ಸೌಜನ್ಯ ಪ್ರಕರಣ ಮರು ತನಿಖೆಗೆ ಆಗ್ರಹಿಸಿ ಜುಲೈ- 17 ರಂದು ಪ್ರಗತಿಪರರಿಂದ ಬೃಹತ್‌ ಜಾಥಾ

ಮೈಸೂರು:  ಸೌಜನ್ಯ ಪ್ರಕರಣವನ್ನು ಮರು ತನಿಖೆ ಮಾಡುವಂತೆ ಆಗ್ರಹಿಸಿ ಮೊದಲ ಹಂತದಲ್ಲಿ ಜುಲೈ- 17 ರಂದು ಪ್ರಗತಿಪರರಿಂದ ಬೃಹತ್‌ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ಒಡನಾಡಿ ಸೇವಾ ಸಂಸ್ಥೆಯ ಸ್ಟ್ಯಾನ್ಲಿ ಪರಶು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಧರ್ಮಸ್ಥಳದಲ್ಲಿ ಕಳೆದ ಹನ್ನೊಂದು ವರ್ಷಗಳ ಹಿಂದೆ ನಡೆದ ಸೌಜನ್ಯಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಹಿನ್ನೆಲೆಯಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟಗಳಡಿಯಲ್ಲಿ ಹೋರಾಟವನ್ನು ರೂಪಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಈ ಸಂಬಂಧ ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೌಜನ್ಯ ಹತ್ಯೆ ಪ್ರಕರಣವನ್ನು ರಾಜ್ಯದ್ಯಂತ  ಕೊಂಡೊಯ್ಯಲು ತೀರ್ಮಾನಿಸಲಾಗಿದೆ. ಕಾನೂನು ಹೋರಾಟದ ಜೊತೆ ಜೊತೆಗೆ ಪ್ರಗತಿಪರರು, ಚಿಂತಕರು, ಮಾನವೀಯ ಮನಸ್ಸುಳ್ಳವರ ಜೊತೆಗೂಡಿ ವಿವಿಧ ಬಗೆಯ ಹೋರಾಟವನ್ನು ರೂಪಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ಸಂಶಯಿತರ ಜೊತೆ ಕಾಣಿಸಿಕೊಂಡ ಕಾಂಗ್ರೆಸ್ ಮಾಜಿ ಸಚಿವ ಅಭಯಚಂದ್ರ ಜೈನ್!

ಮುಂದಿನ ದಿನಗಳಲ್ಲಿ ಧರ್ಮಸ್ಥಳ ಚಲೋ ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು, ಮೈಸೂರಿನಿಂದ ಧರ್ಮಸ್ಥಳದವರೆಗೂ ಜಾಥಾ ನಡೆಸಲಾಗುವುದು, ಮಾರ್ಗದುದ್ದಕ್ಕೂ ಬರುವ ಹುಣಸೂರ, ಪಿರಿಯಾಪಟ್ಟಣ, ಕುಶಾಲನಗರ, ಸುಳ್ಯ ಸೇರಿದಂತೆ ಪ್ರಮುಖ ನಗರಗಳ ಜನತೆಯನ್ನು ಹೋರಾಟದಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಲು ಚಿಂತನೆ ನಡೆಸಲಾಗಿದೆ ಎಂದರು.

ಜುಲೈ.17 ರಂದು ಸೋಮವಾರ ನಗರದ ನಂಜರಾಜ ಬಹದ್ದೂರ್‌ ಛತ್ರದ ಆವರಣದಲ್ಲಿ ಸಮಾನ ಮನಸ್ಕರು ಜಮಾವಣೆಯಾಗಲಿದ್ದಾರೆ. ವಿವಿಧ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು ಹಾಗೂ ಅತ್ಯಾಚಾರದಂತಹ ಮಾನವೀಯ ಘಟನೆಗಳನ್ನು ವಿರೋಧಿಸುವ ನೂರಾರು ಮಂದಿ ಜಾಥಾದಲ್ಲಿ ಭಾಗವಹಿಸಲಿದ್ದಾರೆ. ನಂತರ ಗಾಂಧಿ ವೃತ್ತದಲ್ಲಿ ಸಮಾವೇಶ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು. ಧರ್ಮಸ್ಥಳದ ನಿವಾಸಿ ಹಾಗೂ ಸಾಮಾಜಿಕ ಹೋರಾಟಗಾರ ಮಹೇಶ್‌ ಶೆಟ್ಟಿ ಮಾತನಾಡಿ, ಸೌಜನ್ಯ ಪ್ರಕರಣದಲ್ಲಿ ತಪ್ಪು ಮಾಡಿರುವವರನ್ನು ಶಿಕ್ಷೆಗೆ ಗುರಿಪಡಿಸುವವರೆಗೂ ವಿರಮಿಸುವುದಿಲ್ಲ. ಧರ್ಮಸ್ಥಳದ ಮುಖ್ಯಸ್ಥರೆನಿಸಿಕೊಂಡವರ ಸಹೋದರರ ಮಕ್ಕಳ ಮೇಲೆ ಈ ಕುರಿತು ಆರೋಪಗಳಿದ್ದರೂ ಈವರೆಗೂ ಅವರನ್ನು ವಿಚಾರಣೆಗೆ ಒಳಪಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ತನಿಖೆಯನ್ನು ಹಳ್ಳಹಿಡಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇಡೀ ಪ್ರಕರಣದ ಮರು ತನಿಖೆಗೆ ಆದೇಶ ನೀಡಬೇಕು ಎಂದು ಆಗ್ರಹಿಸಿದರು.

ಇಷ್ಟು ದಿವಸ  ಸಿದ್ದರಾಮಯ್ಯ ಅವರನ್ನು ಕ್ಯಾರೇ ಎನ್ನದ ಧರ್ಮಸ್ಥಳದ ಪ್ರಭಾವಿಗಳು ಇದೀಗ ಅವರಿಗೆ ಪತ್ರ ಬರೆದು ಯೋಜನೆಗಳ ಬಗ್ಗೆ ಹಾಡಿ ಹೊಗಳಿದ್ದಾರೆ. ಧರ್ಮಸ್ಥಳಕ್ಕೆ ಬನ್ನಿ ಎಂದು ಕರೆದಿದ್ದಾರೆ. ಇದು ಪ್ರೀತಿಯ ಕರೆಯಲ್ಲ. ಸೌಜನ್ಯ ಪ್ರಕರಣವನ್ನು ನಿಮ್ಮ ಮೂಲಕ ಮುಚ್ಚಿ ಹಾಕಿಸುವ ಪ್ರಯತ್ನ ಹಾಗೂ ಷಡ್ಯಂತ್ರ, ನೀವು ಹಾಕಿಸುವ ಪ್ರಯತ್ನ ಹಾಗೂ ಷಡ್ಯಂತ್ರ, ನೀವು ಅವರ ಕಪಟ ಪ್ರೀತಿಗೆ ಮರುಳಾಗದಿರಿ, ಸೌಜನ್ಯಳಿಗೆ ನ್ಯಾಯ ಕೊಡಿಸಿ ಎಂದು ಒತ್ತಾಯಿಸಿದರು. ಚಿಂತಕ ಜಿ.ಪಿ, ಬಸವರಾಜು, ಸೌಜನ್ಯಳ ತಾಯಿ ಕುಸುಮಾದೇವಿ, ಸಿ,ಬಸವಲಿಂಗಯ್ಯ, ನಾ ದಿವಾಕರ, ಗೋಪಾಲ್‌, ಶಂಭುಲಿಂಗಸ್ವಾಮಿ ಮುಂತಾದವರು ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದರು.

 

 

Donate Janashakthi Media

Leave a Reply

Your email address will not be published. Required fields are marked *