ಕೋಲಾರ: ಮಗು ಅಪಹರಣ ಪ್ರಕರಣದಲ್ಲಿ ಪೊಲೀಸರು ಠಾಣೆಗೆ ಕರೆದು ವಿಚಾರಣೆ ನಡೆಸಿದ್ದರಿಂದ ಮರ್ಯಾದೆಗೆ ಅಂಜಿದ ಒಂದೇ ಕುಟುಂಬದ ಐವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಕೋಲಾರದ ಕಾರಂಜಿಕಟ್ಟೆಯಲ್ಲಿ ನಡೆದಿದೆ. ಮಗು ಅಪರಹಣ ಪ್ರಕರಣ ಸಂಬಂಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರಿಂದ ಮರ್ಯಾದಗಂಜಿದ್ದ ಕುಟುಂಬ ಆತ್ಮಹತ್ಯೆಗೆ ನಿರ್ಧಾರ ಮಾಡಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲಿ ಮೃತಟ್ಟಿದ್ದಾರೆ.
ಕೋಲಾರದ ಆರ್.ಎಲ್.ಜಾಲಪ್ಪ ಖಾಸಗಿ ಆಸ್ಪತ್ರೆಯಲ್ಲಿ ಇಂದು ಐವರನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮುನಿಯಪ್ಪ(70), ಬಾಬು (45), ಗಂಗೋತ್ರಿ(17) ನಾರಾಯಣಮ್ಮ (65) ಹಾಗೂ ಪುಷ್ಪ (33) ಮೃತರು ಎಂದು ತಿಳಿದುಬಂದಿದೆ. ಎಲ್ಲರೂ ವಿಷ ಸೇವಿಸುವ ಮುನ್ನ ಪತ್ರವೊಂದನ್ನು ಬರೆದಿಟ್ಟಿದ್ದಾರೆ. ಅದರಲ್ಲಿ ತಮ್ಮದಲ್ಲದ ತಪ್ಪಿಗೆ ನಮ್ಮನ್ನು ಪೊಲೀಸ್ ಠಾಣೆಗೆ ಕರೆಸಿದ್ದರು. ಇದರಿಂದ ಅವಮಾನಿತರಾಗಿ ಮನನೊಂದು ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಅಂತ ಉಲ್ಲೇಖಿಸಿದ್ದಾರೆ.
‘ಸುಮಿತ್ರಾ ದಂಪತಿಯ ಮಗುವಿನ ಅಪಹರಣದಲ್ಲಿ ನನ್ನ ಪಾತ್ರವಿಲ್ಲ. ಗೀತಾ ಮತ್ತು ಸುಮಿತ್ರಾ ದಂಪತಿಯೇ ₹ 50 ಸಾವಿರಕ್ಕೆ ಮಗು ಮಾರಾಟ ಮಾಡಿದ್ದಾರೆ. ಆದರೆ, ಪೊಲೀಸರು ನನ್ನನ್ನು ಠಾಣೆಗೆ ಎಳೆದೊಯ್ದು ಚಿತ್ರಹಿಂಸೆ ನೀಡಿ ಅವಮಾನ ಮಾಡಿದರು. ಪೊಲೀಸರ ಕಿರುಕುಳ ಮತ್ತು ಅವಮಾನದಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ಪುಷ್ಪಾ ಆತ್ಮಹತ್ಯೆಗೂ ಮುನ್ನ ಪತ್ರ ಬರೆದಿಟ್ಟಿದ್ದಾರೆ.
ಏನದು ಮಗು ಅಪಹರಣ ಪ್ರಕರಣ?
ತಮಿಳುನಾಡು ಮೂಲದ ಸುಮಿತ್ರಾ ಮತ್ತು ಸತ್ಯ ದಂಪತಿಯು ತಮ್ಮ ನವಜಾತ ಶಿಶುವನ್ನು ಪುಷ್ಪಾ ಹಾಗೂ ಅವರ ಸ್ನೇಹಿತೆ ಗೀತಾ ಎಂಬುವರು ಅಪಹರಿಸಿದ್ದಾರೆ ಎಂದು ಆರೋಪಿಸಿ ಕೋಲಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ನ.2ರಂದು ದೂರು ದಾಖಲಿಸಿದ್ದರು.
ಸತ್ಯ ಹಾಗೂ ಸುಮಿತ್ರ ಎಂಬುವರು ಪ್ರೀತಿಸಿ ಮನೆಯವರಿಗೆ ತಿಳಿಸದೆ ಮದುವೆಯಾಗಿದ್ದರು. ಅವರಿಗೆ ಒಂದು ಹೆಣ್ಣು ಮಗು ಜನಿಸಿತ್ತು. ಮನೆಯವರಿಗೆ ವಿಷಯ ತಿಳಿದರೆ ಹೇಗೋ ಎನ್ನುವ ಭಯದಲ್ಲಿ ಮಗುವನ್ನು ತಮ್ಮ ಪರಿಚಯಸ್ಥರಾದ ಕಾರಂಜಿಕಟ್ಟೆ ನಿವಾಸಿ ಗೀತಾ ಎನ್ನುವವರಿಗೆ ಅಕ್ಟೋಬರ್18 ರಂದು 9 ದಿನದ ಮಗುವನ್ನು ಕೊಟ್ಟಿದ್ದರು. ಈ ವೇಳೆ ಗೀತಾರ ಜೊತೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪುಷ್ಪಾ ಎಂಬುವವರು ಹೋಗಿದ್ದರು. ಈ ಕಾರಣಕ್ಕೆ ಮಗು ಅಪಹರಣ ಪ್ರಕರಣದ ದೂರಿನಲ್ಲಿ ಪುಷ್ಪಾರ ಹೆಸರು ದಾಖಲಾಗಿತ್ತು.
ಅಲ್ಲದೇ ಕೋಲಾರಮ್ಮ ದೇವಾಲಯದ ಬಳಿ ಕುಳಿತು ಮಾತನಾಡಿ ಮಗುವನ್ನು ತೆಗೆದುಕೊಂಡು ಹೋಗಿರುವ ದೃಶ್ಯ ಪೊಲೀಸರಿಗೆ ಸಿಕ್ಕಿದ್ದು, ಅದರಲ್ಲಿ ಪುಷ್ಪಾ ಇದ್ದರು. ಈ ಕಾರಣಕ್ಕೆ ಪೊಲೀಸರು ಪುಷ್ಪಾರನ್ನು ಕೋಲಾರದ ಮಹಿಳಾ ಪೊಲೀಸ್ ಠಾಣೆಗೆ ಕರೆದು ವಿಚಾರಣೆ ನಡೆಸಿದ್ದರು. ಅಲ್ಲದೆ ಮಗುವನ್ನು ತಂದು ಕೊಡುವಂತೆ ತಾಕೀತು ಮಾಡಿದ್ದರು. ಇದಕ್ಕೆ ಅಂಜಿದ ಇಡೀ ಕುಟುಂಬಸ್ಥರು ಆತ್ಮಹತ್ಯೆಗೆ ನಿರ್ಧರಿಸಿದ್ದರು.
ವರದಿ: ಅಮರೇಶ್ ಸಿ.