ಥೆಯನ್ನು ಮಾಡಲಾಗಿತ್ತು. ಕುಡಿಯು ನೀರಿನ ಖಾಲಿ ಬಾಟಲಿಗಳನ್ನು ಆಗಿಂದಾಗ್ಗೆ ಸ್ವಯಂ ಸೇವಕರು ತೆರವುಗೊಳಿಸುವ ಕಾರ್ಯವನ್ನು ಸುಸೂತ್ರವಾಗಿ ನಡೆಸಿದರು.

ಆಝಾದಿ ಘೋಷಣೆ : ಡ್ರೋನ್ ಕಣ್ಗಾವಲು

ಪ್ರತಿಭಟನಾ ಸ್ಥಳದಲ್ಲಿ ಸೇರಿದ್ದವರು ಆಝಾದಿ ಘೋಷಣೆಗಳನ್ನು ಕೂಗುತ್ತಾ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಮೈದಾನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಪೊಲೀಸರ ಜತೆಗೆ ಸ್ವಯಂ ಸೇವಕರು ಕೂಡಾ ಮೈದಾನದ ಸುತ್ತಮುತ್ತ ಸುಗಮ ಸಂಚಾರ ವ್ಯವಸ್ಥೆಗೆ ಸಹಕರಿಸುತ್ತಿರುವುದು ಕಂಡು ಬಂತು.

ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದ ಕಾರಣ ಮೊಬೈಲ್ ನೆಟ್‌ವರ್ಕ್ ಬಹುತೇಕವಾಗಿ ಜಾಮ್ ಆಗಿತ್ತು. ಇದರಿಂದ ಸಂಪರ್ಕ, ಸಂವಹನಕ್ಕೆ ಅಡ್ಡಿಯಾ ಯಿತು. ಸಮಾವೇಶದ ಪ್ರತಿ ಹಂತದ ಚಿತ್ರೀಕರಣಕ್ಕೆ ವೀಡಿಗ್ರಾಫರ್‌ಗಳ ನಿಯೋಜನೆ ಮಾಡಲಾಗಿದ್ದು, ಭದ್ರತೆಯ ದೃಷ್ಟಿಯಿಂದ ಡ್ರೋನ್ ಮೂಲಕ ಕಣ್ಗಾವಲೂ ಇರಿಸಲಾಗಿತ್ತು. ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ತಡೆ ಉಂಟು ಮಾಡದಂತೆ ಸಂಘಟಕರು ಆಗಾಗ್ಗೆ ಧ್ವನಿ ವರ್ಧಕ ಮೂಲಕ ಸೂಚನೆ ನೀಡುತ್ತಿದ್ದರು. ಶಾಂತಿಯುತ ಪ್ರತಿಟನೆಗೆ ಅವಕಾಶ ಕಲ್ಪಿಸಿಕೊಡಿ, ಉದ್ರೋಕಕಾರಿ ಘೋಷಣೆಗಳನ್ನು ಕೂಗದಂತೆ ಮನವಿ ಮಾಡಿದರು.

ರಾಷ್ಟ್ರ ಧ್ವಜಗಳ ಹಾರಾಟ

ಸಮಾವೇಶದ ಮೈದಾನದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸಮೂಹವೇ ಸೇರಿದ್ದರೆ, ಅಲ್ಲಲ್ಲಿ ರಾಷ್ಟ್ರ ಧ್ವಜಗಳ ಹಾರಾಟ ಪ್ರತಿಭಟನಾಕರಾರಿಗೆ ಹೊಸ ಚೈತನ್ಯ ತುಂಬಿದವು.

‘ಈ ಕಾಯ್ದೆ: ಸಾಂವಿಧಾನಿಕ ಆಕ್ರಮಣ’ ಭಿತ್ತಿಪತ್ರ ಪ್ರದರ್ಶನ

ಅಡ್ಯಾರ್ ಕಣ್ಣೂರು ಮೈದಾನದಲ್ಲಿ ಸೇರಿದ್ದ ಪ್ರತಿಭಟನಾಕಾರರು ವಕ್ಫ್ ಕಾಯ್ದೆ ತಿದ್ದುಪಡಿ ವಿರೋಧಿಸಿ ವಿವಿಧ ರೀತಿಯ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದರು. ‘ಈ ಕಾಯ್ದೆ: ಸಾಂವಿಧಾನಿಕ ಆಕ್ರಮಣ’, ‘ನ್ಯಾಯಕ್ಕಾಗಿ ಹೋರಾಟ, ವಕ್ಫ್ ಆಸ್ತಿ ಕಾಪಾಡೋಣ, ‘ಸೇವ್ ವಕ್ಫ್, ಸೇವ್ ಕಾನ್‌ಸ್ಟಿಟ್ಯೂಶನ್’, ‘ವಕ್ಫ್ ರಾಜಕೀಯಗೊಳಿಸದಿರಿ’, ‘ನಮ್ಮನ್ನು ಮೌನವಾಗಿಸಬೇಡಿ- ಈ ಕಾಯ್ದೆ ಹಿಂಪಡೆಯಿರಿ’, ‘ನಮ್ಮ ಹಕ್ಕುಗಳು, ನಮ್ಮ ಧ್ವನಿ ಯಾವುದೇ ರಾಜಿ ಇಲ್ಲ’ ಮೊದಲಾದ ಘೋಷಣೆಗಳಿಂದ ಕೂಡಿದ ಭಿತ್ತಿ ಪತ್ರಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಹೇ ವಕ್ಫ್ ಹಮಾರಿ, ಹೇ ಹಕ್ಕ್ ಹಮಾರಿ, ಹೇ ಜಾನ್ಸೆ ಪ್ಯಾರಿ, ಹೇ ಪ್ಯಾರಿ ಪ್ಯಾರಿ, ಬಿಟ್ಟುಕೊಡಲ್ಲ-ಬಿಟ್ಟುಕೊಡಲ್ಲ, ವಕ್ಫ್ ಆಸ್ತಿ ಬಿಟ್ಟುಕೊಡಲ್ಲ. ಕರಾಳ ಕಾನೂನು ಜಾರಿಯಾಗಲು ಬಿಡುವುದಿಲ್ಲ. ವಕ್ಫ್ ಯಾರ ಔದಾರ್ಯವಲ್ಲ, ವಕ್ಫ್ ನಮ್ಮ ಪೂರ್ವಜರ ಸೊತ್ತು. ನಮ್ಮ ಹಕ್ಕು ದಕ್ಕುವ ತನಕ ಜಗ್ಗುವುದಿಲ್ಲ-ಬಗ್ಗುವುದಿಲ್ಲ. ವಕ್ಫ್ ಆಸ್ತಿಯ ಒಂದಿಂಚನ್ನು ಬಿಟ್ಟು ಕೊಡಲು ಸಾಧ್ಯವೇ ಇಲ್ಲ. ಗಾಂಧಿ- ನೆಹರೂ -ಆಝಾದ್, ಡಾ.ಬಿ.ಆರ್.ಅಂಬೇಡ್ಕರ್ ಕಟ್ಟಿಕೊಟ್ಟ ಸಂವಿಧಾನವನ್ನು ಸುಡಲು ಪ್ರಯತ್ನಿಸುವ ಧುರುಳರನ್ನು ಕಸದ ತೊಟ್ಟಿಗೆ ಎಸೆಯೋಣ… ಇತ್ಯಾದಿ ಘೋಷಣೆಗಳು ವೇದಿಕೆಯಿಂದಲೇ ಮೊಳಗಿದವು.

ಇದನ್ನೂ ನೋಡಿ: ದೇಶಕ್ಕೆ ಸುಂದರವಾದ ವ್ಯಾಕರಣ ಬರೆದವರು ಡಾ. ಬಿ.ಆರ್.‌ ಅಂಬೇಡ್ಕರ್‌ – ಬಿಳಿಮಲೆ Janashakthi Media

Donate Janashakthi Media

Leave a Reply

Your email address will not be published. Required fields are marked *